
ಬೆಂಗಳೂರು : ಮಹಿಳಾ ಪ್ರಯಾಣಿಕರೊಬ್ಬರನ್ನು ಅನ್ಯ ಮಾರ್ಗದಲ್ಲಿ ಕರೆದೊಯ್ದು ಅಪಹರಿಸಲೆತ್ನಿಸಿ ಮಹಿಳೆ ಮೇಲೆ ದುರ್ನಡತೆ ತೋರಿದ್ದ ಆಟೋ ಚಾಲಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆಟೋ ಚಾಲಕನನ್ನು ಸುನಿಲ್ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಆರೋಪಿ ಚಾಲಕನ ಆಟೋ ಹತ್ತಿದ್ದ ಪ್ರಯಣಿಕರು ಚಾಲಕನು ಮದ್ಯ ಸೇವಿಸಿದ್ದು ದುರ್ವರ್ತನೆ ತೋರಿದ್ದ ಎಂದು ಆರೋಪಿಸಿ ಪೋಲೀಸರಿಗೆ ದೂರು ನೀಡಿದ್ದರು.

ಪ್ರಯಾಣಿಸುವಾಗ ಆತಂಕಗೊಂಡ ಮಹಿಳಾ ಪ್ರಯಾಣಿಕರು ಚಲಿಸುತ್ತಿದ್ದ ಆಟೋದಿಂದ ಜಿಗಿದು ತಪ್ಪಿಸಿಕೊಂಡಿರುವ ಘಟನೆ ನಡೆದಿತ್ತು. ಥಣಿಸಂದ್ರದ ನಿವಾಸಿಯಾಗಿದ್ದ ಮಹಿಳೆ, ಗುರುವಾರ ರಾತ್ರಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ವಾಪಸ್ ಮನೆಗೆ ತೆರಳಲು ಹೊರಮಾವಿನಿಂದ ಥಣಿಸಂದ್ರಕ್ಕೆ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದರು. 8.55ರ ಸುಮಾರಿಗೆ ಪಿಕಪ್ ಲೊಕೇಷನ್ ಬಳಿ ಬಂದಿದ್ದ ಆಟೋ ಚಾಲಕನು ಮಹಿಳೆಯನ್ನ ಥಣಿಸಂದ್ರಕ್ಕೆ ಡ್ರಾಪ್ ಮಾಡದೇ ಹೆಬ್ಬಾಳ ಕಡೆ ಹೋಗಲಾರಂಭಿಸಿದ್ದ.
ತಪ್ಪಾದ ದಾರಿಯಲ್ಲಿ ಹೋಗುತ್ತಿರುವುದನ್ನ ಗಮನಿಸಿದ ಮಹಿಳೆ, ಚಾಲಕನಿಗೆ ಹೇಳಿದರೂ ಸಹ ಆತ ಪ್ರತಿಕ್ರಿಯಿಸಿರಲಿರಲಿಲ್ಲ. ಆಟೋ ನಿಲ್ಲಿಸುವಂತೆ ಸೂಚಿಸಿದರೂ ಚಾಲನೆ ಮುಂದುವರಿಸಿದ್ದ. ಇದರಿಂದ ಆತಂಕಗೊಂಡ ಮಹಿಳೆ ಚಲಿಸುತ್ತಿರುವಾಗಲೇ ಆಟೋದಿಂದ ಜಿಗಿದಿದ್ದರು. ಘಟನೆಯ ಕುರಿತು ಮಹಿಳೆಯ ಪತಿ ಅಜರ್ ಖಾನ್ ಎಕ್ಸ್ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಅಜರ್ ನೀಡಿದ ಲಿಖಿತ ದೂರನ್ನ ಆಧರಿಸಿ ತನಿಖೆ ಕೈಗೊಂಡ ಅಮೃತಹಳ್ಳಿ ಠಾಣೆ ಪೊಲೀಸರು, ಆರೋಪಿ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.





