ರಾಜಕಾಲುವೆ ಒತ್ತುವರಿ ತೆರವು ಶುರುವಾದ ಮೇಲೆ ಬಿಬಿಎಂಪಿಗೆ ಒಂದಿಲ್ಲಾ ಒಂದು ತಲೆನೋವು ಶುರುವಾಗಿತ್ತು. ಆದರೀಗ ಒತ್ತುವರಿ ತೆರವು ಕಾರ್ಯಾಚರಣೆಯ ಫ್ಲಾಪ್ ಶೋಗೆ ಇವರೇ ಕಾರಣ ಅಂತ ಬಿಬಿಎಂಪಿ ಸಿಟ್ಟಿಗೆದ್ದಿದೆ. ಅಲ್ಲದೆ ಈ ಬಗ್ಗೆ ಸಿಎಂಗೂ ಪತ್ರ ಬರೆದು ಸಿಟ್ಟು ಹೊರಹಾಕಿದೆ.
ರಾಜಕಾಲುವೆ ಒತ್ತುವರಿ ಫೇಲ್ ಆಗಲು ಅಸಲಿ ಕಾರಣವೇನು ಗೊತ್ತಾ..!?
ಹೇಳಿಕೆ ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು. ಆದರೆ ಎಡವಟ್ಟುಗಳಾದಾಗ ಎಲ್ಲರ ಸಿಟ್ಟಿಗೂ ಬಿಬಿಎಂಪಿಯೇ ಗುರಿಯಾಗುತ್ತಿತ್ತು. ಸದ್ಯ ಒತ್ತುವರಿ ತೆರವು ಕಾರ್ಯಾಚರಣೆ ಬಹುತೇಕ ಫ್ಲಾಪ್ ಶೋ ಆಗಿದೆ. ಇದಕ್ಕೆ ಕಾರಣ ಬಿಬಿಎಂಪಿ ಎಂದೇ ಹೇಳಲಾಗಿತ್ತು. ಆದರೆ ಇದೀಗ ಬಿಬಿಎಂಪಿ ಚೀಫ್ ಕಮಿಷನರ್ ತಾಳ್ಮೆ ಸ್ಫೋಟಗೊಂಡಿದ್ದು, ಬುಲ್ಡೋಜರ್ ಆಪರೇಷನ್ ಸೋಲಿಗೆ ಕಾರಣ ಯಾರು ಮತ್ತು ಹೇಗೆ ಎನ್ನುವುದನ್ನು ಸ್ವತಃ ಬಿಬಿಎಂಪಿಯೇ ಮುಖ್ಯಮಂತ್ರಿಗೆ ತಿಳಿಸಲು ಹೊರಟಿದೆ.
ಬಿಬಿಎಂಪಿ ಅಧಿಕಾರಿಗಳಿಗೆ ತೆರವು ಅಧಿಕಾರ ಮಾತ್ರ ನೀಡಲಾಗಿತ್ತು. ಉಳಿದಂತೆ ಎಲ್ಲವೂ ಕಂದಾಯ ಇಲಾಖೆಯದ್ದೇ. ಕಂದಾಯ ಗುರುತು ಮಾಡುವ ಜಾಗದಲ್ಲಿ ತೆರವು ಮಾಡಬೇಕಿರೋದು ಬಿಬಿಎಂಪಿ. ಇದನ್ನೇ ಹೈಜಾಕ್ ಮಾಡಿಕೊಂಡು ಬಿಬಿಎಂಪಿ ಅಧಿಕಾರಿಗಳ ತಲೆಗೆ ಕಟ್ಟಿದರೇ ಕಂದಾಯ ಅಧಿಕಾರಿಗಳು.? ಎನ್ನುವ ಅನುಮಾನ ಸದ್ಯದ್ದು. ಮಹಾದೇವಪುರ ಪೂರ್ವ ಪಾರ್ಕ್ ರಿಡ್ಜ್ ನೋಟೀಸ್ ಜಾರಿ ಮಾಡಿ ಬೆಂಗಳೂರು ಪೂರ್ವ ತಹಶಿಲ್ದಾರ್ ಅಜಿತ್ ರೈ ಕಳ್ಳಾಟವಾಡಿದ್ದರು. ಈ ಹಿನ್ನೆಲೆ ಪೂರ್ವ ಪಾರ್ಕ್ ರಿಡ್ಜ್ ತೆರವು ಕಾರ್ಯಾಚರಣೆ ಮಾಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ಇದರಿಂದ ಬಿಬಿಎಂಪಿ ಇಂಜಿನಿಯರ್ ಹಾಗೂ ಚೀಫ್ ಕಮಿಷನರ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ಬಗ್ಗೆ ಸಿಡಿಮಿಡಿಕೊಂಡ ಬಿಬಿಎಂಪಿ ಚೀಫ್ ಕಮಿಷನರ್ ರಿಂದ ಸಿಎಂ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ.
ಬಿಬಿಎಂಪಿಯಿಂದ ಸಿಎಂಗೆ ಪತ್ರ.!!
ತಹಶಿಲ್ದಾರ್ ನಿಗೂಢ ನಡೆಯಿಂದ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಬಿಬಿಎಂಪಿ ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬ ಕಳಂಕ ಹೊತ್ತು ಕೊಂಡಿದೆ. ಮಹಾದೇವಪುರ ವಲಯದಲ್ಲಿ ಹಲವು ಪ್ರತಿಷ್ಟಿತರ ವಿಚಾರದಲ್ಲೂ ತಹಶಿಲ್ದಾರ್ ಅಜಿತ್ ರೈ ಹೀಗೆ ಮಾಡಿದ್ದಾರೆ. ಪ್ರತಿಷ್ಟಿತರ ವಿಚಾರ ಬಂದಾಗ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಕಂದಾಯ ಇಲಾಖೆ ಅಧಿಕಾರಿಗಳ ವಿಳಂಬಮಾಡಿದ್ದಾರೆ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಆಗ್ರಹಿಸಿದ್ದಾರೆ.
ಹೀಗೆ ಈ ಬಗ್ಗೆ ಅಸಮಾಧಾನಗೊಂಡಿರುವ ಪಾಲಿಕೆ ಆಯುಕ್ತರಿಂದ ಸರ್ಕಾರಕ್ಕೆ ಪತ್ರ ಬರೆದು ತಹಶಿಲ್ದಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಬಿಬಿಎಂಪಿ ಮೇಲೆ ಆಳಿಗೊಂದು ಕಲ್ಲು ಹೊಡೆಯಲಾಗಿತ್ತು. ಬೀಸೋ ದೊಣ್ಣೆ ಏಟಿನಿಂದ ತಪ್ಪಿಸಿಕೊಳ್ಳಲು ಎಲ್ಲವನ್ನೂ ಪಾಲಿಕೆ ಮೇಲೆ ಹಾಕಿತಾ ಕಂದಾಯ ಇಲಾಖೆ ಎನ್ನುವ ಪ್ರಶ್ನೆ ಸದ್ಯದ್ದು.