ಆಮ್ ಆದ್ಮಿ ಪಕ್ಷದ ನಾಯಕ ಡಾ. ಸಂದೀಪ್ ಪಾಠಕ್ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ. ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಪಂಜಾಬಿನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದರ ಹಿಂದೆ ಸಂದೀಪ್ ಪಾಠಕ್ ಶ್ರಮ ಇದೆ. ಅದೇ ಕಾರಣಕ್ಕೆ ಈಗ ಆಮ್ ಆದ್ಮಿ ಪಕ್ಷ ಸಂದೀಪ್ ಪಾಠಕ್ ಹೆಗಲಿಗೆ ಗುಜರಾತ್ ಚುನಾವಣೆಯಲ್ಲಿ ತಂತ್ರಗಾರಿಕೆ ರೂಪಿಸುವ ಹೊಣೆ ಹೊರಿಸಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡಿರುವ ಮತ್ತು ದೆಹಲಿ ಐಐಟಿಯ ಮಾಜಿ ಪ್ರೊಫೆಸರ್ ಸಂದೀಪ್ ಪಾಠಕ್ ಈಗ ಆಪ್ ಸೇರಿದ್ದಾರೆ. ಅವರು ಸಿಎನ್ ಎನ್ 18 ರಾಷ್ಟ್ರೀಯ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಚುನಾವಣಾ ಸಮೀಕ್ಷೆಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಮುಖ ಸಂಗತಿಗಳನ್ನು ‘ಪ್ರತಿಧ್ವನಿ’ ಕನ್ನಡದ ಓದುಗರ ಮುಂದಿಡುತ್ತಿದೆ.
2017ರಲ್ಲಿ ನನ್ನನ್ನು ಪಂಜಾಬ್ಗೆ ಸಮೀಕ್ಷೆಗೆ ಕಳುಹಿಸಲಾಯಿತು. ನಾನು ಸರ್ವೇಯರ್ ಆಗಿರಲಿಲ್ಲ. ಚುನಾವಣಾ ಸಮೀಕ್ಷೆ ಎಂದರೆ ಏನು? ಸಮೀಕ್ಷೆಗಳನ್ನು ಹೇಗೆ ಮಾಡಲಾಗುತ್ತದೆ? ಎಂಬುದರ ಬಗ್ಗೆ ತಿಳಿದಿರಲ್ಲ. ನಾನು ವಿಜ್ಞಾನಿ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಆದರೆ ನನ್ನನ್ನು ಅಲ್ಲಿಗೆ ಕಳುಹಿಸಲಾಯಿತು. ನಾನು ಪ್ಯಾಡ್ ಮತ್ತು ಪೆನ್ನು ಹಿಡಿದು ಪಂಜಾಬ್ನಲ್ಲಿ ತಿರುಗಾಡಲು ಪ್ರಾರಂಭಿಸಿದೆ. ಜನರೊಂದಿಗೆ ಮಾತನಾಡಿದೆ. ಅಂತಿಮವಾಗಿ ನನ್ನ ತಿಳುವಳಿಕೆಯು ಒಂದು ನಿರ್ದಿಷ್ಟ ಮಟ್ಟಕ್ಕೆ ಸರಿಯಾಗಿದೆ ಅನಿಸತೊಡಗಿತು ಎಂದು ಹೇಳಿಕೊಂಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ಗುಜರಾತ್ ಮತ್ತು ಹಿಮಾಚಲ ವಿಧಾನಸಭಾ ಚುನಾವಣೆ ನಡೆಯಲಿವೆ. ನಂತರ ಹರಿಯಾಣ ಮತ್ತು ರಾಜಸ್ಥಾನ ಚುನಾವಣೆಗಳು ಬರಲಿವೆ. ಇಲ್ಲೆಲ್ಲಾ ಉತ್ತಮ ನಿರೀಕ್ಷೆಗಳಿವೆ. ಈಗ ಎಲ್ಲರ ಕಣ್ಣುಗಳು ಗುಜರಾತ್ ಮೇಲಿರುವುದರಿಂದ ಆ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಗುಜರಾತ್ ಚುನಾವಣೆ ವಿಭಿನ್ನವಾಗಿರಲಿದೆ. ಈ ಬಾರಿಯ ಚುನಾವಣೆಯಲ್ಲಿ ನಾವು ಗಂಭೀರವಾಗಿ ಹೋರಾಟ ಮಾಡುತ್ತೇವೆ. ನಾವು ಅಲ್ಲಿ ಸರ್ಕಾರ ರಚಿಸುವ ಸಾಧ್ಯತೆಯೂ ಇದೆ. ಆಪ್ ಬಗ್ಗೆ ಜನಾಭಿಪ್ರಾಯ ಇದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆ ನಾವು 55 ಕ್ಷೇತ್ರಗಳಲ್ಲಿ ತುಂಬಾ ಪ್ರಬಲರಾಗಿದ್ದೇವೆ ಎಂದು ಅಂದಾಜು ಮಾಡಿದೆಯಂತೆ. ಆದರೆ ನಾವು ಹೋಂ ವರ್ಕ್ ಮಾಡದೆ ಯಾವುದೇ ರಾಜ್ಯವನ್ನು ಪ್ರವೇಶಿಸುವುದಿಲ್ಲ. ನಮಗೆ ಉತ್ತಮ ಅವಕಾಶವಿದೆ ಎಂಬುದು ಖಾತರಿಯಾದ ಮೇಲೆಯೇ ಕೆಲಸ ಶುರು ಮಾಡಿದ್ದೇವೆ. 27 ವರ್ಷಗಳು ಬಹಳ ದೀರ್ಘವಾದ ಸಮಯ. ನೀವು ಅದನ್ನು ನೋಡಿದರೆ, ಇದು ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರಿಗೆ ನೀಡಿದ ಜನಾದೇಶದಂತೆ ಕಾಣುತ್ತದೆ. ಆದರೆ ಅದು ಹಾಗಲ್ಲ. ಗುಜರಾತ್ ಮುಖ್ಯಮಂತ್ರಿಯೇ ಬೇರೆ. ಗುಜರಾತ್ ಮುಖ್ಯಮಂತ್ರಿ ಆಗುವವರಿಗೆ ಜನಾದೇಶ ನೀಡಬೇಕು. ಅವರು ಗುಜರಾತ್ ಜನಾಭಿಪ್ರಾಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಆದರೆ ಇಲ್ಲಿ ಅಂತಹ ಯಾವುದೇ ಕೆಲಸ ಆಗಿಲ್ಲ, ಶಾಲಾ ವ್ಯವಸ್ಥೆ ಅಥವಾ ಆರೋಗ್ಯ ವ್ಯವಸ್ಥೆ ಸೇರಿದಂತೆ ಸಾರ್ವಜನಿಕ ಸೇವೆ ಎಂಬುದೇ ಇಲ್ಲ. ಸಾರ್ವಕಾಲಿಕ ಗರಿಷ್ಠ ಭ್ರಷ್ಟಾಚಾರ ನಡೆದಿದೆ. ಇವೆಲ್ಲವೂ ಚುನಾವಣಾ ವಿಷಯಗಳಾಗಬೇಕು ಎಂದು ಹೇಳಿದ್ದಾರೆ.

ಗುಜರಾತ್ನಲ್ಲಿ ನಮ್ಮ ಸಮೀಕ್ಷೆಗಳು ಏನನ್ನು ಹೇಳಿವೆ ಎಂಬುದನ್ನು ಈ ಸಮಯದಲ್ಲಿ ನಾನು ಸಂಪೂರ್ಣವಾಗಿ ಬಹಿರಂಗಪಡಿಸುವುದಿಲ್ಲ. ಈಗಾಗಲೇ ಎಎಪಿ ಸುಮಾರು 55 ರಿಂದ 58 ಸ್ಥಾನಗಳಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲಲಿದೆ. ಚುನಾವಣೆ ಸಮೀಪ ಆಗುತ್ತಿದ್ದಂತೆ ನಮ್ಮ ಶಕ್ತಿ ವೃದ್ಧಿಸುವ ವಿಶ್ವಾಸ ಇದೆ. ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಹಳ್ಳ ಹಿಡಿಯಲಿದೆ. ನಾವು ಗುಜರಾತ್ ಬಗ್ಗೆ ಮಾತನಾಡುವಾಗ, ಗೋವಾ ಅಥವಾ ಉತ್ತರಾಖಂಡದಲ್ಲಿ ಎಎಪಿ ಅಷ್ಟೊಂದು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಏನು ತಪ್ಪಾಗಿದೆ ಎಂಬುದನ್ನು ನಾವು ವಿಶ್ಲೇಷಿಸಲು ಪ್ರಾರಂಭಿಸಿದ್ದೇವೆ. ನಮ್ಮ ತಂತ್ರಗಾರಿಕೆಯನ್ನು ಪುನರ್ ಪರಶೀಲಿಸಲಿದ್ದೇವೆ. ಆಮ್ ಆದ್ಮಿ ಪಕ್ಷ ಎಲ್ಲವನ್ನೂ ತಿಳಿದಿರುವ ಪಕ್ಷವಲ್ಲ. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಅತ್ಯಂತ ಚಿಕ್ಕ ಪಕ್ಷ. ಈ ಮಿತಿಯಲ್ಲಿಯೇ ಉತ್ತಮ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವ ವಿಷಯದ ಬಗ್ಗೆ ಮಾತನಾಡಿರುವ ಸಂದೀಪ್ ಪಾಠಕ್ ಅವರು, ಇದು ತುಂಬಾ ಸಂಕೀರ್ಣವಾಗಿದೆ. ಅತ್ಯಂತ ಬಲಿಷ್ಠ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೇ ಇದು ಕಠಿಣ ಸವಾಲಾಗಿರಲಿದೆ. ಇನ್ನೂ ಆಮ್ ಆದ್ಮಿಯಂತಹ ಸಣ್ಣ ಪಕ್ಷಕ್ಕೆ ಸುಲಭ ಆಗಲು ಸಾಧ್ಯವಿಲ್ಲ. ಆದರೂ ನಮಗೆ ಉತ್ತಮ ಫಲಿತಾಂಶದ ಆತ್ಮವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಾನು ಗುಜರಾತ್ ಅನ್ನು ಹಿಂದುತ್ವದ ಪ್ರಯೋಗಶಾಲೆ ಎಂದು ಪರಿಗಣಿಸುವುದಿಲ್ಲ. ಗುಜರಾತಿನಲ್ಲಿಯೂ ಜನ ಮೂಲಭೂತ ಅಗತ್ಯಗಳಿಗಾಗಿ ಹೋರಾಡುತ್ತಿದ್ದಾರೆ. ನಾನು ಜನರನ್ನು ಭೇಟಿಯಾಗಿ ಮಾತಾಡಿದ್ದೇನೆ. ಅವರ ದಿನದ ಕೂಲಿ ರೂ 200 ರೂಪಾಯಿನಿಂದ ಶುರುವಾಗುತ್ತದೆ. ಅಂದರೆ ತಿಂಗಳಿಗೆ 6,000 ರೂಪಾಯಿ. ಅವರು ತಮ್ಮ ಮನೆಗಳನ್ನು ಹೇಗೆ ನಡೆಸುತ್ತಾರೆ. ಇವರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ನಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿರುವ ಸಂದೀಪ್ ಪಾಠಕ್ ಅವರು, ಅದು ಈಗಾಗಲೇ ಸೋತಿದೆ. ಕಳೆದ ಬಾರಿ ಗುಜರಾತ್ನಲ್ಲಿ ಕಾಂಗ್ರೆಸ್ ಉತ್ತಮ ಪೈಪೋಟಿ ನೀಡಿತ್ತು. ಆದರೆ ಈ ಬಾರಿ ಜನ ಕಾಂಗ್ರೆಸ್ಸನ್ನು ನಂಬುವುದಿಲ್ಲ. ಕಳೆದ ಬಾರಿ ಪಾಟಿದಾರ್ ಆಂದೋಲನ ನಡೆದಿತ್ತು. ಅದರ ಲಾಭ ಕಾಂಗ್ರೆಸ್ಗೆ ಸಿಕ್ಕಿತ್ತು. ಜೊತೆಗೆ ಬಿಜೆಪಿ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆಯಿದ್ದರೂ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ಬಾರಿಯೇ ಗೆಲ್ಲಲಾಗದ ಕಾಂಗ್ರೆಸ್ ಈ ಬಾರಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಗುಜರಾತಿನಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಬಗ್ಗೆ ಮಾತನಾಡಿದ ಸಂದೀಪ್ ಪಾಠಕ್, ‘ಮೋದಿ ಪ್ರಧಾನಿಯಾಗಿದ್ದಾರೆ. ಜನಾದೇಶ ಅವರಿಗಾಗಿ ಅಲ್ಲ. ಮುಖ್ಯಮಂತ್ರಿಗಾಗಿ’ ಎಂದಿದ್ದಾರೆ.