ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮ್ಯಾಜಿಕಲ್ ಚೇರ್ ಆಟ ಆರಂಭವಾಗಿದೆ. ಆ ಮೂಲಕ ಒಂದು ವಿಧಾನಸಭಾ ಅವಧಿಯಲ್ಲಿ ಮೂರ್ನಾಲ್ಕು ಮುಖ್ಯಮಂತ್ರಿಗಳನ್ನು ಕೊಡುವ ಬಿಜೆಪಿಯ ಸಂಪ್ರದಾಯ ಈ ಬಾರಿಯ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ.
ಒಂದು ಕಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂಡಿನೋವು ಶಸ್ತ್ರಚಿಕಿತ್ಸೆಯ ವಿಷಯ ಅಧಿಕಾರದ ಪಡಸಾಲೆಯಲ್ಲೇ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರದ ಹಿರಿಯ ಸಚಿವರೇ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗುತ್ತಾರೆ ಎನ್ನುವ ಮುಖ್ಯಮಂತ್ರಿ ಬದಲಾವಣೆಯ ಸೂಚನೆಯನ್ನು ನೀಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆಯಲ್ಲೂ ಸದನ ಪಡಸಾಲೆಯಲ್ಲಿ ಈ ವಿಷಯ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಮುಖ್ಯಮಂತ್ರಿಗಳಿಗೆ ತೀವ್ರ ಮಂಡಿನೋವು ಬಾಧಿಸುತ್ತಿದೆ. ಹಾಗಾಗಿ ಅವರು ಮುಂದಿನ ತಿಂಗಳು ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಲಿದ್ದಾರೆ. ವೈದ್ಯರ ಪ್ರಕಾರ ಅವರು ಮಂಡಿನೋವು ಶಸ್ತ್ರಚಿಕಿತ್ಸೆಗೆ ಒಳಗಾದಲ್ಲಿ ಅವರಿಗೆ ಕನಿಷ್ಟ ಮೂರು ತಿಂಗಳ ವಿಶ್ರಾಂತಿ ಬೇಕಾಗುತ್ತದೆ. ಹಾಗಾಗಿ ಮುಂದಿನ ಮೂರು ತಿಂಗಳ ಕಾಲ ಅವರು ಆಡಳಿತದ ದೈನಂದಿನ ಕೆಲಸ ಕಾರ್ಯಕಾರ್ಯಗಳತ್ತ ಗಮನ ಕೊಡಲಾಗದೇ ಇರಬಹುದು.
ಈ ನಡುವೆ, ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರದ ತನಿಖಾ ಸಂಸ್ಥೆಗಳು ಈಗಾಗಲೇ ಪಕ್ಷದ ವರಿಷ್ಠರಿಗೆ ಗೌಪ್ಯ ವರದಿ ನೀಡಿವೆ. ಪ್ರಕರಣದ ಪಕ್ಷಕ್ಕೆ ಮತ್ತು ಬೊಮ್ಮಾಯಿ ಅವರ ಸರ್ಕಾರಕ್ಕೆ ಭಾರೀ ಮುಜುಗರ ತರಲಿದೆ ಎಂಬುದು ಕೂಡ ಗೊತ್ತಾಗಿದೆ. ಆ ಕಾರಣಕ್ಕಾಗಿಯೇ ಪ್ರಕರಣವನ್ನು ಮುಚ್ಚಿ ಹಾಕುವ, ಇಲ್ಲವೇ ಕನಿಷ್ಟ ಸಾಧ್ಯವಾದಷ್ಟು ತನಿಖೆಯ ವಿವರಗಳು ಬಹಿರಂಗವಾದಂತೆ ನೋಡಿಕೊಳ್ಳುವ ಸರ್ಕಸ್ ಆರಂಭವಾಗಿದೆ. ಈ ನಡುವೆ, ಪಕ್ಷಕ್ಕೆ ಆಗಲಿರುವ ಹಾನಿಯಿಂದ ಬಚಾವಾಗಲು ಹಗರಣದಲ್ಲಿ ಭಾಗಿಯಾದವರ ತಲೆದಂಡ ನೀಡಲು ಬಿಜೆಪಿ ಸೂಪರ್ ಹೈಕಮಾಂಡ್ ಅಮಿತ್ ಶಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರೇ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಿಎಂ ಬದಲಾವಣೆಗೆ ಯೋಚಿಸಿದ್ದಾರೆ. ಅಂತಹ ತಂತ್ರದ ಭಾಗವಾಗಿಯೇ ಸಿಎಂ ರಾಜೀನಾಮೆ ನೀಡಲಿದ್ದಾರೆ. ಈ ಒಳಗುಟ್ಟು ಅರಿತಿರುವ ಬಿಜೆಪಿಯ ಹಿರಿಯ ಸಚಿವರಾಗಿರುವ ಮುರುಗೇಶ್ ನಿರಾಣಿ ಮತ್ತು ಕೆ ಎಸ್ ಈಶ್ವರಪ್ಪ ಮತ್ತೊಂದು ಸುತ್ತಿನ ನಾಯಕತ್ವ ಬದಲಾವಣೆಯ ಕೂಗಿಗೆ ಪರೋಕ್ಷವಾಗಿ ಚಾಲನೆ ನೀಡಿದ್ದಾರೆ. ಆರ್ ಎಸ್ ಎಸ್ ಮತ್ತು ಪರಿವಾರದ ಆಣತಿ ಇಲ್ಲದೆ ಉಸಿರನ್ನೂ ಬಿಡದ ಈಶ್ವರಪ್ಪ ಅವರಂಥ ನಾಯಕರು ನಾಗ್ಪುರದ ಸೂಚನೆ ಇಲ್ಲದೆ ಇಂತಹ ಹೇಳಿಕೆ ನೀಡಲು ಸಾಧ್ಯವೇ ಇಲ್ಲ. ಹಾಗೇ ಮುಂದಿನ ಮುಖ್ಯಮಂತ್ರಿಯ ಸರದಿಯಲ್ಲಿರುವ ಪ್ರಮುಖರಲ್ಲಿ ಮುಂಚೂಣಿಯಲ್ಲಿರುವ ನಿರಾಣಿ ಅವರು ಕೂಡ ಬೆಳಗಾವಿ ಅಧಿವೇಶನದ ಹೊತ್ತಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗುತ್ತಾರೆ ಎಂದಿರುವುದು ಕೂಡ ಕೇವಲ ಆಕಸ್ಮಿಕವಲ್ಲ ಎಂಬುದು ಬಿಜೆಪಿಯ ಅಂತರಂಗದಲ್ಲೇ ಪಿಸುಗುಡುತ್ತಿರುವ ಮಾತು.
ಈ ನಡುವೆ ನಿರಾಣಿಯವರು ಶನಿವಾರ ಕೂಡ ಮುಖ್ಯಮಂತ್ರಿ ಬದಲಾವಣೆಯ ವಿಷಯ ಪಕ್ಷದಲ್ಲಿ ಚರ್ಚೆಯಾಗುತ್ತಿರುವುದು ನಿಜ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗೇ ಮತ್ತೊಬ್ಬ ಸಚಿವ ಆರ್ ಅಶೋಕ್ ಅವರು ಮಂಡಿನೋವು ಶಸ್ತ್ರಚಿಕಿತ್ಸೆಗಾಗಿ ಸಿಎಂ ಬೊಮ್ಮಾಯಿ ಅಮೆರಿಕಕ್ಕೆ ಹೋಗುತ್ತಿರುವ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದು, ಪರೋಕ್ಷವಾಗಿ ನಿರಾಣಿ ಮಾತುಗಳಿಗೆ ಹಿನ್ನೆಲೆ ಒದಗಿಸಿದ್ದಾರೆ.
ಹೀಗೆ ಒಂದು ಕಡೆ ಹಿರಿಯ ಸಚಿವರು ಮೇಲಿಂದ ಮೇಲೆ ಮುಖ್ಯಮಂತ್ರಿ ವಿದೇಶ ಪ್ರವಾಸ, ಮಂಡಿನೋವು, ನಾಯಕತ್ವ ಬದಲಾವಣೆಗಳನ್ನು ಒಂದಕ್ಕೊಂದು ತಳಕು ಹಾಕಿ ಹೇಳಿಕೆಗಳನ್ನು ನೀಡುತ್ತಾ, ನೀಡಿದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾ ಇದ್ದರೆ, ಮತ್ತೊಂದು ಕಡೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಡವಾಗಿ ರಂಗಪ್ರವೇಶ ಮಾಡಿ, ಸಿಎಂ ಬದಲಾವಣೆಯ ವಿಷಯವೇ ಹೈಕಮಾಂಡ್ ಮುಂದೆ ಇಲ್ಲ. ಎಲ್ಲವೂ ಊಹಾಪೋಹ. ಮುಂದಿನ ಚುನಾವಣೆಯನ್ನು ಕೂಡ ಬೊಮ್ಮಾಯಿ ನೇತೃತ್ವದಲ್ಲೇ ನಡೆಸುತ್ತೇವೆ ಎಂದಿದ್ದಾರೆ.
ಆದರೆ, ಈ ನಡುವೆ ಹುಬ್ಬಳ್ಳಿಯಲ್ಲಿ ನಾಳೆ ಮತ್ತು ನಾಡಿದ್ದು(ಡಿ.28-29) ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತ್ರವಲ್ಲದೆ, ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭಾಗವಹಿಸುತ್ತಿದ್ದಾರೆ. ಸಭೆಯಲ್ಲಿ ಮುಖ್ಯವಾಗಿ ಬಿಟ್ ಕಾಯಿನ್ ಹಗರಣದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ಆಗಬೇಕಾದ ಬದಲಾವಣೆಗಳನ್ನು ಚರ್ಚಿಸುವ ನಿರೀಕ್ಷೆ ಇದೆ. ಆ ಕಾರಣಕ್ಕಾಗಿಯೇ ಖುದ್ದು ರಾಷ್ಟ್ರೀಯ ಅಧ್ಯಕ್ಷರೇ ಕೋರ್ ಕಮಿಟಿ ಸಭೆಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪ್ರಮುಖವಾಗಿ ಬಿಟ್ ಕಾಯಿನ್ ಹಗರಣದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪಕ್ಷದ ನಾಯಕತ್ವದ ವಿಷಯವನ್ನು ಕೋರ್ ಕಮಿಟಿಯಲ್ಲಿ ಚರ್ಚಿಸುವ ತಾಕೀತು ಸ್ವತಃ ಅಮಿತ್ ಶಾ ಅವರಿಂದಲೇ ಬಂದಿದೆ. ಹಾಗಾಗಿ ಶಾ ಸಂದೇಶ ಹೊತ್ತೇ ನಡ್ಡಾ ಆಗಮಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.
ಆ ಹಿನ್ನೆಲೆಯಲ್ಲಿ ನಾಳೆಯ ಹುಬ್ಬಳ್ಳಿಯ ರಾಜ್ಯ ಬಿಜೆಪಿ ಕಾರ್ಯಕಾರಣಿ ತೀವ್ರ ಕುತೂಹಲ ಮೂಡಿಸಿದೆ.