• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, September 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದ್ವೇಷಾಸೂಯೆಗಳ ನಾಗರಿಕ ರೂಪಗಳ ನಡುವೆ

ಕೋಮುವಾದದ ವಿಕೇಂದ್ರೀಕರಣ ತಳಸಮಾಜದ ತುಡುಗುಪಡೆಗಳನ್ನು ಸಕ್ರಿಯವಾಗಿಸುತ್ತದೆ

ನಾ ದಿವಾಕರ by ನಾ ದಿವಾಕರ
August 9, 2026
in Top Story, ದೇಶ, ರಾಜಕೀಯ
0
ದ್ವೇಷಾಸೂಯೆಗಳ ನಾಗರಿಕ ರೂಪಗಳ ನಡುವೆ
Share on WhatsAppShare on FacebookShare on Telegram

ಅಭಿಪ್ರಾಯ ಭೇದ ಪ್ರಜಾತಂತ್ರದ ಅಡಿಗಲ್ಲು. ಪ್ರತಿರೋಧ/ಪ್ರತಿಭಟನೆ ಪ್ರಜಾಸತ್ತಾತ್ಮಕ ಸಮಾಜದ ಆಧಾರ ಶಿಲೆಗಳು. ಜನಸಾಮಾನ್ಯರ ಚಳುವಳಿ/ಹೋರಾಟಗಳು ಪ್ರಜಾಪ್ರಭುತ್ವೀಯ ವಾತಾವರಣದ ಆಧಾರ ಸ್ತಂಭಗಳು. ಐದು ದಶಕಗಳ ಹಿಂದೆ, 1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲೂ ಸಹ ಈ ಮಾತುಗಳು ಸಾರ್ವಜನಿಕ ಸಂಕಥನಗಳ (Public Discourses) ಒಂದು ಭಾಗವಾಗಿ ಜನತೆಗೆ ಸುಲಭಗ್ರಾಹ್ಯವಾಗುತ್ತಿದ್ದವು. ಈ ಉದಾತ್ತ ಆಲೋಚನೆಗಳನ್ನು ʼ ಮೌಲ್ಯಗಳು ʼ ಎಂಬ ಚೌಕಟ್ಟಿನಲ್ಲಿ ಕಟ್ಟಿಹಾಕದೆ, ಒಂದು ಪ್ರಗತಿಶೀಲ ಸಮಾಜ ಮುನ್ನಡೆಯ ಹಾದಿಯಲ್ಲಿ ಕ್ರಮಿಸಬೇಕಾದ ಮಾರ್ಗ ಎಂದು ನಿರ್ವಚಿಸಿದಾಗ, 2026ರ ಭಾರತ ಎಲ್ಲಿ ನಿಂತಿದೆ, ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳು ಥಟ್ಟನೆ ಎದುರಾಗುತ್ತವೆ. ಈ ಪ್ರಶ್ನೆಯನ್ನು ಮತ್ತಷ್ಟು ಜಟಿಲಗೊಳಿಸುವ ರೀತಿಯಲ್ಲಿ ವಿಕಸಿತ ಭಾರತ ವಿಕೃತ ಮನಸ್ಥಿತಿಗಳನ್ನು ಉತ್ಪಾದಿಸುತ್ತಾ ನಡೆದಿದೆ.

ADVERTISEMENT
Lakshmana Savadi on MLA's Upset: ಕಾಂಗ್ರೆಸ್ ಶಾಸಕರ ಅಸಮಾಧಾನದ ಬಗ್ಗೆ ಸಚಿವ ಲಕ್ಷ್ಮಣ ಸವದಿ ರಿಯಾಕ್ಷನ್

ಸಾರ್ವಜನಿಕ ನಿರೂಪಣೆಗಳಿಗೆ (Public Narratives) ಒಂದು ಸಾಮಾಜಿಕ ಲಕ್ಷಣ ಇರುತ್ತದೆ. ವಿಶಾಲ ಸಮಾಜದ ವಾತಾವರಣದಲ್ಲಿ ಸೃಷ್ಟಿಯಾಗುವ ಈ ನಿರೂಪಣೆಗಳು ಸಾಮಾನ್ಯವಾಗಿ ವಿಭಿನ್ನ ಜಾತಿ, ಧರ್ಮ ಮತ್ತು ವರ್ಗಗಳ ಸಾಮುದಾಯಿಕ ದೃಷ್ಟಿಯಿಂದ ರೂಪಿಸಲ್ಪಟ್ಟಿರುತ್ತವೆ. ಸಮಾಜದೊಳಗಿನ ಸುಶಿಕ್ಷಿತ, ಅಧಿಕಾರಸ್ಥ, ಮೇಲ್ಪದರ ಸಮಾಜದ (Elite Socieiy) ಮೇಲ್ವರ್ಗ-ಮೇಲ್ಜಾತಿಗಳು ಸದಾ ಕಾಲವೂ ಈ ನಿರೂಪಣೆಗಳ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿರುತ್ತವೆ. ಇಲ್ಲಿ ಉತ್ಪಾದನೆಯಾಗುವ ಅಭಿಪ್ರಾಯಗಳನ್ನೇ ಮುದ್ರಣ-ವಿದ್ಯುನ್ಮಾ-ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಾರ್ವಜನಿಕ ಎಂದು ಬಿಂಬಿಸಲು ಈ ವರ್ಗಗಳ ಸದಸ್ಯರು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಾರೆ.

 ಅಭಿಪ್ರಾಯ ಭೇದ – ಭಿನ್ನ ಆಯಾಮಗಳು

ವೈಯುಕ್ತಿಕ ನೆಲೆಯಲ್ಲಿ, ವ್ಯಕ್ತಿಗತವಾಗಿ ವ್ಯಕ್ತಪಡಿಸಲಾಗುವ ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ಅನಿಸಿಕೆಗಳನ್ನು/ಅಭಿಪ್ರಾಯಗಳನ್ನು ಕ್ರೋಢೀಕರಿಸುವ ಹಾಗೂ ಧೃವೀಕರಿಸುವ ಪ್ರಯತ್ನಗಳನ್ನೂ ಎಲ್ಲ ಸಮಾಜಗಳಲ್ಲೂ ಕಾಣಬಹುದು. ಈ ವಾತಾವರಣದಲ್ಲಿ (Eco system) ಸೃಷ್ಟಿಯಾಗುವ ನಿರೂಪಣೆಗಳನ್ನು ಧಾರ್ಮಿಕ ಸಂಸ್ಥೆಗಳು, ಸಾಂಸ್ಕೃತಿಕ ಗುಂಪುಗಳು, ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಮರುವ್ಯಾಖ್ಯಾನಿಸಿ ಅಳವಡಿಸಿಕೊಳ್ಳುತ್ತವೆ. ʼ ಅಭಿಪ್ರಾಯ ಭೇದ ʼ (Difference of Opinion) ಎಂಬ ಅತ್ಯಮೂಲ್ಯ ಲಕ್ಷಣ ಇಲ್ಲಿ ಸೃಷ್ಟಿಯಾಗುತ್ತದೆ. ಈ ಭಿನ್ನತೆ, ವೈವಿಧ್ಯತೆಯನ್ನು ಗೌರವಿಸುವ, ಸಮ್ಮಾನಿಸುವ ಸಾಮಾಜಿಕ ವಾತಾವರಣವನ್ನು (Social Ecosystem) ರೂಪಿಸುವುದು ಪ್ರತಿ ಸದಸ್ಯರ ನೈತಿಕ ಕರ್ತವ್ಯವಾಗಿರುತ್ತದೆ.

HD Kumaraswamy: ಟೋಲ್ ಸಂಗ್ರಹದ ಪರ್ಯಾಯವೇ ಟೌನ್ ಶಿಪ್ ಗಳು..! | JDS | Pratidhvani

1947ರ ಆಗಸ್ಟ್ 15ರ ನಡು ರಾತ್ರಿ ಜವಹರಲಾಲ್ ನೆಹರೂ ಭಾರತೀಯ ಸಂಸ್ಕೃತಿಯನ್ನು “ ವಿವಿಧತೆಯಲ್ಲಿ ಏಕತೆ ” (Unity in Diversity) ಎಂದು ಬಣ್ಣಿಸಿದಾಗ. ಅವರ ಮಾತುಗಳಲ್ಲಿ ಕೇವಲ ವಿಭಿನ್ನ ಜಾತಿ, ಧರ್ಮ, ಪಂಗಡ, ಪಂಥ, ಭಾಷೆಗಳಷ್ಟೇ ಅಡಗಿರಲಿಲ್ಲ. ಇದನ್ನೂ ಮೀರಿದ ಒಂದು ಸಾಮಾಜಿಕ ಮೌಲ್ಯವನ್ನು ನೆಹರೂ ಉಲ್ಲೇಖಿಸಿದ್ದರು. ಈ ಮೌಲ್ಯವನ್ನೇ ಮತ್ತಷ್ಟು ವಿಸ್ತರಿಸಿ ನೋಡಿದಾಗ ನಮಗೆ ಭಾರತದ ಬಹುಸಾಂಸ್ಕೃತಿಕ ಚಹರೆಗಳು (Multi cultural Facets) ಕಾಣುತ್ತವೆ. ವರ್ತಮಾನದ ಸಂಕಥನಗಳಲ್ಲಿ ಬಹುತ್ವ ಎಂದು ಬಳಸಲಾಗುವ ಪದದ ಹಿಂದೆ ಈ ಚಾರಿತ್ರಿಕ ವಾಸ್ತವಗಳಿವೆ. ವರ್ತಮಾನದ ಸಾಮಾಜಿಕ-ರಾಜಕೀಯ ವಾತಾವರಣವನ್ನು ಗಮನಿಸಿದಾಗ ಈ ಎಲ್ಲ ಲಕ್ಷಣಗಳೂ ಹಂತಹಂತವಾಗಿ ಮಸುಕಾಗುತ್ತಿರುವುದು ಢಾಳಾಗಿ ಕಾಣುತ್ತದೆ. ಈ ಬೆಳವಣಿಗೆಯ ಕಾರಣಗಳನ್ನು ಶೋಧಿಸುವಾಗ ಇಡೀ ರಾಜಕೀಯ ವ್ಯವಸ್ಥೆಯೇ (Political System) ಅಪರಾಧಿಯಾಗಿ ಕಂಡರೂ, ಬದಲಾದ ಸನ್ನಿವೇಶದಲ್ಲಿ ಕಳೆದ 12 ವರ್ಷಗಳ ಹಿಂದುತ್ವದ ಆಳ್ವಿಕೆ ಮತ್ತು 40 ವರ್ಷಗಳ ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ಕಥನಗಳು ಕಾಣುವುದು ಸಹಜ.

Kumarswamy on NICE: ಇವತ್ತಿಂದನೇ ನೈಸ್​ರೋಡ್ ಟೋಲ್ ಕಟ್ಟಬೇಡಿ ಅಂತ ಜನಕ್ಕೆ ಹೇಳ್ತೀನಿ ಎಂದ ಕುಮಾರಣ್ಣ #pratidhvani

ಕೋಮುವಾದ ಮತೀಯವಾದ ಮತ್ತು ರಾಜಕೀಯ

1980ರಲ್ಲಿ ಉಲ್ಬಣಿಸಿ, 90ರ ದಶಕದಲ್ಲಿ ಪರಾಕಾಷ್ಠೆ ತಲುಪಿದ ಕೋಮು ಧೃವೀಕರಣದ ಪ್ರಕ್ರಿಯೆಯೊಂದಿಗೇ ಚಾಲನೆ ಪಡೆದ ಮತ್ತೊಂದು ವಿದ್ಯಮಾನ ಎಂದರೆ ʼ ರಾಜಕೀಯ ನಿರೂಪಣೆಗಳ ʼ (Political Narratives) ಸಾಂಸ್ಥೀಕರಣ, ಕೇಂದ್ರೀಕರಣ ಹಾಗೂ ವ್ಯಾಪಕ ಪ್ರಸರಣ. ಹಿಂದುತ್ವದ ಸಾಂಸ್ಕೃತಿಕ ವ್ಯಾಖ್ಯಾನಗಳು ತಯಾರಿಸಿದ ಸಾಮಾಜಿಕ ಆಲೋಚನಾ ಕ್ರಮ ಮೂಲತಃ ಚರಿತ್ರೆ ಮತ್ತು ಪುರಾಣವನ್ನು ಸಮೀಕರಿಸಿದ್ದಷ್ಟೇ ಅಲ್ಲದೆ ವರ್ತಮಾನದ ಸನ್ನಿವೇಶಗಳಿಗೆ ಅನುಗುಣವಾಗಿ ಎರಡೂ ಸಂದರ್ಭಗಳ ಪ್ರಸಂಗಗಳನ್ನು ಮರುವ್ಯಾಖ್ಯಾನಗೊಳಿಸುವುದರಲ್ಲಿ ಯಶಸ್ವಿಯಾದವು. ಈ ಹೊಸ ವ್ಯಾಖ್ಯಾನಗಳೇ ಅಂತಿಮ ಸತ್ಯ ಎಂದು ಪ್ರಮಾಣೀಕರಿಸುವ ಬೌದ್ಧಿಕ ಕೇಂದ್ರಗಳನ್ನೂ ದೇಶಾದ್ಯಂತ ಸ್ಥಾಪಿಸಲಾಯಿತು. ಪಾಠಶಾಲೆಯ ಮಾದರಿಯಲ್ಲಿ ಜನಸಾಮಾನ್ಯರನ್ನು ಬೋಧನಾ ಶಿಸ್ತಿಗೊಳಪಡಿಸಿ ಅವರಲ್ಲಿ ನಂಬಿಕೆಯನ್ನು ಇಮ್ಮಡಿಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆದವು. ಸಾಂಸ್ಥಿಕ ರೂಪದಲ್ಲೇ ಇದ್ದ ಈ ಬೆಳವಣಿಗೆಗಳನ್ನು ಭೇದಿಸುವ ಪ್ರಯತ್ನಗಳು ನಡೆದಿದ್ದರೂ, ತಳಮಟ್ಟದ ಸಮಾಜವನ್ನು ತಲುಪಿರುವುದು ಅನುಮಾನ.

ಭಾರತೀಯ ಸಮಾಜ ಮತ್ತು ಸಂಸ್ಕೃತಿಯನ್ನು ಮತೀಯ/ಧಾರ್ಮಿಕ ಲಂಬ ವಿಭಜನೆಗೊಳಪಡಿಸಿದ (Religious Vertical division) ಹಿಂದುತ್ವದ ವ್ಯಾಖ್ಯಾನಕಾರರು ಹತ್ತು ವರ್ಷಗಳ ಅವಧಿಯಲ್ಲಿ ಭಾರತೀಯ ಸಮಾಜದ ಒಂದು ವರ್ಗವನ್ನು ಆಯಸ್ಕಾಂತದ ರೀತಿಯಲ್ಲಿ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದ್ದರು. ಇಂದಿಗೂ ಗುರುತಿಸಬಹುದಾದ ಈ ವರ್ಗಗಳನ್ನು ಮೇಲ್ಜಾತಿ, ಮೇಲ್ಪದರ (Elite), ಶ್ರೀಮಂತ, ಸುಶಿಕ್ಷಿತ ಹಾಗೂ ಸಾಮಾಜಿಕವಾಗಿ ಮೇಲ್ ಚಲನೆ ಪಡೆದ ಎಲ್ಲ ಜಾತಿ ಸಮುದಾಯಗಳಲ್ಲೂ ಕಾಣಬಹುದು. ಈ ಎಲ್ಲ ವರ್ಗಗಳೂ ಭಾರತದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಆಳ್ವಿಕೆಯ ಫಲಾನುಭವಿಗಳು ಎನ್ನುವುದು ಕುತೂಹಲಕಾರಿ ಅಂಶ. ಭಾರತದ ಮಾಧ್ಯಮ ಜಗತ್ತು 2000ದ ನಂತರ ಮನ್ವಂತರಕ್ಕೊಳಗಾದಾಗ ಅತಿವೇಗದಲ್ಲಿ ಸರ್ವವ್ಯಾಪಿಯಾದ ವಿದ್ಯುನ್ಮಾನ ಸಂವಹನ ಮಾಧ್ಯಮಗಳು ಈ ರಾಜಕೀಯ ಆಯಸ್ಕಾಂತದ ಕೇಂದ್ರಗಳಾದವು.

Laxman Savadi : ಕಾರ್ಯಕರ್ತರ ಫೇಸ್ ವಾಶ್ ಮಾಡಲ್ಲ, ಸಂಕಷ್ಟ ಬಗೆಹರಿಸ್ತೀನಿ.. #laxmansavadi #congress

2014ರ ಮಹಾ ಚುನಾವಣೆಗಳ ವೇಳೆಗೆ ಈ ಹೊಸ ವ್ಯಾಖ್ಯಾನಗಳೇ ಭಾರತದ ರಾಜಕೀಯ ಸಂಕಥನವಾಗಿ ರೂಪುಗೊಂಡಿತ್ತು. ಈ ಆವರಣದಲ್ಲಿ ಅಧಿಕಾರ ರಾಜಕಾರಣವನ್ನು ಧಾರ್ಮಿಕ-ಸಾಂಸ್ಕೃತಿಕ ಚೌಕಟ್ಟಿನಲ್ಲಿ ಪುನರ್ ವ್ಯಾಖ್ಯಾನಿಸುವುದರಲ್ಲಿ ಹಿಂದುತ್ವ ಯಶಸ್ವಿಯಾಗಿತ್ತು. ವ್ಯಕ್ತಿ ಕೇಂದ್ರಿತ ರಾಜಕೀಯ, ಸಿದ್ಧಾಂತ ಕೇಂದ್ರಿತ ಚುನಾವಣಾ ಪ್ರಕ್ರಿಯೆ ಮತ್ತು ಮಾರುಕಟ್ಟೆ ಬೆಂಬಲಿತ ರಾಜಕೀಯ ನಿರೂಪಣೆಗಳನ್ನು ದೇಶದ ಉದ್ದಗಲಕ್ಕೂ ವ್ಯವಸ್ಥಿತವಾಗಿ ತಲುಪಿಸುವಲ್ಲಿ ವಿದ್ಯುನ್ಮಾನ ಸಂವಹನ ಮಾಧ್ಯಮಗಳು ಯಶಸ್ವಿಯಾಗಿದ್ದವು. ಡಿಜಿಟಲ್ ಯುಗದಲ್ಲಿ ಈ ಜವಾಬ್ದಾರಿಯನ್ನು ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಎಕ್ಸ್ (ಟ್ರಿಟರ್) ಮತ್ತು ಯು ಟ್ಯೂಬ್ಗಳು ವಹಿಸಿಕೊಂಡಿವೆ. ವಾಟ್ಸಾಪ್ ವಿಶ್ವವಿದ್ಯಾಲಯ ಎಂದು ಬಣ್ಣಿಸಲಾಗುವ ಸುಳ್ಳುಗಳ ಬೌದ್ಧಿಕ ಕಾರ್ಖಾನೆ ಸ್ಥಾಪನೆಯಾಗಿದ್ದು ಈ ವಾತಾವರಣದಲ್ಲೇ.

ನಿರೂಪಣೆಗಳ ಸಾಮಾಜಿಕ ವಿಕೇಂದ್ರೀಕರಣ

1980-90ರ ದಶಕದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋಮುವಾದ-ಮತದ್ವೇಷ ಮತ್ತು ಮತಾಂಧತೆ ಸಾಂಸ್ಥಿಕವಾಗಿ ಕ್ರೋಢೀಕರಣವಾದರೂ, ಸಾಮಾಜಿಕವಾಗಿ ವಿಕೇಂದ್ರೀಕರಣಕ್ಕೊಳಗಾಗಿತ್ತು. ಮೇಲ್ನೋಟಕ್ಕೆ ಯಾವುದೇ ಆದೇಶ-ಆಜ್ಞೆ ಗೋಚರಿಸದಿದ್ದರೂ, ತಳಮಟ್ಟದ ಸಮಾಜದಲ್ಲಿ ಆಜ್ಞಾಪಾಲಕರ ಪಡೆಗಳು ವ್ಯವಸ್ಥಿತವಾಗಿ ಹುಟ್ಟಿಕೊಂಡವು. ಪ್ರತಿಯೊಂದು ಹಳ್ಳಿಯಲ್ಲೂ, ಪಟ್ಟಣಗಳಲ್ಲೂ, ನಗರದ ಬಡಾವಣೆಗಳಲ್ಲೂ ಪಸರಿಸಿದ ಈ ಕಾಲಾಳುಪಡೆಗಳು (Foot soldiers) ಕ್ರಮೇಣವಾಗಿ ಸಾಂಘಿಕ ರೂಪ (Organisational form) ಪಡೆಯುತ್ತಾ ಹೋದವು. ಈ ಚೌಕಟ್ಟುಗಳಲ್ಲಿ ಸೃಷ್ಟಿಯಾದ ಕಾರ್ಯಕರ್ತರ ಗುಂಪುಗಳನ್ನು, ಸಮಾಜಶಾಸ್ತ್ರೀಯ ನೆಲೆಯಲ್ಲಿ ತುಡುಗುಪಡೆಗಳು (Fringe Elements) ಎಂದು ವ್ಯಾಖ್ಯಾನಿಸಲಾಗುತ್ತದೆ.

ಈ ಗುಂಪುಗಳು ಕೇವಲ ಹಿಂದುತ್ವ ರಾಜಕಾರಣಕ್ಕೆ ಸೀಮಿತವಲ್ಲ ಎನ್ನುವುದೂ ವಾಸ್ತವ. ಮುಸ್ಲಿಂ ಸಮುದಾಯದಲ್ಲೂ ಇಂತಹ ಕಾಲಾಳುಪಡೆಗಳು ಸಕ್ರಿಯವಾಗಿವೆ. ಬಿಜೆಪಿಯ ಹಿಂದುತ್ವ ರಾಜಕಾರಣ ರಾಷ್ಟ್ರಮಟ್ಟದಲ್ಲಿ ಉತ್ಪಾದಿಸಿದ ಧಾರ್ಮಿಕ-ಸಾಂಸ್ಕೃತಿಕ ನಿರೂಪಣೆಗಳನ್ನು (Narratives) ಕಾರ್ಯರೂಪಕ್ಕಿಳಿಸುವ ಜವಾಬ್ದಾರಿಯನ್ನು ಈ ಪಡೆಗಳು ವಹಿಸಿಕೊಂಡಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಂ ಸಮಾಜದ ಮತಾಂಧ ಶಕ್ತಿಗಳು ತಮ್ಮದೇ ಪಡೆಗಳನ್ನು ನಿರ್ಮಿಸಿಕೊಂಡಿವೆ. ಲವ್ ಜಿಹಾದ್, ಹಿಜಾಬ್ ವಿವಾದ, ಗೋಹತ್ಯೆ, ಗೋಮಾಂಸ ಸೇವನೆ ಮತ್ತು ಸಂತೆ ವ್ಯಾಪಾರದಿಂದ ಧಾರ್ಮಿಕ ಉತ್ಸವಗಳವರೆಗೂ ವಿಸ್ತರಿಸಿದ ʼ ಜಿಹಾದ್ ʼ ಕಲ್ಪನೆ ಈ ಪ್ರತಿಗಾಮಿ ಶಕ್ತಿಗಳಿಗೆ ನೆಲೆ ಒದಗಿಸಿದೆ.

Vijayanand Kashappanavar : ಬಸವಜಯ ಮೃತ್ಯುಂಜಯ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ವಿಜಯಾನಂದ ಕಾಶಪ್ಪನವರ..

ಈ ಪ್ರಕ್ರಿಯೆಯಲ್ಲೇ, ತಳಮಟ್ಟದಲ್ಲಿ ಸೃಷ್ಟಿಯಾಗುವ ಸಾಮಾಜಿಕ ನಿರೂಪಣೆಗಳು (Social Narratives) ಮತ್ತು ಸಾರ್ವಜನಿಕ ಸಂಕಥನಗಳು (Public Discourses) ವಿಕೇಂದ್ರೀಕೃತ (De centralised) ಕೋಮುವಾದಿ/ಮತಾಂಧ ವ್ಯಾಖ್ಯಾನಗಳಿಗೆ ಒಳಪಟ್ಟವು. ಭಾರತದ ದುರಂತ ಎಂದರೆ ಈ ನಿರೂಪಣೆಗಳು ಆಕರ್ಷಿಸಿದ್ದು 80 ವರ್ಷಗಳ ಸಾಂವಿಧಾನಿಕ ಫಲಾನುಭವಿ ವರ್ಗಗಳನ್ನು, ಹಿತವಲಯದ ಸುಶಿಕ್ಷಿತರನ್ನು ಹಾಗೂ ತಳಸಮಾಜದ ಸಂಕಟಗಳಿಗೆ ವಿಮುಖವಾದ ಸ್ಥಿತಿವಂತ ಸಮುದಾಯಗಳನ್ನು. ನೆಹರೂ ಯುಗದ ಸಾರ್ವಜನಿಕ ಉದ್ಯಮಗಳ, ಶೈಕ್ಷಣಿಕ-ಉನ್ನತ ಬೌದ್ಧಿಕ ಸಂಸ್ಥೆಗಳ, ವಿಜ್ಞಾನ ಕೇಂದ್ರಗಳ ಬೌದ್ಧಿಕ ಉತ್ಪನ್ನಗಳು ಈ ಸಂಕಥನಗಳ ರೂವಾರಿಯಾಗಿರುವುದು ವಿಡಂಬನೆಯಾದರೂ ವಾಸ್ತವ. ಈ ವರ್ಗಗಳಿಂದ ಹೊರಡುವ ಅಭಿಪ್ರಾಯಗಳೇ ಸಾಮಾಜಿಕ ಮಾಧ್ಯಮಗಳನ್ನು (Social Media) ಆವರಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಕೋಟ್ಯಂತರ ಜನರನ್ನು ಪ್ರಭಾವಿಸುತ್ತಿವೆ.

ವಿಕೃತ ಮನಸ್ಥಿತಿಯ ದುಷ್ಟ ರೂಪ
ದೆಹಲಿಯ ಜಂತರ್ಮಂತರ್ ವಿದ್ಯಾರ್ಥಿ-ಯುವಜನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ AISA ವಿದ್ಯಾರ್ಥಿ ಸಂಘಟನೆಯ ನೇಹಾ ಬೋರಾ ಅವರ ಮೇಲೆ ಶಾಯಿ ಎರಚಿರುವ ಘಟನೆಯನ್ನು ಈ ವಾಸ್ತವಿಕ ಹಿನ್ನೆಲೆಯಲ್ಲಿ ನೋಡಬೇಕಿದೆ. ಇದಕ್ಕೂ ಮುನ್ನ ಕಾಕ್ರೋಚ್ ಜನತಾಪಕ್ಷದ ಅಭಿಜೀತ್ ದೀಪ್ಕೆ ಅವರ ಮೇಲೆ ನೀಲಿ ಶಾಯಿ ಎರಚಲಾಗಿತ್ತು. ಬದಲಾಗುತ್ತಿರುವ ಭಾರತದಲ್ಲಿ ಇದು ಅಚ್ಚರಿ ಮೂಡಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ವಕೀಲೆಯೊಬ್ಬರು ಪ್ರೊ. ಭಗವಾನ್ ಅವರ ಮೇಲೆ ಕೋರ್ಟ್ ಆವರಣದಲ್ಲೇ ಮಸಿ ಎರಚಿದ್ದರು. ಭಿನ್ನಮತವನ್ನು ಸಹಿಸದ ಸಮಾಜವೊಂದು ಇಂತಹ ವಿಕೃತ ಮನಸ್ಥಿತಿಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ಎಂದರೆ, ಮೂರೂ ಪ್ರಸಂಗಗಳಲ್ಲಿ ಮಸಿ ಎಸೆದವರ ವ್ಯಕ್ತಿತ್ವ/ವೃತ್ತಿ/ಸಾಮಾಜಿಕ ಹಿನ್ನೆಲೆ ಭಿನ್ನವಾಗಿದ್ದರೂ, ಮೂವರನ್ನೂ ಬಂಧಿಸುವ ಸೈದ್ಧಾಂತಿಕ ಆಲೋಚನೆ ಮಾತ್ರ ಒಂದೇ.

2020-21ರ ರೈತಮುಷ್ಕರದ ಸಂದರ್ಭದಲ್ಲಿ ಹೊರಬಂದಿದ್ದ ಈ ವಿಕೃತ ಮನಸ್ಥಿತಿ ಇತ್ತೀಚಿನ ಜಂತರ್ ಮಂತರ್ ಯುವ ಜನಾಂದೋಲನದ ಸಂದರ್ಭದಲ್ಲಿ ಮರುಕಳಿಸಿದೆ. ದ್ವೇಷ, ಮತ್ಸರ, ಅಸೂಯೆ ಮತ್ತು ಅಸಹಿಷ್ಣುತೆಯ ಭಾವನೆಗಳು ದಶಕಗಳ ಕಾಲ ಒಂದೇ ಸ್ತರದಲ್ಲಿದ್ದರೆ ಅದು, ಈ ಪ್ರತಿಗಾಮಿ ಭಾವನೆಗಳು (Reactionary Feelings) ಸಮಾಜದಲ್ಲಿ ಬೇರೂರಿರುವ ಲಕ್ಷಣವನ್ನು ಬಿಂಬಿಸುತ್ತದೆ. ಸಾರ್ವಜನಿಕವಾಗಿ ಲಜ್ಜೆಯಿಲ್ಲದೆ ವ್ಯಕ್ತವಾಗುವ ಇಂತಹ ಅಭಿಪ್ರಾಯಗಳ ಏಕರೂಪತೆ (Uniformity) ನಿರೂಪಣೆಗಳ ಕೇಂದ್ರೀಕೃತ-ಸಾಂಸ್ಥೀಕರಣಗೊಂಡ (Centralised-Institutionalised) ಲಕ್ಷಣವನ್ನು ಬಿಂಬಿಸುತ್ತದೆ.

Amit Shah : ಕೇಂದ್ರದ ವಿರುದ್ಧ ವಿಪಕ್ಷಗಳ ಆಕ್ರೋಶ, ಗದ್ದಲ, ಕೋಲಾಹಲ..

ವಿದೇಶಿ ಕೈವಾಡ, ವಿದೇಶಿ ಧನಸಹಾಯ, ಅರ್ಬನ್ ನಕ್ಸಲ್, ದೇಶ ವಿರೋಧಿ (Anti National), ಪಾಕ್ ಏಜೆಂಟ್, ಜಿಹಾದಿ, ತುಕಡೆ ತುಕಡೆ ಗ್ಯಾಂಗ್, ಕಾಂಗಿ (Congi ಎಂದರೆ ಕಾಂಗ್ರೆಸ್ ಏಜೆಂಟ್ ಎಂದರ್ಥ) ಇವೇ ಮೊದಲಾದ ಕಲ್ಪಿತ ಆರೋಪಗಳನ್ನು ಆಂದೋಲನಕಾರರ ಮೇಲೆ ಹೊರಿಸುವುದು ಈ ಲಕ್ಷಣವನ್ನು ಮತ್ತೆ ಮತ್ತೆ ದೃಢೀಕರಿಸುತ್ತದೆ. ದುರಂತ ಎಂದರೆ ಸಮಾಜದ ಸುಶಿಕ್ಷಿತ ವರ್ಗಗಳಲ್ಲೂ ಇದರ ಪ್ರತಿಧ್ವನಿಯನ್ನು ಕೇಳಬಹುದು. ಸಾಂಸ್ಥೀಕರಣಗೊಂಡ ಯಾವುದೇ ಆಲೋಚನಾ ವಿಧಾನದಲ್ಲಿ ಮೇಲಿನಿಂದ ಕೆಳಗಿನವರೆಗೆ, ಎಲ್ಲ ಮಗ್ಗುಲುಗಳಲ್ಲೂ ಈ ರೀತಿಯ ಏಕರೂಪತೆ (Uniformity) ಕಾಣಬಹುದು. ಸ್ವಂತ ಆಲೋಚನಾ ಶಕ್ತಿ ಇಲ್ಲದ ಅಥವಾ ಮಾನಸಿಕ ಸ್ವಾಯತ್ತತೆಯನ್ನು (Psychological Autonomy) ಕಳೆದುಕೊಂಡಿರುವ ಸಮಾಜದಲ್ಲಿ ಮಾತ್ರ ಇಂತಹ ವಿಕೃತಿಯನ್ನು ಗುರುತಿಸಲು ಸಾಧ್ಯ. ದುರದೃಷ್ಟವಶಾತ್ ನಾವು ಇಂತಹ ಸಮಾಜದ ನಡುವೆಯೇ ಇದ್ದೇವೆ.

ದೌರ್ಜನ್ಯಗಳ ನಡುವೆ ಯುವ ಜನಾಂಗ
ಈ ಸಮಾಜಕ್ಕೆ ವಿದ್ಯಾರ್ಥಿನಿ ನೇಹಾ ಬೋರಾ ಅವರ ಮೇಲೆ ಚೆಲ್ಲಿದ ಶಾಯಿ ವಿಕೃತ ಗೆಲುವಿನ ಸಂಕೇತವಾಗಿ ಕಾಣುತ್ತದೆ. ಇಲ್ಲಿ ಶಾಯಿಯ ಬಣ್ಣ ಮುಖ್ಯವಾಗುವುದಿಲ್ಲ. ಎರಚಿದ ವ್ಯಕ್ತಿಯ ಮನದಾಳದಲ್ಲಿ ಬೇರೂರಿರುವ ದ್ವೇಷ-ಅಸಹನೆ ಪ್ರಧಾನವಾಗುತ್ತದೆ. ಈ ದ್ವೇಷಾಸೂಯೆ ಸಾಂಸ್ಥೀಕರಣಗೊಂಡಿರುವುದರಿಂದ ದೆಹಲಿಯಲ್ಲಿ ನಡೆದ ಪೊಲೀಸ್ ದೌರ್ಜನ್ಯವೂ ಸಹ ಸಹನೀಯವಾಗಿಬಿಡುತ್ತದೆ. NEET ಪ್ರಶ್ನೆ ಪತ್ರಿಕೆಯ ಸೋರಿಕೆ, ಅದರಿಂದ ಬಾಧಿತರಾದ 20 ಲಕ್ಷ ಆಕಾಂಕ್ಷಿಗಳು, ಜೀವ ತೆತ್ತ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗಣ್ಯವಾಗಿ ಕಾಣತೊಡಗುತ್ತಾರೆ. ಜಂತರ್ ಮಂತರ್ನಲ್ಲಿ ಪರೀಕ್ಷಾ ವಿಧಾನದ ಲೋಪಗಳು ಮತ್ತು ರಾಜಕೀಯ ಉತ್ತರದಾಯಿತ್ವ ಮುಖ್ಯವಾಗಿ ಧ್ವನಿಸಿದ್ದರೂ, ಇಡೀ ಹೋರಾಟವನ್ನು ವ್ಯಕ್ತಿ ಕೇಂದ್ರಿತವಾಗಿಸುವ ಮೂಲಕ ಅನುಮಾನಿಸಲಾಗುತ್ತದೆ.

ಈ ಸಮಾಜದ ಅಂತರಂಗದಲ್ಲಿ ಶಾಯಿ ದಾಳಿಗೆ ತುತ್ತಾದ ದೀಪ್ಕೆ-ನೇಹಾ ಆಗಲೀ, ಲಾಠಿ ಏಟಿಗೆ ನಲುಗಿದ ನೂರಾರು ಯುವ ಜನರಾಗಲೀ, ಆತ್ಮಹತ್ಯೆಗೆ ಶರಣಾದ ಯುವ ಜೀವಗಳಾಗಲೀ ಅನುಕಂಪಕ್ಕೆ ಅರ್ಹವಾಗುವುದೇ ಇಲ್ಲ. ಬದಲಾಗಿ, ಇನ್ನೂ ಕ್ರೂರವಾಗಿ ಹೋರಾಟವನ್ನು ಹತ್ತಿಕ್ಕುವ ಆಳ್ವಿಕೆ ಇದ್ದಿದ್ದರೆ, ಜಂತರ್ ಮಂತರ್ನಲ್ಲಿ ಸದ್ದೇ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಉತ್ತರಪ್ರದೇಶದ ಬುಲ್ಡೋಜರ್ ನ್ಯಾಯವನ್ನೇ ಇಲ್ಲಿಯೂ ಅನುಸರಿಸಿದ್ದರೆ ಯುವ ಜನರು ಚದುರಿಹೋಗುತ್ತಿದ್ದರು ಎಂಬ ವಿಕೃತ ಅಭಿಪ್ರಾಯಗಳೂ ಕೇಳಿಬರುತ್ತವೆ. ಅಂದರೆ ದಮನವನ್ನೂ ಪ್ರಮಾಣೀಕರಿಸುವ, ವರ್ಗೀಕರಿಸಿ ವೈಭವೀಕರಣಗೊಳಿಸುವ ಒಂದು ಪರಂಪರೆಯನ್ನು ಈ ಸಮಾಜ ಆಂತರಿಕೀಕರಣಗೊಳಿಸಿಕೊಂಡಿದೆ (Internalised) . ಇದೇ ಧ್ವನಿಯಲ್ಲೇ ಗೌರಿ ಲಂಕೇಶ್, ಕಲಬುರ್ಗಿ ಅವರ ಹತ್ಯೆಯನ್ನೂ ವ್ಯಾಖ್ಯಾನಿಸಲಾಗುತ್ತದೆ. ಹತ್ಯೆ ಮಾಡುವುದು ತಪ್ಪು ಆದರೆ “ ಅವರೂ ಮಿತಿ ಮೀರಬಾರದಿತ್ತು ” ಎಂದು ಹೇಳುವ ಮೂಲಕ ಅಭಿಪ್ರಾಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಗೆ ಮಿತಿಗಳನ್ನು ನಿರ್ಮಿಸಲಾಗುತ್ತದೆ.

ಕುಮಾರಸ್ವಾಮಿ ವಿರುದ್ಧ ಶಾಸಕ ಗುಬ್ಬಿ ಶ್ರೀನಿವಾಸ ವಾಗ್ದಾಳಿ.. #pratidhvani

ಈ ಮಿತಿ ನಿರ್ಧರಿಸುವ, ಲಕ್ಷ್ಮಣರೇಖೆಗಳನ್ನು ನಿಷ್ಕರ್ಷೆ ಮಾಡುವ ಜವಾಬ್ದಾರಿಯನ್ನು ಸಾಂಸ್ಥಿಕವಾಗಿ ಕೇಂದ್ರೀಕರಣಗೊಳಿಸಲಾಗಿರುತ್ತದೆ. ತಳಮಟ್ಟದವರೆಗೂ ಇದನ್ನು ಕಾಪಾಡುವ ಅಥವಾ ಉಲ್ಲಂಘನೆಯಾಗದ ಹಾಗೆ ಜಾಗ್ರತೆ ವಹಿಸುವ ಕೆಲಸವನ್ನು ತುಡುಗುಪಡೆಗಳು, ಕಾಲಾಳು ಪಡೆಗಳು ಮತ್ತು ಬೌದ್ಧಿಕ ಚಿಂತನಾವಾಹಿನಿಗಳು ನಿರ್ವಹಿಸುತ್ತವೆ. ಅನಪೇಕ್ಷಣೀಯ ಎನಿಸಿದರೂ ಸಮಾಜದ ನಡುವೆ ಇಂತಹ ದುಷ್ಟ ಪ್ರವೃತ್ತಿಯನ್ನು ಸಮರ್ಥಿಸುವ, ಮೌನವಾಗಿ ಸಮ್ಮತಿಸುವ ಜವಾಬ್ದಾರಿಯನ್ನು ಸಮಾಜದ ಮೇಲ್ಜಾತಿ, ಮೇಲ್ವರ್ಗದ ಸುಶಿಕ್ಷಿತರು ನಿರ್ವಹಿಸುತ್ತಾರೆ. ಇದರ ಪರಿಣಾಮ ಎಂದರೆ ಹಿಂಸೆ, ಕ್ರೌರ್ಯ, ದ್ವೇಷ, ಹತ್ಯೆ, ದಾಳಿ ಈ ಎಲ್ಲ ಅಮಾನುಷ ವಿದ್ಯಮಾನಗಳನ್ನೂ ಸಾಪೇಕ್ಷಗೊಳಿಸಿ, ಸಮಾಜದ ಒಂದು ವರ್ಗದ ಸಮ್ಮತಿ ಪಡೆಯಲಾಗುತ್ತದೆ. ಗಾಂಧಿ ಹತ್ಯೆಯನ್ನೂ ಇದೇ ಪ್ರಮೇಯ ಬಳಸಿ ವ್ಯಾಖ್ಯಾನಿಸಲಾಗುತ್ತದೆ. ಈ ದುಷ್ಟ ಪ್ರವೃತ್ತಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಳಗಿನಿಂದಲೇ ಕೊರೆಯುತ್ತಾ ಶಿಥಿಲಗೊಳಿಸುವ ಪ್ರಧಾನ ವ್ಯಾಧಿಯಾಗಿಬಿಡುತ್ತದೆ.

ಈ ಸಾಂಸ್ಥೀಕರಣ, ಆಚರಣಾತ್ಮಕ ವಿಕೇಂದ್ರೀಕರಣ ಹಾಗೂ ಕಾರ್ಯಾಚರಣೆಯ ಪ್ರಸರಣವು ಅಮೂರ್ತ ರೂಪದಲ್ಲೇ ಇರುವುದರಿಂದ ಯಾರನ್ನೂ ನೇರವಾಗಿ ದೂಷಿಸಲಾಗುವುದಿಲ್ಲ. ಇದರ ಪ್ರಭಾವಕ್ಕೊಳಗಾದ ವಿದ್ಯಾವಂತರೂ ಸಹ ವಶೀಕರಣಕ್ಕೊಳಗಾಗಿರುತ್ತಾರೆ, ಭ್ರಮಾಧೀನರಾಗಿರುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ. ಹಾಗಾಗಿಯೇ ಈ ಸಮಾಜಗಳಲ್ಲೂ ಸಹ NEET ಪರೀಕ್ಷಾ ಅಕ್ರಮಗಳಿಂದ ಪ್ರಾಣ ಕಳೆದುಕೊಂಡ ಮಕ್ಕಳ ಬಗ್ಗೆ ಅನುಕಂಪ ಕಂಡುಬರುವುದಿಲ್ಲ. ಬದಲಾಗಿ ಈ ಅನ್ಯಾಯದ ವಿರುದ್ಧ ದನಿಎತ್ತಿದ ಯುವ ಜನರು ಅಪರಾಧಿಗಳಾಗಿಬಿಡುತ್ತಾರೆ. ಅಲ್ಲಿ ದನಿಗೂಡಿಸಿದ ಯುವ ವಿದ್ಯಾರ್ಥಿನಿಯರ ವಿರುದ್ಧ ನಡೆಯುತ್ತಿರುವ ಬೌದ್ಧಿಕ ದಾಳಿ, ಜೀವ ಬೆದರಿಕೆ, ಸಾಮಾಜಿಕ ಮಾಧ್ಯಮಗಳ ಟ್ರೋಲ್ಗಳು ಎಲ್ಲವೂ ಸ್ವೀಕೃತವಾಗಿಬಿಡುತ್ತವೆ.

Zameer Ahmed Khan in Vijayanagara : ಬರಪೀಡಿತ ಪ್ರದೇಶಕ್ಕೆ ಜಮೀರ್ ಭೇಟಿ ರೈತರಿಗೆ ನಾವಿದ್ದೇವೆ ಎಂಬ ಭರವಸೆ

ಮೌಲ್ಯಗಳ ಸಂಘರ್ಷದಲ್ಲಿ ಪ್ರಜಾಪ್ರಭುತ್ವ

ಭಾರತದ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುತ್ತಿರುವುದು ವಿಶಾಲ ಸಮಾಜದ ಕಲಿತ ವರ್ಗಗಳ ಈ ಧೋರಣೆ. ಇದಕ್ಕೆ ಅಪವಾದಗಳಿರಬಹುದು ಆದರೆ ಹಿಂದುತ್ವದ ದ್ವೇಷ ರಾಜಕಾರಣ ಮತ್ತು ಕೋಮುವಾದಿ ನಿರೂಪಣೆಗಳು ಗಟ್ಟಿಯಾಗುತ್ತಿರುವುದಕ್ಕೆ ಕಾರಣ ಇದೇ ಎನ್ನುವುದು ವಾಸ್ತವ. ಪ್ರಜಾಪ್ರಭುತ್ವ ಗಟ್ಟಿಯಾಗಲು, ದೀರ್ಘ ಕಾಲ ಬಾಳಲು, ಭವಿಷ್ಯದ ಪೀಳಿಗೆಗಳನ್ನೂ ತಲುಪಲು ಬೇಕಿರುವುದು ಚುನಾಯಿತ ಆಳ್ವಿಕೆಗಳು ಮಾತ್ರವೇ ಅಲ್ಲ, ಅದನ್ನೂ ಮೀರಿದಂತೆ ಸಮಾಜದ ತಳಸ್ತರದಲ್ಲಿ ನೆಲೆಯೂರಿದ ಪ್ರಜಾತಂತ್ರ ಮೌಲ್ಯಗಳು ನಿರ್ಣಾಯಕವಾಗುತ್ತವೆ. ಈ ಮೌಲ್ಯಗಳೇ ನಮ್ಮ ಸಾಮಾಜಿಕ ಸಂಕಥನ ಮತ್ತು ಸಂವಾದವನ್ನು ನಿರ್ದೇಶಿಸಿ, ನಿಯಂತ್ರಿಸುತ್ತವೆ. ಇಲ್ಲಿ ಅಪಮೌಲ್ಯೀಕರಣದ ಪ್ರತಿಯೊಂದು ಹೆಜ್ಜೆಯೂ ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಒಂದೊಂದು ಮೆಟ್ಟಿಲಾಗುತ್ತದೆ. ಉಳ್ಳವರು, ಕಲಿತವರು ಇಬ್ಬದಿಯಲ್ಲಿ ಮಿನಾರುಗಳನ್ನು ಕಟ್ಟಿ ಮೆರೆಯುತ್ತಿರುತ್ತಾರೆ ಆದರೆ ತಳಪಾಯದಲ್ಲಿ ಬೃಹತ್ ಸಂಖ್ಯೆಯ ಸಮಾಜಗಳು ಶಾಶ್ವತವಾಗಿ ಅಪ್ರಸ್ತುತವಾಗುತ್ತಿರುತ್ತವೆ.

2026ರ ವಿಕಸಿತ ಭಾರತ ಈ ಅಪಾಯವನ್ನು ಎದುರಿಸುತ್ತಿದೆ. ಪ್ರಗತಿಪರ, ಎಡಪಂಥೀಯ ಚಳುವಳಿಗಳು ತಮ್ಮ ಸ್ವಯಂ ನಿರ್ಮಿತ ವೃತ್ತಗಳಿಂದ ಕಳಚಿಕೊಂಡು, ಸಿದ್ಧಮಾದರಿಗಳಿಂದಾಚೆ ಮಾರ್ಗೋಪಾಯಗಳನ್ನು ಶೋಧಿಸಬೇಕಿದೆ. ಈ ಮನಸ್ಸುಗಳಿಗೆ ಅಂಟಿಸಬಹುದಾದ ಎಲ್ಲ ರೀತಿಯ ಹಣೆಪಟ್ಟಿಗಳನ್ನೂ ಅಂಟಿಸಿಯಾಗಿದೆ. ಈಗ ಇವುಗಳನ್ನು ಕಿತ್ತೊಗೆದು ಅಥವಾ ಅಪ್ರಸ್ತುತಗೊಳಿಸಿ, ಭವಿಷ್ಯದ ಭಾರತವನ್ನು ಮಾನವೀಯ ಪ್ರಜಾಪ್ರಭುತ್ವ (Humane Democracy) ಆಗಿಸುವ ಕಡೆಗೆ ಸಾಗುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಹಾದಿಯಲ್ಲಿ ನೇಹಾ ಬೋರಾ, ಡಾನಿಶ್ ಅಲಿ, ಅಭಿಜೀತ್ ದೀಪ್ಕೆ ಹಾಗೂ ಇವರ ಸಾವಿರಾರು ಯುವ ಸಂಗಾತಿಗಳು ಕತ್ತಲೆ ನೀಗುವ ಸಣ್ಣ ದೀಪಗಳಾಗಿ ಕಾಣುತ್ತಾರೆ.
ಶಾಯಿ ಈ ದೀಪಗಳನ್ನು ನಂದಿಸುವುದಿಲ್ಲ. ಇನ್ನೂ ಜ್ವಲಿಸುವಂತೆ ಮಾಡುತ್ತದೆ.

Previous Post

ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸಿದ್ಧತೆ; ಜನವರಿಯೊಳಗೆ ಪಕ್ಷ ಘೋಷಣೆ: ಚೇತನ್ ಅಹಿಂಸಾ

Next Post

Heart Attack: ಹಾಸ್ಟೆಲ್ ಶೌಚಾಲಯದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ದಾರುಣ ಸಾ**

Related Posts

ಸತೀಶ್ ಜಾರಕಿಹೊಳಿ ಕುಟುಂಬದ ಸ್ಥಳಗಳಲ್ಲಿ ಇಡಿ ಶೋಧ; ₹3.3 ಕೋಟಿ ನಗದು, ವಿದೇಶಿ ಕರೆನ್ಸಿ ಪತ್ತೆ?
Top Story

ಸತೀಶ್ ಜಾರಕಿಹೊಳಿ ಕುಟುಂಬದ ಸ್ಥಳಗಳಲ್ಲಿ ಇಡಿ ಶೋಧ; ₹3.3 ಕೋಟಿ ನಗದು, ವಿದೇಶಿ ಕರೆನ್ಸಿ ಪತ್ತೆ?

by ಪ್ರತಿಧ್ವನಿ
September 11, 2026
0

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ...

Read moreDetails
‘ರಾಜಕೀಯದಿಂದ ಹಿಂದೆ ಸರಿಯಬೇಡಿ’; ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕಿವಿಮಾತು? ಹೇಳಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ ರಾಗಾ

‘ರಾಜಕೀಯದಿಂದ ಹಿಂದೆ ಸರಿಯಬೇಡಿ’; ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕಿವಿಮಾತು? ಹೇಳಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ ರಾಗಾ

September 11, 2026
ಗಣೇಶ ಹಬ್ಬದಿಂದ ಯಾರಿಗೆ ಎಷ್ಟು ಲಾಭ?; ₹30 ಸಾವಿರ ಕೋಟಿಯ ವಹಿವಾಟಿನ ಸಂಪೂರ್ಣ ಲೆಕ್ಕ ಇಲ್ಲಿದೆ

ಗಣೇಶ ಹಬ್ಬದಿಂದ ಯಾರಿಗೆ ಎಷ್ಟು ಲಾಭ?; ₹30 ಸಾವಿರ ಕೋಟಿಯ ವಹಿವಾಟಿನ ಸಂಪೂರ್ಣ ಲೆಕ್ಕ ಇಲ್ಲಿದೆ

September 11, 2026
ಪಂಚಾಯಿತಿಯಿಂದ ಸಂಸತ್ ವರೆಗೆ ಹೊಸ ನಾಯಕತ್ವ ಅಗತ್ಯ : ಸಿಎಂ ಡಿ ಕೆ ಶಿವಕುಮಾರ್..

ಪಂಚಾಯಿತಿಯಿಂದ ಸಂಸತ್ ವರೆಗೆ ಹೊಸ ನಾಯಕತ್ವ ಅಗತ್ಯ : ಸಿಎಂ ಡಿ ಕೆ ಶಿವಕುಮಾರ್..

September 11, 2026
ವಿಜಯೇಂದ್ರ ನೇತೃತ್ವದ ಪಾದಯಾತ್ರೆಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲವೇ?

ವಿಜಯೇಂದ್ರ ನೇತೃತ್ವದ ಪಾದಯಾತ್ರೆಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲವೇ?

September 11, 2026
Next Post
Heart Attack: ಹಾಸ್ಟೆಲ್ ಶೌಚಾಲಯದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ದಾರುಣ ಸಾ**

Heart Attack: ಹಾಸ್ಟೆಲ್ ಶೌಚಾಲಯದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ದಾರುಣ ಸಾ**

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada