ಬಿಬಿಎಂಪಿ ಅಗ್ನಿ ದುರಂತ ಘಟನೆಗೆ ಸಂಬಂಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ (ಆಗಸ್ಟ್ 12) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು ಸಾವಿರಾರು ಕೋಟಿ ಅವ್ಯವಹಾರ, ಹಗರಣಗಳ ದಾಖಲೆಗಳನ್ನು ನಾಶಪಡಿಸುವ ಯತ್ನವಾಗಿದೆ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿಬಿಎಂಪಿ ಅಗ್ನಿ ದುರಂತ ಘಟನೆಗೆ ಸಂಬಂಧಿಸಿ ಘಟನೆ ನಡೆದ ಮುಖ್ಯ ಕಚೇರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿರುವ ಎಎಪಿ, ಇದು ಪೂರ್ವಯೋಜಿತ ಕೃತ್ಯವೆಂದು ಬಲವಾದ ಶಂಕೆ ವ್ಯಕ್ತಪಡಿಸಿದೆ. ಕೋಟ್ಯಂತರ ವ್ಯವಹಾರಗಳ ದಾಖಲೆಗಳನ್ನು ಸಂಗ್ರಹಿಸಿಡಲಾದ ಕೊಠಡಿಗೂ ಬೆಂಕಿ ತಗುಲಿರುವ ಸಾಧ್ಯತೆಯ ಹಿನ್ನೆಲೆ ಈ ಕುರಿತು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ ಎಂದು ಹೇಳಿದ್ದಾರೆ.
“ನಗರೋತ್ಥಾನ ಯೋಜನೆಯಡಿ ₹20,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದರು. ಈ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲಾ ತರದ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದರು. ತನಿಖೆಯೆಂದರೆ ಸಂಬಂಧಪಟ್ಟ ದಾಖಲೆಗಳಿರುವ ದಾಖಲೆಗಳ ಕೊಠಡಿ ಸುಟ್ಟುಹೋಗುವಂತೆ ಮಾಡುವುದೆ?” ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಅಗ್ನಿ ದುರಂತ ಸಂಭವಿಸಿದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೋಹನ್ ದಾಸರಿ, ಬಿಬಿಎಂಪಿ ಮುಖ್ಯ ಕಚೇರಿಯಂತಹ ಪ್ರಮುಖ ಸ್ಥಳದಲ್ಲಿ ಪ್ರಾಥಮಿಕ ಆದ್ಯತೆಯಾಗಿರುವ ಅಗ್ನಿ ಸುರಕ್ಷತೆಯೇ ಇಲ್ಲ, ಗಾಯಗೊಂಡವರನ್ನು ಆ್ಯಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಹೊಯ್ಸಳ ವಾಹನದಲ್ಲಿ ಕರೆದೊಯ್ದಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಕೋಟ್ಯಂತರ ಮೌಲ್ಯದ ದಾಖಲೆಗಳನ್ನು ನಾಶ ಮಾಡುವುದಕ್ಕಾಗಿ ನಡೆಸಿರುವ ಪೂರ್ವಯೋಜಿತ ಕೃತ್ಯವೆಂದು ಕಂಡು ಬರುತ್ತಿದೆ. ಈ ಬಗ್ಗೆ ದೊಡ್ಡ ಮಟ್ಟದ ತನಿಖೆಯಾಗಬೇಕು. ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
“ಇದು ಆಕಸ್ಮಿಕವಾಗಿ ನಡೆದ ಅವಘಡವಲ್ಲ ಎಂಬುದು ಸಾಕಷ್ಟು ಅನೇಕ ಸಾಕ್ಷ್ಯಗಳಿಂದ ಕಂಡು ಬರುತ್ತಿದೆ. ಈಗಾಗಲೇ ಗುತ್ತಿಗೆದಾರರು ತಮ್ಮ ಹಣವನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಬಿಬಿಎಂಪಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿ ಬಂದಿವೆ. ಕೋಟ್ಯಂತರ ವ್ಯವಹಾರಗಳ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ಕೊಠಡಿಯಿರುವ ಕಟ್ಟಡದಲ್ಲೇ ಅಗ್ನಿ ಅನಾಹುತವಾಗುತ್ತದೆ ಎಂದರೆ ಏನರ್ಥ? ಯಾರೋ ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಪೂರ್ವಯೋಜಿತವಾಗಿ ಮಾಡಿದ್ದಾರೆ. ಎಲ್ಲ ಹಗರಣಗಳ ದಾಖಲೆಗಳು ಸಿಗದಂತೆ ಮಾಡುವ ಹುನ್ನಾರ ನಡೆದಿದೆ ಎಂಬುದು ಮೊದಲ ಹಂತದ ಪರಿಶೀಲನೆಯಲ್ಲೇ ಕಂಡು ಬರುತ್ತಿದೆ. ದಾಖಲೆ ನಾಶಪಡಿಸುವ ಯತ್ನ ಬಿಬಿಎಂಪಿ ಕಚೇರಿಯಲ್ಲಿ ಹೊಸದೇನಲ್ಲ. ಈ ಹಿಂದೆ ಇದೇ ರೀತಿ ₹2000 ಕೋಟಿ ಹಗರಣದ ದಾಖಲೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದ ಉದಾಹರಣೆಯಿದೆ” ಎಂದು ಮೋಹನ್ ದಾಸರಿ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಆಗಸ್ಟ್ 15ರ ಬಳಿಕ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ.!?
ಬಿಬಿಎಂಪಿ ಅಗ್ನಿ ದುರಂತ ಘಟನೆ ನಂತರ ಶುಕ್ರವಾರ ರಾತ್ರಿ ಘಟನಾ ಸ್ಥಳಕ್ಕೆ ಎಎಪಿ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಮಾಧ್ಯಮ ವಕ್ತಾರೆ ಉಷಾ ಮೋಹನ್, ಮುಖಂಡರಾದ ಜಗದೀಶ್ ಬಾಬು, ವಿಶ್ವಾನಾಥ್ ಸೇರಿದಂತೆ ಪಕ್ಷದ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಶುಕ್ರವಾರ ಸಂಜೆ ಹಡ್ಸನ್ ವೃತ್ತದಲ್ಲಿರುವ ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡಕ್ಕೆ ಬೆಂಕಿ ತಗುಲಿತ್ತು. ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದ್ದರಿಂದ ದಾಖಲೆಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿ ಸುಟ್ಟುಹೋಗಿ ಕೋಟ್ಯಂತರ ಮೌಲ್ಯದ ವ್ಯವಹಾರಗಳ ದಾಖಲೆಗಳು ಸುಟ್ಟುಹೋಗಿವೆ ಏಂದು ವರದಿಯಾಗಿದೆ.






