ಬೆಂಗಳೂರು : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯೊಂದಿಗಿನ ತಮ್ಮ ಆರು ವರ್ಷಗಳ ಸಂಬಂಧಕ್ಕೆ ಇತಿಶ್ರೀ ಹಾಡಿದ್ದಾರೆ ಎನ್ನಲಾಗಿದೆ.

ಎಐಎಡಿಎಂಕೆ ಪಕ್ಷವನ್ನು ಮರಳಿ ಎನ್‌ಡಿಎ ಒಕ್ಕೂಟಕ್ಕೆ ಸೇರಿಸಿಕೊಂಡ ನಂತರ, ಪಕ್ಷದ ಉನ್ನತ ನಾಯಕತ್ವವು ಅಣ್ಣಾಮಲೈ ಅವರನ್ನು ನಿರ್ಲಕ್ಷಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಸ್ವಪಕ್ಷದ ಕೆಲ ನಿರ್ಧಾರಗಳ ಕುರಿತು ಅವರು ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಈ ಹಿಂದೆ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ : ಮೋದಿ ಸರ್ಕಾರದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಅಣ್ಣಾಮಲೈ ಬಿಜೆಪಿಯಿಂದ ಹೊರಬಂದು ತಮಿಳುನಾಡಿನಲ್ಲಿ ಸ್ವತಂತ್ರವಾಗಿ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಎಂಬ ಹೊಸ ಜನಪರ ಸಂಘಟನೆ ಶುರುಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ರಾಜೀನಾಮೆ ಹಾಗೂ ಮುಂದಿನ ಹೆಜ್ಜೆಯ ಬಗ್ಗೆ ಅಣ್ಣಾಮಲೈ ಇದುವರೆಗೂ ಸ್ಪಷ್ಟಪಡಿಸಿಲ್ಲ.
ಇತ್ತೀಚೆಗೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ಅಣ್ಣಾಮಲೈ ವಿರೋಧ ವ್ಯಕ್ತಪಡಿಸಿದ್ದರು. ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಷಯದ ಬಳಿಕ ಬಿಜೆಪಿ ನಾಯಕತ್ವದೊಂದಿಗೆ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.
ಇದರ ನಡುವೆ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶವಿರುವ ಈ ಪೋಸ್ಟರ್‌ಗಳು ಅಣ್ಣಾಮಲೈ ಅವರ ಹೊಸ ರಾಜಕೀಯ ಅಂಗಳಕ್ಕೆ ಧುಮುಕುವ ಸುಳಿವು ನೀಡುತ್ತಿವೆ.






