ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಪ್ರವರ್ಧಮಾನಕ್ಕೆ ಬಂದ ನಂತರ ಗ್ರಾಹಕರ ಶಾಪಿಂಗ್ ಬೆರಳ ತುದಿಯಲ್ಲೇ ಇರುವಂತಾಗಿದೆ. Uberಗಳಂತಹ ಪ್ರಯಾಣ ಸೇವೆ ಒದಗಿಸುವ ಸಂಸ್ಥೆಗಳಾಗಿರಬಹುದು, ಅಮೆಜಾನ್‌ನಂತಹ ಬೃಹತ್ ಆನ್‌ಲೈನ್ ಶಾಪಿಂಗ್ ಸೆಂಟರ್‌ಗಳೇ ಇರಬಹುದು ಅಥವಾ ಜೊಮ್ಯಾಟೋ, ಸ್ವಿಗ್ಗಿಯಂತಹ ಆಹಾರ ವಸ್ತುಗಳನ್ನು ಮನೆಗೆ ತಲುಪಿಸುವ ಸಂಸ್ಥೆಗಳೇ ಇರಬಹುದು, ಗ್ರಾಹಕರ ಸಂತೃಪ್ತಿ, ಅನುಕೂಲಗಳನ್ನೇ ಗುರಿಯಾಗಿಸಿ ಕಾರ್ಯನಿರ್ವಹಿಸುತ್ತಿವೆ.
ಆದರೆ ಇಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಬದುಕು ಅಷ್ಟು ಸುಲಭವಲ್ಲ. ಬೇಕಾದಾಗ ಮಾತ್ರ ಕೆಲಸ ಮಾಡುವ ಅನುಕೂಲ ಅವರಿಗೆ ಇದ್ದರೂ ಸರಿಯಾದ ವೇತನ, ಹಕ್ಕುಗಳು ಮತ್ತು ಬೇರೆ ಕೆಲಸಗಾರರಿಗೆ ಇರುವ ಅನುಕೂಲಗಳು ಸಿಗುವುದಿಲ್ಲ . ತಮ್ಮ ಕೆಲಸಗಾರರನ್ನು ‘ಸ್ವಯಂ ಉದ್ಯೋಗಿ ಗುತ್ತಿಗೆದಾರರು’ ಎಂದು ವರ್ಗೀಕರಿಸುವ ಮೂಲಕ ಉದ್ಯೋಗದಾತರು ಅವರ ಜವಾಬ್ದಾರಿಗಳಿಂದ ಜಾಣತನದಿಂದ ನುಣುಚಿಕೊಳ್ಳುವ ಅವಕಾಶವಿದೆ .
ಈ ಕೆಲಸಗಾರರಿಗೆ ಪಿಂಚಣಿ, ಅನಾರೋಗ್ಯ ವೇತನ, ರಜೆಯ ಹಕ್ಕು ಅಥವಾ ಹೆರಿಗೆ ರಜೆ ದೊರೆಯುವುದಿಲ್ಲ. ಈ ಕೆಲಸಗಾರರಿಗೆ ಗ್ರಾಹಕರು ಕಂಪೆನಿಗೆ ನೀಡುವ ಆರ್ಡರ್‌ನ್ನು ಅವಲಂಬಿಸಿ ಕಮಿಷನ್ ಪಾವತಿಸಲಾಗುತ್ತದೆ. ಅಂದರೆ ಅನೇಕ ಜನರು ಗಂಟೆಯ ಕನಿಷ್ಠ ವೇತನಕ್ಕಿಂತ ಕಡಿಮೆ ಗಳಿಸುತ್ತಿದ್ದಾರೆ ಮತ್ತು ಆರ್ಥಿಕ ಭದ್ರತೆ ಇಲ್ಲವೇ ಇಲ್ಲ ಅನ್ನಬಹುದು.

ಒಟ್ಟಾರೆಯಾಗಿ ಅಗತ್ಯವಾದ ಹಣಕಾಸಿನ ಖಾತರಿಗಳು, ಉದ್ಯೋಗ ಭದ್ರತೆ, ಉದ್ಯೋಗ ಹಕ್ಕುಗಳು ಇಲ್ಲದಿರುವುದು ಕೆಲಸದ ಸಂರಚನೆಯಲ್ಲಿನ ಒತ್ತಡ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಕರ್ನಾಟಕವೊಂದರಲ್ಲೇ 1.6 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದೀಗ ಉದ್ಯೋಗದ ವ್ಯಾಖ್ಯಾನವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದ ಕಾರ್ಮಿಕರ ಸಮೀಕ್ಷೆಯನ್ನು ನಡೆಸಲು ಯೋಜಿಸುತ್ತಿದೆ. ಇದರಲ್ಲಿ ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಪ್ಲಾಟ್‌ಫಾರ್ಮ್‌ಗಳು, ವಿತರಣಾ ಏಜೆಂಟ್‌ಗಳು ಮತ್ತು ಆಹಾರ ವಿತರಣಾ ಏಜೆಂಟ್‌ಗಳು ಸಾಪ್ತಾಹಿಕ ರಜೆ ಮತ್ತು ಕನಿಷ್ಠ ವೇತನದಂತಹ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ರೂಪಿಸಲಾಗುತ್ತದೆ.

ಉದ್ಯೋಗಿಗಳಿಗೆ ನ್ಯಾಯಯುತವಾದ ಹಕ್ಕು ದೊರೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಉದ್ಯೋಗ ನೀತಿಯ ಅಡಿಯಲ್ಲಿ ತಾತ್ಕಾಲಿಕ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ಕೆಲಸಗಾರರು ಹಾಗೂ ಅಂಗನವಾಡಿ ಕಾರ್ಯಕರ್ತರ ಒಳಗೊಂಡಂತೆ ಹೊಸ ಸುಧಾರಣಾ ನೀತಿಗಳನ್ನು ಹೊರತರಲು ಉದ್ದೇಶಿಸಿದೆ. ಈ ನೀತಿಯ ಅಡಿಯಲ್ಲಿ ಕಾರ್ಮಿಕರು ಕನಿಷ್ಟ ವೇತನ, ವಾರದ ರಜೆ ಮತ್ತು ಇತರ ಎಲ್ಲಾ ಹಕ್ಕುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಭವಿಷ್ಯನಿಧಿ ಮತ್ತು ಇಎಸ್‌ಐ ಸೌಲಭ್ಯದಂತಹ ಇತರ ಪ್ರಯೋಜನಗಳನ್ನೂ ಪಡೆಯಲಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ “ಕೇಂದ್ರವು ಇನ್ನೂ ನೀತಿಯನ್ನು ಅಂತಿಮಗೊಳಿಸದಿದ್ದರೂ, ಕರ್ನಾಟಕವು ಮೊಬೈಲ್ ಆಧಾರಿತ ಟ್ಯಾಕ್ಸಿ / ಆಟೋರಿಕ್ಷಾ ಚಾಲಕರು, ಡೆಲಿವರಿ ಏಜೆಂಟ್‌ಗಳು ಮತ್ತು ಆಹಾರದ ಜಿಲ್ಲಾವಾರು ಸಮೀಕ್ಷೆಯನ್ನು ನಡೆಸಲಿದೆ” ಎಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಕ್ಟೋಬರ್ 30ರ ಉಪಚುನಾವಣೆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ. ಕಳೆದ ತಿಂಗಳು ಪ್ರಾರಂಭಿಸಲಾದ ಅಸಂಘಟಿತ ಕಾರ್ಮಿಕರ ಇ-ಶ್ರಮ್ ಪೋರ್ಟಲ್‌ನಲ್ಲಿ ಕರ್ನಾಟಕದ 7 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.