
ಬೀದರ್: ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯಿತಿ ಅಧೀನದ ಗ್ರಾಮಗಳಲ್ಲಿ ಇ-ಸ್ವತ್ತು ತಂತ್ರಾಂಶದಡಿ ಡಿಜಿಟಲ್ ಖಾತೆಗಳನ್ನು ಅಕ್ರಮವಾಗಿ ವಿತರಿಸಿರುವ ಆರು ಜನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒಗಳು) ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡಲಾಗಿದೆ.
ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.ಪಿಡಿಒಗಳಾದ ವಿಜಯಶೀಲಾ ಶಂಕರರಾವ್, ಅಬ್ದುಲ್ ಅಜೀಂ ಸಿದ್ದಿಕಿ, ಶಿವಕುಮಾರ ಪಾಟೀಲ, ಶರತಕುಮಾರ ಅಭಿಮಾನ, ಶ್ರೀಧರ ಹಾಗೂ ಭೀಮರಾವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಂಚಾಯಿತಿ ಸದಸ್ಯೆ ಅರುಣಾದೇವಿ ವರದಯ್ಯಾ ಮಠಪತಿ ಎಂಬುವರು ಅಕ್ರಮದ ಕುರಿತು ದೂರು ಸಲ್ಲಿಸಿದ್ದರು. ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಹಮೀಲಾಪೂರ, ಬಾವಪೂರ, ಸೋಲಪೂರ, ಸಿಪ್ಪಲಗೇರಾ, ಮಾಮನಕೇರಿ, ಮಾತನಕೇರಿ, ದತನಕೇರಾ, ಕಬೀರವಾಡ, ಶಾಮರಾಜಪೂರ ಗ್ರಾಮಗಳಲ್ಲಿ 2013ರಿಂದ 2023ರ ವರೆಗಿನ ಸದರಿ ದಾಖಲೆಗಳು ಪಂಚಾಯಿತಿಯಲ್ಲಿ ಇಲ್ಲವೆಂದು ದೂರಿನಲ್ಲಿ ತಿಳಿಸಿದ್ದರು.ಡಾ. ಗಿರೀಶ್ ಬದೋಲೆ, ಸಿಇಒ, ಜಿಲ್ಲಾ ಪಂಚಾಯಿತಿ ಬೀದರ್ಆರು ಜನ ಪಿಡಿಒಗಳ ಅವಧಿಯ ಕಡತಗಳು ಪಂಚಾಯಿತಿಯಲ್ಲಿ ಇಲ್ಲ ಎನ್ನುವುದು ಉಪ ಕಾರ್ಯದರ್ಶಿ ನಡೆಸಿದ ತನಿಖೆಯಿಂದ ಗೊತ್ತಾಗಿದ್ದು ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿರುವೆ.
ಗಾದಗಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬುಡಾ, ನಗರ ಮತ್ತು ಗ್ರಾಮೀಣ ಅಡಿಯಲ್ಲಿ ಎನ್.ಎ. ಲೇಔಟ್ಗಳ ಸಿ.ಎ ನಿವೇಶನ ಹಾಗೂ ಉದ್ಯಾನವನವನ್ನು ಪಂಚಾಯಿತಿ ಹೆಸರಿಗೆ ಮಾಡಿಕೊಂಡಿರುವ ದಾಖಲೆಗಳು ಗ್ರಾಮ ಪಂಚಾಯಿತಿಯಲ್ಲಿ ಇರುವುದಿಲ್ಲವೆಂದು ದೂರಿನಲ್ಲಿ ವಿವರಿಸಿದ್ದರು. ಈ ದೂರಿನ ಮೇರೆಗೆ ಸಿಇಒ ಅಧಿಕಾರಿಗಳಿಂದ ತನಿಖೆ ನಡೆಸಿದಾಗ ಅಕ್ರಮ ಎಸಗಿರುವುದು ಗೊತ್ತಾಗಿದೆ.2013ರ ನವೆಂಬರ್ 13ರಿಂದ 2024ರ ಮಾರ್ಚ್ 16ರ ವರೆಗೆ ಒಟ್ಟು ಎಂಟು ಜನರು ಪಿಡಿಒಗಳಾಗಿ ಕೆಲಸ ನಿರ್ವಹಿಸಿದ್ದಾರೆ.
ಈ ಪೈಕಿ ಇಬ್ಬರು ಪಿಡಿಒಗಳ ಅವಧಿಯ ದಾಖಲಾತಿಗಳು ಪಂಚಾಯಿತಿಯಲ್ಲಿ ಲಭ್ಯ ಇವೆ. ಉಳಿದ ಆರು ಜನರು ಸಿ.ಎ ನಿವೇಶನ, ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿರುವುದು ಕಂಡು ಬಂದಿಲ್ಲ. ಆರೂ ಜನರು ಮೇಲ್ನೋಟಕ್ಕೆ ಅಕ್ರಮ ಎಸಗಿರುವುದು ಕಂಡು ಬಂದಿದ್ದು, ಶಿಸ್ತು ಕ್ರಮ ಜರುಗಿಸಬಹುದು ಎಂದು ಶಿಫಾರಸು ಪತ್ರದಲ್ಲಿ ಸಿಇಒ ತಿಳಿಸಿದ್ದಾರೆ.





