ಕೃಷ್ಣಮಣಿ
ಬೆಂಗಳೂರು: ಮಾ;18: ವಿಧಾನಸಭಾ ಚುನಾವಣೆ ಗೆಲ್ಲಲ್ಲೇಬೇಕು ಅನ್ನೋ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜಾಣ ಹೆಜ್ಜೆಯನ್ನಿಡಲು ನಿರ್ಧಾರ ಮಾಡಿದೆ. ಇದೀಗ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆ ಆದ ಬಳಿಕ ಅಂತಿಮವಾಗಿ ಟಿಕೆಟ್ ಘೋಷಣೆ ಮಾಡಲು ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮತ್ವದ ಸಭೆ ನಡೆದಿದ್ದು, ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ಅವಕಾಶವಿದೆ. ಯಾರು ಬಂಡಾಯ ಏಳುತ್ತಾರೆ..? ಯಾರನ್ನು ಸಮಾಧಾನ ಮಾಡಲು ಏನು ಮಾಡ್ಬೇಕು..? ಈಗ ಎಷ್ಟು ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಿದರೆ ಗೊಂದಲಕ್ಕೆ ಅವಕಾಶ ಕೊಡಂತೆ ಮುಂದುವರಿಯಬಹುದು ಅನ್ನೋ ಬಗ್ಗೆ ಗಹನವಾದ ಚರ್ಚೆ ನಡೆಸಿದ್ದು, ಅಂತಿಮವಾಗಿ ಆರೇಳು ಶಾಸಕರಿಗೆ ಟಿಕೆಟ್ ಕೊಟ್ಟರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂಗಳ ನಿರ್ಧಾರ ಮಾಡಿದೆ.
185 ಕ್ಷೇತ್ರದ ಬಗ್ಗೆ ಚರ್ಚೆ 125 ಟಿಕೆಟ್ ಫೈನಲ್..!
ಶುಕ್ರವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ 224 ಕ್ಷೇತ್ರಗಳ ಪೈಕಿ 185 ಕ್ಷೇತ್ರದ ಟಿಕೆಟ್ ಆಕಾಂಕ್ಷಿತರು ಹಾಗು ಸಮೀಕ್ಷೆಯಲ್ಲಿ ಗೆಲ್ಲುವ ಅವಕಾಶ ಇರುವ ಅಭ್ಯರ್ಥಿ ಯಾರು ಅನ್ನೋ ಬಗ್ಗೆ ಚರ್ಚೆ ನಡೆಸಿ, ಅಂತಿಮವಾಗಿ ಏಳು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಕ್ಕೆ ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದು, ಒಟ್ಟು ಮೊದಲ ಹಂತದಲ್ಲಿ 125 ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ. ಮಾರ್ಚ್ 22ರಂದು ಹಿಂದೂಗಳ ಪಾಲಿಗೆ ಹೊಸ ವರ್ಷ ಆಗಿದ್ದು, ಅಂದೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಉಳಿದ ಕ್ಷೇತ್ರಗಳ ಟಿಕೆಟ್ ಬಗ್ಗೆ ಮತ್ತೊಮ್ಮೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿ ದೆಹಲಿಯಲ್ಲಿ ಮತ್ತೊಮ್ಮೆ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಆದ್ರೆ ಹಾಲಿ ಶಾಸಕರಿಗೆ ಟಿಕೆಟ್ ಕೊಡದೆ ಇದ್ದರೆ ಬೇರೊಂದು ಪಕ್ಷದ ಬಾಗಿಲು ತಟ್ಟುವುದಿಲ್ಲವೇ ಎನ್ನುವ ಚರ್ಚೆಯೂ ನಡೆದಿದೆ.
ಹಾಲಿ ಆರೇಳು ಜನ ಶಾಸಕರಿಗೆ ಟಿಕೆಟ್ ಮಿಸ್..
ಈಗಾಗಲೇ ಪ್ರತೊಯೊಬ್ಬ ಹಾಲಿ ಶಾಸಕನೂ ನನಗೆ ಟಿಕೆಟ್ ಸಿಗಲಿದೆ ಎನ್ನುವ ನಂಬಿಕೆಯಲ್ಲಿ ಪ್ರಚಾರ ಸೇರಿದಂತೆ ಸಾಕಷ್ಟು ವೆಚ್ಚ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜನರನ್ನು ತಲುಪುವ ಉದ್ದೇಶದಿಂದ ಒಂದೆರಡು ಸುತ್ತು ರೌಂಡ್ಸ್ ಕೂಡ ಹಾಕಿರುತ್ತಾರೆ. ಇದೀಗ ಟಿಕೆಟ್ ಸಿಗಲ್ಲ ಎನ್ನುವುದು ಗೊತ್ತಾದರೆ ಬೇರೆ ಪಕ್ಷದ ಕಡೆಗೆ ಮುಖ ಮಾಡುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಕಾಂಗ್ರೆಸ್ನಲ್ಲಿ ಕಲ್ಬುರ್ಗಿ ಉತ್ತರ ಕ್ಷೇತ್ರದ ಶಾಸಕ ಖನಿಜ್ ಫಾತಿಮಾ, ಹರಿಹರದ ರಾಮಪ್ಪ, ಅಫಜಲಪುರ ಕ್ಷೇತ್ರದ ಎಂ ವೈ ಪಾಟೀಲ್, ಕುಂದಗೋಳದ ಕುಸುಮಾ ಶಿವಳ್ಳಿ, ಲಿಂಗಸುಗೂರು ಕ್ಷೇತ್ರದ ಡಿ ಎಸ್ ಹುಲಗೇರಿ, ಶಿಡ್ಲಘಟ್ಟದ ವಿ ಮುನಿಯಪ್ಪಗೆ ಟಿಕೆಟ್ ಸಿಗಲ್ಲ ಎನ್ನುವ ಮಾಹಿತಿ ದೆಹಲಿ ಮೂಲಗಳಿಂದ ಪ್ರತಿಧ್ವನಿಗೆ ಲಭ್ಯವಾಗಿದೆ. ಆದರೆ ಟಿಕೆಟ್ ವಂಚಿತರನ್ನು ಸಮಾಧಾನ ಮಾಡಲು ಕಾಂಗ್ರೆಸ್ ನಾಯಕರು ಒಂದು ಉಪಾಯ ಮಾಡಿಕೊಂಡಿದ್ದು, ಟಿಕೆಟ್ ಆಕಾಂಕ್ಷಿತರಲ್ಲಿ ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮೂಲಕ ಮೂಗಿಗೆ ತುಪ್ಪ ಸವರುವ ಯತ್ನಕ್ಕೆ ಮುಂದಾಗಿದ್ದಾರೆ.

ಸಿದ್ದರಾಮಯ್ಯ ಗೆಲುವಿಗಾಗಿ ಮುನಿಯಪ್ಪಗೆ ಅವಕಾಶ..!
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕುವುದು ಖಚಿತವಾಗಿದೆ. ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪ ಬೆಂಬಲ ಇಲ್ಲದೆ ಇದ್ದರೆ ಕೋಲಾರದಲ್ಲಿ ಗೆಲುವು ಕಷ್ಟ ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕಾಗಿ ಕಾಂಗ್ರೆಸ್ ನಾಯಕರೇ ಸೋಲಿಸಿದರು ಅನ್ನೋ ಆರೋಪ ಇರುವ ಕಾರಣಕ್ಕೆ ಕೆ.ಹೆಚ್ ಮುನಿಯಪ್ಪ ಸ್ಪರ್ಧೆ ಮಾಡಲು ಬಯಸಿದರೆ ಟಿಕೆಟ್ ನೀಡಲು ಕಾಂಗ್ರೆಸ್ ತಯಾರಿದೆ. ಕೆ.ಹೆಚ್ ಮುನಿಯಪ್ಪ ಕೇಳಿದ ಕ್ಷೇತ್ರದಿಂದ ನೀಡಲು ಸಿದ್ದ ಎನ್ನುವ ಸಂದೇಶ ರವಾನೆಯಾಗಿದೆ. ಆದರೆ ಕೆ.ಹೆಚ್ ಮುನಿಯಪ್ಪ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಬಾರದು ಅನ್ನೋ ಕಾರಣಕ್ಕೆ ಕಾಂಗ್ರೆಸ್ ಈ ಲೆಕ್ಕಾಚಾರ ಮಾಡುತ್ತಿದೆ ಎನ್ನುವುದು ದೆಹಲಿ ಮಾಹಿತಿ. …..