• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಿಂಚಣಿದಾರರಿಗೆ ದ್ರೋಹ: ಸರ್ಕಾರದ ಕ್ರೂರ ವೇತನ ಕಡಿತ

ನಾ ದಿವಾಕರ by ನಾ ದಿವಾಕರ
April 1, 2025
in Top Story, ದೇಶ, ವಾಣಿಜ್ಯ, ವಿಶೇಷ
0
ಪಿಂಚಣಿದಾರರಿಗೆ ದ್ರೋಹ: ಸರ್ಕಾರದ ಕ್ರೂರ ವೇತನ ಕಡಿತ
Share on WhatsAppShare on FacebookShare on Telegram

ಅಮಿತ್ ಪಾಂಡೆ

ADVERTISEMENT

(ಮೂಲ : Betraying pensioners Govtʼs cruel pay cut – Amit Pandey – The Emerging World , 26 ಮಾರ್ಚ್‌ 2025 )

ಕನ್ನಡಕ್ಕೆ  : ನಾ ದಿವಾಕರ

ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳಿಗೆ ಇತ್ತೀಚೆಗೆ ತಂದಿರುವ ತಿದ್ದುಪಡಿಗಳು, ಅಸ್ತಿತ್ವದಲ್ಲಿರುವ ಪಿಂಚಣಿದಾರರನ್ನು ಹೊಸ ವೇತನ ಆಯೋಗದ ಪ್ರಯೋಜನಗಳಿಂದ ಹೊರಗಿಟ್ಟು, ಭವಿಷ್ಯದಲ್ಲಿ ನಿವೃತ್ತರಾಗುವವರಿಗೆ ಮಾತ್ರ ಅನ್ವಯಿಸುವಂತೆ ಮಾಡಿರುವುದು ವ್ಯಾಪಕ ಆಕ್ರೋಶ ಉಂಟುಮಾಡಿದ್ದು, ಪಿಂಚಣಿದಾರರಲ್ಲಿ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ. ಇತ್ತೀಚಿನ ಶಿಫಾರಸುಗಳಿಗೂ ಮುನ್ನ ಮೊದಲು ನಿವೃತ್ತರಾದವರ ಪಿಂಚಣಿಯನ್ನು ಮೂಲಭೂತವಾಗಿ ಸ್ಥಗಿತಗೊಳಿಸುವ ಈ ನಿರ್ಧಾರವು ಲಕ್ಷಾಂತರ ವೃದ್ಧ ಪಿಂಚಣಿದಾರರನ್ನು ಆರ್ಥಿಕ ಸಂಕಷ್ಟದಿಂದ ಬಳಲುವಂತೆ ಮಾಡುತ್ತದೆ.  ಹಣದುಬ್ಬರ ಗಗನಕ್ಕೇರುತ್ತಿರುವುದರಿಂದ ಮತ್ತು ಜೀವನ ವೆಚ್ಚವು ಹೆಚ್ಚು ಅಸಹನೀಯವಾಗುತ್ತಿರುವುದರಿಂದ, ಈ ಶಾಸಕಾಂಗ ಕ್ರಮವು ಸಾಮಾಜಿಕ ಭದ್ರತೆಗೆ ಸರ್ಕಾರದ ಬದ್ಧತೆ ಮತ್ತು ದಶಕಗಳಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದವರ ಬಗೆಗಿನ ಅದರ ಜವಾಬ್ದಾರಿಗಳ ಬಗ್ಗೆ ಹಲವು ಅನುಮಾನಗಳನ್ನು, ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಒಂದು ಕಾಲದಲ್ಲಿ 4,800 ರೂಗಳ ವೇತನ ಶ್ರೇಣಿಯಡಿಯಲ್ಲಿ ಕೆಲಸ ಮಾಡಿದ ನಿವೃತ್ತ ಸರ್ಕಾರಿ ನೌಕರರು ಈಗ ಜೀವನಪರ್ಯಂತ ಒಂದೇ ಪಿಂಚಣಿಯಲ್ಲಿ ಬದುಕಬೇಕಾಗುತ್ತದೆ, ಬಹುತೇಕ ವೇತನ ಆಯೋಗದ ಪರಿಷ್ಕರಣೆಗಳು ಪ್ರಸ್ತುತ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತಿದ್ದರೂ ಸಹ. ಅಸಮಾನತೆಯು ಸ್ಪಷ್ಟವಾಗಿ ಕಾಣುತ್ತಿದ್ದು, ಅಂತಹ ತಾರತಮ್ಯದ ಹಿಂದಿನ ತಾರ್ಕಿಕತೆ ಸ್ಪಷ್ಟವಾಗಿರುವುದಿಲ್ಲ. ಸರ್ಕಾರವು ತನ್ನ ನಿವೃತ್ತ ನೌಕರರನ್ನು, ಅಧಿಕಾರಿಗಳನ್ನು ಆರ್ಥಿಕ ಪ್ರಗತಿಯ ಪ್ರಯೋಜನಗಳಿಂದ ಪ್ರತ್ಯೇಕಿಸಲು ಏಕೆ ಪ್ರಯತ್ನಿಸುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಈ ನೀತಿ ನಿರ್ಧಾರವು ಪಾಕಿಸ್ತಾನದ ಇತ್ತೀಚಿನ ಪಿಂಚಣಿ ಸುಧಾರಣೆಗಳಿಗೆ ಹೋಲಿಕೆಯಾಗುತ್ತದೆ. ಅಲ್ಲಿ ನಿವೃತ್ತರು ಆರ್ಥಿಕ ಅಸ್ಥಿರತೆಯಿಂದಾಗಿ ತಮ್ಮ ಅರ್ಹ ಪಿಂಚಣಿಯ ಅರ್ಧದಷ್ಟು ಮಾತ್ರ ಸ್ವೀಕರಿಸುವ ಒತ್ತಡವನ್ನು ಎದುರಿಸುತ್ತಿದ್ದಾರೆ. ವಿಶ್ವಗುರು ಮತ್ತು ಉದಯೋನ್ಮುಖ ಜಾಗತಿಕ ಶಕ್ತಿ ಎಂದು ಹೆಮ್ಮೆಪಡುವ ರಾಷ್ಟ್ರವಾದ ಭಾರತವು ಈಗ ನೀತಿ ಸ್ಫೂರ್ತಿಗಾಗಿ ವಿಫಲ ಆರ್ಥಿಕತೆಗಳತ್ತ ನೋಡುತ್ತಿದೆಯೇ ?

ಈ ನಿರ್ಧಾರದ ಪರಿಣಾಮಗಳನ್ನು ಅಂಕಿ-ಸಂಖ್ಯೆಗಳಿಂದಾಚೆ ನೋಡಬೇಕಾಗುತ್ತದೆ. ಒಂದು ಕಾಲದಲ್ಲಿ ಆಡಳಿತದ ಬೆನ್ನೆಲುಬಾಗಿ ದುಡಿದ ಜನತೆಯ ಘನತೆಯ ಮೇಲಿನ ದಾಳಿಯಾಗಿದೆ. ಪಿಂಚಣಿ ಕೇವಲ ನಿವೃತ್ತಿಯ ನಂತರದ ಪ್ರಯೋಜನವಲ್ಲ; ಇದು ಸಾಮಾಜಿಕ ಸಹಾಯದ ಒಂದು ರೂಪ, ಹಲವು ವರ್ಷಗಳ ಸಮರ್ಪಿತ ಸೇವೆಯ ಮಾನ್ಯತೆ ಎನ್ನುವುದನ್ನು ಮನಗಾಣಬೇಕಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಹೇಳಿದ್ದಂತೆ , “ಪಿಂಚಣಿ ಎಂದರೆ ದಾನವಲ್ಲ, ಅದು ಜೀವಿತಾವಧಿಯ ಸೇವೆಯ ಮೂಲಕ ಗಳಿಸಿದ ನೌಕರರು ಗಳಿಸುವ ಹಕ್ಕು.” ಆ ಮೂಲಭೂತ ತತ್ವವನ್ನು ಈಗ ದುರ್ಬಲಗೊಳಿಸಲಾಗುತ್ತಿದೆ ಎಂದರೆ  ಅದು ಸರ್ಕಾರದ ಆದ್ಯತೆಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ.  ಸಾಮಾಜಿಕ ನ್ಯಾಯ ಮತ್ತು ಜನ ಕಲ್ಯಾಣದಿಂದ ಕಾರ್ಪೊರೇಟ್ ಶೈಲಿಯ ದಕ್ಷತೆಯ ಮಾದರಿಗೆ ಬದಲಾಗುತ್ತಿರುವ ವಾತಾವರಣದಲ್ಲಿ ಆರ್ಥಿಕ ನಿರ್ಬಂಧಗಳು ನೀತಿಯನ್ನು ನಿರ್ದೇಶಿಸುತ್ತವೆ. ಇಲ್ಲಿ ಮಾನವ ಸಮಾಜದ ಮೇಲಾಗುವ ಪರಿಣಾಮಗಳನ್ನು ನಿರ್ಲಕ್ಷಿಸಲಾಗುತ್ತದೆ.

ಈ ಕ್ರಮದ ಹಿಂದಿನ ತಾರ್ಕಿಕತೆಯ ಬಗ್ಗೆ ಸರ್ಕಾರದ ಮೌನವು ಕಳವಳಗಳಕಾರಿಯಾಗಿ ಕಾಣುತ್ತದೆ. ಸರ್ಕಾರದ ಆರ್ಥಿಕ ನಿರ್ಬಂಧಗಳು ನಿಜವಾಗಿಯೂ ಎಷ್ಟು ತೀವ್ರವಾಗಿವೆಯೆಂದರೆ, ಪ್ರಭುತ್ವವು ವೃದ್ಧರಿಗೆ ತನ್ನ ಬದ್ಧತೆಗಳನ್ನು ಪೂರೈಸಲು ಸಾಧ್ಯವಿಲ್ಲದಂತಾಗಿದೆ. ಹಾಗಾದಲ್ಲಿ  ಆರ್ಥಿಕ ಹೊಂದಾಣಿಕೆಗಳಿಂದ ಸೃಷ್ಟಿಯಾಗುವ ಹೊರೆಯನ್ನು ತಗ್ಗಿಸಲು  ಇತರ ವೆಚ್ಚಗಳ ಮಾರ್ಗಗಳನ್ನು ಅವಲಂಬಿಸದೆ  ಪಿಂಚಣಿದಾರರ ಮೇಲೆ ಏಕೆ ಹೇರಲಾಗುತ್ತಿದೆ ? ಎನ್‌. ಕೆ.  ಪ್ರೇಮಚಂದ್ರನ್ ಮತ್ತು ಕೆ. ಸಿ. ವೇಣುಗೋಪಾಲ್‌ರಂತಹ ಸಂಸದರ ನೇತೃತ್ವದ ವಿರೋಧ ಪಕ್ಷವು ಈ ಕಳವಳಗಳನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಸರ್ಕಾರದ ಈ ನಿಯಮವನ್ನು  ಹಿಂಬಾಗಿಲಿನಿಂದ ತರುವ ಶಾಸನ ಎಂದು ಕರೆಯುವ ಮೂಲಕ ಪಿಂಚಣಿದಾರರನ್ನು ವಂಚಿಸುವ ನೈತಿಕ ಆಧಾರವನ್ನು ಪ್ರಶ್ನಿಸಿದ್ದಾರೆ. ಮಹಾಭಾರತ ಮಹಾಕಾವ್ಯದಲ್ಲಿ, ಶರ ಮಂಚದ ಮೇಲೆ ಮಲಗಿ, ತನ್ನ ಸರಿಯಾದ ನಿರ್ಗಮನದ ಕ್ಷಣಕ್ಕಾಗಿ ಕಾಯುತ್ತಿದ್ದ ಭೀಷ್ಮ ಪಿತಾಮಹನ ಕಥೆ ನೆನಪಾಗುತ್ತದೆ. ಒಮ್ಮೆ ತನ್ನ ಎಲ್ಲಾ ಶಕ್ತಿಯಿಂದ ರಾಜ್ಯವನ್ನು ರಕ್ಷಿಸಿದ ಯೋಧನನ್ನು.  ಅವನು ಇನ್ನು ಮುಂದೆ ಉಪಯೋಗಕ್ಕೆ ಬರುವುದಿಲ್ಲ ಎಂದ ತಿಳಿದಾಗ ಕೈಬಿಡಲಾಗುತ್ತದೆ. . ಭಾರತದ ಪಿಂಚಣಿದಾರರಿಗೆ ಕಾಯುತ್ತಿರುವ ಅದೃಷ್ಟ ಇದೇನಾ ಎನಿಸುತ್ತದೆ.  ಅವರ ಸೇವೆ ಇನ್ನು ಮುಂದೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕಾಗಿ,  ಅವರನ್ನು ನಿರ್ಲಕ್ಷಿಸಿ ಬದಿಗೆ

ಸರಿಯಲಾಗುತ್ತಿದೆಯೇ ?

ಉರ್ದು ಕವಿ ಬಶೀರ್ ಬದರ್ ಕಟುವಾಗಿ ಬರೆದಿರುವತೆ:

“ಲೋಗ್ ಟೂಟ್ ಜಾತೇ ಹೈ ಏಕ್ ಘರ್ ಬನಾನೇ ಮೇ,

ತುಮ್ ತರಸ್ ನಹಿ ಖಾತೇ ಬಸ್ತಿಯಾಂ ಜಲನೇ ಮೇ…”

(ಮನೆ ಕಟ್ಟಲು ಜನರು ತಮ್ಮನ್ನು ತಾವೇ ಸಂಕಷ್ಟಕ್ಕೆ ಈಡುಮಾಡಿಕೊಳ್ಳುತ್ತಾರೆ,  ಆದರೆ ನೀವು ಇಡೀ ವಸಾಹತುಗಳನ್ನು ಸುಟ್ಟುಹಾಕುವಲ್ಲಿ ಯಾವುದೇ ಕರುಣೆ ತೋರಿಸುವುದಿಲ್ಲ…)

ರಾಷ್ಟ್ರವನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು ತಮ್ಮ ಆರ್ಥಿಕ ಭದ್ರತೆ ಕುಸಿಯುತ್ತಿರುವುದನ್ನು ಕಣ್ಣೆದುರಿನಲ್ಲೇ ನೋಡುತ್ತಿರುವ ಈ ಸನ್ನಿವೇಶದಲ್ಲಿ ಈ ಪದ್ಯದ ಸಾರವು ಸಾಂದರ್ಭಿಕ ಸತ್ಯ ಎನಿಸುತ್ತದೆ.  ರಾಮರಾಜ್ಯವನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ದೇಶದಲ್ಲಿ, ಆಡಳಿತವು ನ್ಯಾಯಯುತ ಮತ್ತು ಕರುಣಾಮಯವಾಗಿರಬೇಕೆಂದು ಉದ್ದೇಶಿಸಲಾದ ದೇಶದಲ್ಲಿ, ಈ ನಿರ್ಧಾರವು ಟ್ರಂಪ್ ರಾಜ್ಯವನ್ನು ಬಿಂಬಿಸುವಂತೆ ಕಾಣುತ್ತದೆ.  ಅಲ್ಲಿ ಆರ್ಥಿಕ ನೀತಿಯನ್ನು ಸಾಮಾಜಿಕ ನ್ಯಾಯವನ್ನು ಬಲಿಕೊಟ್ಟು, ಆರ್ಥಿಕ ವಾಸ್ತವಿಕತೆಯಿಂದ ನಿರ್ದೇಶಿಸಲಾಗುತ್ತದೆ. ಆರ್ಥಿಕ ಪ್ರಕ್ಷುಬ್ಧತೆಯ ನಡುವೆ ಪಿಂಚಣಿದಾರರು ತಮ್ಮನ್ನು ಸ್ವತಃ ತಾವೇ ರಕ್ಷಿಸಿಕೊಳ್ಳಲು ನಿರೀಕ್ಷಿಸುವುದರಿಂದ , ಈ ನಿವೃತ್ತ ನೌಕರರ ಘನತೆ ಮತ್ತು ಅಸ್ತಿತ್ವವನ್ನು  ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ನಿಜವಾಗಿಯೂ ಹೊರುವವರು ಯಾರು ಎಂಬ ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ.

ಈಡೇರದ ಭರವಸೆಗಳ ಪರಂಪರೆ: ಚಾರಿತ್ರಿಕ ದೃಷ್ಟಿಕೋನ

ಭಾರತದ ಪಿಂಚಣಿ ವ್ಯವಸ್ಥೆಯು ಬಹಳ ಹಿಂದಿನಿಂದಲೂ ರಾಜಕೀಯ ಮತ್ತು ಆರ್ಥಿಕ ನೆಲೆಯಲ್ಲಿ  ವಿವಾದಾಸ್ಪದ ವಿಷಯವಾಗಿದೆ. ರಕ್ಷಣಾ ಸಿಬ್ಬಂದಿಗೆ ಒಂದು ಶ್ರೇಣಿ ಒಂದು ಪಿಂಚಣಿ (OROP) ಯೋಜನೆಯನ್ನು ಪರಿಚಯಿಸುವುದರಿಂದ ಹಿಡಿದು ಸತತ ವೇತನ ಆಯೋಗಗಳ ನಿರಂತರ ಶಿಫಾರಸುಗಳವರೆಗೆ, ಪಿಂಚಣಿ ಸುಧಾರಣೆಗಳು ಹೆಚ್ಚಾಗಿ ನಿಜವಾದ ಕಲ್ಯಾಣ ಕಾಳಜಿಗಳಿಗಿಂತ ರಾಜಕೀಯ ಪರಿಗಣನೆಗಳಿಂದ ನಿರ್ಧರಿಸಲ್ಪಡುತ್ತವೆ.

ಚಾರಿತ್ರಿಕವಾಗಿ,  ಪಿಂಚಣಿದಾರರಿಗೆ ಹಣದುಬ್ಬರ ಮತ್ತು ಆರ್ಥಿಕ ಏರಿಳಿತಗಳಿಗೆ ಅನುಗುಣವಾಗಿ ಅವರ ಆರ್ಥಿಕ ಭದ್ರತೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. 6 ನೇ ಮತ್ತು 7 ನೇ ವೇತನ ಆಯೋಗಗಳು ಪಿಂಚಣಿ ರಚನೆಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಿ, ನಿವೃತ್ತರು ತಮ್ಮ ಕಾಲದ ಆರ್ಥಿಕ ವಾಸ್ತವಗಳಿಗೆ ಅನುಗುಣವಾಗಿ, ಆರ್ಥಿಕ ಪ್ರಯೋಜನಗಳನ್ನು ಪಡೆಯುವುದನ್ನು ಈ ವೇತನ ಆಯೋಗಗಳು ಖಚಿತಪಡಿಸಿದ್ದವು.  ಆದಾಗ್ಯೂ, ಇತ್ತೀಚಿನ ತಿದ್ದುಪಡಿಯು ಈ ಪೂರ್ವನಿದರ್ಶನದಿಂದ ವಿಮುಖವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತತ್ಪರಿಣಾಮವಾಗಿ ಇದು ಪಿಂಚಣಿದಾರರನ್ನು ಹೊಸ ಅನುಷ್ಠಾನ ದಿನಾಂಕದ ಮೊದಲು ನಿವೃತ್ತರಾದವರು ಮತ್ತು ನಂತರ ನಿವೃತ್ತರಾದವರು ಎಂಬ ಎರಡು ವರ್ಗಗಳಾಗಿ ವಿಂಗಡಿಸುತ್ತದೆ: ಇದರ ನೇರ ಪರಿಣಾಮ, ಎರಡನೆಯ ವರ್ಗದ ನಿವೃತ್ತರು ಕಾಲಕಾಲಕ್ಕೆ ಹೆಚ್ಚಾಗುವ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಹಿಂದಿನವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗುತ್ತದೆ.

ಕೇರಳ ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರಂತಹ ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ, ಇದು ದೇಶಕ್ಕೆ ದಶಕಗಳ ಸೇವೆ ಸಲ್ಲಿಸಿದ ಲಕ್ಷಾಂತರ ಹಿರಿಯ ನಾಗರಿಕರಿಗೆ ಬಗೆಯಲಾಗಿರುವ ದ್ರೋಹ ಎಂದು ಹೇಳಿದ್ದಾರೆ.  ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆ, ಅನುಷ್ಠಾನಕ್ಕೆ ಮುನ್ನ ನಿವೃತ್ತರಾದವರನ್ನು ಹೊರಗಿಡುವುದು “ವ್ಯವಸ್ಥಿತ ಆರ್ಥಿಕ ತಾರತಮ್ಯಕ್ಕೆ ಸಮ ಎಂದು ವಾದಿಸಿದ್ದಾರೆ.

ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಗಳು

ಮಾರ್ಚ್ 2023 ರ ಹೊತ್ತಿಗೆ 6.79 ದಶಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯ ಭಾರತದ ಪಿಂಚಣಿದಾರರು ಈಗ ತಮ್ಮ ಉಳಿವಿಗೆ ಸಂಚಕಾರವನ್ನು ತರುವಂತಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಮೊದಲೇ ಅಸ್ತಿತ್ವದಲ್ಲಿರುವ ಪಿಂಚಣಿದಾರರನ್ನು ವೇತನ ಆಯೋಗದ ಪ್ರಯೋಜನಗಳಿಂದ ಹೊರಗಿಡುವ ಸರ್ಕಾರದ ನಿರ್ಧಾರವು ಲಕ್ಷಾಂತರ ಜನರು ಒಂದೇ ಮೊತ್ತದ, ನಿಶ್ಚಲವಾದ ಪಿಂಚಣಿಗಳೊಂದಿಗೆ ಬದುಕು ಸವೆಸುವಂತೆ ಮಾಡುತ್ತದೆ.  ತತ್ಪರಿಣಾಮವಾಗಿ, ಹಣದುಬ್ಬರವು ಅವರ ಖರೀದಿ ಶಕ್ತಿಯನ್ನು ಕುಗ್ಗಿಸುತ್ತದೆ. ಹೆಚ್ಚುತ್ತಿರುವ ಜೀವನ ವೆಚ್ಚಗಳೊಂದಿಗೆ  ಈ ಕ್ರಮವು ರಾಷ್ಟ್ರದ ಸೇವೆಯಲ್ಲಿ ತಮ್ಮ ಜೀವನವನ್ನು ಕಳೆದವರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರ ದರವು ಡಿಸೆಂಬರ್ 2024 ರಲ್ಲಿ ಶೇಕಡಾ 8.39 ರಷ್ಟಿತ್ತು, ಇದು ಅಗತ್ಯ ವಸ್ತುಗಳ ಬೆಲೆಗಳಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತದೆ. ಈ ಪ್ರವೃತ್ತಿಯು ಪಿಂಚಣಿದಾರರ ಮೇಲೆ ಅಸಮಾನವಾಗಿ ಹಾಗೂ ಹೆಚ್ಚಿನ ಪರಿಣಾಮ ಬೀರುತ್ತದೆ, ಅವರ ಸ್ಥಿರ ಆದಾಯವು ಬದಲಾಗದೆ ಉಳಿಯುತ್ತದೆ ಆದರೆ ವೆಚ್ಚಗಳು ಗಗನಕ್ಕೇರುತ್ತವೆ. ಆಹಾರ, ಆರೋಗ್ಯ ಮತ್ತು ದೈನಂದಿನ ಅವಶ್ಯಕತೆಗಳು ಅನೇಕ ನಿವೃತ್ತರಿಗೆ ಕೈಗೆಟುಕುವಂತಿಲ್ಲ, ಇದರಿಂದಾಗಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಹಣದುಬ್ಬರ-ಹೊಂದಾಣಿಕೆಯ ಪಿಂಚಣಿ ಹೆಚ್ಚಳದ ಕೊರತೆಯಿಂದಾಗಿ ಪಿಂಚಣಿದಾರರು ಪ್ರತಿ ವರ್ಷ ಪರಿಣಾಮಕಾರಿಯಾಗಿ ತಮ್ಮ ನೈಜ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಅವರನ್ನು ಬಡತನದ ಸಮೀಪಕ್ಕೆ ತಳ್ಳುತ್ತಿದೆ.

ಉದಾಹರಣೆಗೆ, ನಿವೃತ್ತ ಸರ್ಕಾರಿ ಗುಮಾಸ್ತರಾದ ರಾಮ್ ಪ್ರಸಾದ್ ಶರ್ಮಾ ಅವರನ್ನು ತೆಗೆದುಕೊಳ್ಳಿ. ತಿಂಗಳಿಗೆ 18,000 ರೂಗಳ ಪಿಂಚಣಿ ಪಡೆಯುತ್ತಿದ್ದಾರೆ. 2020 ರಲ್ಲಿ, ಈ ಮೊತ್ತವು ಮೂಲ ವೆಚ್ಚಗಳಿಗೆ ಸಾಕಾಗುತ್ತಿತ್ತು. ಆದಾಗ್ಯೂ, 2024 ರ ಹೊತ್ತಿಗೆ, ಹಣದುಬ್ಬರದಿಂದಾಗಿ, ದಿನಸಿ, ಔಷಧಿಗಳು ಮತ್ತು ಉಪಯುಕ್ತತೆಗಳ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ. ವೈದ್ಯಕೀಯ ವೆಚ್ಚಗಳಲ್ಲಿ ಶೇಕಡಾ  30 ರಷ್ಟು ಏರಿಕೆಯಾಗಿದೆ ಮತ್ತು ಆಹಾರದ ಬೆಲೆಗಳಲ್ಲಿ ಶೇಕಡಾ 20ರಷ್ಟು ಏರಿಕೆಯಾಗಿದೆ. ಶ್ರೀಯುತ ಶರ್ಮಾ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸರ್ಕಾರಕ್ಕೆ ಸೇವೆ ಸಲ್ಲಿಸಿದ್ದರೂ ಸಹ ಈಗ ಅವರ ಜೀವನಾವಶ್ಯ ಅಗತ್ಯತೆಗಳನ್ನು ಕಡಿತಗೊಳಿಸಬೇಕಾಗುತ್ತದೆ. ಇದು ಅವರೊಬ್ಬರಿಗೇ ಅನ್ವಯಿಸುವ, ಪ್ರತ್ಯೇಕವಾದ. ಪ್ರಕರಣವೇನಲ್ಲ.  ಲಕ್ಷಾಂತರ ಪಿಂಚಣಿದಾರ ಬವಣೆಯೂ ಇದೇ ಆಗಿದೆ. ಅವರೂ ಇದೇ ರೀತಿಯ ಸಂಘರ್ಷದಲ್ಲಿ ತೊಡಗಿರುತ್ತಾರೆ.

ಪಿಂಚಣಿ ಮೊತ್ತಗಳನ್ನು ಪರಿಷ್ಕರಿಸಲು ಸರ್ಕಾರದ ನಿರಾಕರಣೆಯು ಅದರ ವಿಶಾಲ ಆರ್ಥಿಕ ನೀತಿಗಳಿಗೆ ಅನುಗುಣವಾಗಿದೆ.  ಆದರೆ ಇದಕ್ಕೆ ಬಲಿಯಾಗುವವರು ಯಾರು ? ಪಿಂಚಣಿದಾರರನ್ನು ನಿರ್ಲಕ್ಷಿಸುವ ಮೂಲಕ, ಸರ್ಕಾರವು ತನ್ನ ಕರ್ತವ್ಯದಿಂದ ವಿಮುಖವಾಗುತ್ತಿರುವುದೇ ಅಲ್ಲದೆ ಪರೋಕ್ಷವಾಗಿ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಅನೇಕ ನಿವೃತ್ತರು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದೆ, ಕಡಿಮೆ ಸಂಬಳದ ಉದ್ಯೋಗಗಳನ್ನು ಹುಡುಕುತ್ತಿದ್ದಾರೆ, ಈಗಾಗಲೇ ತುಂಬಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಪರಿಣಾಮಕಾರಿಯಾಗಿ ಪಿಂಚಣಿದಾರರು ಕೆಲಸಕ್ಕೆ ಮರಳುವಂತೆ ಒತ್ತಾಯಿಸುತ್ತದೆ, ಕಿರಿಯ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳನ್ನು ಸೀಮಿತಗೊಳಿಸುತ್ತದೆ.

ಸರ್ಕಾರವು ಬೊಕ್ಕಸದ ಹಣಕಾಸಿನ ಹೊರೆ ಮತ್ತು ಜವಾಬ್ದಾರಿಯನ್ನು ನೆಪ ಮಾಡಿಕೊಂಡು,  ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ. ಆದರೆ ಆರ್ಥಿಕ ವಿಶ್ಲೇಷಕರು,  ವಿಮರ್ಶಕರು ಪ್ರಸ್ತುತ ಉದ್ಯೋಗಿಗಳಿಗೆ ಸಂಬಳ ಹೆಚ್ಚಿಸುತ್ತಲೇ,  ಪಿಂಚಣಿ ಪರಿಷ್ಕರಣೆಗಳನ್ನು ನಿರಾಕರಿಸುವುದು ಅನ್ಯಾಯದ ಕ್ರಮ ಎಂದು ವಾದಿಸುತ್ತಾರೆ. ಸರ್ಕಾರದ ಈ ವಿಧಾನವು ಜಾಗತಿಕ ಆರ್ಥಿಕ ಶಕ್ತಿಯಾಗಲು ಬಯಸುವ ರಾಷ್ಟ್ರವು ತನ್ನ ಹಿರಿಯ ನಾಗರಿಕರನ್ನು ಕೈಬಿಡುವುದನ್ನು ಸಮರ್ಥಿಸಬಹುದೇ ಒಂದು ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ:

ಮೊದಲೇ ಅಸ್ತಿತ್ವದಲ್ಲಿರುವ ಪಿಂಚಣಿದಾರರನ್ನು ಆರ್ಥಿಕ ಪ್ರಯೋಜನಗಳಿಂದ ಹೊರಗಿಡುವ ನಿರ್ಧಾರವು ಆರ್ಟಿಕಲ್ 14 (ಸಮಾನತೆಯ ಹಕ್ಕು) ಮತ್ತು ಆರ್ಟಿಕಲ್ 21 (ಘನತೆಯಿಂದ ಬದುಕುವ ಹಕ್ಕು) ಗಳ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ. ಪಿಂಚಣಿಗಳು ಒಂದು ಸವಲತ್ತು ಅಲ್ಲ ಅದು ನೌಕರರ ಸ್ಥಾಪಿತ ಹಕ್ಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ, ಅಂದರೆ ಸರ್ಕಾರವು ಪಿಂಚಣಿ ಯೋಜನೆಗಳಲ್ಲಿ ನ್ಯಾಯಯುತ ಹೊಂದಾಣಿಕೆಗಳನ್ನು ಖಚಿತಪಡಿಸಿಕೊಳ್ಳುವ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ. ಇದಲ್ಲದೆ, ಬಾಂಬೆ ಹೈಕೋರ್ಟ್ ಆರ್ಟಿಕಲ್ 300A ಅಡಿಯಲ್ಲಿ ಪಿಂಚಣಿಯು ಆಸ್ತಿಯ ಒಂದು ರೂಪವಾಗಿದೆ ಎಂದು ತೀರ್ಪು ನೀಡಿದೆ, ಅಂದರೆ ಸರ್ಕಾರವು ನಿವೃತ್ತರನ್ನು ನ್ಯಾಯಯುತವಾದ ಪಿಂಚಣಿ ಹೊಂದಾಣಿಕೆಗಳಿಂದ ಏಕಾಏಕಿ ವಂಚಿತಗೊಳಿಸಲಾಗುವುದಿಲ್ಲ. ಹಣದುಬ್ಬರದೊಂದಿಗೆ ಪಿಂಚಣಿಗಳನ್ನು ಜೋಡಿಸಲು ನಿರಾಕರಿಸುವ ಮೂಲಕ, ಸರ್ಕಾರವು ತನ್ನ ಸಾಂವಿಧಾನಿಕ ಪ್ರತಿಜ್ಞೆಯನ್ನು ಮರೆತು, ವಿಶ್ವಾಸ ದ್ರೋಹ ಮಾಡುತ್ತಿದೆ ಮತ್ತು ಕಲ್ಯಾಣ ರಾಜ್ಯವಾಗಿ ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದೆ ಎನ್ನುವುದು ನಿಶ್ಚಿತವಾಗುತ್ತದೆ.

ಭಾರತದ ಪಿಂಚಣಿ ಬಿಕ್ಕಟ್ಟುಗಳನ್ನು ಹಣಕಾಸಿನ ಸಮಸ್ಯೆಗಳನ್ನು ಮೀರಿ ನೋಡಬೇಕಿದೆ.  ಇದು ಸರ್ಕಾರದ ನೈತಿಕ ಮತ್ತು ಸಾಂವಿಧಾನಿಕ ವೈಫಲ್ಯ. ರಾಷ್ಟ್ರಕ್ಕೆ ತಮ್ಮ ಜೀವನದ ಬಹುಪಾಲು ಸಮಯವನ್ನು, ಅತ್ಯುತ್ತಮ ಕ್ಷಮತೆಯನ್ನು ನೀಡಿದ ಪಿಂಚಣಿದಾರರು ತಮ್ಮ ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗೆ ಅರ್ಹರಾಗಿರುತ್ತಾರೆ. ಸರ್ಕಾರವು ತನ್ನ ನೀತಿಯನ್ನು ಪುನರ್ವಿಮರ್ಶಿಸಬೇಕು, ಹಣದುಬ್ಬರ-ಹೊಂದಾಣಿಕೆಯ ಪಿಂಚಣಿ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಿವೃತ್ತರ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಬೇಕು. ಇದರಲ್ಲಿ ಯಾವುದೇ ಕೊರತೆಯಾದರೂ  ಅದು ಕಲ್ಯಾಣ ರಾಜ್ಯದ ಅಡಿಪಾಯಕ್ಕೆ ಮಾಡಿದ ದ್ರೋಹ ಎನಿಸಿಕೊಳ್ಳುತ್ತದೆ.

Sri Ramulu: ಯತ್ನಾಳ್​ಗೆ ನಿಮ್ಮ ಬೆಂಬಲವಿದೆಯಾ ಸರ್‌..? #yatnal #sriramulu #bjp #byvijayendra #pratidhvani

ಸಮಾನತೆ ಮತ್ತು ನ್ಯಾಯದ ಸಂಕಥನ

ವಿರೋಧ ಪಕ್ಷಗಳು ಹೊಸ ತಿದ್ದುಪಡಿಗಳನ್ನು ಬಲವಾಗಿ ವಿರೋಧಿಸಿವೆ. ಮಸೂದೆ ಅಂಗೀಕಾರವಾದಾಗ ಲೋಕಸಭೆಯಲ್ಲಿ ಸಭಾತ್ಯಾಗ ಮಾಡಲಾಗಿದೆ. ಪಿಂಚಣಿ ಸುಧಾರಣೆಗಳ ಕುರಿತು ಸರಿಯಾದ ಚರ್ಚೆಯನ್ನು ತಪ್ಪಿಸಲು ಸರ್ಕಾರವು ಹಿಂಬಾಗಿಲಿನಿಂದ ಶಾಸನವನ್ನು ತರಲು ಯತ್ನಿಸುತ್ತಿದೆ ಎಂದು ವಿಶ್ಲೇಷಕರು ವಾದಿಸುತ್ತಾರೆ. “ಲಕ್ಷಾಂತರ ಪಿಂಚಣಿದಾರರು ಅನಿಯಂತ್ರಿತ ನಿಯಮ ಬದಲಾವಣೆಗಳ ಮೂಲಕ ಅವರಿಗೆ ಸಲ್ಲಬೇಕಾದ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಸ್ವೀಕರಿಸಲಾಗುವುದಿಲ್ಲ. ಸರ್ಕಾರವು ಹಿರಿಯ ನಾಗರಿಕರ ವಿರುದ್ಧ ಏಕೆ ತಾರತಮ್ಯ ಮಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಲೋಕಸಭೆಯ ಚರ್ಚೆಯ ಸಂದರ್ಭದಲ್ಲಿ ಎನ್.ಕೆ. ಪ್ರೇಮಚಂದ್ರನ್ ಹೇಳಿದ್ದಾರೆ.

ವೇತನ ಆಯೋಗದ ಪ್ರಯೋಜನಗಳನ್ನು ಸಾಂಪ್ರದಾಯಿಕವಾಗಿ ಪೂರ್ವಾನ್ವಯವಾಗಿ ಅಲ್ಲ, ಬದಲಾಗಿ ಮುಂಬರುವ ಪರಿಸ್ಥಿತಿಗಳಿಗೆ ಅನ್ವಯಿಸಲಾಗಿದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ. ಆದಾಗ್ಯೂ, ಪ್ರಸ್ತುತ ಆರ್ಥಿಕ ವಾತಾವರಣವನ್ನು ಗಮನಿಸಿದರೆ ಈ ಸಮರ್ಥನೆ ಒಪ್ಪಲಾಗುವುದಿಲ್ಲ ಎಂದು ತಜ್ಞರು ವಾದಿಸುತ್ತಾರೆ. ಆರ್ಥಿಕ ಅಸಮಾನತೆ ಹೆಚ್ಚುತ್ತಿದ್ದು, ಹಣದುಬ್ಬರವು ಪಿಂಚಣಿದಾರರನ್ನು ತೀವ್ರವಾಗಿ ಬಾಧಿಸುತ್ತಿರುವುದರಿಂದ, ನಿರ್ದಿಷ್ಟ ದಿನಾಂಕದ ನಂತರ ನಿವೃತ್ತರಾಗುವವರಿಗೆ ಮಾತ್ರವಲ್ಲದೆ, ಎಲ್ಲಾ ನಿವೃತ್ತರಿಗೂ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಹೆಚ್ಚು ಸಮಗ್ರ ಪಿಂಚಣಿ ನೀತಿಯ ತುರ್ತು ಅವಶ್ಯಕತೆಯಿದೆ.

ಹಿರಿಯ ಅರ್ಥಶಾಸ್ತ್ರಜ್ಞೆ ಉಷಾ ಸುನಿಲ್ ಈ ಕ್ರಮವನ್ನು “ಆರ್ಥಿಕವಾಗಿ ಪ್ರತಿಗಾಮಿ” ಎಂದು ಖಂಡಿಸಿದ್ದಾರೆ.  “ತನ್ನ ನಿವೃತ್ತ ಉದ್ಯೋಗಿಗಳನ್ನು ಹಣದುಬ್ಬರದ ಒತ್ತಡಗಳಿಂದ ರಕ್ಷಿಸಲು ನಿರಾಕರಿಸುವ ಸರ್ಕಾರವು ತನ್ನ ಮೂಲಭೂತ ಕರ್ತವ್ಯದಲ್ಲಿ ವಿಫಲವಾಗಿದೆ. ಪಿಂಚಣಿಗಳು ದಾನವಲ್ಲ, ಆದರೆ ದಶಕಗಳ ಸೇವೆಯ ಮೂಲಕ ಗಳಿಸಿದ ಹಕ್ಕು ಎಂದು ರಾಜ್ಯವು ಗುರುತಿಸಬೇಕು.” ಎಂದು ಉಷಾ ಸುನಿಲ್‌ ಹೇಳುತ್ತಾರೆ.

ಸುಧಾರಣೆ ಮತ್ತು ನ್ಯಾಯಕ್ಕಾಗಿ ಆಗ್ರಹ

ಪಿಂಚಣಿ ನಿಯಮಗಳಿಗೆ ಸರ್ಕಾರ ತಂದ ತಿದ್ದುಪಡಿಗಳು ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಲಕ್ಷಾಂತರ ನಿವೃತ್ತರ ಭರವಸೆಯನ್ನು ಛಿದ್ರಗೊಳಿಸಿವೆ. ಹಿಂದೆ ನಿವೃತ್ತರಾದವರು ಸಂಘರ್ಷಕ್ಕಿಳಿಯುವಂತೆ ಮಾಡಿ,  ಭವಿಷ್ಯದ ಪಿಂಚಣಿದಾರರು ಮಾತ್ರ ಪ್ರಯೋಜನ ಪಡೆಯುವ ನೀತಿಯನ್ನು ರೂಪಿಸುವ ಮೂಲಕ, ಸರ್ಕಾರವು ತನ್ನ ಅತ್ಯಂತ ನಿಷ್ಠಾವಂತ ನಾಗರಿಕರಿಗೆ ಬೆನ್ನು ತಿರುಗಿಸಿ ವಂಚಿಸಿದೆ. ಈ ದ್ರೋಹವು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯದ ಮೂಲಕ್ಕೆ ಸಂಚಕಾರ ತರುತ್ತದೆ.  ಪಿಂಚಣಿದಾರರು ನಿಶ್ಚಲ ಆದಾಯದೊಂದಿಗೆ ಹಣದುಬ್ಬರದ ವಿರುದ್ಧ ಹೋರಾಡುವಂತೆ ಮಾಡುತ್ತದೆ.

ಹಣದುಬ್ಬರವು ಶೇಕಡಾ 8.39ರಷ್ಟನ್ನು ಮೀರಿದೆ ಮತ್ತು ಆರೋಗ್ಯ ವೆಚ್ಚಗಳು ಆಘಾತಕರವಾಗಿ ಏರುತ್ತಿರುವುದರಿಂದ, ಪಿಂಚಣಿದಾರರಿಗೆ ಬದುಕುಳಿಯುವುದು ದೈನಂದಿನ ಸವಾಲಾಗಿದೆ. ಗೌರವಾನ್ವಿತ ನಿವೃತ್ತಿಯ ಜೀವನದ ಕನಸು ಮಸುಕಾಗುತ್ತಿದ್ದು, ಅನಿಶ್ಚಿತತೆ ಮತ್ತು ಅಸಹಾಯಕತೆ ಆವರಿಸುತ್ತಿದೆ. ವಿರೋಧ ಪಕ್ಷದ ನಾಯಕರು ಮತ್ತು ಪಿಂಚಣಿದಾರರ ಸಂಘಗಳು ನ್ಯಾಯಕ್ಕಾಗಿ ಹೋರಾಡುತ್ತಲೇ ಇವೆ, ಮಸೂದೆಯನ್ನು ಅದರ ಪ್ರಸ್ತುತ ರೂಪದಲ್ಲಿ ಅಂಗೀಕರಿಸಿದರೆ, ಅದು ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ, ಭವಿಷ್ಯದ ನಿವೃತ್ತರನ್ನು ಆರ್ಥಿಕ ಭದ್ರತೆಯಿಂದ ವಂಚಿತಗೊಳಿಸುತ್ತದೆ ಎಂದು ಎಚ್ಚರಿಸಿವೆ.

ಕವಿ ಫೈಜ್ ಅಹ್ಮದ್ ಫೈಜ್ ಒಮ್ಮೆ ಹತಾಶೆಯಿಂದ ಬರೆದಂತೆ:

“ಹಮ್ ಜೋ ತರೀಕ್ ರಾಹೋ ಮೇ ಮಾರೆ ಗಯೇ”

Sri Ramulu: ಯತ್ನಾಳ್‌ ಮರಳಿ ಬಿಜೆಪಿಗೆ ಬರ್ತಾರಾ ಎಂದ ಪ್ರಶ್ನೆಗೆ ರಾಮುಲು ಏನಂದ್ರು..! #yatnal #sriramulu

(ನಾವು ಹಾದಿಯ ಕತ್ತಲೆಯಲ್ಲಿ ಕೊಲ್ಲಲ್ಪಟ್ಟವರಾಗಿದ್ದೇವೆ)

ಭಾರತದ ಪಿಂಚಣಿದಾರರು ಸಹಾಯವನ್ನು ಕೇಳುತ್ತಿಲ್ಲ; ನ್ಯಾಯವನ್ನು ಕೇಳುತ್ತಿದ್ದಾರೆ. ಸರ್ಕಾರವು ತನ್ನ ಸಾಂವಿಧಾನಿಕ ಕರ್ತವ್ಯವನ್ನು ಎತ್ತಿಹಿಡಿಯಬೇಕು ಮತ್ತು ಎಲ್ಲಾ ನಿವೃತ್ತರಿಗೆ ಆರ್ಥಿಕ ಘನತೆಯನ್ನು ಖಚಿತಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಇತಿಹಾಸವು ಇದನ್ನು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದವರಿಗೆ ಮಾಡಿದ ಗಂಭೀರ ಅನ್ಯಾಯ ಮತ್ತು ವಂಚನೆ ಎಂದೇ ದಾಖಲಿಸುತ್ತದೆ.

(ಆಂಗ್ಲ ಲೇಖನವನ್ನು ಇಲ್ಲಿ ಓದಬಹುದು : https://theemergingworld.in/betraying-pensioners-governments-cruel-pay-cut/)

-೦-೦-೦-.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಸಾಹುಕಾರ್ ಸತೀಶ್​ ಜಾರಕಿಹೊಳಿ ಕಾಂಗ್ರೆಸ್​​ ಅಧ್ಯಕ್ಷರಾಗೋದು ಫಿಕ್ಸಾ..?

Next Post

ರಾಜ್ಯದ ಜನರಿಗೆ ಸರ್ಕಾರದಿಂದ ಬೆಲೆ ಏರಿಕೆಯ ಬರೆ – ಇಂದಿನಿಂದ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್ ! 

Related Posts

ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ
ವಾಣಿಜ್ಯ

ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ

by ಪ್ರತಿಧ್ವನಿ
April 25, 2026
0

ಬ್ಯಾಂಕ್ ಖಾತೆಯಿಂದ ಅನಿರೀಕ್ಷಿತವಾಗಿ ಹಣ ಕಡಿತವಾಗುವ ಸಮಸ್ಯೆಗೆ ಅಂತ್ಯ ಹಾಡಲು Reserve Bank of India (ಆರ್‌ಬಿಐ) ಮಹತ್ವದ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಗ್ರಾಹಕರ ಖಾತೆಯಿಂದ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ರಾಜ್ಯದ ಜನರಿಗೆ ಸರ್ಕಾರದಿಂದ ಬೆಲೆ ಏರಿಕೆಯ ಬರೆ – ಇಂದಿನಿಂದ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್ ! 

ರಾಜ್ಯದ ಜನರಿಗೆ ಸರ್ಕಾರದಿಂದ ಬೆಲೆ ಏರಿಕೆಯ ಬರೆ - ಇಂದಿನಿಂದ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada