ಲಿಂಗ ಸೂಕ್ಷ್ಮತೆಯ ಕೊರತೆ
ನಿರ್ಭಯ, ಧಾನಮ್ಮ, ಸೌಜನ್ಯ, ಹಾಥ್ರಸ್ ಸಂತ್ರಸ್ತೆ, ಬಿಲ್ಕಿಸ್ ಬಾನೋ, ಭವಾರಿ ದೇವಿ, ಮನೋರಮಾ ಮತ್ತು ಈಗ ಚರ್ಚೆಗೊಳಗಾಗಿರುವ ಮಣಿಪುರದ ಅಭಾಗ್ಯ ಮಹಿಳೆಯರನ್ನು ಹಾಗೂ ನಿರಂತರವಾಗಿ ಮರ್ಯದೆಗೇಡು ಹತ್ಯೆಗೇ ಬಲಿಯಾಗುತ್ತಿರುವ ಅಮಾಯಕ ಹೆಣ್ಣುಮಕ್ಕಳನ್ನು ಪಿತೃಪ್ರಧಾನ ಪುರುಷಾಧಿಪತ್ಯದ ಅಮಾನುಷತೆಗೆ ಬಲಿಯಾದ ಅಸಹಾಯಕರಾಗಿ ನೋಡುವ ಬದಲು ನಮ್ಮ ನಡುವಿನ ನಾಗರಿಕ ಪ್ರಜ್ಞೆ ಈ ಮಹಿಳೆಯರನ್ನು ದಾಳಿಗೊಳಗಾಗಬಹುದಾದ ದೇಹಗಳಾಗಿ ಮಾತ್ರವೇ ನೋಡುತ್ತ್ತದೆ. ಪ್ರತಿಯೊಂದು ಅತ್ಯಾಚಾರದ ಪ್ರಕರಣದಲ್ಲೂ ನಮ್ಮ ಸರ್ಕಾರಗಳ ಪ್ರಜ್ಞೆ ಜಾಗೃತವಾಗುತ್ತದೆ. ಆಳುವವರ ರಕ್ತ ಕುದಿಯುತ್ತದೆ. ಪುರುಷಾಳ್ವಿಕೆಯ ಪ್ರತಿನಿಧಿಗಳಲ್ಲಿ ಆಕ್ರೋಶ ಉಕ್ಕುತ್ತದೆ. ಮಹಿಳಾ ರಾಜಕಾರಣಿಗಳಲ್ಲಿ ಸ್ತ್ರೀ ಸಂವೇದನೆ ಹಠಾತ್ತನೆ ವ್ಯಕ್ತವಾಗುತ್ತದೆ. ಆದರೆ ಈ ಜಾಗೃತ ಪ್ರಜ್ಞೆಯಲ್ಲಿ ದೌರ್ಜನ್ಯಕ್ಕೀಡಾದ ಮಹಿಳೆ ವಿಶಾಲ ಸಮಾಜದೊಡನೆ ಮುಖಾಮುಖಿಯಾಗುವ ಬದಲು ಮತ್ತೆಲ್ಲೋ ಹಲ್ಲೆಗೊಳಗಾದ ಮಹಿಳೆಯೊಡನೆ ಮುಖಾಮುಖಿಯಾಗುತ್ತಾಳೆ. ಇಲ್ಲಿ ಪಿತೃಪ್ರಧಾನ ಊಳಿಗಮಾನ್ಯ ಧೋರಣೆಯ ಒಂದು ಸಮಾಜ ಆತ್ಮವಂಚನೆ ಮಾಡಿಕೊಳ್ಳುತ್ತಲೇ ನ್ಯಾಯ ವಿತರಣೆಯ ಸಂಕಥನಗಳಲ್ಲಿ ತನ್ನನ್ನು ರಕ್ಷಿಸಿಕೊಳ್ಳುತ್ತದೆ.
ಮಣಿಪುರದಲ್ಲಿ ನಡೆದಿರುವ, ನಡೆಯುತ್ತಿರುವ ಹೀನ ಕೃತ್ಯಗಳ ಬಗ್ಗೆ ಕೇಳಿಬರುತ್ತಿರುವ ಮಾತುಗಳನ್ನು ಗಮನಿಸಿದಾಗ ನಮಗೆ ಇದು ಸ್ಪಷ್ಟವಾಗುತ್ತದೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಗಳು ನಡೆದ 77 ದಿನಗಳ ನಂತರ ಅದರ ವಿಡಿಯೋ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ನಂತರವಷ್ಟೇ ಎಚ್ಚೆತ್ತಿರುವ ಮಣಿಪುರ ಸರ್ಕಾರ ಕೂಡಲೇ ಕಾನೂನು ಕ್ರಮ ಜರುಗಿಸುವುದು ಅದರ ಸಾಂವಿಧಾನಿಕ ಕರ್ತವ್ಯ. ಆದರೆ ಇದೇ ಸರ್ಕಾರಕ್ಕೆ ಮತ್ತು ಆಡಳಿತ ವ್ಯವಸ್ಥೆಗೆ ಒಂದು ಸಾಮಾಜಿಕ ಹೊಣೆಗಾರಿಕೆಯೂ, ನೈತಿಕ ಜವಾಬ್ದಾರಿಯೂ ಇದೆ ಅಲ್ಲವೇ ? “ ಇಂತಹ ನೂರಾರು ಘಟನೆಗಳು ನಡೆಯುತ್ತಿವೆ ಅದಕ್ಕಾಗಿಯೇ ಅಂತರ್ಜಾಲ ನಿಷೇಧಿಸಿದ್ದೇವೆ ” ಎಂದು ಹೇಳುವ ಮೂಲಕ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಈ ಆತ್ಮವಂಚನೆಯ ಒಂದು ಆಯಾಮವನ್ನು ನಮಗೆ ಪರಿಚಯಿಸುತ್ತಾರೆ. “ ಇಂತಹ ಘಟನೆಗಳು “ ಎಂದರೆ ಏನರ್ಥ ?
ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಮುಂತಾದವರು ಈ ಘಟನೆಗಳಿಗೆ ಪ್ರತಿಕ್ರಯಿಸುತ್ತಾ, ರಾಜಸ್ಥಾನದಲ್ಲಿ, ಪಶ್ಚಿಮ ಬಂಗಾಲದಲ್ಲಿ (ಅಂದರೆ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ) ಸಹ ಇಂತಹ ಪ್ರಕರಣಗಳು ನಡೆದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ತಮ್ಮೊಳಗಿನ ಸಂಕುಚಿತತೆ ಮತ್ತು ಪಿತೃಪ್ರಧಾನ ಪ್ರಜ್ಞೆಯನ್ನು ಹೊರಗೆಡಹಿದ್ದಾರೆ. ಯಾವುದೇ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಿದ್ದರೆ ಅದಕ್ಕೆ ಹೊಣೆ ಕೇವಲ ಆಯಾ ಸರ್ಕಾರಗಳು ಮಾತ್ರವೇ ? ವಿಶಾಲ ಸಮಾಜದ ಜವಾಬ್ದಾರಿ ಏನೂ ಇಲ್ಲವೇ ? ರಾಜ್ಯಗಳಲ್ಲಿ ನಡೆಯುವ ಘಟನೆಗಳಿಗೆ ಕೇಂದ್ರ ಸರ್ಕಾರ ಹೊಣೆಯಾಗುವುದಿಲ್ಲವೇ ? ಆಡಳಿತಾತ್ಮಕವಾಗಿ ಇದನ್ನು ಒಪ್ಪಬಹುದಾದರೂ, ತಾತ್ವಿಕ ನೆಲೆಯಲ್ಲಿ ಕೇಂದ್ರ ಸರ್ಕಾರದ ನೈತಿಕ-ಸಾಂವಿಧಾನಿಕ ಹೊಣೆಗಾರಿಕೆ ಇದೆಯಲ್ಲವೇ ? ಜನಾಂಗೀಯ ಕಲಹಗಳಲ್ಲಿ, ಕೋಮು ಗಲಭೆಗಳಲ್ಲಿ ಮಹಿಳೆ ದಾಳಿಕೋರ ಪುರುಷ ಸಮಾಜದ ಕಾಮತೃಷೆಯನ್ನು ತಣಿಸುವ ಸರಕುಗಳಾಗಿ ಪರಿಣಮಿಸುತ್ತಾಳೆ ಎನ್ನುವ ಅರಿವು ಹೊಂದಿರುವ ಯಾವುದೇ ಆಡಳಿತ ವ್ಯವಸ್ಥೆ ಇಂತಹ ಸನ್ನಿವೇಶಗಳಲ್ಲಿ ಮಹಿಳಾ ಸಂರಕ್ಷಣೆಯ ಕ್ರಮಗಳಿಗೆ ಆದ್ಯತೆ ನೀಡಬೇಕಲ್ಲವೇ ?
ಸಾಮಾಜಿಕ ಅಸೂಕ್ಷ್ಮತೆಗಳು
ಮಣಿಪುರದಲ್ಲಿ ಹಲ್ಲೆಗೊಳಗಾದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡುವ ಮೂಲಕ ತನ್ನೊಳಗಿನ ಕ್ರೌರ್ಯವನ್ನು ಮೆರೆದಿರುವ ಸಮಾಜವೇ ಮತ್ತೊಂದು ಸಂದರ್ಭದಲ್ಲಿ ಹಾಥ್ರಸ್‌ನಲ್ಲೂ ಅತ್ಯಾಚಾರಕ್ಕೀಡಾದ ಮಹಿಳೆಯನ್ನು ಸುಟ್ಟುಹಾಕಿತ್ತಲ್ಲವೇ ? ಈ ಸಮಾಜಗಳ ಜನಾಂಗೀಯ ಲಕ್ಷಣಗಳಲ್ಲಿ ಭಿನ್ನತೆ ಇರಬಹುದಾದರೂ, ಮಹಿಳೆಯನ್ನು ಬಳಸಬಹುದಾದ ಒಂದು ದೇಹ ಮಾತ್ರ ಎಂದು ಪರಿಗಣಿಸುವ ಪಿತೃಪ್ರಧಾನ ಅಹಮಿಕೆಯ ಸಮಾನ ಎಳೆಯನ್ನು ಗುರುತಿಸಬಹುದಲ್ಲವೇ ? ಯಾವುದೇ ಜನಾಂಗ, ಧರ್ಮ ಅಥವಾ ಜಾತಿಗೆ ಸೇರಿದವರಾಗಿದ್ದರೂ ಮಹಿಳೆಯೊಳಗೆ ಹೆಣ್ತನ ಎನ್ನುವುದೊಂದಿದೆ, ಆ ಹೆಣ್ತನಕ್ಕೆ ಒಂದು ಘನತೆ ಇದೆ, ಹೆಣ್ತನವನ್ನು ಹೊತ್ತ ಆ ಜೀವಕ್ಕೆ ಗೌರವದಿಂದ, ಸ್ವಾಭಿಮಾನದಿಂದ ಬದುಕುವ ಸಾಂವಿಧಾನಿಕ ಹಕ್ಕಿದೆ ಎಂಬ ಸಂವೇದನಾಶೀಲ ಆಲೋಚನೆಯೇ ಇಲ್ಲದ ಸಮಾಜದಲ್ಲಿ ಭಾರತೀಯ ಮಹಿಳೆ ಬದುಕುತ್ತಿದ್ದಾಳೆ ಎನ್ನುವುದು ನಿಶ್ಚಿತವಾಗುವುದು ಈ ಘಟನೆಗಳು ಸಂಭವಿಸಿದಾಗಲೇ.

ಮಹಿಳಾ ಚಳುವಳಿಯ ಸಂದರ್ಭಲ್ಲಿ “ ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ,,,,,” ಎಂಬ ಒಂದು ಹಾಡಿನ ಸಾಲು ಕೇಳಿಬರುತ್ತದೆ. ಜಾತಿ-ಮತ-ಜನಾಂಗೀಯ ದ್ವೇಷದ ವಿಷವರ್ತುಲದಲ್ಲಿ ಸಿಲುಕಿರುವ ಭಾರತೀಯ ಸಮಾಜದ ಪುರುಷಾಳ್ವಿಕೆ-ಪುರುಷಾಧಿಪತ್ಯದ ವಾರಸುದಾರರನ್ನೇ ಉದ್ದೇಶಿಸಿ ಬರೆದಂತಿರುವ ಈ ಸಾಲುಗಳು ಒಂದರ್ಥದಲ್ಲಿ ಇಡೀ ಸಮಾಜವನ್ನೇ ನಾಲ್ಕಾರು ಬದಿಗಳಿಂದ ತಿವಿಯಬೇಕಲ್ಲವೇ ? ಕರ್ನಾಟಕದ ಸೌಜನ್ಯ ಆಗಲೀ, ಹಲ್ಲೆಗೊಳಗಾದ ಮಣಿಪುರದ ಸಂತ್ರಸ್ತ ಮಹಿಳೆಯರಾಗಲಿ ನಮ್ಮ ಸಮಾಜದೊಳಗಿನ ಮಹಿಳಾ ಸಂಕುಲಗಳನ್ನೇ ವಿಚಲಿತಗೊಳಿಸುತ್ತಿಲ್ಲ ಎನ್ನುವ ದುರಂತ ವಾಸ್ತವವನ್ನೂ ನಾವು ಎದುರಿಸಬೇಕಿದೆ. ಪ್ರಜಾಪ್ರಭುತ್ವ, ಸಮ ಸಮಾಜ, ಸಾಂವಿಧಾನಿಕ ಮೌಲ್ಯಗಳು, ಸ್ತ್ರೀ ಸಂವೇದನೆ, ಲಿಂಗ ಸಮಾನತೆ ಮತ್ತು ಸೂಕ್ಷ್ಮತೆ ಇವುಗಳನ್ನು ತಾತ್ವಿಕವಾಗಿ ಪ್ರತಿನಿಧಿಸುವ ಅಥವಾ ಉಸಿರಾಡುವ ಸಾಂಘಿಕ ನೆಲೆಗಳಲ್ಲಿ ಮಾತ್ರವೇ “ ಹೆಣ್ತನದ ಘನತೆ” ಯ ಪ್ರಶ್ನೆ ಆಗಿಂದಾಗ್ಗೆ ಧ್ವನಿಸುತ್ತಿರುತ್ತದೆ.
ಏಕೆ ? ವಿಶಾಲ ಸಮಾಜದ ಮಹಿಳಾ ಸಂಕುಲ ಅಥವಾ ಪ್ರಜಾಪ್ರಭುತ್ವವನ್ನೇ ಉಸಿರಾಡುವ ಪುರುಷ ಸಮಾಜಕ್ಕೆ ಈ ಪ್ರಶ್ನೆ ಕಾಡುವುದಿಲ್ಲವೇ ? ಹಿತವಲಯದ, ಐಷಾರಾಮಿ ಬದುಕಿನ, ಸುಸ್ಥಿರ ಬದುಕು ಕಂಡುಕೊಂಡ ಮಧ್ಯ ವರ್ಗದ ಸಮಾಜದಲ್ಲಿ ಈ ಪ್ರಶ್ನೆ ಆಕ್ರೋಶದ ಚಿಲುಮೆಗಳನ್ನು ಏಕೆ ಉಕ್ಕಿಸುವುದಿಲ್ಲ ? ಮೇಲ್ಪದರದ ಗಣ್ಯ ಸಮಾಜವನ್ನು (Elite society) ಪ್ರತಿನಿಧಿಸುವ ನೌಕರರ ಸಂಘಟನೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ತಮ್ಮದೇ ಆದ ರಕ್ಷಾ ಕವಚಗಳೊಂದಿಗೆ ಬದುಕುತ್ತಿರುವ ಒಂದು ಸಮಾಜದಲ್ಲಿ ಪದೇ ಪದೇ ದಾಳಿಗೊಳಗಾಗುತ್ತಿರುವ “ ಹೆಣ್ತನದ ಘನತೆ ” ಏಕೆ ಆಕ್ರೋಶ ಉಕ್ಕಿಸುತ್ತಿಲ್ಲ ? ಇದೇ ಸಮಾಜದ ಒಂದು ಭಾಗವಾಗಿರುವ ಮಹಿಳಾ ಸಂಕುಲವೂ ಏಕೆ ಸ್ಮಶಾನ ಮೌನ ವಹಿಸುತ್ತದೆ ?
ಈ ಜಟಿಲ ಪ್ರಶ್ನೆಗಳಿಗೆ ನಾವು ಉತ್ತರ ಶೋಧಿಸಬೇಕಿದೆ. ಮಹಿಳಾ ಆಯೋಗಗಳನ್ನೂ ಒಳಗೊಂಡಂತೆ, ಮಹಿಳಾ ಜನಪ್ರತಿನಿಧಿಗಳು ತಮ್ಮ ರಾಜಕೀಯ ಸಿದ್ಧಾಂತಗಳಿಗೆ ಅನುಗುಣವಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಪ್ರತಿಕ್ರಯಿಸುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಎರಡು ಸಂಗತಿಗಳು ಸ್ಪಷ್ಟವಾಗುತ್ತದೆ. ಮೊದಲನೆಯದು ಶತಮಾನಗಳಿಂದ ರೂಢಿಸಿಕೊಂಡುಬಂದಿರುವ ಪಿತೃಪ್ರಧಾನ ಧೋರಣೆ ಮತ್ತು ಪುರುಷಾಧಿಪತ್ಯದ ಮೇಲರಿಮೆ ನಮ್ಮ ಆಡಳಿತ ವ್ಯವಸ್ಥೆಯ ಮೇಲೆಯೂ ಪಾರಮ್ಯ ಸಾಧಿಸಿದೆ. ಎರಡನೆಯದು ಇಡೀ ಸಮಾಜವೇ ಲಿಂಗ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದು, ಸ್ತ್ರೀ ಸಂವೇದನೆ ಎನ್ನುವುದು ಕೆಲವೇ ಸೂಕ್ಷ್ಮ ಸಂವೇದಿ ಮಾನವೀಯ ಮನಸುಗಳ ಜವಾಬ್ದಾರಿಯಾಗಿ ಪರಿಣಮಿಸಿದೆ. ಈ ಲಿಂಗಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವ ಸಾಮಾಜಿಕ ಜವಾಬ್ದಾರಿಯನ್ನು ನಾವು ಸ್ವಪ್ರೇರಣೆಯಿಂಧ ಹೊತ್ತುಕೊಂಡಾಗಲೇ ನಮಗೆ ಮಣಿಪುರದಲ್ಲಿ ದಾಳಿಗೊಳಗಾಗಿರುವುದು ಕೇವಲ ಒಂದೆರಡು ದೇಹಗಳಲ್ಲ ಬದಲಾಗಿ “ ಹೆಣ್ತನದ ಘನತೆ ” ಎಂಬ ವಾಸ್ತವ ಅರಿವಾಗಲು ಸಾಧ್ಯ.
ದೇಶವ್ಯಾಪಿಯಾಗಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವ ಹೊತ್ತಿನಲ್ಲಿ ಈ ಘನತೆಯನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾದಾಗ ಮಾತ್ರ ರಾಜಕಾರಣದಲ್ಲೂ ಮಹಿಳಾ ಸಂವೇದನೆಯ ಬೇರುಗಳನ್ನು ಗಟ್ಟಿಗೊಳಿಸಬಹುದು.
-೦-೦-೦-







