ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮದ್ ರಿಜ್ವಾನ್ ಟಿ-20 ಕ್ರಿಕೆಟ್ ನಲ್ಲಿ ಚೇಸಿಂಗ್ ನಲ್ಲಿ ಅತೀ ದೊಡ್ಡ ಜೊತೆಯಾಟ ನಿಭಾಯಿಸಿದ ವಿಶ್ವದಾಖಲೆ ಬರೆದಿದ್ದಾರೆ.
ಕರಾಚಿಯಲ್ಲಿ ಗುರುವಾರ ತಡರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 199 ರನ್ ಗಳಿಸಿತ್ತು. ಪಾಕಿಸ್ತಾನ ತಂಡ ವಿಕೆಟ್ ನಷ್ಟವಿಲ್ಲದೇ 3 ಎಸೆತಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು.
ಬಾಬರ್ ಅಜಮ್ ಮತ್ತು ಮೊಹಮದ್ ರಿಜ್ವಾನ್ ಮೊದಲ ವಿಕೆಟ್ ಗೆ ಅಜೇಯ 203 ರನ್ ಜೊತೆಯಾಟ ನಿಭಾಯಿಸಿದರು. ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ 197 ರನ್ ಜೊತೆಯಾಟದ ವಿಶ್ವದಾಖಲೆಯನ್ನು ಮುರಿದರು.

2021ರ ವಿಶ್ವಕಪ್ ನಲ್ಲಿ ಬಾಬರ್ ಮತ್ತು ರಿಜ್ವಾನ್ 10 ವಿಕೆಟ್ ಜಯ ತಂದುಕೊಟ್ಟಿದ್ದರು. ಆದರೆ ಇತ್ತೀಚೆಗೆ ಬಾಬರ್ ಫಾರ್ಮ್ ಕೊರತೆ ಎದುರಿಸುತ್ತಿದ್ದು, ಏಷ್ಯಾಕಪ್ ನಿಂದ ಸತತ ಮೂರು ಸೋಲುಂಡಿತ್ತು.
ಟಿ-20 ಕ್ರಿಕೆಟ್ ನಲ್ಲಿ ಯಾವುದೇ ವಿಕೆಟ್ ಗೆ ಅತೀ ದೊಡ್ಡ 5ನೇ ಜೊತೆಯಾಟ ಕೂಡ ಇದಾಗಿದೆ. ಬಾಬರ್ ಅಜಮ್ ಶತಕ ಸಿಡಿಸಿದರೆ, ಮೊಹಮದ್ ರಿಜ್ವಾನ್ ಅರ್ಧಶತಕ ಸಿಡಿಸಿದರು. ಈ ಮೂಲಕ 7 ಪಂದ್ಯಗಳ ಟಿ-20 ಸರಣಿಯಲ್ಲಿ ಪಾಕಿಸ್ತಾನ 1-1ರಿಂದ ಸಮಬಲ ಸಾಧಿಸಿತು.
ಬಾಬರ್ ಅಜಮ್ 66 ಎಸೆತಗಳಲ್ಲಿ 11 ಬೌಂಡರಿ 5 ಸಿಕ್ಸರ್ ಸೇರಿದ 110 ರನ್ ಸಿಡಿಸಿ ಅಜೇಯರಾಗಿ ಉಳಿದರೆ, ಉಪನಾಯಕ ಮೊಹಮದ್ ರಿಜ್ವಾನ್ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 88 ರನ್ ಬಾರಿಸಿ ಔಟಾಗದೇ ಉಳಿದರು.