ಆರಂಭಿಕ ಮೊಹಮದ್ ರಿಜ್ವಾನ್ ಅವರ ಆಕರ್ಷಕ ಶತಕದ ನೆರವಿನಿಂದ ಪಾಕಿಸ್ತಾನ ತಂಡ 5 ವಿಕೆಟ್ ಗಳಿಂದ ಭಾರತ ವಿರುದ್ಧ ಜಯಭೇರಿ ಬಾರಿಸಿದೆ. ಈ ಮೂಲಕ ಟೂರ್ನಿಯ ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.
ದುಬೈನಲ್ಲಿ ಭಾನುವಾರ ನಡೆದ ಸೂಪರ್ 4 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗೆ 181 ರನ್ ಗಳಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಪಾಕಿಸ್ತಾನ 19.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಪಾಕಿಸ್ತಾನ ತಂಡ ಆರಂಭದಲ್ಲೇ ನಾಯಕ ಬಾಬರ್ ಅಜಮ್ (14) ಬೇಗನೇ ನಿರ್ಗಮಿಸಿದರು. ಆದರೆ ಮತ್ತೊಬ್ಬ ಆರಂಭಿಕ ಮೊಹಮದ್ ರಿಜ್ವಾನ್ 51 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 71 ರನ್ ಬಾರಿಸಿ ಔಟಾದರು.
ಮೂರನೇ ವಿಕೆಟ್ ಗೆ ರಿಜ್ವಾನ್ ಮತ್ತು ಮೊಹಮದ್ ನವಾಜ್ 73 ರನ್ ಜೊತೆಯಾಟ ಮೂಲಕ ತಂಡವನ್ನು ಆಧರಿಸಿದರು. ಬಿರುಸಿನ ಆಟವಾಡಿದ ನವಾಜ್ 20 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 42 ರನ್ ಚಚ್ಚಿದರು.
ಕಿಂಗ್ ಕೊಹ್ಲಿ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು.
ನಾಯಕ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 5.1 ಓವರ್ ನಲ್ಲಿ 54 ರನ್ ಜೊತೆಯಾಟದ ಮೂಲಕ ಸ್ಫೋಟಕ ಆರಂಭ ನೀಡಿದರು. ಆದರೆ ಇವರಿಬ್ಬರು ಅಷ್ಟೇ ಬೇಗನೇ ನಿರ್ಗಮಿಸಿದರು. ರೋಹಿತ್ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 28 ರನ್ ಗಳಿಸಿ ಔಟಾದರೆ, ರಾಹುಲ್ 20 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 28 ರನ್ ಬಾರಿಸಿ ಔಟಾದರು.
ನಂತರ ಪಾಕಿಸ್ತಾನದ ಬೌಲರ್ ಗಳು ತಿರುಗೇಟು ನೀಡಿದ್ದರಿಂದ ಭಾರತ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಸೂರ್ಯಕುಮಾರ್ ಯಾದವ್ (13), ರಿಷಭ್ ಪಂತ್ (14), ಹಾರ್ದಿಕ್ ಪಾಂಡ್ಯ (0) ಮತ್ತು ದೀಪಕ್ ಹೂಡಾ (16) ಸಾಧಾರಣ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ನೆಲಕಚ್ಚಿ ಆಡಿದ ವಿರಾಟ್ ಕೊಹ್ಲಿ ಸಿಕ್ಸರ್ ಮೂಲಕ ಅರ್ಧಶತಕ ಪೂರೈಸಿದರು. ಕೊಹ್ಲಿ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ ಅರ್ಧಶತಕ ಗಳಿಸಿದರು. ಕೊಹ್ಲಿ ಅಂತಿಮ ಓವರ್ ನಲ್ಲಿ ಇಲ್ಲದ ರನ್ ಕದಿಯುವ ಯತ್ನದಲ್ಲಿ ರನೌಟ್ ಆಗುವ ಮುನ್ನ 44 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 60 ರನ್ ಬಾರಿಸಿದರು.