ವಿಶ್ವ ವಿಖ್ಯಾತ ಐತಿಹಾಸಿಕ ಕರಗಕ್ಕೆ ಕ್ಷಣಗಣನೆ ಆರಂಭವಾಗಿದ್ದು, 16ರಂದು ರಾತ್ರಿ 12.30ಕ್ಕೆ ಕರಗ ಮಹೋತ್ಸವಕ್ಕೆ ವಿಜ್ರಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದೆ. ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಕರಗದಲ್ಲಿ ಭಾಗಿಯಾಗಲಿದ್ದು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ನಾಳೆ ರಾತ್ರಿ 12.30ಕ್ಕೆ ದ್ರೌಪದಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ !
ಕಳೆದೆರಡು ವರ್ಷದಿಂದ ಕೊರೋನಾ ಹೊಡೆತದಿಂದ ಕಳೆಗುಂದಿದ್ದ ಬೆಂಗಳೂರು ಧರ್ಮರಾಯಸ್ವಾಮಿ ಐತಿಹಾಸಿಕ ದ್ರೌಪದಿ ಕರಗ ಉತ್ಸವ ಈ ವರ್ಷ ಅದ್ದೂರಿಯಾಗಿ ನಡೆಯಲಿದೆ. ಕರಗ ಉತ್ಸವದ ಚಾಲನೆಗೆ ಕ್ಷಣಗಣನೆ ಆರಂಭವಾಗಿದ್ದು ನಾಳೆ ರಾತ್ರಿ 12.30ಕ್ಕೆ ದ್ರೌಪದಿ ಕರಗ ರತೋತ್ಸವಕ್ಕೆ ಚಾಲೆನೆ ಸಿಗಲಿದೆ. ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದ್ದು ಧರ್ಮರಾಯಸ್ವಾಮಿ ದೇವಸ್ಥಾನ ನವ ವಧುವಿನಂತೆ ಕಂಗೊಳಿಸುತ್ತಿದೆ. ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆಯನ್ನ ಅಗಲೀಕರಣ ಮಾಡಿ ಸ್ವಚ್ಚಗೊಳಿಸಲಾಗಿದೆ, ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿದೆ. ಈ ಭಾರಿಯೂ ಕೂಡ ಜ್ಞಾನೇಂದ್ರ ಅವರೇ ಕರಗ ಹೊರಲಿದ್ದಾರೆ.
ನಾಳೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಕರಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ 12.30 ಕ್ಕೆ ಆರಂಭವಾಗುವ ಕರಗ ಉತ್ಸವ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಸಂಜೆ ಕಬ್ಬನ್ ಪಾರ್ಕ್ ಗೆ ಪೂಜೆಗೆ ಹೊಗುತ್ತೇವೆ. ಅಲ್ಲಿಂದ ಬಂದ ನಂತರ ಕರ್ಪೂರ ಸೇವೆ ನಡೆಯಲಿದೆ. ಸಾವಿರಾರು ಕೆ.ಜಿ ಕರ್ಪೂರ ಸೇವೆಯನ್ನ ಭಕ್ತರು ಮಾಡುತ್ತಾರೆ. ನಂತರ ಬಳೆ ಶಾಸ್ತ್ರ ನಡೆಯಲಿದೆ. ಅದಾದ ಮೇಲೆ ತಾಯಿಯನ್ನು ಆಹ್ವಾನ ಮಾಡಿಕೊಂಡು 12.30 ರಿಂದ 1.30 ರ ಮುಹೂರ್ತದಲ್ಲಿ ತಾಯಿ ದೇವಸ್ಥಾನದಿಂದ ಹೊರ ಬರಲಿದ್ದಾರೆ. ಕಬ್ಬನ್ ಪೇಟೆಯ ಗಲ್ಲಿಗಳು, ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೆಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನದ ವರೆಗೆ ಕರಗ ಉತ್ಸವ ನಡೆಯಲಿದೆ, ಕರಗದಲ್ಲಿ ಎಲ್ಲಾ ರಾಜಕೀಯ ಗಣ್ಯರು, ಸರ್ಕಾರದ ಸಚಿವರುಗಳು, ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್, ಸೇರಿದಂತೆ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಕರಗ ಮಹೊತ್ಸವಕ್ಕೆ ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಪಾಲಿಕೆಯಿಂದ ಕರಗ ಉತ್ಸವಕ್ಕೆ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ದೇವಸ್ಥಾನದ ಸುತ್ತ ಮುತ್ತ ಹಾಗೂ ಕರಗ ಸಾಗುವ ಹಾದಿ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು ಸ್ಥಳೀಯ ಪೊಲೀಸರು ಹಾಗೂ 3 KSRP ತುಕಡಿ ನಿಯೋಜನೆ ಮಾಡಲಾಗಿದೆ. ನಾಳೆ ಕರಗ ಸಾಗುವ ರೂಟ್ ಮ್ಯಾಪ್ ಅನ್ನ ಬಿಬಿಎಂಪಿ ಬಿಡುಗಡೆ ಮಾಡಿದ್ದು ಕರಗ ಸುಸೂತ್ರವಾಗಿ ನಡೆಯಲು ಬಿಬಿಎಂಪಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಕಳೆದ 2 ವರ್ಷಗಳಿಂದ ಕಳೆಗುಂದಿದ್ದ ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು ಎಲ್ಲಾ ತಯಾರಿಗಳು ಪೂರ್ಣಗೊಂಡಿವೆ. 1 ಲಕ್ಷಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ, ಅದ್ಧೂರಿ ದ್ರೌಪದಿ ಕರಗವನ್ನು ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಜನ ಕಾತರರಾಗಿ ಕಾಯ್ತಿದ್ದಾರೆ.