ನಗರದ ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ನಲ್ಲಿ ಶನಿವಾರ (ಆಗಸ್ಟ್ 12) ಮಧ್ಯಾಹ್ನ ಇಡ್ಲಿ ತಯಾರಿಕೆಗೆ ಬಳಸುವ ಬಿಸಿ ನೀರಿನ ಬಾಯ್ಲರ್ (ಸ್ಟೀಮರ್) ಸ್ಫೋಟಗೊಂಡು ಮೂವರು ಗಾಯಗೊಂಡಿದ್ದಾರೆ.
ಹೋಟೆಲ್ನ ಡುಗೆ ಮನೆಯಲ್ಲಿ ಕೆಲಸ ಮಾಡುವ ಐಶ್ವರ್ಯ (19) ಬಸಿಕುಮಾರ್ (20) ಕ್ಯಾಶಿಯರ್ ಸಹೋದರ ಕಾರ್ತಿಕ್ (18) ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಏಕಾಏಕಿ ನಮ್ಮೂರ ತಿಂಡಿ ಹೋಟೆಲ್ನ ಆವಿ ಪಾತ್ರೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಡುಗೆ ಮನೆಯಲ್ಲಿನ ಸಾಮಗ್ರಿಗಳು ಸಂಪೂರ್ಣ ಜಖಂ ಆಗಿವೆ. ಸ್ಥಳಕ್ಕೆ ಜ್ಞಾನಭಾರತಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಈಗಾಗಲೇ ಬಿಬಿಎಂಪಿ ಕೇಂದ್ರ ಕಚೇರಿಯ ಗುಣ ನಿಯಂತ್ರಣ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ 9 ಜನರಿಗೆ ತೀವ್ರ ಗಾಯಗಳಾಗಿವೆ. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಗ್ರಾಹಕರಿಗೆ ತೊಂದರೆ ಆಗಿಲ್ಲ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ವಿಚಾರ ಸರ್ಕಾರದ ನಿರ್ಧಾರಕ್ಕೆ ಯತ್ನಾಳ್ ಆಕ್ರೋಶ
ಆವಿ ಪಾತ್ರೆಯಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿದೆ. ನಮ್ಮೂರ ತಿಂಡಿ ಹೋಟೆಲ್ನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಆದರೆ, ನಿತ್ಯ ಬಳಸುವಂತೆ ಶನಿವಾರ ಆವಿ ಪಾತ್ರೆ ಆರಂಭಿಸಿ ಬಳಸುತ್ತಿದ್ದರು. ಈ ವೇಳೆ ಆವಿ ಪಾತ್ರೆಯಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿದೆ. ಇದರಿಂದ ಇಡೀ ಹೋಟೆಲ್ ಅಡುಗೆಮನೆ ಛಿದ್ರವಾಗಿದೆ.
ಜ್ಞಾನಭಾರತಿ ಪೊಲೀಸರು ಘಟನೆಯ ಬಗ್ಗೆ ಹೋಟೆಲ್ ಮಾಲೀಕರಿಂದ ನಿರ್ಲಕ್ಷ್ಯ ಮಾಡಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿ ಅಡುಗೆ ಸಿಬ್ಬಂದಿ ಮತ್ತು ಮಾಲೀಕರನ್ನು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಹೋಟೆಲ್ ಸೇವೆಯನ್ನು ಕೆಲಕಾಲ ಸ್ಥಗಿತ ಮಾಡಲಾಗಿದ್ದು, ಅಡುಗೆ ಮನೆಯಲ್ಲಿ ಉಂಟಾದ ಅವ್ಯಸವ್ಥೆಯನ್ನು ದುರಸ್ತಿ ಮಾಡಲಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹೋಟೆಲ್ ಮಾಲೀಕರಿಗೆ ಪೊಲೀಸರು ತಿಳಿಸಿದ್ದಾರೆ.