ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಲ್ಲೆ ದೇಗುಲಗಳ ಮೇಲಿನ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಈ ಘಟನೆಯನ್ನು ವಿರೋಧಿಸಿ ಕ್ರಮಕ್ಕೆ ಆಗ್ರಹಿಸಿ ಇಂದು ಇಸ್ಕಾನ್ ಕ್ಯಾಂಪಸ್ ನಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಪ್ಪುಪಟ್ಟಿ ಧರಿಸಿ, ಹರೇಕೃಷ್ಣ ಗೀತೆ ಹಾಡಿ, ಕಾಲ್ನಡಿಗೆ ಮಾಡಿ ಪ್ರತಿಭಟನೆ !
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಲ್ಲೆ ಹಾಗೂ ಧಾರ್ಮಿಕ ಕ್ಷೇತ್ರಗಳ ಧ್ವಂಸಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಗರದ ಇಸ್ಕಾನ್ ಟೆಂಪಲ್ ಇಂದು ಪ್ರತಿಭಟನೆ ನಡೆಸಿ ಕ್ರಮಕ್ಕೆಆಗ್ರಹಿಸಿದೆ. ಹೌದು, ಇಂದು ಬಾಂಗ್ಲಾ ಹಿಂಸಾಚಾರವನ್ನು ಖಂಡಿಸಿ ಬೆಂಗಳೂರು ಇಸ್ಕಾನ್ ಆಡಳಿತ ಮಂಡಳಿಯು ಕೂಡ ಪ್ರತಿಭಟನೆ ಕೈಗೊಂಡಿತ್ತು.ಇಸ್ಕಾನ್ ಟೆಂಪಲ್ ಒಳಗಡೆಯೇ ನಡೆದ ಈ ಪ್ರತಿಭಟನೆಯ ನೇತೃತ್ವವನ್ನು ಬೆಂಗಳೂರು ಇಸ್ಕಾನ್ ಅಧ್ಯಕ್ಷರಾದ ಮಧು ಪಂಡಿತ್ ದಾಸ್ ಮತ್ತು ಉಪಾಧ್ಯಕ್ಷರಾದ ಚಂಚಲ ಪತಿದಾಸ್ ವಹಿಸಿದ್ದರು. ಈ ಪ್ರತಿಭಟನೆಯಲ್ಲಿ 500 ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಇಸ್ಕಾನ್ ಟೆಂಪಲ್ ಒಳಗಡೆಯೇ ನಡೆದ ಈ ಪ್ರತಿಭಟನೆಗೆ ಬೇರೆ ಬೇರೆ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಕಪ್ಪು ಪಟ್ಟಿ ಧರಿಸಿದ್ದ ಭಕ್ತರು ಹರಿಕೃಷ್ಣ ಗೀತೆ, ಜಾಗತಿಕ ಗೀತೆ ಜೊತೆಗ ಇಸ್ಕಾನ್ ದೇವಸ್ಥಾನದ ಒಳಗಡೆಯೇ ಕಾಲ್ನಡಿಗೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಲಾಯಿತು.
ಇದೇ ವೇಳೆ ಬೆಂಗಳೂರು ಇಸ್ಕಾನ್ ಆಡಳಿತ ಮಂಡಳಿ ಅಧ್ಯಕ್ಷ ಮಧುಪಂಡಿತ್ ದಾಸ್ ಮಾತನಾಡಿ ಕಳೆದ ವಾರ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಾಗೂ ಇಸ್ಕಾನ್ ದೇವಸ್ಥಾನದ ಮೇಲೆ ನಡೆದ ಹಲ್ಲೆ ಬಹಳ ನೋವು ತಂದಿದೆ. ಪ್ರಭುಪಾದರ ಮೂರ್ತಿ, ಭಗವಂತ ಮೂರ್ತಿ ಹಾಗೂ ದೇವಸ್ಥಾನವನ್ನು ಸಂಪೂರ್ಣ ಧ್ವಂಸ ಮಾಡಿದ್ದಾರೆ. ಇಬ್ಬರು ಭಕ್ತರು ಮೃತ ಪಟ್ಟಿದ್ದಾರೆ. ಹಾಗೂ ಒಬ್ಬರಿಗೆ ಗಂಭೀರವಾಗಿ ಗಾಯವಾಗಿರುವುದು ಖಂಡನೀಯ.
ಈ ಹಿನ್ನೆಲೆ ಇವತ್ತು ಪ್ರಪಂಚದಾದ್ಯಂತ ಇಸ್ಕಾನ್ ದೇವಸ್ಥಾನಗಳಲ್ಲಿ ನಾವು ಕೀರ್ತನೆ ಹೇಳುವುದರ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಹಿಂದುಗಳು ಬಹಳ ಶಾಂತಿವಂತರು. ಪ್ರೀತಿಯಿಂದ ಎಲ್ಲರನ್ನೂ ಕಾಣುತ್ತೇವೆ. ಹಾಗಿದ್ದಾಗ ಈ ರೀತಿ ಹಿಂದುಗಳ ಮೇಲೆ ಆದ ಈ ಹಲ್ಲೆ ನೋವು ತಂದಿದೆ. ಇಸ್ಕಾನ್ ಮಾತ್ರವಲ್ಲ ದೇವಸ್ಥಾನದ ಸುತ್ತ ಇದ್ದ 200 ಕ್ಕೂ ಹೆಚ್ಚು ಹಿಂದೂ ಕುಟುಂಬಗಳ ಮೇಲೆ ಹಲ್ಲೆ ಮಾಡಲಾಗಿದೆ. ಬಾಂಗ್ಲಾದೇಶದ ಜೊತೆ ಪ್ರಧಾನ ಮಂತ್ರಿ ಅವರು ಮಾತನಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಹ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ ಬೇಕು ಎಂದು ಹೇಳಿದ್ದಾರೆ.
ಬೆಂಗಳೂರು ಇಸ್ಕಾನ್ನ ಉಪಾಧ್ಯಕ್ಷರಾದ ಚಂಚಲ ಪತಿದಾಸ್ ಮಾತನಾಡಿ, ಬಾಂಗ್ಲಾದೇಶದಲ್ಲಿ 17 ಇಸ್ಕಾನ್ ದೇವಸ್ಥಾನಗಳಿವೆ. ಆ ದೇವಸ್ಥಾನಗಳಲ್ಲಿ ನಾವು ಬಹಳ ವರ್ಷಗಳಿಂದ ಜನರ ಸೇವೆಯನ್ನು ನಡೆಸಿಕೊಂಡು ಬಂದಿದ್ದೇವೆ. ಹಾಗಿದ್ದು ಈ ಹಲ್ಲೆ, ಪ್ರಾಣಹಾನಿ, ದೇವಸ್ಥಾನದ ಧ್ವಂಸ ಆಗಿರುವುದು ವಿಷಾಧಕರ ಸಂಗತಿ.
ಈ ಸಂಧರ್ಭದಲ್ಲಿ ನಾವು ಬಾಂಗ್ಲಾದೇಶದಲ್ಲಿ ಇರುವಂತಹ ಹಿಂದುಗಳೊಂದಿಗೆ ಇದ್ದೇವೆ ಎನ್ನುವ ಸಂದೇಶ ನೀಡುವ ಉದ್ದೇಶದಿಂದ ಕೃಷ್ಣ ಕೀರ್ತನೆಯ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ. ಬಾಂಗ್ಲಾದೇಶ ಸರ್ಕಾರದೊಂದಿಗೆ ಈಗಾಗ್ಲೇ ಭಾರತ ಸರ್ಕಾರ ಮಾತನಾಡಿದೆ. ಬಾಂಗ್ಲಾದೇಶದಲ್ಲಿ ಇರುವಂತಹ ಹಲವು ಮುಸ್ಲಿಂ ಮುಖಂಡರು ಸಹ ಈ ಕೃತ್ಯವನ್ನು ಖಂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಈ ರೀತಿಯ ಘಟನೆ ಮರುಕಳಿಸಬಾರದು.
ಆ ನಿಟ್ಟಿನಲ್ಲಿ ನಾವು ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ ಎಂದರು. ಒಟ್ಟಾರೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಈಗಾಗಲೇ ಅಮಾನುಷವಾದ ಈ ಘಟನೆಗೆ ಜಾಗತಿಕ ಮಟ್ಟದಲ್ಲಿ ತೀವ್ರ ಅಸಮಾಧನ ಕೇಳಿ ಬಂದಿದೆ. ನೊಂದವರ ಪರವಾಗಿ ಇರುವುದು ಸದ್ಯದ ತುರ್ತು ಬೇಡಿಕೆ.