ಕರೋನಾಕ್ಕೆ ಇಷ್ಟೆಲ್ಲಾ ಗಣ್ಯರು ಬಲಿಯಾಗಿದ್ದಾರಾ..? ಪಟ್ಟಿ ನೋಡಿದರೆ ಗಾಬರಿಯಾಗೋದು ಖಚಿತ..!

ಮಾನವ ನಿರ್ಮಿತವಾಗಿರಲಿ, ಪ್ರಾಕೃತಿಕವೇ ಆಗಿರಲಿ, ವಿಪತ್ತುಗಳು ಮತ್ತು ಆಪತ್ತುಗಳು ಎಷ್ಟು ದೊಡ್ಡದಾಗಿ ಬಾಯಿ ತೆರೆಯುತ್ತದೆಯೋ ಅವು ಬೇಡುವ ಪ್ರಾಣಗಳ ಬಲಿದಾನದ ಪ್ರಮಾಣವೂ ಅಷ್ಟೇ ದೊಡ್ಡದಾಗುತ್ತ ಹೋಗುತ್ತದೆ.

ನಮ್ಮ ಕಾಲಘಟ್ಟದಲ್ಲಿ ನಮ್ಮನ್ನೆಲ್ಲ ಕಾಡುತ್ತಿರುವ ಕೊರೋನಾ ಎಂಬ ವಿಪತ್ತು ಜಗತ್ತಿನ ಜೀವಭಿತ್ತಿಗೆ ಚೀನಾ ತಂದಿಟ್ಟ ಸಂಕಟವೇ ಅಥವಾ ಚೀನಾದ ನಿಸರ್ಗದಲ್ಲೆಲ್ಲೋ ಸ್ವಾಭಾವಿಕವಾಗಿ ಒಡಮೂಡಿದ ಸಂಕಷ್ಟವೋ ಗೊತ್ತಿಲ್ಲ, ಆದರೆ ಅದು ಡ್ರ್ಯಾಗನ್ ನಂತೆ ಬಾಯ್ತೆರೆದು ಚೂಪಾದ ತನ್ನ ನಾಲಿಗೆ ಚಾಚಿ ಕ್ಷಣಕಣಕ್ಕೂ ಕಬಳಿಸುತ್ತಿರುವ ಪರಿ ಮಾತ್ರ ಮಾನವರನ್ನು ಮೂಕಪ್ರೇಕ್ಷಕರಾಗಿಸಿದೆ. ಕೋವಿಡ್ 19 ಎಂಬ ವೈರಸ್ ಸ್ವಾಭಾವಿಕವೋ ಅಥವಾ ಕೃತಕವೋ ಗೊತ್ತಿಲ್ಲ. ಆದರೆ ಅದು ಆಪೋಷಣ ತೆಗೆದುಕೊಳ್ಳುತ್ತಿರುವ ಅಮೂಲ್ಯ ಜೀವಗಳು ಮಾತ್ರ ಅಪ್ಪಟ ನೈಸರ್ಗಿಕ. ಕಳೆದುಕೊಂಡರೆ ಅವು ಮತ್ತೆ ವಾಪಸ್ ಬರಲಾರವು!

ಕರೋನಾ ಯಾರನ್ನೂ ಬಿಟ್ಟಿಲ್ಲ

ಮೃತ್ಯು ಯಾವತ್ತೂ ಭೇದ ಮಾಡುವುದಿಲ್ಲವೆಂಬ ಮಾತು ಕೊರೋನಾ ವಿಚಾರದಲ್ಲೂ ಸತ್ಯವಾಗಿದೆ. ಜಗತ್ತಿನ ಸಾವಿರಾರು ವೈದ್ಯರು, ವಿಜ್ಞಾನಿಗಳು, ಶುಶ್ರೂಕಿಯರು, ಪೊಲೀಸರು, ರಾಜಕಾರಣಿಗಳು, ಪತ್ರಕರ್ತರು, ಶಿಕ್ಷಕರು, ಅಧಿಕಾರಿಗಳು, ಸಾಹಿತಿಗಳು, ಸಿನಿಮಾ ನಟ, ನಟಿಯರು, ಗಾಯಕ-ಗಾಯಕಿಯರು, ಕಲಾವಿದರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಚಿತ್ರ ಕಲಾವಿದರು, ಬಾಣಸಿಗರು, ಎಂಜಿನಿಯರ್ ಗಳು, ಕ್ರೀಡಾಪಟುಗಳು, ಕೂಲಿ ಕಾರ್ಮಿಕರು… ಹೀಗೆ ಬಡವರು, ಬಲ್ಲಿದರು, ಸ್ತ್ರೀ, ಪುರುಷ, ಭರ್ಜರಿ ದೇಹಾಧಾರ್ಡ್ಯದವನು, ಸಣಕಲು, ಆರೋಗ್ಯವಂತ, ಅನಾರೋಗ್ಯವಂತ ಎಂಬ ಭೇದವಿಲ್ಲದೆ ಕೊರೋನಾ ವಿಷವರ್ತುಲಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಮೊದಲು ಪತ್ತೆ ಹಚ್ಚಿದ ವೈದ್ಯನನ್ನೇ ಬಿಡಲಿಲ್ಲ

ಚೀನಾದ ಹುಬೈ ಪ್ರಾಂತ್ಯದ ವುಹಾನ್ ಎಂಬಲ್ಲಿ 2019 ರ ಡಿಸೆಂಬರ್ ನಲ್ಲಿ ತರಕಾರಿ, ಮಾಂಸದ ಮಾರುಕಟ್ಟೆ ಸಮೀಪದ ಮಂದಿಗೆ ಕೆಮ್ಮು, ಏದುಸಿರು, ಉಸಿರಾಟದ ತೊಂದರೆಯಂಥ ರೋಗಲಕ್ಷಣದೊಂದಿಗೆ ಕಾಣಿಸಿಕೊಂಡ ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದ ರೋಗಿಗಳನ್ನು ಪರೀಕ್ಷಿಸಿದವರು 34 ವರ್ಷದ ಕಣ್ಣಿನ ವೈದ್ಯ ಲೀ ವೆನ್ಲಿಂಗ್. ಅವರಿಗೆ ಈ ಸರಣಿ ರೋಗಿಗಳ ಸಮಸ್ಯೆ ಅಸಹಜ ಅನ್ನಿಸಿತ್ತು. ಇದು ಇನ್ನೊಂದು ದೊಡ್ಡ ಅನಾಹುತಕ್ಕೆ ಹೆಬ್ಬಾಗಿಲು ಮತ್ತು ಈ ಮಾರಕ ವೈರಸ್ ಸಾರ್ಸ್ ರೀತಿ ಹರಡುತ್ತಿದೆ ಎಂದು ಆತ ಅನುಮಾನ ವ್ಯಕ್ತಪಡಿಸಿ, ಮಾಸ್ಕ್ ಧರಿಸಿ ಓಡಾಡುವಂತೆ ತನ್ನ ಸ್ನೇಹಿತ ವರ್ಗದವರಿಗೆ ಮೊಬೈಲ್ ಸಂದೇಶದ ಮೂಲಕ ಎಚ್ಚರಿಸಿದ್ದರು. ಸರಕಾರ ಕೂಡ ಜಾಗೃತವಾಗುವಂತೆ ಎಚ್ಚರಿಕೆ ನೀಡಿದ್ದರು. ಕೊರೋನಾ ರಹಸ್ಯ ಬಯಲಾಗಿದ್ದರಿಂದ ಕೆರಳಿದ ಚೀನಾ ಸರಕಾರ ಲೀ ಯನ್ನು ಬಂಧಿಸಿ ಜೈಲಿಗೆ ಹಾಕಿತ್ತು. ಮತ್ತು ಆದರೆ ಲೀ ಅವರು 2020ರ ಫೆ.7ರ ಮಧ್ಯರಾತ್ರಿ ಕೋವಿಡ್ 19 ಗೆ ಬಲಿಯಾದಾಗ ಕೋವಿಡ್ ನ ತೀವ್ರತೆ ಜಗತ್ತಿಗೆ ತಟ್ಟಿತು.

ಬಹುಶಃ ಈತನೇ ಕೋವಿಡ್ 19 ಗೆ ಬಲಿಯಾದ ಜಾಗತಿಕ ಮಟ್ಟದಲ್ಲಿ ಪರಿಚಿತನಾದ ಗಣ್ಯ ವ್ಯಕ್ತಿಗಳಲ್ಲಿ ಈತನೇ ಮೊದಲಿಗ!  ಹಾಗೆ ನೋಡಿದರೆ, 2020ರ ಜನವರಿ 25 ರಿಂದಲೇ ಚೀನಾದ ಗಣ್ಯರ ಸಾವಿನ ಸರಣಿ ಆರಂಭವಾಗಿತ್ತು. 25 ರಂದು ವುಹಾನ್  ನ ಖ್ಯಾತ ವೈದ್ಯ ಲಿಯಾಂಗ್ ವುಡಾಂಗ್ (60) ಕೊರೋನಾಕ್ಕೆ ಬಲಿಯಾಗಿದ್ದರು. ಅದಾದ ಎರಡೇ ದಿನದಲ್ಲಿ ಹೌಂಗ್ಶಿಯ ಮಾಜಿ ಮೇಯರ್ ಯಾಂಗ್ ಕ್ಸಿಯಾಬೊ (57), ಮರು ದಿನ ದೇಹದಾರ್ಢ್ಯ ಪಟು ಕ್ಯೂ ಜನ್ (72) ಹೀಗೆ ಜನಸಾಮಾನ್ಯರೊಂದಿಗೆ ಚೀನಾದ ಗಣ್ಯರ ಸಾವಿನ ಸರಣಿಯೂ ಮೊದಲ್ಗೊಂಡಿತ್ತು.

ವಿವಿಧ ದೇಶಗಳಲ್ಲಿ ಗಣ್ಯರ ಸಾವಿನ ಸರಣಿ ಶುರು

2020ರ ಆರಂಭದಲ್ಲಿ ಕೊರೋನಾ ಮಹಾಮಾರಿ ನಿಧಾನವಾಗಿ ಚೀನದಿಂದ ಕಬಂಧಬಾಹುಗಳನ್ನು ಉಳಿದ ದೇಶಗಳಿಗೂ ಚಾಚತೊಡಗಿತ್ತು. ಫೆ.27ರಂದು ಇರಾನ್‍ನ ಮಾಜಿ ರಾಯಭಾರಿ ಹದಿ ಖೊಸ್ರೊಶಾಹಿ (81) ಮೃತರಾಗುವ ಮೂಲಕ ಇರಾನ್ ನಲ್ಲಿ ಕೋವಿಡ್ ಕಾರಣಕ್ಕೆ ಸಾವಿನ ಸರಣಿ (ಗಣ್ಯರ) ಶುರುವಾಗಿತ್ತು. ಮಾ.9ರಂದು ಇಟಲಿಯ ಇಟಾಲೊ ದೆ ಝನ್ (94) ಎಂಬ ಹಿರಿಯ ಸೈಕ್ಲಿಸ್ಟ್ ಸಾವಿನೊಂದಿಗೆ ಇಟಲಿಯಲ್ಲಿ (ಗಣ್ಯರ) ಕೋವಿಡ್ ಮಾರಣಹೋಮ ಆರಂಭವಾಗಿತ್ತು. ಮಾ.10ರಂದು ಸ್ಪೇನ್‍ನ ಸ್ಯಾಕ್ಸೋಫೋನ್ ಕಲಾವಿದ ಮರ್ಸೆಲೊ ಪೆರಾಲ್ಟಾ (59) ಮೃತರಾಗುವುದರೊಂದಿಗೆ ಆ ದೇಶದಲ್ಲಿ (ಗಣ್ಯರ) ಸಾವಿನಾಟಕ್ಕೆ ಕೋವಿಡ್ ನಾಂದಿ ಹಾಡಿತ್ತು.  ಮಾ.16ರಂದು ಫ್ರಾನ್ಸ್ ದೇಶದ ಮಾಜಿ ಸೆನೆಟರ್ ನಿಕೋಲಸ್ ಅಲ್ಫೊನ್ಸಿ(83), ಮಾ.17ರಂದು ಅಮೆರಿಕದ ಫೆಥಾಲಜಿ ಪ್ರೊಫೆಸರ್ ಸ್ಟೀಫೆನ್ ಸ್ಕಾವ್ರ್ಟ್ಝ್(78), ಮಾ.21ರಂದು ಬ್ರಿಟನ್ ನ ಉದ್ಯಮಿ ವಿಲಿಯಂ ಸ್ಟೆಮ್ (84), ಮಾ.23ರಂದು ಪಾಕಿಸ್ತಾನದ ವೈದ್ಯ ಉಸ್ಮಾನ್ ರಿಯಾಜ್ (26), ಮಾ.25ರಂದು ಬ್ರೆಜಿಲ್ ನ ಕಂಡಕ್ಟರ್ ಮಾರ್ಟಿನೊ ಲುಟೆರೊ ಗಲಟಿ(66), ಹೀಗೆ ಜಗತ್ತಿನ ಒಂದೊಂದೇ ದೇಶದ ಜನಸಾಮಾನ್ಯರ ಜತೆಗೆ ಗಣ್ಯರನ್ನೂ ಮರಣಶಯ್ಯೆಗೆ ಒಯ್ಯತೊಡಗಿತ್ತು ಕೊರೋನಾ.

ಭಾರತ ಕಳೆದುಕೊಂಡ ಅನರ್ಘ್ಯ ಮುತ್ತುಗಳು

ಜೀವದ ಬೆಲೆ ಗಣ್ಯರದ್ದೂ ಒಂದೇ ಜನಸಾಮಾನ್ಯರದ್ದೂ ಒಂದೇ. ಜನಸಾಮಾನ್ಯರು ದೂರವಾದರೆ ಅವರ ಬಂಧುಬಳಗ ಮಾತ್ರ ಶೋಕತಪ್ತರಾಗುತ್ತಾರೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಗಣ್ಯರನ್ನು ಕಳೆದುಕೊಂಡಾಗ ಜನಸಾಮಾನ್ಯರೂ ತಮ್ಮ ಮನೆಯ ಸದಸ್ಯರನ್ನೇ ಕಳೆದುಕೊಂಡಷ್ಟು ದುಃಖತಪ್ತರಾಗುತ್ತಾರೆ. ತಮ್ಮ ಪ್ರತಿಭೆ, ಶ್ರಮ, ಪ್ರಯತ್ನಗಳಿಂದ ನಾಡಿಗೆ, ದೇಶಕ್ಕೆ, ಸಮಾಜಕ್ಕೆ ಅಮೂಲ್ಯ ಕೊಡುಗೆಯನ್ನು ಕೊಟ್ಟಿರುವುದರಿಂದಲೇ ಅವರನ್ನು ಕಳೆದುಕೊಂಡಾಗ ಮನೆಯ ಸದಸ್ಯನನ್ನೇ ಕಳೆದುಕೊಂಡಷ್ಟು ಶೋಕ ಅವರ ಅಭಿಮಾನಿಗಳಿಗೂ ಆಗುತ್ತದೆ.

ಹಾಗೆ ನೋಡಿದರೆ, ಭಾರತದಲ್ಲಿ ಮೊದಲ ಸಲ ಜನಪ್ರಿಯ (ಗಣ್ಯ) ವ್ಯಕ್ತಿಯನ್ನು ಕೋವಿಡ್ ನಿಂದಾಗಿ ಕಳೆದುಕೊಂಡಿದ್ದು 2020ರ ಏ.2ರಂದು. ಆ ದಿನ ಅಮೃತಸರದ ದರ್ಬಾರ್ ಸಾಹಿಬ್ ನಲ್ಲಿ ಗಾಯಕರಾಗಿದ್ದ ನಿರ್ಮಲ್ ಸಿಂಗ್‍ಖಾಲ್ಸಾ (67) ಮೃತಪಟ್ಟಿದ್ದರು. ಬಳಿಕ ಮೇ 2ರಂದು ಲೋಕಪಾಲ್‍ನ ಸದಸ್ಯ ಹಾಗೂ ಛತ್ತೀಸ್ ಗಢದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಜಯ್ ಕುಮಾರ್ ತ್ರಿಪಾಠಿ (62) ಹೊಸದಿಲ್ಲಿಯಲ್ಲಿ ಸಾವನ್ನಪ್ಪಿದ್ದರು.

ಕೊರೋನಾಕ್ಕೆ ಬಲಿಯಾದ ಅತಿ ಪ್ರಮುಖರಲ್ಲಿ ದೇಶ ಕಂಡ ಅಪೂರ್ವ ರಾಜಕಾರಣಿ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಒಬ್ಬರು. ಅವರು ಆ.31ರಂದು ಹೊಸದಿಲ್ಲಿಯಲ್ಲಿ ಕೊರೋನಾ ಸಂಬಂಧಿ ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದರು. ಇತಿಹಾಸಜ್ಞ ಹರಿ ವಾಸುದೇವನ್(79), ಏಮ್ಸ್ ನ ಫ್ರೊಫೆಸರ್ ಡಾ.ಜಿತೇಂದ್ರನಾಥ್ ಪಾಂಡೆ (79), ನಿವೃತ್ತ ಮಿಲಿಟರಿ ಅಧಿಕಾರಿ ರಾಜ್ ಮೋಹನ್ ವೊಹ್ರಾ (88), ಲೇಖಕರಾಗಿದ್ದ ನೀಲಾ ಸತ್ಯನಾರಾಯಣ್ (72), ಬಾಲಿವುಡ್ ನ ಖ್ಯಾತ ಸಾಹಿತಿ, ಉರ್ದು ಕವಿ ಮತ್ತು ಚಿತ್ರ ಕಲಾವಿದ ರಾಹತ್ ಇಂದೋರಿ (70), ಭಾರತದ ಪ್ರಥಮ ಮಹಿಳೆಯಾಗಿದ್ದ (ರಾಷ್ಟ್ರಪತಿಯ ಶಂಕರ್ ದಯಾಳ್ ಶರ್ಮಾರ ಪತ್ನಿ) ವಿಮಲಾ ಶರ್ಮಾ (93), ಖ್ಯಾತ ಕ್ರಿಕೆಟರ್ ಚೇತನ್ ಚೌಹಾಣ್ (73), ಅಮೆರಿಕ, ಚೀನಾ, ಪಾಕಿಸ್ತಾನಗಳಿಗೆ ರಾಯಭಾರಿಯಾಗಿ  ಸೇವೆ ಸಲ್ಲಿಸಿದ್ದ ಕಾತ್ಯಾಯಿನಿ ಶಂಕರ್ ವಾಜಪೇಯಿ (92), ಚಳವಳಿಗಾರ ದತ್ತಾ ಎಕ್ತೊಬೆ (84), ಸಿನಿಮಾ ನಿರ್ದೇಶಕ ಜಾನಿ ಬಕ್ಷಿ (88), ಒಡಿಯಾ ಭಾಷೆಯ ರಂಗನಟ, ನಾಟಕಕಾರ ಅಜಿತ್ ದಾಸ್ (71), ಪತ್ರಕರ್ತ ಮತ್ತು ನಟ ಫ್ಲಾರೆಂಟ್ ಪಿರೇರಾ (67), ಆಯುರ್ವೇದ ತಜ್ಞ ಪಿ.ಆರ್.ಕೃಷ್ಣಕುಮಾರ್ (68), ಪಂಜಾಬ್ ನ ಮಾನವ ಹಕ್ಕು ಆಯೋಗದ ಸದಸ್ಯ ಅಶುತೋಷ್ ಮೊಹಂತಾ(67),  ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಶೇಖರ್ ಬಸು (68), ಹಿರಿಯ ಕಲಾವಿದರಾದ ಸೌಮಿತ್ರಾ ಚಟರ್ಜಿ (85), ಖ್ಯಾತ ನಟಿ ದಿವ್ಯಾ ಭಟ್ನಾಗರ್ (34), ಹಿರಿಯ ಕವಿ ಮಂಗ್ಲೇಶ್ ದಬ್ರಾಲ್ (72), ಪತ್ರಕರ್ತ, ಸಂಪಾದಕ ಡಿ.ವಿಜಯ ಮೋಹನ್ (65), ಒಲಿಂಪಿಕ್ಸ್ ನಲ್ಲಿ ಭಾರತ ಫುಟ್ ಬಾಲ್ ತಂಡದ ಆಟಗಾರರಾಗಿದ್ದ ನಿಖಿಲ್ ನಂದಿ (88),  ಕಥಕ್ಕಳಿ ಕಲಾಇದ ಮತ್ತೂರು ಗೋವಿಂದನ್ ಕುಟ್ಟು (80), ಪಂಜಾಬ್ ನ ಜಾನಪದ ಗಾಯಕ ಶಾರ್ದೂಲ್ ಸಿಕಂದರ್ (60), ಖ‍್ಯಾತ ನಟ, ಮಹಾಭಾರತದಲ್ಲಿ ಇಂದ್ರನ ಪಾತ್ರಧಾರಿ ಸತೀಶ್ ಕೌಲ್ (66), ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ (68), ಕಾದಂಬರಿಕಾರ ನರೇಂದ್ರ ಕೊಹ್ಲಿ (81), ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ಎಂ.ನರಸಿಂಹನ್ (93), 90 ರ ದಶಕದ ಅತಿ ಬೇಡಿಕೆಯ ಬಾಲಿವುಡ್ ಸಂಗೀತ ನಿರ್ದೇಶಕರಾಗಿದ್ದ ಶ್ರವಣ್ ರಾಠೋಡ್  (66), ಖ್ಯಾತ ತಮಿಳು ಸಿನಿಮಾ ನಿರ್ದೇಶಕ ತಾಮಿರ (53), ಖ್ಯಾತ ತಮಿಳು ಸಿನಿಮಾಟೋಗ್ರಾಫರ್, ನಿರ್ದೇಶಕ ಕೆ.ವಿ.ಆನಂದ್ (54), ದೇಹದಾರ್ಢ್ಯ ಪಟು ಜಗದೀಶಧ್ ಲಾಡ್ (34), ಭಾರತದ ಖ್ಯಾತ ಪತ್ರಕರ್ತ, ಹಿಂದಿ ನ್ಯೂಸ್ ಚಾನೆಲ್ ಗಳ ಟಿವಿ ನಿರೂಪಕ ರೋಹಿತ್ ಸರ್ದಾನ (41), ದೇಶ ಕಂಡ ಅಪರೂಪದ ನ್ಯಾಯವಾದಿ, ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ (91), ದೇಶದ ಅತಿ ಹಿರಿಯ ಶಾರ್ಪ್ ಶೂಟರ್ ಮಹಿಳಾ ಕ್ರೀಡಾಪಟು ಚಂದ್ರೋ ಥೋಮರ್ (89), ಸಿತಾರ್ ವಾದಕ ದೇವು ಚೌದರಿ (85), ನಟ ವಿಕ್ರಮ್ ಜಿತ್ ಕನ್ವರ್ ಪಾಲ್ (52), ಕ್ರಿಕೆಟಿಗ ಕಿಶನ್ ರುಂಗ್ಟಾ (88), ಒಲಿಂಪಿಕ್ಸ್ ನಲ್ಲಿ ಭಾರತ ಫುಟ್ ಬಾಲ್ ತಂಡದ ಆಟಗಾರರಾಗಿದ್ದ ಹುಸೇನ್ ಅಹ್ಮದ್ (88), ಹಿರಿಯ ನಟ, ನಿರ್ದೇಶಕ ಲಲಿತ್ ಬೆಹ್ಲ್ (71), ನಟಿ ಶ್ರೀಪ್ರದಾ, ಕ್ರಿಕೆಟಿಗ ವಿವೇಕ್ ಯಾದವ್ (36), ಸಿತಾರ್ ಶಾಸ್ತ್ರೀಯ ಸಂಗೀತರಾರ ಪ್ರತೀಕ್ ಚೌದರಿ (49),  ಶಿಕ್ಷಣ ತಜ್ಞ ವಿನೋದ್ ಕುಮಾರ್ ಬನ್ಸಲ್ (71), ನಟಿ ಅಭಿಲಾಶಾ ಪಾಟೀಲ್ (39), ತೆಲುಗಿನ ಖ್ಯಾತ ಗಾಯಕ ಜಿ. ಆನಂದ್ (67), ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ.ವೈ.ಇಕ್ಬಾಲ್‍(70), ಒಲಿಂಪಿಕ್‍ನಲ್ಲಿ ಹಾಕಿ ಆಟಗಾರರಾಗಿದ್ದ ಮಹಾರಾಜ್ ಕಿಶನ್ ಕೌಶಿಕ್ (66), ರವೀಂದರ್ ಪಾಲ್ ಸಿಂಗ್ (60) ಹೀಗೆ ಕೋವಿಡ್ ರುದ್ರನರ್ತನಕ್ಕೆ ಬಲಿಯಾಗುತ್ತಿರುವ ಗಣ್ಯರ ಪಟ್ಟಿ ಮುಂದುವರಿದಿದೆ.

ಅಗಲಿದ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ

ಕೊರೋನಾಗೆ ತುತ್ತಾದರೂ ಅದನ್ನು ಸೋಲಿಸಿ ಬರುವ ಸಂಕಲ್ಪ ತೊಟ್ಟಿದ್ದ ಗಾನ ಗಂಧರ್ವ, ದೇಶದ ಬಹುತೇಕ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದ, ನಟನೂ, ನಿರ್ಮಾಪಕನೂ ಆಗಿದ್ದ ಬಹುಮುಖ ಪ್ರತಿಭೆ, ಕನ್ನಡ ನಾಡಲ್ಲಿ ಹುಟ್ಟದೇ ಇದ್ದರೂ ಕನ್ನಡಿಗರೇ ಆಗಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ಅವರು ಸೆ.25ರಂದು ನಮ್ಮನ್ನು ಅಗಲಿದರು. ಗುಣಮುಖರಾಗಿ ಬಂದ ಮೇಲೆ ಮತ್ತೆ ಸಾವಿನ ಮನೆ ಕದ ತಟ್ಟಿದ್ದ ಅವರ ಅಗಲಿಕೆ ಸಿನಿಮಾ, ಗಾಯನ ಕ್ಷೇತ್ರದಲ್ಲಿ ಈಗಲೂ ದೊಡ್ಡದೊಂದು ನಿರ್ಯಾತವನ್ನು ಸೃಷ್ಟಿಸಿದೆ.

ಕರ್ನಾಟಕದಲ್ಲೂ ಗಣ್ಯರ ಸಾವಿನ ಶೋಕ

ಸೆ.2 ರಂದು ಹಿರಿಯ ರಾಜಕಾರಣಿ, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರು ಕೋವಿಡ್ ಗೆ ಬಲಿಯಾಗುವುದರೊಂದಿಗೆ ಭದ್ರಾವತಿ ರಾಜಕಾರಣದ ಒಂದು ಯುಗ ಅಂತ್ಯವಾಗಿತ್ತು. ಸೆ.23ರಂದು ಕೇಂದ್ರ ರೈಲ್ವೆ ಸಚಿವ (ರಾಜ್ಯ) ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು (65) ಕೊರೋನಾಗೆ ಬಲಿಯಾದರು. ಮಸ್ಕಿಯ ಶಾಸಕರಾಗಿದ್ದ ಬಿ.ನಾರಾಯಣ ರಾವ್ (65), ಕನ್ನಡನಾಡು ಕಂಡ ಅಪರೂಪದ ನಟರಲ್ಲಿ ಒಬ್ಬರಾಗಿದ್ದ ಶನಿ ಮಹಾದೇವಪ್ಪ (88), ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ (62), ಕೋಟಿ ರಾಮು ಎಂದೇ ಖ್ಯಾತರಾಗಿದ್ದ ಕನ್ನಡದ ಖ್ಯಾತ ಸಿನಿಮಾ ನಿರ್ಮಾಪಕ (ನಟಿ ಮಾಲಾಶ್ರೀ ಅವರ ಪತಿ) ರಾಮು (53), ಪರಿಸರವಾದಿ ಎಸ್.ಜಿ.ನೇಗಿನಹಾಳ್ (93), ಕವಿರತ್ನ ಕಾಳಿದಾಸದಂಥ ಶ್ರೇಷ್ಠ ಸಿನಿಮಾಗಳನ್ನು ನಿರ್ದೇಶಿಸಿದ್ದ ರೇಣುಕಾ ಶರ್ಮಾ (81), ರಾಂಪುರ ಶಿವಯೋಗಿ ಮಠದ ಹಾಲಸ್ವಾಮೀಜಿ,  ಲೇಖಕ, ವಿದ್ವಾಂಸ ಭಾಸ್ಕರ್ ಮಲ್ಯ, ರಾಜ್ಯಸಭಾ ಸದಸ್ಯ, ಕರ್ನಾಟಕದ ಮಾಜಿ ಸಚಿವ ಕೆ.ಬಿ.ಶಾನಪ್ಪ (82), ಚಿಕ್ಕೋಡಿಯ ಮಾಜಿ ಶಾಸಕ ಮನೋಹರ ಕಟ್ಟೀಮನಿ (65), ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆನಂದ್ (55), ಮಕ್ಕಳ ತಜ್ಞ ವೈದ್ಯರಾದ ಡಾ.ಮಹೇಶ್, ಡಾ.ಮಂಜುನಾಥ್, ಹಿರಿಯ ನಟ ರಾಜಾರಾಮ್ (84) ಮುಂತಾದವರು ಈಗಾಗಲೇ ಕೋವಿಡ್ ಗೆ ಬಲಿಯಾಗಿದ್ದಾರೆ.

ದೇಶ ಕಳೆದುಕೊಂಡ ರಾಜಕಾರಣಿಗಳು

ದೇಶದ ರಾಜಕಾರಣಿಗಳ ಪೈಕಿ ಕೊರೋನಾಗೆ ಮೊದಲ ಅಲೆಯಲ್ಲೇ ಬಲಿಯಾದವರು ಅಹಮದಾಬಾದ್ ನ ಕಾರ್ಪೊರೇಟರ್ ಬದ್ರುದ್ದೀನ್ ಶೇಖ್ (67). ಅವರ ಬಳಿಕ, ತಮಿಳುನಾಡಿನ ಮಾಜಿ ಶಾಸಕ ಜಯರಾಂ ಅನ್ಬಗಳಗಂ, ಮಾಜಿ ಸಂಸದ ಹರಿಬಾವು ಜವಲೆ (67), ಬಿಹಾರದ ಮೇಲ್ಮನೆ ಶಾಸಕ ಸುನಿಲ್ ಕುಮಾರ್ ಸಿಂಗ್, ಉತ್ತರ ಪ್ರದೇಶದ ಹಾಲಿ ಶಾಸಕರಾಗಿದ್ದ ಕಮಲ್ ರಾಣಿ ವರುಣ್ (62), ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟಿಲ್ ನಿಲಂಗೆಕರ್ (88), ಮಾಜಿ ಕೇಂದ್ರ ಸಚಿವ ರಘವಂಶ್ ಪ್ರಸಾದ್ ಸಿಂಗ್ (74), ಗುಜರಾತ್ ನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ (92), ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ (86), ಕಾಂಗ್ರೆಸ್ ನ ಥಿಂಕ್ ಟ್ಯಾಂಕ್‍ಎಂದೇ ಹೆಸರಾಗಿದ್ದ ಹಿರಿಯ ರಾಜಕಾರಣಿ, ರಾಜ್ಯಸಭೆ ಸದಸ್ಯ ಅಹ್ಮದ್ ಪಟೇಲ್ (71), ಗೋವಾದ ಮಾಜಿ ರಾಜ್ಯಪಾಲೆ ಮೃದುಲಾ ಸಿನ್ಹಾ(77), ರಾಜ್ಯಸಭಾ ಸದಸ್ಯ ಅಭಯ್ ಭಾರಧ್ವಾಜ್ (66), ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಮೋತಿಲಾಲ್ ವೊಹ್ರಾ (93), ಸಂಸದ ನಂದಕುಮಾರ್ ಸಿಂಗ್ ಚೌಹಾಣ್ (68), ರಾಜಸ್ಥಾನದ ಮಾಜಿ ರಾಜ್ಯಪಾಲರಾದ ಅಂಶುಮಾನ್ ಸಿಂಗ್ (85), ಕುಖ್ಯಾತ ಕ್ರಿಮಿನಲ್‍ ಹಾಗೂ ಮಾಜಿ ಸಂಸದ ಮೊಹಮ್ಮದ್ ಶೊಹ್ರಾಬುದ್ದೀನ್ (54), ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ (82) ಮುಂತಾದ ಗಣ್ಯರನ್ನು ಪ್ರಪಂಚದ ಮೂಲೆ ಮೂಲೆಗಳಿಂದ ಯಮಪುರಿಗೆ ಸೆಳೆದೊಯ್ದಿದೆ ಈ ಹೆಮ್ಮಾರಿ ಕೊರೋನಾ.

ಕರೋನಾ ಎರಡನೇ ಅಲೆ ಈಗ ಸುನಾಮಿಯಾಗಿ ಜನರ ಪ್ರಾಣ ತಿನ್ನುತ್ತಿರುವಾಗಲೇ, ಮೂರನೇ ಅಲೆಯ ಎಚ್ಚರಿಕೆಯನ್ನೂ ಕೇಂದ್ರದ ಆರೋಗ್ಯ ಸಚಿವಾಲಯ ನೀಡಿದೆ. ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಆಪತ್ತು ಎದುರಿಸಬೇಕಾದೀತು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...