~ಡಾ. ಜೆ ಎಸ್ ಪಾಟೀಲ.
“ದೇವ, ದೇವಾ ಬಿನ್ನಹ ಅವಧಾರು;
ವಿಪ್ರ ಮೊದಲು, ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲನೊಂದೆ ಎಂಬೆ.
ಹಾರುವ ಮೊದಲು, ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನೊಂಬೆ ಎಂಬೆ.
ಹೀಂಗೆಂದು ನಂಬೂದೆನ್ನ ಮನ.
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ
ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.”
ಬಸವಣ್ಣನವರ ಮೇಲ್ಕಾಣಿಸಿದ ವಚನವು ಇಂದಿನ ನಕಲಿ ರಾಷ್ಟ್ರೀಯವಾದಿಗಳ ಆಟಾಟೋಪದ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನ್ನಿಸುತ್ತದೆ. ಕರ್ಮಟ ಬ್ರಾಹ್ಮಣರು ಹುಟ್ಟುಹಾಕಿದ ಚಾತುರ್ವರ್ಣ ವ್ಯವಸ್ಥೆಯು ಸಮಾಜದಲ್ಲಿ ರೂಪಿಸಿದ ಬ್ರಾಹ್ಮಣ ಮತ್ತು ಅಂತ್ಯಜರೆಂಬ ಸಮಾಜಿಕ ತಾರತಮ್ಯವನ್ನು ೨೫೦೦ ವರ್ಷಗಳಿಂದ ಭಾರತದ ನೆಲ ಮೂಕವಾಗಿ ಅನುಭವಿಸಿದೆ. ಈ ರಾಷ್ಟ್ರಕ್ಕೆ ಯಾವತ್ತೂ ನಿಷ್ಟರಾಗದ ಕಕೇಷಿಯನ್ ಆರ್ಯ ವೈದಿಕರು ಇಂದು ರಾಷ್ಟ್ರೀಯವಾದಿಗಳ ಛದ್ಮವೇಷದಲ್ಲಿ ದೇಶದ ರಾಷ್ಟ್ರೀಯ ಸಂಪತ್ತನ್ನು ಇನ್ನಿಲ್ಲದಂತೆ ಲೂಟಿ ಹೊಡೆಯುತ್ತಿದ್ದಾರೆ.
ಮನೆ-ಮನೆˌ ಮನುಷ್ಯ-ಮನುಷ್ಯˌ ಗಲ್ಲಿ-ಗಲ್ಲಿ ˌ ಊರು-ಊರುˌ ಜನಾಂಗ-ಜನಾಂಗˌ ಜಾತಿ-ಜಾತಿˌ ಧರ್ಮ-ಧರ್ಮಗಳ ನಡುವೆ ವೈದಿಕ ಆರ್ಯನ್ನರು ತಮ್ಮ ಸ್ವಾರ್ಥ ಸಾಧನೆಗಾಗಿ ಬಹುದೊಡ್ಡ ಕಂದಕವನ್ನು ಸೃಷ್ಟಿಸಿದ್ದಾರೆ. ಈ ಕಂದಕವನ್ನು ಹುಡಿಗೊಳಿಸಲು ಭಾರತದಲ್ಲಿ ಕಾಲಕಾಲಕ್ಕೆ ಅನೇಕ ಚಳುವಳಿಗಳು ಹುಟ್ಟಿಕೊಂಡಿವೆ. ಆ ಎಲ್ಲಾ ಚಳುವಳಿಗಳನ್ನು ಒಂದಿಲ್ಲ ಒಂದು ಕುಟಿಲ ಹುನ್ನಾರಗಳಿಂದ ವೈದಿಕ ಆರ್ಯನ್ನರು ವಿಫಲಗೊಳಿಸುತ್ತ ಬಂದಿದ್ದಾರೆ. ಹಾಗಾಗಿ ಭಾರತೀಯ ಸಮಾಜದ ಮೇಲಿನ ವೈದಿಕ ಆರ್ಯರ ನಿಯಂತ್ರಣ ಇಂದಿಗೂ ಸಡಿಲಗೊಂಡಿಲ್ಲ. ಅದನ್ನು ಕಿತ್ತೊಗೆಯುವ ಇಚ್ಛಾಶಕ್ತಿ ಈ ನೆಲಮೂಲದ ಜನಪದೀಯ ಸಮುದಾಯಗಳಲ್ಲಿ ಕಂಡುಬರುತ್ತಿಲ್ಲ.

ಏಳು ಮತ್ತು ಎಂಟನೆ ಶತಮಾನದ ಕಾಲಘಟ್ಟದಲ್ಲಿ ಅರಬ್ ಮತ್ತು ಅಫಘಾನ್ ದೇಶಗಳೊಂದಿಗೆ ವ್ಯಾಪಾರಿ ಸಂಬಂಧ ಹೊಂದಿದ್ದ ಗುಜರಾತಿನ ಆರ್ಯ ವೈಷ್ಣವ ಬನಿಯಾಗಳು ಮತ್ತು ಅವರೊಂದಿಗೆ ಕೈಜೋಡಿಸಿದ ವೈದಿಕ ಆರ್ಯರು ಮುಸ್ಲಿಮ್ ಆಕ್ರಮಣಕಾರರಿಗೆ ಸಹಾಯ ಮಾಡುವ ಮೂಲಕ ಈ ದೇಶದ ಅಪಾರ ಪ್ರಮಾಣದ ಸಂಪತ್ತಿನ ಲೂಟಿಗೆ ಕಾರಣಕರ್ತರಾಗಿದ್ದರು. ಭವಿಷ್ಯತ್ತಿನಲ್ಲಿ ಈ ವೈದಿಕ-ಬನಿಯಾ-ಮುಸ್ಲಿಮ್ ರ ಅನೈತಿಕ ಸಂಬಂಧವು ಎಲ್ಲಿ ಈ ದೇಶದಲ್ಲಿ ಮುಸ್ಲಿಮ್ ರ ಶಾಸ್ವತ ಆಳ್ವಿಕೆಗೆ ಮೊದಲ್ಗೊಳ್ಳುತ್ತದೊ ಎನ್ನುವ ಆತಂಕದಿಂದ ಹಾಗು ಈ ನೆಲವನ್ನು ಆ ಸ್ವಾರ್ಥಿ ಗುಂಪಿನಿಂದ ಸಂರಕ್ಷಿಸಲು ಅಂದು ಬಸವಣ್ಣನವರು ಈ ನೆಲಮೂಲದ ಹೊಲೆ-ಹದಿನೆಂಟು ಜಾತಿಯ ಜನರನ್ನು ಸಂಘಟಿಸಿ ಹುಟ್ಟುಹಾಕಿದ್ದೆ ಲಿಂಗಾಯತ ಎನ್ನುವ ರಾಷ್ಟ್ರೀಯವಾದಿ ವಚನ ಚಳುವಳಿ.

ಬಸವಣ್ಣನವರು ಹುಟ್ಟುಹಾಕಿದ್ದ ಲಿಂಗಾಯತವೆಂಬ ರಾಷ್ಟ್ರೀಯವಾದಿ ವಚನ ಚಳುವಳಿಯನ್ನು ವಿಫಲಗೊಳಿಸಿದ್ದು ಮುಕುಂದ ಭಟ್ಟ ˌ ನಾರಾಯಣಕ್ರಮಿತˌ ಗೋವಿಂದ ಭಟ್ಟ ˌ ಕೃಷ್ಣಪೆದ್ದಿ ಮುಂತಾದ ಅದೇ ಕಕೇಷಿಯನ್ ತಳಿಗೆ ಸೇರಿದ ವೈದಿಕ ಆರ್ಯನ್ನರು ಎನ್ನುವುದನ್ನು ನಾವು ಇಲ್ಲಿ ಗಮನಿಸಬೇಕಿದೆ. ಬಸವಣ್ಣನವರು ಯಾವ ವೈದಿಕ-ಬನಿಯಾ-ಮುಸ್ಲಿಮ್ ಗುಂಪಿನಿಂದ ಈ ನೆಲವನ್ನು ಸಂರಕ್ಷಿಸಲು ಹೋರಾಡಿದರೊ ಅದೇ ಗುಂಪಿನ ವೈದಿಕ ಆರ್ಯನ್ನರು ಬಸವಣ್ಣನವರ ರಾಷ್ಟ್ರೀಯವಾದಿ ಚಳುವಳಿಯನ್ನು ಸದೆಬಡಿದು ಮುಂದೆ ಸ್ವಲ್ಪವೆ ದಿನಗಳಲ್ಲಿ ಭಾರತದಲ್ಲಿ ಮುಸ್ಲಿಮರ ಶಾಸ್ವತ ಆಳ್ವಿಕೆಗೆ ನಾಂದಿ ಹಾಡಿದ್ದನ್ನು ನಾವು ಮರೆಯಬಾರದು. ಭಾರತದಲ್ಲಿ ಅಕ್ಬರ್ ನ ಆಸ್ತಾನದ ಬೀರಬಲ್ಲನಿಂದ ಹಿಡಿದು ಟಿಪ್ಪು ಆಸ್ತಾನದ ಪೂರ್ಣಯ್ಯನ ವರೆಗೆ ಗರಿಷ್ಟ ೫೦೦-೬೦೦ ವರ್ಷಗಳ ಮುಸ್ಲಿಮ್ ಆಳ್ವಿಕೆಗೆ ಭಧ್ರ ಬುನಾದಿ ಹಾಕಿದ್ದೆ ಈ ಕಕೇಷಿಯನ್ ತಳಿ. ಆದರೆ ಮೊಘಲ್ ರ ದಿವಾನರಾಗಿದ್ದವರ ಪೀಳಿಗೆ ಇಂದು ನಕಲಿ ರಾಷ್ಟ್ರೀಯವಾದಿಗಳ ರೂಪದಲ್ಲಿ ನಮಗೆ ದೇಶಭಕ್ತಿಯನ್ನು ಕಲಿಸಲು ಯತ್ನಿಸುತ್ತಿದೆ.

ಮೇಲೆ ಆರಂಭದಲ್ಲಿ ಉಲ್ಲೇಖಿಸಿರುವ ಬಸವಣ್ಣನವರ ವಚನದಲ್ಲಿ ರಾಷ್ಟ್ರೀಯವಾದˌ ಬಹುತ್ವ ˌ ಜಾತ್ಯಾತೀತ ತತ್ವ ˌ ಜನತಂತ್ರದ ಆಶಯಗಳು ಬಹಳ ಸ್ಪಷ್ಟವಾಗಿ ವ್ಯಕ್ತವಾಗಿವೆ. ವಚನದಲ್ಲಿ ಶಿವಭಕ್ತರು ಎನ್ನುವ ಒಕ್ಕಣಿಯು ರಾಷ್ಟ್ರೀಯವಾದಿಗಳನ್ನು ಪ್ರತಿನಿಧಿಸುತ್ತದೆ. ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರನ್ನೆಲ್ಲ ಒಂದೇ ಎಂಬೆ ಎನ್ನುವ ಬಸವಣ್ಣನವರ ಆ ನುಡಿಯು ವಿಶಾಲ ಅರ್ಥದಲ್ಲಿ ಒಂದು ಕಡೆ ಭಾರತೀಯ ಸಮಾಜದಲ್ಲಿ ವೈದಿಕ ಆರ್ಯನ್ನರು ಬಿತ್ತಿದ ಜಾತಿ ತಾರತಮ್ಯವನ್ನು ನಿವಾರಿಸುವ ಆಶಯ ಹೊಂದಿದ್ದರೆˌ ಇನ್ನೊಂದು ಕಡೆ ಇಲ್ಲಿನ ಎಲ್ಲರನ್ನು ರಾಷ್ಟ್ರೀಯವಾದಿಗಳನ್ನಾಗಿಸುವ ಮೂಲಕ ಈ ನೆಲವನ್ನು ಒಳಗಿನ ಹಾಗು ಹೊರಗಿನ ವೈರಿಗಳಿಂದ ರಕ್ಷಿಸುವ ರಾಷ್ಟ್ರೀಯವಾದದ ಪರಿಕಲ್ಪನೆಯೆ ಆಗಿದೆ. ಹಾಗಾಗಿ ಲಿಂಗಾಯತ ಧರ್ಮವೆನ್ನುವುದು ರಾಷ್ಟ್ರೀಯವಾದದ ಮೂಸೆಯಲ್ಲಿ ಹುಟ್ಟಿದ ಧರ್ಮವಾಗಿದ್ದು ಲಿಂಗಾಯತರು ಹುಟ್ಟು ರಾಷ್ಟ್ರೀಯವಾದಿಗಳಾಗಿದ್ದಾರೆ. ಆದ್ದರಿಂದ ಅವರೆಂದಿಗೂ ಈ ನಕಲಿ ರಾಷ್ಟ್ರೀಯವಾದಿಗಳ ಮೋಸದ ಜಾಲಕ್ಕೆ ಸಿಲುಕಿ ಘಾಸಿಗೊಳ್ಳಬಾರದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಭಾರತದ ಸಾಮಾಜಿಕˌ ಧಾರ್ಮಿಕˌ ಆರ್ಥಿಕˌ ಶೈಕ್ಷಣಿಕˌ ರಾಜಕೀಯˌ ಸಾಂಸ್ಕೃತಿಕ ಮುಂತಾದ ಎಲ್ಲಾ ಕ್ಷೇತ್ರಗಳ ಮೇಲಿನ ಕಕೇಷಿಯನ್ ಆರ್ಯನ್ನರ ಬಲವಾದ ಹಿಡಿತವನ್ನು ಕಿತ್ತೆಸೆದು ಈ ನೆಲವನ್ನು ವೇದಪೂರ್ವ ಕಾಲದ ಭರತಖಂಡವನ್ನಾಗಿಸಬೇಕಾದರೆ ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತವೆಂಬ ಪ್ರಾಯೋಗಿಕ ನೆಲೆಗಟ್ಟಿನ ಲಿಂಗಾಯತ ರಾಷ್ಟ್ರೀಯವಾದದ ಅನುಷ್ಠಾನ ಹಿಂದಿಂದಿಗಿಂತಲೂ ಇಂದು ತುಂಬಾ ಅಗತ್ಯವಾಗಿದೆ. ಈ ನೆಲವನ್ನು ವೈದಿಕ ಆರ್ಯನ್ ಗಿಡುಗಗಳಿಂದ ರಕ್ಷಿಸಲು ಭಾರತೀಯರಿಗೆ ಇದೊಂದೆ ಪರ್ಯಾಯ ಮಾರ್ಗವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
~ಡಾ. ಜೆ ಎಸ್ ಪಾಟೀಲ.