ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನಿಗೆ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ. ಅರ್ಜುನ್ ಹೊರಕೇರಿ ಅವರಿಗೆ ಚಿಕ್ಕಮಗಳೂರತು ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಬುಧವಾರ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಅರ್ಜುನ್ ಅವರನ್ನು ಇಂದು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಅರ್ಜುನ್ ಅವರಿಗೆ 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.
ಮಹಿಳೆಯೊಬ್ಬರಿಗೆ ಕರೆ ಮಾಡಿ ಅನುಚಿತವಾಗಿ ವರ್ತಿಸಿದ ಆರೋಪ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕಿರುಗುಂಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪುನೀತ್ ಎಂಬ ಹುಡುಗನನ್ನು ಮೇ 10ರಂದು ಗೋಣಿಬೀಡು ಠಾಣೆಗೆ ಕರೆದೊಯ್ದಿದ್ದ ಪಿಎಸ್ಐ ಅರ್ಜುನ್, ಬಟ್ಟೆ ಬಿಚ್ಚಿಸಿ ಮನಬಂದಂತೆ ಹಲ್ಲೆ ನಡೆಸಿದಲ್ಲದೆ ಮೂತ್ರ ಕುಡಿಸಿದru ಎಂದು ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಪುನೀತ್ ಈ ಹಿಂದೆ ವಿವರಿಸಿರುವಂತೆ ಮೇ 10ರಂದು ಬೆಳಿಗ್ಗೆ ಕೆಲವರು ಅವರ ಮನೆ ಬಳಿ ಬಂದು ʼಮಹಿಳೆಗೆ ಫೋನ್ ಮಾಡಿದ್ದೀಯಾ. ನಿನ್ನ ಬಳಿ ಮಾತನಾಡಬೇಕು ಬಾʼ ಎಂದು ಕರೆದಿದ್ದರು. ಅವರು ತುಂಬಾ ಜನ ಇದ್ದುದರಿಂದ ಜೊತೆಯಲ್ಲಿ ತೆರಳಲು ಪುನೀತ್ ನಿರಾಕರಿಸಿದ್ದರು. ಅವರು ಬಳಿಕ ಪುನೀತ್ ಮನೆ ಸುತ್ತುವರೆದಿದ್ದರು. ರಕ್ಷಣೆಗಾಗಿ 112ಕ್ಕೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿ ಗೋಣಿಬೀಡು ಠಾಣೆ ಪಿಎಸ್ಐ ಅರ್ಜುನ್ಗೆ ಕರೆ ಮಾಡಿದರು. ಪಿಎಸ್ಐ ಬಂದು ಯಾವುದೇ ವಿಚಾರಣೆ ಮಾಡದೆ ಜೀಪ್ ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು ಠಾಣೆಗೆ ಕೊರೆದೊಯ್ದರು. ಠಾಣೆಯಲ್ಲಿ ಪುನೀತ್ ಅವರ ಬಟ್ಟೆ ಬಿಚ್ಚಿಸಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ತೊಡೆಯ ಹತ್ತಿರ ಕಬ್ಬಿಣದ ರಾಡ್ ಇರಿಸಿ ಮನಬಂದಂತೆ ಹೊಡೆದು ಎಷ್ಟು ದಿನದಿಂದ ಮಹಿಳೆ ಜೊತೆ ಸಂಬಂಧ ಇತ್ತೆಂದು ಕೇಳಿದರು.
ಆಗ ಪುನೀತ್ “ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್ನಲ್ಲಿ ಮಾತನಾಡಿದ್ದೆ. ಆ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು. ನಂತರ ಫೋನ್ ಮಾಡಿಲ್ಲ ಎಂದೆ” ಎಂಬುದಾಗಿ ತಿಳಿಸಿದ್ದರು. ಇದನ್ನು ಒಪ್ಪದ ಅರ್ಜುನ್ ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ಕುಡಿಸಿದರು ಎಂದು ಆರೋಪಿಸಲಾಗಿತ್ತು.
Also read: ಐಎಫ್ಎಸ್ ಬಚಾವು ಮಾಡಲು ಪಿಎಸ್ಐ ಮೇಲೆ ಪ್ರಬಲ ದಂಡಪ್ರಯೋಗ!
ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಪಿಎಸ್ಐ ಅರ್ಜುನ್ ಅವರನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿದ್ದವು. ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಸಬ್ಇನ್ಸ್ಪೆಕ್ಟರ್ ಅರ್ಜುನ್ ಅವರನ್ನು ಬಂಧಿಸಿ ಜೈಲಿಗೆ ಕಳಿಸುವಂತೆ ಆಗ್ರಹಿಸಿದ್ದರು.
ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಗೋಣಿಬೀಡು ಠಾಣೆಗೆ ಭೇಟಿ ನೀಡಿ ಘಟನೆ ಸಂಬಂಧ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ ಪುನೀತ್ ಅವರ ಜೊತೆಗೂ ಮಾತುಕತೆ ನಡೆಸಿದ್ದರು. ಇತ್ತ ಯುವಕ ಪುನೀತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಮಹಿಳೆ ಕೂಡ ದೂರು ನೀಡಿದ್ದರು. ತನ್ನ ಸಂಸಾರ ಹಾಳಾಗುವುದಕ್ಕೆ ಪುನೀತ್ ಕಾರಣ. ತನ್ನ ಜೊತೆ ಬರುವಂತೆ ಪುನೀತ್ ಒತ್ತಾಯಿಸುತ್ತಿದ್ದರು. ಪುನೀತ್ ಪ್ರಕರಣ ಬಯಲಾದ ಬಳಿಕ ನನ್ನ ವಿಚಾರ ಎಲ್ಲರಿಗೂ ಗೊತ್ತಾಗಿ ನನ್ನ ಮಾನ ಹಾಳಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು. ಮಹಿಳೆ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈ ಹಿಂದೆ ಜಾಮೀನು ನೀಡಿತ್ತು.
ಘಟನೆಯ ಸಂಬಂಧ ಪುನೀತ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪಿಎಸ್ಐ ಅರ್ಜುನ್ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿತ್ತು. ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಪಿಎಸ್ಐ ಅರ್ಜುನ್ ಸಲ್ಲಿಸಿದ್ದ ಅರ್ಜಿಯನ್ನು ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಅದರ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು, ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜುನ್ ಅರ್ಹನಾಗಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಆದೇಶಿಸಿತ್ತು. ಈ ಪ್ರಕರಣದ ಕುರುತು ಇವತ್ತು ಬುಧವಾರ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಅರ್ಜುನ್ ಅವರನ್ನು ಇಂದು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಅರ್ಜುನ್ ಅವರಿಗೆ 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.