ಬ್ಯಾಂಕ್ ಖಾತೆಯಿಂದ ಅನಿರೀಕ್ಷಿತವಾಗಿ ಹಣ ಕಡಿತವಾಗುವ ಸಮಸ್ಯೆಗೆ ಅಂತ್ಯ ಹಾಡಲು Reserve Bank of India (ಆರ್‌ಬಿಐ) ಮಹತ್ವದ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಗ್ರಾಹಕರ ಖಾತೆಯಿಂದ ಇಎಂಐ ಅಥವಾ ಇತರ ಆಟೋ-ಡೆಬಿಟ್ ಪಾವತಿಗಳು ಕಡಿತವಾಗುವ ಮೊದಲು ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಬ್ಯಾಂಕ್‌ಗಳು ಮಾಹಿತಿ ನೀಡುವುದು ಕಡ್ಡಾಯವಾಗಿದೆ.

ಆರ್‌ಬಿಐ ಮಾರ್ಗಸೂಚಿಯಂತೆ, ಹಣ ಕಡಿತವಾಗುವ ಮೊದಲು ಬ್ಯಾಂಕ್‌ಗಳು ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಗ್ರಾಹಕರಿಗೆ ತಿಳಿಸಬೇಕು. ಈ ಸಂದೇಶದಲ್ಲಿ ಎಷ್ಟು ಮೊತ್ತ ಕಡಿತವಾಗಲಿದೆ ಹಾಗೂ ಯಾವ ಕಾರಣಕ್ಕಾಗಿ (ಉದಾಹರಣೆಗೆ: ಸಾಲದ ಇಎಂಐ, ವಿಮಾ ಪ್ರೀಮಿಯಂ) ಹಣ ಕಟ್ ಆಗುತ್ತಿದೆ ಎಂಬ ವಿವರಗಳು ಇರಬೇಕು.
ಈ ಕ್ರಮದಿಂದ ಖಾತೆಯಲ್ಲಿ ಹಣದ ಕೊರತೆಯಿಂದ ಇಎಂಐ ಬೌನ್ಸ್ ಆಗಿ ದಂಡ ಪಾವತಿಸುವ ಸಮಸ್ಯೆಗೆ ಕಡಿವಾಣ ಬೀಳಲಿದೆ. ಮುಂಚಿತ ಸೂಚನೆ ಸಿಗುವುದರಿಂದ ಗ್ರಾಹಕರು ಸಮಯಕ್ಕೆ ಸರಿಯಾಗಿ ಹಣ ಜಮೆ ಮಾಡುವ ಅವಕಾಶ ಪಡೆಯುತ್ತಾರೆ.ಇದಲ್ಲದೆ, ಗ್ರಾಹಕರಿಗೆ ಪಾವತಿಯನ್ನು ರದ್ದುಪಡಿಸುವ ಅಥವಾ ಬದಲಾಯಿಸುವ ಆಯ್ಕೆಯೂ ನೀಡಲಾಗಿದೆ. ಯಾವುದೇ ಆಟೋ-ಪೇಮೆಂಟ್ ತಪ್ಪಾಗಿದೆ ಎಂದು ಅನಿಸಿದರೆ, ನೋಟಿಫಿಕೇಶನ್ ಮೂಲಕವೇ ಅದನ್ನು ತಡೆಹಿಡಿಯಬಹುದು.

ಈ ನಿಯಮವು ಮನೆ ಮತ್ತು ವಾಹನ ಸಾಲದ ಇಎಂಐಗಳು, ವಿಮಾ ಪ್ರೀಮಿಯಂಗಳು, ಹಾಗೂ ನೆಟ್‌ಫ್ಲಿಕ್ಸ್ ಅಥವಾ ಜಿಮ್‌ಗಳಂತಹ ಚಂದಾದಾರಿಕೆ ಪಾವತಿಗಳಿಗೆ ಅನ್ವಯಿಸುತ್ತದೆ. ವಿಶೇಷವಾಗಿ ₹15,000 ಕ್ಕಿಂತ ಹೆಚ್ಚಿನ ಪಾವತಿಗಳಿಗೆ ಹೆಚ್ಚುವರಿ ದೃಢೀಕರಣ (AFA) ಕಡ್ಡಾಯವಾಗಿದೆ.ಒಂದು ವೇಳೆ ಬ್ಯಾಂಕ್‌ಗಳು ಈ ನಿಯಮ ಉಲ್ಲಂಘಿಸಿ ಮುಂಚಿತ ಮಾಹಿತಿ ನೀಡದೆ ಹಣ ಕಡಿತಗೊಳಿಸಿದರೆ, ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದಾಗಿದೆ. ಗ್ರಾಹಕರ ಅನುಮತಿ ಇಲ್ಲದೆ ಹಣ ಕಡಿತ ಮಾಡುವುದನ್ನು ಆರ್‌ಬಿಐ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.ಈ ಹೊಸ ನಿಯಮ ಗ್ರಾಹಕರಿಗೆ ತಮ್ಮ ಹಣದ ಮೇಲಿನ ನಿಯಂತ್ರಣವನ್ನು ಹೆಚ್ಚಿಸಿ, ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ.






