ಮೂಲ : ಫೈಜನ್ ಮುಸ್ತಫಾ ( ದ ಹಿಂದೂ 30-6-21)
ಅನುವಾದ : ನಾ ದಿವಾಕರ
ಅಪರಾಧ ನ್ಯಾಯ ವ್ಯವಸ್ಥೆ ಪ್ರಭುತ್ವದ ನಿಯಂತ್ರಣದಲ್ಲಿರುವ ಒಂದು ಪ್ರಬಲ ಅಸ್ತ್ರ. ಹಾಗೆಯೇ ಅದು ಒಂದು ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಮಾಪಕವೂ ಹೌದು. ಅತ್ಯವಶ್ಯ ಎನಿಸದ ಯಾವುದೇ ಶಿಕ್ಷೆಯಾದರೂ ಅದು ನಿರಂಕುಶತೆಯ ಲಕ್ಷಣ ಎನ್ನುತ್ತಾರೆ ಫ್ರಾನ್ಸ್‍ನ ನ್ಯಾಯಶಾಸ್ತ್ರಜ್ಞ ಮಾಂಟೆಸ್ಕ್. ಅಪರಾಧ ನಿಯಂತ್ರಣ ಕಾನೂನುಗಳನ್ನು ಕೊನೆಯ ಅಸ್ತ್ರವನ್ನಾಗಿ ಮಾತ್ರವೇ ಬಳಸಬೇಕು ಮತ್ತು ಅತ್ಯಂತ ನಿಂದನೀಯ ಅಪರಾಧಗಳಲ್ಲಿ ಮಾತ್ರವೇ ಬಳಸಬೇಕು ಎನ್ನುವುದು ಒಪ್ಪಿತ ನಿಯಮ. ದುರದೃಷ್ಟಕರ ಸಂಗತಿ ಎಂದರೆ ಅಪರಾಧಗಳು ಸರ್ಕಾರದ ಆಡಳಿತ ನೀತಿಗಳಲ್ಲೇ ಉಗಮಿಸುವುದರಿಂದ ಅಪರಾಧ ನ್ಯಾಯವೂ ಸಹ ಸರ್ಕಾರದ ಶಕ್ತಿ ಪ್ರದರ್ಶನವಾಗುವುದೇ ಹೊರತು ನ್ಯಾಯದ ಸಂಕೇತವಾಗುವುದಿಲ್ಲ.
ನಾಗರಿಕ ಸಮಾಜದ ಕಾರ್ಯಕರ್ತರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು, ಪ್ರತಿಭಟನಕಾರರು ಎಲ್ಲರ ವಿರುದ್ಧ ಭಯೋತ್ಪಾದನೆಯ ಆಪಾದನೆಯನ್ನು ಹೊರಿಸಲಾಗುವುದೇ ? ಪ್ರತಿಯೊಬ್ಬ ಅಪರಾಧಿಯನ್ನೂ ಭಯೋತ್ಪಾದಕ ಎಂದು ಪರಿಗಣಿಸಲಾಗುವುದೇ ? ಪ್ರತಿಯೊಂದು ಹಿಂಸಾತ್ಮಕ ಘಟನೆಯೂ ಭಯೋತ್ಪಾದಕ ಚಟುವಟಿಕೆ ಎಂದು ಭಾವಿಸಲಾಗುವುದೇ ? ಸಾಧಾರಣ ಅಪರಾಧಿಗಳನ್ನೂ ಈ ಕಾನೂನುಗಳ ವ್ಯಾಪ್ತಿಯಲ್ಲೇ ವಿಚಾರಣೆಗೊಳಪಡಿಸಿ ದಂಡಿಸುವ ಉದ್ದೇಶದಿಂದಲೇ ಟಾಡಾ ಮತ್ತು ಯುಎಪಿಎ ಕಾಯ್ದೆಗಳನ್ನು ಸಂಸತ್ತಿನಲ್ಲಿ ಜಾರಿಗೊಳಿಸಲಾಗಿದೆಯೇ ? (ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕಿದೆ)
ದುರುಪಯೋಗದ ನಿದರ್ಶನಗಳು
2015 ರಿಂದ 19ರವರೆಗಿನ ನಾಲ್ಕು ವರ್ಷಗಳಲ್ಲಿ 7840 ಆರೋಪಿಗಳು ಯುಎಪಿಎ ಕರಾಳ ಶಾಸನದಡಿ ಬಂಧನಕ್ಕೊಳಗಾಗಿದ್ದಾರೆ. ಆದರೆ ವಿಚಾರಣಾ ನ್ಯಾಯಾಲಯಗಳಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ ಕೇವಲ 155 ಮಾತ್ರ. ಇವರಲ್ಲಿ ಅನೇಕರು ಉನ್ನತ ನ್ಯಾಯಾಲಯಗಳಲ್ಲಿ ಬಿಡುಗಡೆ ಹೊಂದಿರುತ್ತಾರೆ. ಕಾಂಗ್ರೆಸ್ ಸರ್ಕಾರಗಳೂ ಸಹ, 1985ರಲ್ಲಿ ಜಾರಿಗೊಳಿಸಿ 1987ರಲ್ಲಿ ತಿದ್ದುಪಡಿ ಮಾಡಲಾದ ಟಾಡಾ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿವೆ. 1994ರವರೆಗೆ 67 ಸಾವಿರ ಆರೋಪಿಗಳನ್ನು ಟಾಡಾ ಕಾಯ್ದೆಯಡಿ ಬಂಧಿಸಲಾಗಿದ್ದರೂ ಕೇವಲ 725 ಆರೋಪಿಗಳು, ಪೊಲೀಸ್ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡ ನಂತರವೂ ಶಿಕ್ಷೆಗೊಳಗಾಗಿದ್ದರು. 1994ರ ಕರ್ತಾರ್ ಸಿಂಗ್ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ “ಆರೋಪಿತ ವ್ಯಕ್ತಿಗಳಿಗೆ ಜಾಮೀನು ದೊರೆಯದಂತೆ ಮಾಡುವ ಉದ್ದೇಶದಿಂದಲೇ ಪ್ರಾಸಿಕ್ಯೂಷನ್ ಕಡೆಯಿಂದ ಟಾಡಾ ಕಾಯ್ದೆಯ ನಿಯಮಗಳನ್ನು ಅನಗತ್ಯವಾಗಿ ಬಳಸಲಾಗುತ್ತಿದೆ ” ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಈ ರೀತಿ ಟಾಡಾ ನಿಯಮಗಳನ್ನು ಬಳಸುವುದು ಕಾಯ್ದೆಯ ದುರುಪಯೋಗವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಟಾಡಾ ಕಾಯ್ದೆಗಿಂತಲೂ ಯುಎಪಿಎ ಕಾಯ್ದೆ ಇನ್ನೂ ಹೆಚ್ಚು ಬಳಕೆಯಾಗಿದೆ. ಯುಎಪಿಎ ಶಾಸನವನ್ನು , ಟಾಡಾ ಕಾಯ್ದೆಯಂತೆಯೇ ದುರ್ಬಳಕೆ ಮಾಡಲಾಗುತ್ತಿದೆ. ಜೂನ್ 21ರಂದು ದೆಹಲಿಯ ಹೈಕೋರ್ಟ್ ಆಸಿಫ್ ಇಕ್ಬಾಲ್ ತನ್ಹಾ ಮೊಕದ್ದಮೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು ಮಾಡಿರುವ ಸಂದರ್ಭದಲ್ಲಿ ನೀಡಿರುವ 133 ಪುಟಗಳ ತೀರ್ಪು ದೆಹಲಿಯ ಪೊಲೀಸರ ಪಾಲಿಗೆ ಸಿಡಿಲು ಬಡಿದಂತಾಗಿದೆ. ಈ ವಿವಾದದ ಕೇಂದ್ರ ಬಿಂದು ಎಂದರೆ ಭಯೋತ್ಪಾದನೆ ಎಂಬ ಪದದ ವ್ಯಾಖ್ಯಾನ ಮತ್ತು ಈ ನಿಟ್ಟಿನಲ್ಲಿ ಯುಎಪಿಎ ಕಾಯ್ದೆಯನ್ನು ನ್ಯಾಯಯುತವಾಗಿ ಬಳಸಬಹುದು ಎನ್ನುವ ಆಲೋಚನೆ.
ಸ್ಪಷ್ಟ ನಿರೂಪಣೆ ಇಲ್ಲದ ಪದ
ಜಾಗತಿಕವಾಗಿ ಭಯೋತ್ಪಾದನೆಯನ್ನು ನೂರಾರು ರೀತಿಯಲ್ಲಿ ವಿಶದೀಕರಿಸಲಾಗಿದೆ. ಆದರೂ ಭಾರತದಲ್ಲಾಗಲೀ, ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಭಯೋತ್ಪಾದನೆಯ ಸಾರ್ವತ್ರಿಕ ಸ್ವರೂಪವನ್ನು ವಿಶದೀಕರಿಸಲಾಗಿಲ್ಲ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಭಯೋತ್ಪಾದನೆ ಎಂಬ ಪದಬಳಕೆಯನ್ನು ಸ್ಪಷ್ಟವಾಗಿ ವಿಶದೀಕರಿಸಲೆಂದೇ ಒಂದು ಸಮಿತಿಯನ್ನೂ ನೇಮಿಸಿದೆ. 50 ವರ್ಷಗಳಾದರೂ ಇದು ಸಾಧ್ಯವಾಗಿಲ್ಲ. ವಿದೇಶೀ ಆಕ್ರಮಣದ ವಿರುದ್ಧ ಹೋರಾಟ ಮಾಡುವುದನ್ನು ಈ ಪದದ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ. ಏಕೆಂದರೆ ಇಂದು ಭಯೋತ್ಪಾದಕರಾಗಿದ್ದವರು ನಾಳೆ ಸ್ವಾತಂತ್ರ್ಯ ಸಂಗ್ರಾಮಿಗಳಾಗುತ್ತಾರೆ. ಇದೇ ಗೊಂದಲವನ್ನು ಟಾಡಾ ಮತ್ತು ಯುಎಪಿಎ ಕಾಯ್ದೆಗಳಲ್ಲೂ ಕಾಣಬಹುದು. ಯುಎಪಿಎ ಕಾಯ್ದೆಯ ಸೆಕ್ಷನ್ 15ರಲ್ಲಿ ಭಯೋತ್ಪಾದನೆಯನ್ನು ಅಸ್ಪಷ್ಟವಾಗಿ ವಿಶದೀಕರಿಸಲಾಗಿದೆ. “ ಭೀತಿ ಸೃಷ್ಟಿಸುವ ಯಾವುದೇ ಚಟುವಟಿಕೆ ಅಥವಾ ಭಾರತದ ಏಕತೆ, ಅಖಂಡತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯ ಉಂಟುಮಾಡುವಂತಹ ಯಾವುದೇ ಚಟುವಟಿಕೆಗಳು, ಪ್ರಜೆಗಳಲ್ಲಿ ಭೀತಿಯನ್ನು ಉಂಟುಮಾಡಿದರೆ ಅಥವಾ ಭೀತಿ ಉಂಟುಮಾಡುವ ಉದ್ದೇಶವನ್ನು ಹೊಂದಿದ್ದರೆ,,,,” ಈ ರೀತಿ ಕಾಯ್ದೆಯಲ್ಲಿ ಭಯೋತ್ಪಾದನೆಯನ್ನು ವ್ಯಾಖ್ಯಾನಿಸಲಾಗಿದೆ.
ಈ ಭಯೋತ್ಪಾದಕ ಕೃತ್ಯವನ್ನು ಹೇಗೆ ಎಸಗಲಾಗುತ್ತದೆ ಎನ್ನುವುದನ್ನು ಯುಎಪಿಎ ಹೀಗೆ ಬಣ್ಣಿಸುತ್ತದೆ. “ ಬಾಂಬ್, ಡೈನಾಮೈಟ್ ಅಥವಾ ಇನ್ನಿತರ ಯಾವುದೇ ಸ್ಪೋಟಕ ವಸ್ತುಗಳನ್ನು ಬಳಸುವುದರ ಮೂಲಕ,,,ಅಥವಾ ಸುಲಭವಾಗಿ ಹೊತ್ತಿಕೊಳ್ಳುವ ಪದಾರ್ಥಗಳನ್ನು, ಬಂದೂಕು ಇತರ ಅಸ್ತ್ರಗಳನ್ನು ಬಳಸುವ ಮೂಲಕ, ವಿಷಪೂರಿತ ಅನಿಲವನ್ನು ಉಪಯೋಗಿಸುವ ಮೂಲಕ, ಅಥವಾ ಸಾವಿಗೀಡುಮಾಡುವ-ಗಾಯಗೊಳಿಸುವ ಮತ್ತಾವುದೇ ಉದ್ದೇಶವನ್ನು ಹೊಂದಿದ್ದಲ್ಲಿ ,,,, ”. ಇಲ್ಲಿ ‘ ಮತ್ತಾವುದೇ ಉದ್ದೇಶ ’ಎನ್ನುವ ಪದವನ್ನು ಸ್ಪಷ್ಟವಾಗಿ ನಿಷ್ಕರ್ಷೆ ಮಾಡುವುದು ಅಸಾಧ್ಯವೇ ಸರಿ. ಯಾವುದೇ ಶಾಸನದಲ್ಲಿ ಈ ರೀತಿಯ ಸಾಮಾನ್ಯ ಪದಗಳನ್ನು ನಿರ್ದಿಷ್ಟ ಪದಗಳ ನಂತರ ಬಳಸಲಾಗಿದ್ದರೆ, ಈ ಸಾಮಾನ್ಯ ಪದಗಳನ್ನು ನಿರ್ದಿಷ್ಟ ಪದಗಳ ಚೌಕಟ್ಟಿನಲ್ಲೇ ನಿಷ್ಕರ್ಷೆ ಮಾಡಬೇಕಾಗುತ್ತದೆ. ಹಾಗಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗಳನ್ನು ಈ ರೀತಿ ವ್ಯಾಖ್ಯಾನಿಸಲಾಗುವುದಿಲ್ಲ.
2013ರ ಯಾಕೂಬ್ ರಜಾಕ್ ಮೆಮನ್ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಈ ನಿಟ್ಟಿನಲ್ಲಿ ಸ್ಪಷ್ಟೀಕರಣವನ್ನೂ ನೀಡಿದೆ. “ ಭಯೋತ್ಪಾದಕ ಕೃತ್ಯಗಳು ಎಂದರೆ ಹತ್ಯೆ ಮಾಡುವುದು, ಅಪಹರಣ ಮಾಡುವುದು, ವಿಮಾನ ಅಪಹರಿಸುವುದು, ಕಾರ್ ಬಾಂಬ್ ಸ್ಫೋಟಿಸುವುದು, ಸ್ಫೋಟ ಉಂಟುಮಾಡುವುದು, ಅಪಾಯಕಾರಿ ವಸ್ತುಗಳ ರವಾನೆ ಮಾಡುವುದು, ರಾಸಾಯನಿಕ ಅಥವಾ ಜೈವಿಕ, ಪರಮಾಣು ಅಸ್ತ್ರಗಳನ್ನು ರವಾನಿಸುವುದು ಇತ್ಯಾದಿ. ಮೂವರು ವಿದ್ಯಾರ್ಥಿ ಕಾರ್ಯಕರ್ತರು ಈ ರೀತಿಯ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ, ಹಾಗಾಗಿ ಇವರನ್ನು ಭಯೋತ್ಪಾದಕ ಕೃತ್ಯ ಎಸಗಿರುವ ಆರೋಪದ ಮೇಲೆ ಶಿಕ್ಷೆಗೊಳಪಡಿಸಲು ಸಾಧ್ಯವಿಲ್ಲ ” ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಅನೂಪ್ ಜೈರಾಮ್ ಬಂಭಾನಿ ಆರೋಪಿಗಳಿಗೆ ಜಾಮೀನು ನೀಡಿದ್ದೇ ಅಲ್ಲದೆ, ದೆಹಲಿ ಪೊಲೀಸರಿಗೆ ಭಯೋತ್ಪಾದಕ ಕೃತ್ಯದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನೂ ನೀಡಿದ್ದರು.
1994ರ ಹಿತೇಂದ್ರ ವಿಷ್ಣು ಥಾಕುರ್ ಮೊಕದ್ದಮೆಯಲ್ಲೂ ಸುಪ್ರೀಂಕೋರ್ಟ್ ಕೆಲವು ಸ್ಪಷ್ಟೀಕರಣವನ್ನು ನೀಡಿತ್ತು. “ ಭಯೋತ್ಪಾದನೆ ಎಂದರೆ ಹಿಂಸಾಚಾರದಲ್ಲಿ ತೊಡಗುವುದು ಮತ್ತು ಈ ಹಿಂಸಾಚಾರದಿಂದ ಹಲ್ಲೆಗೊಳಗಾದ ವ್ಯಕ್ತಿಗೆ ದೈಹಿಕ ಮತ್ತು ಮಾನಸಿಕ ಹಾನಿ ಉಂಟುಮಾಡುವುದು ಮತ್ತು ಸಮಾಜದ ಮೇಲೆ ದೀರ್ಘ ಕಾಲದ ಪರಿಣಾಮ ಉಂಟುಮಾಡುವುದು ,,, ಸರ್ಕಾರವನ್ನು ಬೆದರಿಸುವ ಉದ್ದೇಶವನ್ನು ಹೊಂದಿದ್ದು ಸಮಾಜದ ಸೌಹಾರ್ದತೆಗೆ ಭಂಗ ಉಂಟುಮಾಡಿ, ಜನರಲ್ಲಿ ಭೀತಿ ಉಂಟುಮಾಡುವುದು,,,”, ಹೀಗೆ ಸುಪ್ರೀಂಕೋರ್ಟ್ ಭಯೋತ್ಪಾದನೆಯನ್ನು ವ್ಯಾಖ್ಯಾನ ಮಾಡಿತ್ತು. ಇತರ ಹಿಂಸಾಚಾರಗಳಿಗೂ, ಭಯೋತ್ಪಾದಕ ಕೃತ್ಯಕ್ಕೂ ಇರುವ ವ್ಯತ್ಯಾಸವನ್ನು, ವ್ಯವಸ್ಥಿತವಾಗಿ ಭೀತಿಗೊಳಪಡಿಸಿ ಹೆದರಿಸುವ ತಂತ್ರವನ್ನು ಅನುಸರಿಸುವುದರಲ್ಲಿ ಗುರುತಿಸಬಹುದು. 1994ರ ಕರ್ತಾರ್ ಸಿಂಗ್ ಮೊಕದ್ದಮೆಯಲ್ಲೂ ಸಹ ಸುಪ್ರೀಂಕೋರ್ಟ್ “ ಯಾವುದೇ ಒಂದು ನಿರ್ದಿಷ್ಟ ಪ್ರದೇಶದ ಜನಸಾಮಾನ್ಯರ ಜೀವನದಲ್ಲಿ ಪ್ರಕ್ಷುಬ್ಧತೆ ಉಂಟುಮಾಡಿದರೂ ಸಹ ಅದನ್ನು ಭಯೋತ್ಪಾದಕ ಕೃತ್ಯ ಎನ್ನಲಾಗುವುದಿಲ್ಲ ,,,” ಎಂದು ಹೇಳಿತ್ತು. ಈ ವ್ಯಾಖ್ಯಾನವನ್ನೇ ಅನುಸರಿಸಿದರೆ, ದೆಹಲಿಯಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದ ಘಟನೆಗಳನ್ನೂ ಭಯೋತ್ಪಾದಕ ಚಟುವಟಿಕೆ ಎಂದು ನಿರ್ಧರಿಸಲಾಗುವುದಿಲ್ಲ.
ರಾಜೀವ್ ಗಾಂಧಿ ಹತ್ಯೆಯ ಪ್ರಕರಣದಲ್ಲೂ ಸುಪ್ರೀಂಕೋರ್ಟ್, ಆರೋಪಿಗಳು ಸರ್ಕಾರವನ್ನು ಬೆದರಿಸುವ ಅಥವಾ ಜನರ ನಡುವೆ ಭೀತಿ ಉಂಟುಮಾಡುವ ಉದ್ದೇಶವನ್ನು ಹೊಂದಿರಲಿಲ್ಲವಾಗಿ, ರಾಜೀವ್ ಗಾಂಧಿ ಮತ್ತು ಇತರ ಹದಿನೈದು ಜನರ ಹತ್ಯೆಯ ಕೃತ್ಯವನ್ನು ಟಾಡಾ ಕಾಯ್ದೆಯ ಸೆಕ್ಷನ್ 3ರ ಅನ್ವಯ ಭಯೋತ್ಪಾದಕ ಕೃತ್ಯ ಎಂದು ನಿಷ್ಕರ್ಷೆ ಮಾಡಲಾಗುವುದಿಲ್ಲ ಎಂದು ಹೇಳಿತ್ತು. 1966ರ ರಾಮಮನೋಹರ್ ಲೋಹಿಯಾ ಮೊಕದ್ದಮೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ‘ ಶಾಸನಬದ್ಧ ಸುವ್ಯವಸ್ಥೆ ’, ‘ ಸಾರ್ವಜನಿಕ ಶಿಸ್ತು ‘ ಮತ್ತು ‘ ದೇಶದ ಸುಭದ್ರತೆ ’ಈ ಮೂರು ಪದಗಳನ್ನು ಸ್ಪಷ್ಟವಾಗಿ ವಿಶದೀಕರಿಸಿದೆ. ಶಾಸನಬದ್ಧ ವ್ಯವಸ್ಥೆ ಎಂದರೆ ಅದರು ಸಾರ್ವಜನಿಕ ಶಿಸ್ತು ಮತ್ತು ದೇಶದ ಸುಭದ್ರತೆ ಎರಡನ್ನೂ ಒಳಗೊಳ್ಳುತ್ತದೆ. ಹಾಗಾಗಿ ಕೆಲವು ಚಟುವಟಿಕೆಗಳು ಶಾಸನಬದ್ಧ ಶಿಸ್ತಿನ ಉಲ್ಲಂಘನೆಯಾಗಿದ್ದರೂ ಅದು ಸಾರ್ವಜನಿಕ ಶಿಸ್ತು ಭಂಗ ಆಗದೆ ಇರಬಹುದು. ಹಾಗೆಯೇ, ಸಾರ್ವಜನಿಕ ಶಿಸ್ತು ಭಂಗ ಮಾಡುವ ಚಟುವಟಿಕೆಗಳು ದೇಶದ ಸುಭದ್ರತೆಗೆ ಭಂಗ ಉಂಟುಮಾಡದೆಯೂ ಇರಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಯುಎಪಿಎ ಕಾಯ್ದೆಯ ಬಹಳಷ್ಟು ಪ್ರಕರಣಗಳಲ್ಲಿ ಪೊಲೀಸರು ಈ ವ್ಯತ್ಯಾಸವನ್ನು ಗ್ರಹಿಸದೆ ಇರುವುದರಿಂದ ಸಣ್ಣ ಪ್ರಮಾಣದ ಕಾನೂನು ಸುವ್ಯವಸ್ಥೆಯ ಪ್ರಕರಣಗಳಲ್ಲೂ ಅನಗತ್ಯವಾಗಿ ಆರೋಪಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸುತ್ತಾರೆ.
2003ರಲ್ಲಿ ಪಿಯುಸಿಎಲ್ ಪೋಟಾ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ‘ ನಮಗೆ ಪ್ರಿಯವಾದಂತಹ ಸಾಂವಿಧಾನಿಕ ತತ್ವಗಳನ್ನು ನಾಶಪಡಿಸುವ ’ ಅಥವಾ ‘ ದೇಶದ ಸೆಕ್ಯುಲರ್ ತತ್ವಗಳನ್ನು ನಾಶಪಡಿಸುವ ’ ಅಥವಾ ‘ ಪೂರ್ವಗ್ರಹ ಮತ್ತು ಅಂಧಾಭಿಮಾನವನ್ನು ಪ್ರಚೋದಿಸುವ ’ ಕೃತ್ಯಗಳನ್ನು ಭಯೋತ್ಪಾದಕ ಎಂದು ಪರಿಗಣಿಸಬಹುದು ಎಂದು ಹೇಳುವ ಮೂಲಕ ಮತ್ತೊಂದು ಆಯಾಮವನ್ನು ನೀಡಿತ್ತು. ದಂಡಾಪರಾಧ ಕಾನೂನು ನಿಯಮಗಳನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ, ಕ್ರಿಮಿನಲ್ ಕಾನೂನಿನ ನಿಯಮಗಳನ್ನು ಆದಷ್ಟೂ ಸಂಕುಚಿತ ರೀತಿಯಲ್ಲಿ ವಿಶದೀಕರಿಸಬೇಕು ಎಂದು ನ್ಯಾಯಮೂರ್ತಿ ಬಂಭಾನಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯ ನಿರ್ವಹಣೆಯಲ್ಲಿ ಇದನ್ನೇ ಪ್ರಧಾನವಾಗಿ ಪರಿಗಣಿಸುವ ಮೂಲಕ ಪ್ರಜೆಗಳ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರ ಹಕ್ಕುಗಳನ್ನು ಮೊಟಕುಗೊಳಿಸಿ, ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಲಾಗುತ್ತಿದೆ.
1982ರ ಎ ಕೆ ರಾಯ್ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯ ಪ್ರಶ್ನೆಯನ್ನು ಕುರಿತು ನ್ಯಾ ಬಂಭಾನಿ “ ಒಬ್ಬ ವ್ಯಕ್ತಿ ಸಾಂವಿಧಾನಿಕ ಉದ್ದೇಶಗಳ ವ್ಯಾಪ್ತಿಗೊಳಪಡದಿದ್ದರೆ ಅಂಥವರನ್ನು ದಂಡನೆಯ ನಿಯಮಗಳಿಗೆ ಒಳಪಡಿಸಕೂಡಿಸುವ ಮುನ್ನ ಗಂಭೀರವಾಗಿ ಪರಿಶೀಲಿಸಬೇಕು ” ಎಂದು ಹೇಳಿದ್ದರು. ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಶಾಸನಗಳನ್ನು ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಅನ್ವಯಿಸುವಂತೆ ಬಳಸಬೇಕು ಎಂದು ಹೇಳಿದ್ದರು. 1994ರ ಸಂಜಯ್ ದತ್ ಪ್ರಕರಣದಲ್ಲೂ ಸಹ ನ್ಯಾಯಾಲಯವು, ಕಾನೂನು ರೀತ್ಯಾ ಶಿಕ್ಷೆಗೊಳಪಡದ ಆರೋಪಿಗಳ ವಿರುದ್ಧ ದಂಡಾಪರಾಧ ನಿಯಮಗಳನ್ನು ಬಳಸಕೂಡದು ಎಂದು ಹೇಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹೂಡಲಾಗಿದ್ದ 120 ಮೊಕದ್ದಮೆಗಳ ಪೈಕಿ 94 ಮೊಕದ್ದಮೆಗಳನ್ನು ಹೈಕೋರ್ಟ್ ವಜಾ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.
ಈ ನಿಟ್ಟಿನಲ್ಲೇ, ಯುಎಪಿಎ ಕಾಯ್ದೆಯಲ್ಲಿ ‘ ಭಯೋತ್ಪಾದಕ ಕೃತ್ಯ ’ವನ್ನು ವ್ಯಾಪಕ ನೆಲೆಯಲ್ಲಿ, ಅಸ್ಪಷ್ಟ ರೀತಿಯಲ್ಲಿ ವಿಶದೀಕರಿಸಿರುವುದರಿಂದ ಸಾಧಾರಣ ಅಪರಾಧಗಳಿಗೆ ಇದನ್ನು ಅನುದ್ದಿಷ್ಟವಾಗಿ ಅನ್ವಯಿಸುವಂತಿಲ್ಲ, ಆರೋಪಿಯ ಕೃತ್ಯ ಭಯೋತ್ಪಾದನೆಯ ಲಕ್ಷಣಗಳನ್ನು ಹೊಂದಿರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಹಾಗೆ ನೋಡಿದರೆ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ಭಯೋತ್ಪಾದನೆಯ ಕಾಯ್ದೆಯ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ. ಭಯೋತ್ಪಾದನೆಯನ್ನು ವಿಶದೀಕರಿಸುವುದು ಕಷ್ಟವೇ ಆಗಿದ್ದರೂ, ಭಯೋತ್ಪಾದಕ ಕೃತ್ಯ ಎಲ್ಲಿ ಸಂಭವಿಸಿದೆ ಎನ್ನುವುದು ಸಾಮಾನ್ಯರಿಗೂ ಅರ್ಥವಾಗುವಂತಹ ಅಂಶ.
ಇನ್ನು ಮುಂದಾದರೂ ನಮ್ಮ ಪೊಲೀಸ್ ವ್ಯವಸ್ಥೆಯು ಆರೋಪಿಗಳ ವಿರುದ್ಧ ಕರಾಳ ಶಾಸನಗಳಾದ ಯುಎಪಿಎ, ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಯಮಗಳನ್ನು ಹೇರುವ ಮುನ್ನ ಜಾಗ್ರತೆ ವಹಿಸಬೇಕಿದೆ. ವಾಸ್ತವದ ಸಂಗತಿ ಎಂದರೆ ಯಾವುದೇ ರೀತಿಯ ಭಯೋತ್ಪಾದನಾ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದರೂ ಭಯೋತ್ಪಾದನೆ ಕೊನೆಗೊಳ್ಳುವುದಿಲ್ಲ. ಒಂದು ವಿನಯಶೀಲ ಪ್ರಭುತ್ವವನ್ನೂ ಸಹ ಕರಾಳ ಶಾಸನಗಳನ್ನು ಬಳಸುವಂತೆ ಮಾಡುವ ತಂತ್ರವನ್ನು ಭಯೋತ್ಪಾದಕರು ಬಳಸುವುದನ್ನೂ ನೋಡಿದ್ದೇವೆ. ಈ ಬಲೆಗೆ ನಾವು ಬೀಳಕೂಡದು. ನಿಜವಾದ ಮತ್ತು ನೇರವಾಗಿ ಗೋಚರಿಸುವಂತಹ ಅನ್ಯಾಯಕ್ಕೊಳಗಾದವರಲ್ಲಿ ಮಾತ್ರವೇ ತೀವ್ರಗಾಮಿ ಧೋರಣೆ ಸೃಷ್ಟಿಯಾಗುತ್ತದೆ. ಭಯೋತ್ಪಾದನೆಯನ್ನು ಹೋಗಲಾಡಿಸಲು ಈ ಅನ್ಯಾಯಗಳನ್ನು ಕೊನೆಗೊಳಿಸೋಣ. ಒಂದು ನ್ಯಾಯಯುತವಾದ, ಸಮಾನತೆಯುಳ್ಳ ಮತ್ತು ಶೋಷಣೆ ಮುಕ್ತ ಸಮಾಜವನ್ನು ರೂಪಿಸುವುದರಿಂದಲೇ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ.
( ಲೇಖಕರಾದ ಫೈಜನ್ ಮುಸ್ತಫ ಹೈದರಾಬಾದ್ ನ ಎನ್ಎಎಲ್ಎಸ್ಎಆರ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ.)