ಬೆಂಗಳೂರು: ಇತ್ತೀಚೆಗೆ ಭಾರೀ ಸದ್ದು ಮಾಡಿರುವ ಕನ್ನಡ ಚಲನ ಚಿತ್ರ ಕಾಂತಾರಕ್ಕೆ ಸಂಕಷ್ಟ ಎದುರಾಗಿದೆ. ಸಿನೆಮಾದಲ್ಲಿರುವ “ವರಹಾ ರೂಪಮ್” ಹಾಡಿನ ಟ್ಯೂನು ಕದ್ದದ್ದೆಂಬ ಆರೋಪಕ್ಕೆ ಪೂರಕವಾಗಿ ಮೂಲ ಹಾಡಿನ ನಿರ್ಮಾಣ ಸಂಸ್ಥೆ ಕಾಂತಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
“ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ʼಕಾಂತಾರʼ ದೊಂದಿಗೆ ಸಂಯೋಜಿತವಾಗಿಲ್ಲ ಎನ್ನುವುದು ನಮ್ಮ ಕೇಳುಗರಿಗೆ ತಿಳಿಸುತ್ತಿದ್ದೇವೆ. ನಮ್ಮ ʼನವರಸಂʼ ಮತ್ತು ʼವರಾಹ ರೂಪಂʼ ನಡುವೆ ಅಲ್ಲಗೆಳೆಯಲಾಗದಷ್ಟು ಹೋಲಿಕೆಗಳು ಇವೆ. ಇದು ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಕೋನದಿಂದ, “ಸ್ಪೂರ್ತಿ” ಮತ್ತು “ಚೌರ್ಯ” ನಡುವಿನ ಗೆರೆಯು ವಿಭಿನ್ನವಾಗಿದೆ ಮತ್ತು ನಿರ್ವಿವಾದವಾಗಿದೆ. ಆದ್ದರಿಂದ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ಬಯಸುತ್ತೇವೆ. ವಿಷಯದ ಮೇಲೆ ನಮಗಿರುವ ಹಕ್ಕುಗಳಿಗೆ ಯಾವುದೇ ಕ್ರೆಡಿಟ್ ನೀಡಲಾಗಿಲ್ಲ ಮತ್ತು ಚಲನಚಿತ್ರದ ಸೃಜನಶೀಲ ತಂಡವು ಹಾಡನ್ನು ಒರಿಜಿನಲ್ ಹಾಡಿನಂತೆ ಪ್ರಚಾರ ಮಾಡಿದೆ.” ಎಂದು ಹೇಳಿದೆ.
ಅಲ್ಲದೆ, ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಅದರ ಕೇಳುಗರನ್ನು ವಿನಂತಿಸಿಕೊಂಡ ಸಂಸ್ಥೆಯು, ನಮ್ಮ ಕೇಳುಗರ ಬೆಂಬಲವನ್ನು ನಾವು ವಿನಂತಿಸುತ್ತೇವೆ ಮತ್ತು ಅದರ ಕುರಿತು ನೀವು ಪ್ರಚಾರ ಮಾಡಬೇಕೆಂದು ನಿಮ್ಮನ್ನು ವಿನಂತಿಸುತ್ತೇವೆ. ಸಂಗೀತದ ನಕಲಿನ ವಿರುದ್ಧ ಕಲಾವಿದರ ಹಕ್ಕುಗಳನ್ನು ರಕ್ಷಿಸುವ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ನಾವು ನಮ್ಮ ಸಹ ಕಲಾವಿದರನ್ನು ವಿನಂತಿಸುತ್ತೇವೆ ಎಂದು ಹೇಳಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ವಿರುದ್ಧವೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಲಹರಿ ಆಡಿಯೋ ಸಂಸ್ಥೆ ತನ್ನಲ್ಲಿ ಕಾಪಿ ರೈಟ್ ಇರುವ ಸಂಗೀತವನ್ನು ಕಿರಿಕ್ ಪಾರ್ಟಿ ಚಿತ್ರತಂಡ ಅನುಮತಿ ಇಲ್ಲದೆ ಬಳಸಿದೆ ಎಂದು ದಾವೆ ಹೂಡಿತ್ತು.
