~ಡಾ. ಜೆ ಎಸ್ ಪಾಟೀಲ.
ಬೆಂಗಳೂರು :ಮಾ: 18: ಎರಡು ದಿನಗಳ ಹಿಂದೆ ಬಿಜೆಪಿಯ ಸಿ ಟಿ ರವಿ ಎನ್ನುವ ಮತಿಗೇಡಿ ಶಾಸಕ ಲಿಂಗಾಯತ ಸಮುದಾಯವನ್ನು ಬಿಜೆಪಿ ಅಲಕ್ಷಿಸಬೇಕು ಎಂದು ಹೇಳಿರುವುದು ಬಾಯಿ ತಪ್ಪಿನ ಮಾತೂ ಅಲ್ಲ ಅಥವಾ ಹಾಗೆ ತಾನು ಹೇಳಿಯೇ ಇಲ್ಲ ಎಂದು ತಿಪ್ಪೆ ಸಾರಿಸಿದರೂ ಒಪ್ಪುವಂತದ್ದಲ್ಲ. ಏಕೆಂದರೆ ಯಡಿಯೂರಪ್ಪನವರ ಇಚ್ಚೆಗೆ ವಿರುದ್ಧವಾಗಿ ಮತ್ತು ಅವರಿಗೆ ಕಿರಿಕಿರಿಯನ್ನುಂಟು ಮಾಡುವ ದುರುದ್ದೇಶದಿಂದ ನಳಿನ್ ಕುಮಾರ್ ಕಟೀಲ್ ಎಂಬ ಜೋಕರ್ ವ್ಯಕ್ತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ನೇಮಿಸುವಲ್ಲಿ ಬಿ ಎಲ್ ಸಂತೋಷನ ಕುತಂತ್ರ ಕೆಲಸ ಮಾಡಿದ್ದು ಮತ್ತು ಆನಂತರದ ಬೆಳವಣಿಗೆಯಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಿಂದ ಲಿಂಗಾಯತ ಕೆಲಸಗಾರರನ್ನು ಆಯ್ದು ಹೊರಹಾಕಿದ ಘಟನೆ ಕೂಡ ಅಲಕ್ಷಿಸುವ ಸಂಗತಿಯಲ್ಲ. ಕಳೆದ ಐದು ವರ್ಷಗಳಲ್ಲಿ ಒಂದು ಪಂಚಾಯ್ತಿ ಸದಸ್ಯನಾಗಲು ಅರ್ಹನಲ್ಲದ ಬಿ.ಎಲ್.ಸಂತೋಷ ಕರ್ನಾಟಕದ ಬಿಜೆಪಿಯಲ್ಲಿ ಮಾಡುತ್ತಿರುವ ಬಾನಗಡಿಗಳು ಒಂದೆರಡಲ್ಲ.
ಯಡಿಯೂರಪ್ಪನವರ ಮಗನಿಗೆ ಟಿಕೇಟ್ ತಪ್ಪಿಸಿದ್ದು ˌ ಯಡಿಯೂರಪ್ಪನವರನ್ನು ಹುದ್ದೆಯಿಂದ ಇಳಿಸಿದ್ದು ˌ ಬಿಜೆಪಿ ಲಿಂಗಾಯತ ಶಾಸಕರಿಗೆ ವಿಭೂತಿ ಬದಲಿಗೆ ಹಣೆಯ ಮೇಲೆ ಕುಂಕುಮವಿಡಲು ಆದೇಶಿಸಿದ್ದು ˌ ಶಾಸಕರೆಲ್ಲ ಲಿಂಗಾಯತರೆಂದು ಹೇಳದೆ ತಾವು ಹಿಂದುಗಳೆಂದು ಅಥವಾ ತೀರ ಅನಿವಾರ್ಯವಾದರೆ ವೀರಶೈವ-ಲಿಂಗಾಯತರೆಂದು ಹೇಳಲು ಆದೇಶ ಮಾಡಿದ್ದು, ಲಿಂಗಾಯತ ಶಿಕ್ಷಣ ಸಂಸ್ಥೆ ನಡೆಸುವ ಬಿಜೆಪಿ ನಾಯಕರಿಗೆ ಸಂಸ್ಥೆಯ ಹೆಸರಿನಲ್ಲಿರುವ ಲಿಂಗಾಯತ ಶಬ್ಧದ ಬದಲಿಗೆ ವೀರಶೈವ ಎಂದು ಬದಲಿಸಲು ಒತ್ತಡ ಹೇರಿದ್ದು ˌ ಯಡಿಯೂರಪ್ಪ ನಿರಾಕರಿಸಿದ್ದ ಕಾಲ್ಪನಿಕ ವ್ಯಕ್ತಿ ರೇಣುಕನ ಜಯಂತಿ ಬೊಮ್ಮಾಯಿ ಕೈಯಲ್ಲಿ ಘೋಷಿಸಿದ್ದು ˌ ಪಠ್ಯ ಪುಸ್ತಕದಲ್ಲಿನ ಬಸವಣ್ಣನವರ ಪಾಠ ಉದ್ದೇಶಪೂರ್ವಕವಾಗಿ ತಿರುಚಲು ಆದೇಶಿಸಿದ್ದು ˌ ಬೊಮ್ಮಾಯಿಯನ್ನು ಅಕ್ಷರಶಃ ಒಬ್ಬ ಗುಲಾಮನಂತೆ ನಡೆಸಿಕೊಂಡಿದ್ದು ಇತ್ಯಾದಿಗಳ ಹಿಂದೆ ಯಾರ ಕೈವಾಡವಿದೆ ಎನ್ನುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ಪೂರಕವೆನ್ನುವಂತೆ ಲಿಂಗಾಯತರನ್ನು ತುಳಿಯಬೇಕು ಎನ್ನುವ ಅರ್ಥದಲ್ಲಿ ಉಡುಪಿ ಮೂಲದಿಂದ ಹೆಸರು ಸಮೇತ ಜಾಲತಾಣಗಳಲ್ಲಿ ತಿರುಗುತ್ತಿರುವ ಒಂದು ಕರಪತ್ರ ಇವೆಲ್ಲವು ಲಿಂಗಾಯತರನ್ನು ಬಿಜೆಪಿ ಮತ್ತು ಸಂಘ ಪರಿವಾರ ತುಳಿಯುತ್ತಿರುವುದರ ಸಂಕೇತವಾದರೆ ಅದನ್ನು ಪುಷ್ಟಿಕರಿಸಿದ್ದು ಈ ಸಿ ಟಿ ರವಿಯ ಹೇಳಿಕೆ.
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟವನ್ನು ಹತ್ತಿಕ್ಕಲು ಉದ್ದೇಶಪೂರ್ವಕವಾಗಿಯೆ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಪ್ರಾಯೋಜಿಸಿದ್ದು ˌ ಪಂಚಮಸಾಲಿ ಸ್ವಾಮಿಗಳನ್ನು ಸತ್ಯಾಗ್ರಹದಲ್ಲಿ ಕಟ್ಟಿಹಾಕಿ ಸಂಘ ಪ್ರಾಯೋಜಿತ ಬಿಜೆಪಿ ಶಾಸಕರು ಸ್ವಾಮಿಗಳು ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬರದಂತೆ ತಡೆಯುವ ಭರವಸೆಯನ್ನು ನೀಡುತ್ತಿರುವುದು. ಚುನಾವಣೆ ಹತ್ತಿರ ಬಂದರೂ ಪಂಚಮಸಾಲಿ ಮೀಸಲಾತಿಯ ಬಗ್ಗೆ ಬಿಜೆಪಿಯನ್ನು ಟೀಕಿಸದೆ ಆ ಶಾಸಕರು ಬಾಯಿ ಮುಚ್ಚಿಕೊಂಡು ತಮ್ಮ ಟಿಕೇಟ್ ಕನ್ಫರ್ಮ್ ಮಾಡಿಕೊಳ್ಳುತ್ತಿರುವುದು ಇಡೀ ಪಂಚಮಸಾಲಿ ಮೀಸಲಾತಿಯ ಹಿಂದೆ ಯಾರಿದ್ದಾರೆನ್ನುವ ಬಗ್ಗೆ ಬಿಡಿಸಿ ಹೇಳುತ್ತದೆ. ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟ ನಡೆದಾಗ ಅದನ್ನು ಬೆಂಬಲಿಸದಂತೆ ಬಿಜೆಪಿ ಲಿಂಗಾಯತ ನಾಯಕರಿಗೆ ಆದೇಶ ಮಾಡಿದ ಶಕ್ತಿಗಳು ಈಗ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ಪಂಚಮಸಾಲಿ ಶಾಸಕರಿಗೆ ಮೌಖಿಕ ಆದೇಶ ನೀಡಿದ ಸಂಗತಿ ಕೂಡ ಲಿಂಗಾಯತ ಸಮುದಾಯ ಸ್ಪಷ್ಟವಾಗಿ ಅರ್ಥಮಾಡಿಕೊಂಡಿರುವಂತಿದೆ.
ಕರ್ನಾಟಕದಲ್ಲಿ ಏನೂ ಇಲ್ಲದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೆ ಲಿಂಗಾಯತರು. ಈಗ ಬಿಜೆಪಿಯಲ್ಲಿ ಲಿಂಗಾಯತರು ಸಂಪೂರ್ಣ ಮೂಲೆಗುಂಪಾಗಿದ್ದಾರೆ. ಅಲ್ಲಿ ಈಗ ನೀತಿ-ನಿರ್ಣಯಗಳು ರೂಪಿಸುವವರು ಬಿ.ಎಲ್.ಸಂತೋಷ್ˌ ಪ್ರಲ್ಹಾದ ಜೋಶಿˌ ವಿಶ್ವೇಶ್ವರ ಹೆಗಡೆˌ ಕಾಗೇರಿˌ ಸುರೇಶ್ ಕುಮಾರ್ˌ ನಾಗೇಶ್ˌ ರವಿ ಸುಬ್ರಮಣ್ಯ ˌ ತೇಜಸ್ವಿ ಸೂರ್ಯˌ ರಾಮದಾಸ್ˌ ರಘುಪತಿ ಭಟ್ˌ ಅನಂತಕುಮಾರ ಹೆಗಡೆˌ ಮುಂತಾದ ಕೇಶವಕೃಪಾದ ಪುರೋಹಿತ ಪುಂಗವರು. ಆರಂಭದಲ್ಲಿ ಯಡಿಯೂರಪ್ಪನವರನ್ನು ಬಳಸಿಕೊಂಡು ಬಿ ಬಿ ಶಿವಪ್ಪನವರನ್ನು ಮುಗಿಸಲಾಯಿತು. ಜಗದೀಶ್ ಶೆಟ್ಟರನ್ನನ್ನು ಬಳಸಿಕೊಂಡು ಯಡಿಯೂರಪ್ಪನವರನ್ನು ತುಳಿಯುವ ಪ್ರಯತ್ನಗಳು ವಿಫಲವಾದವು. ಬಳ್ಳಾರಿ ರೆಡ್ಡಿಗಳ ಮೂಲಕ ಕಿರುಕೂಳ ಕೊಡಿಸಲಾಯಿತು. ಕೊನೆಗೆ ಯಡಿಯೂರಪ್ಪನವರ ವಿರುದ್ಧ ಪಿತೂರಿ ಮಾಡಿ ಜೈಲಿಗಟ್ಟಲಾಯಿತು. ಇವೆಲ್ಲದರ ಹಿಂದೆ ಯಾರಿದ್ದರು ಎನ್ನುವುದು ಗುಟ್ಟಿನ ಸಂಗತಿಯೇನಲ್ಲ.
ಯಡಿಯೂರಪ್ಪನವರು ಕೆಜೆಪಿ ಕಟ್ಟಿ ಬಿಜೆಪಿಗೆ ಪಾಠವೇನೊ ಕಲಿಸಿದರುˌ ಆದರೆ ಆನಂತರದ ದಿನಗಳಲ್ಲಿ ತಮ್ಮದೆ ಲಿಂಗಾಯತ ಧರ್ಮದ ತತ್ವವನ್ನು ಮರೆತ ಕಾರಣದಿಂದ ಬಿಜೆಪಿಯವರು ಮಾಡಿದ ಎಲ್ಲಾ ದ್ರೋಹˌ ಅವಮಾನಗಳನ್ನು ಸಹಿಸಿಕೊಂಡು ಅಲ್ಲಿಯೆ ಉಳಿಯುವ ಅನಿವಾರ್ಯತೆ ಸೃಷ್ಟಿಯಾಯಿತುˌ ಅಥವಾ ಸೃಷ್ಟಿಸಲಾಯಿತು. ಅದು ಯಡಿಯೂರಪ್ಪನವರಿಗೆ ನಿಸರ್ಗ ಕಲಿಸಿದ ಪಾಠವೊ ಅಥವಾ ಲಿಂಗಾಯತ ಧರ್ಮ ತತ್ವಗಳ ವಿರೋಧಿ ಸಿದ್ಧಾಂತದೊಂದಿದೆ ಮಾಡಿದ ಸಹವಾಸದ ಫಲವೊ ಗೊತ್ತಿಲ್ಲ ˌ ಆದರೆ ಯಡಿಯೂರಪ್ಪ ಬಿಜೆಪಿಯ ಸಹವಾಸದಿಂದ ತಮ್ಮ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಅಕ್ಷರಶಃ ಸತ್ಯ. ಯಡಿಯೂರಪ್ಪನವರಿಗಾದ ದ್ರೋಹ ಮತ್ತು ಅವಮಾನಗಳು ಬಿಜೆಪಿಯಲ್ಲಿರುವ ಲಿಂಗಾಯತರುˌ ಬಹುಜನ/ಶೂದ್ರ ಹಾಗು ಅಸ್ಪ್ರಶ್ಯ ರಾಜಕಾರಣಿಗಳೆಲ್ಲರಿಗೂ ಪಾಠವಾಗಬೇಕಿದೆ.
ಒಂದು ಕಾಲದಲ್ಲಿ ಬಿಜೆಪಿ ಎಂದರೆ ಯಡಿಯೂರಪ್ಪ ಎನ್ನುವ ವಾತಾವರಣವಿತ್ತು. ರಾಜ್ಯಾಧ್ಯಕ್ಷರಿಂದ ಹಿಡಿದು ಸಂಸತ್ತಿನ ಮತ್ತು ವಿಧಾನಸಭೆಯ ಟಿಕೇಟ್ ಯಡಿಯೂರಪ್ಪ ಒಬ್ಬರೆ ನಿರ್ಧರಿಸುತ್ತಿದ್ದರು. ಈಗ 2018 ರಿಂದ ತಮ್ಮ ಮಗನಿಗೂ ಟಿಕೇಟ್ ಕೊಡಿಸಲಾರದಷ್ಟು ಯಡಿಯೂರಪ್ಪನವರನ್ನು ದುರ್ಬಲಗೊಳಿಸಲಾಗಿದೆ. 2018 ರ ಚುನಾವಣೆಗೆ ಮೊದಲು ಆರಂಭವಾಗಿದ್ದ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತರ ಸೌಲಭ್ಯದ ಹೋರಾಟವನ್ನು ಬೆಂಬಲಿಸದಂತೆ ಯಡಿಯೂರಪ್ಪನವರ ಮೇಲೆ ಧರ್ಮಾಂಧರು ಹೇರಿದ್ದ ಒತ್ತಡ ಮತ್ತು 2018ರ ಚುನಾವಣೆಯ ನಂತರ ಸಮ್ಮಿಶ್ರ ಸರಕಾರ ಪತನಗೊಂಡಾಗ ಸರಕಾರ ರಚಿಸುವಲ್ಲಿ ಯಡಿಯೂರಪ್ಪನವರಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಲಿಲ್ಲ. ತಮಗೆ ಬೇಕಾದ ಒಬ್ಬ ಸಭಾಧ್ಯಕ್ಷರನ್ನು ನೇಮಿಸಕೊಳ್ಳಲು ಮತ್ತು ಉಪ ಮುಖ್ಯಮಂತ್ರಿ ಮಾಡಿಕೊಳ್ಳಲು ಯಡಿಯೂರಪ್ಪನವರಿಗೆ ಅಧಿಕಾರ ನೀಡಲಿಲ್ಲ.
ಆನಂತರದ ಅವರ ಆಡಳಿತದಲ್ಲಿ ಪಕ್ಷದ ಮತ್ತು ಸರಕಾರದ ನೀತಿ ನಿರೂಪಣೆಗಳನ್ನು ಕೇಶವಕೃಪಾ ಪೋಷಿತ ಆಚಾರ್ಯ ಬಿ ಎಲ್ ಸಂತೋಷ್ ಮತ್ತು ಪ್ರಲ್ಹಾದ ಜೋಶಿ ಸೇರಿ ರೂಪಿಸುತ್ತಿದ್ದರು ಎನ್ನುವ ಆರೋಪ ಯಡಿಯೂರಪ್ಪ ಬೆಂಬಲಿಗರು ಮಾಡುತ್ತಾರೆ. ಯಡಿಯೂರಪ್ಪನವರ ಮಗ ಭ್ರಷ್ಟಾಚಾರ ಮಾಡುತ್ತಿದ್ದಾನೆಂದು ಲಿಂಗಾಯತ ಶಾಸಕನ ಮೂಲಕವೆ ತುತ್ತೂರಿ ಊದಿಸಿ ಅಪಾರ ಪ್ರಮಾಣದ ಸರಕಾರಿ ಭೂಮಿಗಳನ್ನು ಚಿಕ್ಕಾಸಿಗೆ ಹೊಡಕೊಂಡವರು ಯಾರು ಎನ್ನುವ ಸಂಗತಿ ಎಲ್ಲರಿಗೆ ತಿಳಿದದ್ದೆ. ಕಷ್ಟಪಟ್ಟು ಸರಕಾರ ರಚಿಸಿದ ಯಡಿಯೂರಪ್ಪ ಪಕ್ಷದ ಪ್ರದೇಶ ಅಧ್ಯಕ್ಷ ಹೋಗಲಿ ತಮ್ಮದೆ ಸೆಕ್ರೆಟರಿ ನೇಮಿಸಿಕೊಳ್ಳುವಂತಿರಲಿಲ್ಲ. ರಾಜ್ಯಾದ್ಯಂತ ಕೇಶವಕೃಪಾದ ನಿಷ್ಟರೇ ವಿವಿಧ ವಿವಿಗಳ ಕುಲಪತಿ ಮತ್ತು ಕುಲಸಚಿವರಾದರು. ಆ ನೇಮಕಾತಿಗಳ ಹಿಂದಿನ ಕೈಬದಲಾವಣೆಯ ವ್ಯವಹಾರ ಯಡಿಯೂರಪ್ಪನವರ ವ್ಯಾಪ್ತಿ ಮೀರಿದ್ದಾಗಿತ್ತು ಎಂದು ಬೇರೆ ಹೇಳುವ ಅಗತ್ಯವಿಲ್ಲ.
ಯಡಿಯೂರಪ್ಪ ಆಡಳಿತದಲ್ಲೆ ಪಠ್ಯಪುಸ್ತಕ ತಿರುಚುವ ಕಾರ್ಯಕ್ಕೆ ಅಂದಿನ ಶಿಕ್ಷಣ ಸಚಿವ ಸುರೇಶಕುಮಾರ ಚಾಲನೆ ನೀಡಿದ್ದ. ಆನಂತರ ಬೊಮ್ಮಾಯಿ ಆಡಳಿತದಲ್ಲಿ ಒಕ್ಕರಿಸಿದ ಬಿ.ಸಿ.ನಾಗೇಶ್ ಈ ವಿಷಯದಲ್ಲಿ ಮಾಡಿದ ಅವಾಂತರ ತಮಗೆಲ್ಲ ತಿಳಿದೆಯಿದೆ. ಬಿಜೆಪಿಯ ಮೇಲೆ ಯಡಿಯೂರಪ್ಪನವರು ನಿಯಂತ್ರಣ ಹೊಂದಿದ್ದಾಗ ಅಲ್ಲೊಂದು ಡೀಸೆನ್ಸಿ ಮತ್ತು ಡಿಗ್ನಿಟಿ ಇತ್ತು. ಈಗ ಆ ಡೀಸೆನ್ಸಿ ಮತ್ತು ಡಿಗ್ನಿಟಿಗಳು ಮಾಯವಾಗಿವೆ. ಯಡಿಯೂರಪ್ಪ ಬಿಜೆಪಿಗೆ ಎಂದಿಗೂ ಒಗ್ಗದ ಮತ್ತು ಆ ಪಕ್ಷದ ವಂಶವಾಹಿನಿಯಲ್ಲಿ ಕಾಣಬರದ ಒಂದು ಘನತೆಯನ್ನು ಬಿಜೆಪಿಗೆ ನೀಡಿದ್ದರು. ಈಗ ನಳೀನಕುಮಾರ್ ಕಟೀಲ್ˌ ಅಸ್ವತ್ಥನಾರಾಯಣˌ ಸಿ.ಟಿ ರವಿ ಮುಂತಾದವರು ಹರಿಬಿಡುವ ನಾಲಿಗೆಯ ಸ್ಯಾಂಪಲ್ಲಿನ ಹಿಂದೆ ಎಂತಹ ಸಂಸ್ಕೃತಿಹೀನರಿದ್ದಾರೆ ಎನ್ನುವುದನ್ನು ನಾವು ಸುಲಭವಾಗಿ ಊಹಿಸಬಹುದಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿರುವುದು ಆಚಾರ್ಯರ ಸಂತತಿ. ಅಲ್ಲಿರುವ ಲಿಂಗಾಯತˌ ಒಕ್ಕಲಿಗ ಮುಂತಾದ ಬಹುಜನ ಸಮಾಜದ ರಾಜಕಾರಣಿಗಳು ಕೇವಲ ಕೈಗೊಂಬೆಗಳು ಮಾತ್ರ.
ಕಳೆದ ತಿಂಗಳದಲ್ಲಿ ಇಬ್ಬರು ಸ್ತ್ರೀ ಅಧಿಕಾರಿಗಳ ಹಾದಿಬೀದಿ ರಂಪ ಕರ್ನಾಟಕದ ಮರ್ಯಾದೆಯನ್ನು ಮೂರುಕಾಸಿಗೆ ಹರಾಜು ಹಾಕಿದ್ದಲ್ಲದೆ ಇಲ್ಲೊಂದು ಸಮರ್ಪಕ ಆಡಳಿತವೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿಗೆ ಸ್ವವಿವೇಚನೆಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೆ ಇಲ್ಲವೇನೊ ಎನ್ನುವ ಸಂಶಯ ಮೂಡುತ್ತದೆ. ಆ ಇಬ್ಬರು ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎನ್ನುವ ದಾಟಿಯಲ್ಲಿ ಕೇಂದ್ರದ ಮಂತ್ರಿ ಪ್ರಲ್ಹಾದ ಜೋಶಿ ಹೇಳಿಕೆ ನೀಡಿದ್ದನ್ನು ನೋಡಿದಾಗ ಬೊಮ್ಮಾಯಿಯನ್ನು ನಿಯಂತ್ರಿಸುವ ಶಕ್ತಿಗಳು ಯಾವುವು ಎನ್ನುವುದು ಸ್ಪಷ್ಟವಾಗುತ್ತದೆ. ಈ ರೀತಿಯ ಮೂಗು ತೂರಿಸುವಿಕೆ ಯಡಿಯೂರಪ್ಪ ಆಡಳಿತದಲ್ಲಿ ಸಾಧ್ಯವಿರಲಿಲ್ಲ. ಯಾವುದೇ ಐತಿಹಾಸಿಕ ಹಿನ್ನೆಲೆ ಇರದ ಕಾಲ್ಪನಿಕ ಪುರಾಣಾಧಾರಿತ ರೇಣುಕಾಚಾರ್ಯರ ಜಯಂತಿ ಘೋಷಿಸಬೇಕೆಂದು ವೀರಶೈವ ಆರಾಧ್ಯ ಬ್ರಾಹ್ಮಣರು ಸರಕಾರದ ಮೇಲೆ ಒತ್ತಡ ಹೇರಿದಾಗ ಯಡಿಯೂರಪ್ಪ ಅದನ್ನು ಸಾಕಷ್ಟು ವಿವೇಚನೆಯಿಂದ ನಿರಾಕರಿಸಿದ್ದರು. ಆದರೆ ಬೊಮ್ಮಾಯಿ ಆಡಳಿತದಲ್ಲಿ ರೇಣುಕರ ಜಯಂತಿ ಘೋಷಿಸುವಲ್ಲಿ ಬೊಮ್ಮಾಯಿಯವರನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳ ಸಹಾಯ ಪಡೆದ ವೀರಶೈವ ಆರಾಧ್ಯ ಬ್ರಾಹ್ಮಣರು ಸಫಲರಾದರು.
ಕರ್ನಾಟಕದಲ್ಲಿ ನೆಲೆಯೆ ಇಲ್ಲದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರೆ ಆ ಪಕ್ಷದಲ್ಲಿ ತಮ್ಮ ಮಕ್ಕಳ ಭವಿಷ್ಯ ಹುಡುಕುತ್ತ ಪರದಾಡುತ್ತಿರುವಾಗ ಅಲ್ಲಿರುವ ಉಳಿದ ಲಿಂಗಾಯತ ನಾಯಕರ ಪಾಡು ನಾಯಿಪಾಡಿನಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಅನುಭವಿಸಿದ್ದ ಪ್ರಭಾಕರ್ ಕೋರೆ ಬಿಜೆಪಿಯಲ್ಲಿ ವಿಳಾಸವಿಲ್ಲದಂತಾಗಿದ್ದಾರೆ. ಪಕ್ಷದಲ್ಲಿ ಅತ್ಯಂತ ಹಿರಿಯರಾಗಿರುವ ದಾವಣಗೆರೆ ಸಂಸದ ಜಿ ಎಮ್ ಸಿದ್ದೇಶ್ ಮತ್ತು ತುಮಕೂರು ಸಂಸದ ಬಸವರಾಜು ಹೆಸರು ಆ ಕ್ಷೇತ್ರದ ಜನರೆ ಮರೆತಿರುವಂತೆ ಮಾಡಲಾಗಿದೆ. ಇನ್ನು ಉಳಿದ ಲಿಂಗಾಯತ ಶಾಸಕರಿಗೆˌ ಸಂಸದರು ಕೇವಲ ಒಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವ ಯೋಗ್ಯತೆ ಇಲ್ಲದ ಕೇಶವಕೃಪಾದ ಪುರೋಹಿತರೆದುರಿಗೆ ಕೈಕಟ್ಟಿ ˌ ನಡು ಬಗ್ಗಿಸಿ ನಿಲ್ಲುವ ಸ್ಥಿತಿಗೆ ತರಲಾಗಿದೆ. ಮುಂಬರುವ ೨೦೨೩ರ ಚುನಾವಣೆಯಲ್ಲಿ ಇವರಲ್ಲಿ ಬಹುತೇಕರಿಗೆ ಟೀಕೇಟ್ ಸಿಗುವ ಖಾತ್ರಿಯಿಲ್ಲ. ಈ ಹಿಂದೆ ಯಡಿಯೂರಪ್ಪನವರ ಬೆನ್ನು ಹತ್ತಿದರೆ ಟಿಕೇಟ್ ಸಿಗುವ ಭರವಸೆಯಾದರೂ ಇರುತ್ತಿತ್ತು. ಈಗ ಈ ಆಚಾರ್ಯರಿಗೆ ‘ಥೈಲಿ’ ಕೊಟ್ಟರೂ ಟಿಕೇಕ್ ಸಿಗುವ ಖಾತ್ರಿಯಿಲ್ಲ.
ಯಡಿಯೂರಪ್ಪನವರ ವಿರುದ್ಧ ಯಾರದೊ ಮಾತು ಕೇಳಿ ಹೀನಾಯವಾಗಿ ನಾಲಿಗೆ ಹರಿಬಿಟ್ಟ ಶಾಸಕರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಅಂತವರ ಟಿಕೇಟ್ ಕೇಶವಕೃಪಾದ ಆಚಾರ್ಯರೆ ಕಟ್ ಮಾಡಿ ಯಡಿಯೂರಪ್ಪ-ನಿರಾಣಿಯ ಮೇಲೆ ಗೂಬೆ ಕೂರಿಸಿದರೆ ಆಶ್ಚರ್ಯಪಡಬೇಕಿಲ್ಲ. ಮುಂಬರುವ ದಿನಗಳಲ್ಲಿ ಬಿಜೆಪಿಯಲ್ಲಿನ ಲಿಂಗಾಯತ ರಾಜಕಾರಣಿಗಳ ಸ್ಥಿತಿ ಇನ್ನೂ ಅದ್ವಾನಗೊಳ್ಳಲಿದೆ. ಅತ್ಯಂತ ಹಿರಿಯ ಲಿಂಗಾಯತ ರಾಜಕಾರಣಿಗಳು ಕೂಡ ಬಾಲಕ ತೇಜಸ್ವಿ ಸೂರ್ಯನ ಮನೆಯ ಬಾಗಿಲ ಹೊರಗೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಅದು ಆಗಲೇಬೇಕಿರುವ ಬೆಳವಣಿಗೆ ಕೂಡ. ಆ ಪರಿಸ್ಥಿತಿ ಆದಷ್ಟು ಬೇಗ ಬರಲಿ ಎಂದು ತತ್ವನಿಷ್ಟ ಲಿಂಗಾಯತ ಧರ್ಮೀಯ ಮತದಾರರು ಆಶಿಸುತ್ತಿದ್ದಾರೆ.