ಆನೇಕಲ್: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಬೈಕ್ನಲ್ಲಿ ಪೆಟ್ರೋಲ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಬಸ್ಗೂ ವ್ಯಾಪಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇಂತಹ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಿಕ್ಕಿರಿ ಮೇಡು ಬಳಿಯ ಹೊಸ ವೈದ್ಯಕೀಯ ಕಾಲೇಜು ಸಮೀಪ ಭಾನುವಾರ ಸಂಭವಿಸಿದೆ. ಹೊಸೂರು ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಡಿಕ್ಕಿಯ ರಭಸಕ್ಕೆ ಪಲ್ಸರ್ ಬೈಕ್ನ ಟ್ಯಾಂಕರ್ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಸ್ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ಸಿಗೂ ಬೆಂಕಿ ವ್ಯಾಪಿಸುತ್ತಿದ್ದಂತೆ ಪ್ರಯಾಣಿಕರನ್ನು ಕೂಡಲೇ ಚಾಲಕ ಹಾಗೂ ನಿರ್ವಾಹಕರು ಕೆಳಗೆ ಇಳಿಸಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು, ಕುರುಬರಬಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಕ್ ಸವಾರರಿಬ್ಬರ ಮೃತದೇಹ ರಸ್ತೆಯಲ್ಲಿ ನಜ್ಜುಗುಜ್ಜಾಗಿ ಬಿದ್ದಿತ್ತು. ಅಪಘಾತದ ಭೀಕರತೆ ಕಂಡು ಜನರು ಬೆಚ್ಚಿಬಿದ್ದರು. ಮೃತರಿಬ್ಬರೂ ಕುರುಬರಪಲ್ಲಿ ಮೂಲದವರು ಎನ್ನಲಾಗಿದೆ.
