ಬೆಂಗಳೂರು: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಬೈಕ್‌ನಲ್ಲಿ ಸುಮಾರು 6 ಕಿ.ಮೀ. ಶವ ಸಾಗಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿಎಸೆದು ಬಂದಿದ್ದ ನಿಗೂಢ ಪ್ರಕರಣ ಭೇದಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ದಂಪತಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳು ಶವದ ಜತೆ ಬೈಕ್‌ನಲ್ಲಿ ಟ್ರಿಪಲ್ ರೈಡಿಂಗ್ ಹೋಗಿದ್ದ ದೃಶ್ಯಾವಳಿ ರಸ್ತೆ ಬದಿಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಜಾಡು ಹಿಡಿದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿ ಉತ್ತರಪ್ರದೇಶ ಮೂಲದ ಗಂಗೇಶ್, ಆತನ ಪತ್ನಿ ರೀನಾ ಮತ್ತು ಸ್ನೇಹಿತ ಬಿಜೋಯ್‌ನನ್ನು ಜೈಲಿಗೆ ಅಟ್ಟಿದ್ದಾರೆ. ಆರೋಪಿಗಳು ಅಸ್ಸಾಂ ಮೂಲದ ನಿಬಾಶೀಶ್ ಪಾಲ್ ಎಂಬಾತನನ್ನು ಕೊಲೆ ಮಾಡಿದ್ದರು.
ಗಂಗೇಶ್ ಮತ್ತು ರೀನಾ ದಂಪತಿ ಮಕ್ಕಳ ಜತೆ ಈ ಹಿಂದೆ ದೊಡ್ಡತೂಗೂರಿನಲ್ಲಿ ವಾಸವಿದ್ದರು. ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರೀನಾಗೆ ಸ್ವಪ್ನಾ ಎಂಬಾಕೆಯ ಮೂಲಕ ನಿಬಾಶೀಶ್‌ನ ಪರಿಚಯವಾಗಿತ್ತು. ನಿಬಾಶೀಶ್, ರೀನಾ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಮದ್ಯವ್ಯಸನಿಯಾದ ಗಂಗೇಶ್, ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಉತ್ತರಪ್ರದೇಶಕ್ಕೆ ಹೋಗಿದ್ದ. ಕೆಲಸ ಬಿಟ್ಟಿದ್ದ ರೀನಾ ಕುಟುಂಬ ನಿರ್ವಹಣೆ ಮಾಡಲಾಗದೆ ಮಕ್ಕಳೊಂದಿಗೆ ಕೂಡ್ಲುವಿನಲ್ಲಿರುವ ನಿಬಾಶೀಶ್‌ನ ಮನೆಗೆ ಹೋಗಿ ನೆಲೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.






