ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ರಸ್ತೆಯಲ್ಲಿ ಸಿಗೋ ಯೂಟರ್ನ್ಗಿಂತಲೂ ರಾಜಕೀಯದ ತಿರುವುಗಳೇ ಹೆಚ್ಚು. ಮಹಾರಾಷ್ಟ್ರದಲ್ಲಿ ಈಗಾಗಲೇ ಶಿವಸೇನೆ ಮತ್ತು ಬಿಜೆಪಿ ಉತ್ತರ-ದಕ್ಷಿಣದಂತಾಗಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ದಿನ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ ಮಾತೊಂದು ವಿಪಕ್ಷ ಬಿಜೆಪಿಯ ಆಸೆಯನ್ನು ಚಿಗುರೊಡೆಸಿದೆ. ಹಳೇ ದೋಸ್ತ್ಗಳು ಮತ್ತೆ ಒಂದಾಗುವ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ.
ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದು ಇಂದು ನಿನ್ನೆಯ ಮಾತಲ್ಲ. 2019ರ ನವೆಂಬರ್ನಲ್ಲಿ ಬಿಜೆಪಿ ಜೊತೆಗಿನ ದೋಸ್ತಿ ಕಡಿತಗೊಳಿಸಿದ್ದ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆ ಕೈಜೋಡಿಸುವ ಮೂಲಕ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೇರಿದ್ದರು. ತಮ್ಮ ತಮ್ಮ ಪಕ್ಷಗಳ ಸಿದ್ಧಾಂತಗಳನ್ನೇ ಬದಿಗಿಟ್ಟು ರಚನೆಯಾದ ಈ ಮಹಾ ವಿಕಾಸ್ ಸರ್ಕಾರದ ಆಯಸ್ಸು ಇನ್ನೇನು ಕುಸಿಯುವ ಸಾಧ್ಯತೆಗಳು ಕಾಣಿಸುತ್ತಿವೆ. ಹೀಗೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವೂ ಇದೆ. ಇದಕ್ಕೆ ಕಾರಣ ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ.
ವೇದಿಕೆ ಮೇಲೆಯೇ ಸಮಾರಂಭವೊಂದರಲ್ಲಿ ಬಿಜೆಪಿ ಮುಖಂಡರೊಬ್ಬರತ್ತ ಕೈ ತೋರಿಸಿ ಭವಿಷ್ಯದಲ್ಲಿ ನಾವು ಒಂದಾದರೆ ಮತ್ತೆ ಸಹೋದ್ಯೋಗಿಗಳಾಗ್ತೀವಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ಮೂಲಕ ಮಹಾ ವಿಕಾಸ್ ಅಘಾಡಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಸಾರಿದ್ದಾರೆ. ಠಾಕ್ರೆ ಕೊಟ್ಟ ಹೇಳಿಕೆಯೂ ಎಲ್ಲಾ ರೀತಿಯ ದೃಷ್ಟಿಕೋನದಿಂದಲೂ ಭಾರೀ ಚರ್ಚೆಗೀಡಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಿಎಂ ಆಗಲಿದ್ದಾರೆ ಎಂದು ಕಳೆದ ಜುಲೈನಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ಹೇಳಿಕೆ ನೀಡಿದ್ದರು. ಇದರಿಂದ ಸಿಎಂ ಉದ್ಧವ್ ಮುಜುಗರಕ್ಕೀಡಾಗಿದ್ದರು. ಪೃಥ್ವಿರಾಜ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಶಿವಸೇನೆ, ಪೃಥ್ವಿರಾಜ್ರಿಂದಲೇ 2014ರಲ್ಲಿ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದಿತ್ತು.
ಆಗೊಮ್ಮೆ ಈಗೊಮ್ಮೆ ಎನ್ಸಿಪಿ ಹಾಗೂ ಶಿವಸೇನೆ ನಡುವೆ ಸಿಎಂ ಸ್ಥಾನದ ವಿಚಾರಕ್ಕೆ ಭಿನ್ನಾಭಿಪ್ರಾಯ ಬರುತ್ತಲೇ ಇತ್ತು. ಮುಂದಿನ ವಿಧಾನಸಭಾ ಚುನಾವಣೆ ಒಳಗಾಗಿ ಮೂರು ಪಕ್ಷಗಳ ಮೈತ್ರಿ ಮುರಿದು ಹೋದರು ಅಚ್ಚರಿಯಿಲ್ಲ ಎನ್ನಲಾಗಿತ್ತು. ಇನ್ನೊಂದೆಡೆ ಈಗ ಬಿಜೆಪಿ ಪರ ಒಲವು ತೋರುವ ಮೂಲಕ ಉದ್ಧವ್ ಠಾಕ್ರೆ ಶಿವಸೇನೆ ತಂಟೆಗೆ ಬಂದರೆ ಹುಷಾರ್ ಎಂಬ ಸಂದೇಶವನ್ನು ಕಾಂಗ್ರೆಸ್ ಹಾಗೂ ಎನ್ಸಿಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆಯೇ ಮುಂದಿನ ವರ್ಷ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುಂಚಿತವಾಗಿ ಈಗ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ನೀಡಿರುವ ಹೇಳಿಕೆ ಈಗ ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸೂಚನೆಯನ್ನು ನೀಡಿತ್ತು.
ಮಹಾರಾಷ್ಟ್ರ ಚುನಾವಣೆಯು ಇನ್ನೂ ಮೂರು ವರ್ಷಗಳ ದೂರದಲ್ಲಿದೆ, ಆದರೆ ಫೆಬ್ರವರಿಯಲ್ಲಿ ಬಿಎಂಸಿ (ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್)ಗೆ ನಡೆಯುವ ಚುನಾವಣೆಗೆ ಮುನ್ನ, ಈ ಹೇಳಿಕೆಗಳು ಒಕ್ಕೂಟದಲ್ಲಿ ಒತ್ತಡವನ್ನುಂಟು ಮಾಡಿದ್ದವು. ಶರದ್ ಪವಾರ್ ಅವರ ಪಕ್ಷವು ಮುಂಬೈನಲ್ಲಿ ಸೀಮಿತ ಉಪಸ್ಥಿತಿಯನ್ನು ಹೊಂದಿರುವುದರಿಂದ ಸೇನಾ ಮತ್ತು ಎನ್ಸಿಪಿ ಒಟ್ಟಾಗಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿವೆ. ಕಾಂಗ್ರೆಸ್ ಮುಂಬೈನಲ್ಲಿ ಹೆಚ್ಚಿನ ಉಪಸ್ಥಿತಿಯನ್ನು ಹೊಂದಿರುವುದರಿಂದ ಅದು ತನಗೆ ಸೀಟು ಹಂಚಿಕೆ ವಿಚಾರದಲ್ಲಿ ತೊಂದರೆಯಾಗಬಹುದು ಎಂದು ಭಾವಿಸಿದೆ.
ಈ ಮಧ್ಯೆಯೇ ಮಹಾರಾಷ್ಟ್ರ ಸರ್ಕಾರದ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ. ಐದು ವರ್ಷಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮೈತ್ರಿ ಮುರಿಯಲು ಪ್ರಯತ್ನಿಸುತ್ತಿರುವುದು ವ್ಯರ್ಥವಾಗುತ್ತಿವೆ ಎಂದಿದ್ದ ರಾವತ್, ಎಂವಿಎ(ಮಹಾವಿಕಾಸ್ ಅಗಾದಿ), ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಸಿಎಂ ಉದ್ಧವ್ ಠಾಕ್ರೆಗೆ ಬೆಂಬಲ ನೀಡುತ್ತಿವೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಬಯಸುತ್ತಿರುವ ಹಾಗೂ ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿರುವ ಹೊರಗಿನ ಶಕ್ತಿಗಳು (ಬಿಜೆಪಿ) ಮೈತ್ರಿ ಮುರಿಯಲು ವಿಫಲ ಪ್ರಯತ್ನ ಮಾಡುತ್ತಿವೆ ಎಂದು ರಾವತ್ ವ್ಯಂಗ್ಯವಾಡಿದರು.