ಸ್ಯಾಂಡಲ್‌ವುಡ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಕರ್ನಾಟಕದಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಸಮಾನ ಮನಸ್ಕರು ಹಾಗೂ ವಿವಿಧ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಚಳವಳಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮುಂಬರುವ ಜನವರಿಯೊಳಗೆ ನೂತನ ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಪ್ರವಾಸ ಕೈಗೊಂಡು ವಿವಿಧ ಜನಪರ ಸಂಘಟನೆಗಳು, ರೈತರು, ದಲಿತರು, ಕಾರ್ಮಿಕರು ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಹಲವು ಸಂಘಟನೆಗಳು ಪ್ರತ್ಯೇಕವಾಗಿ ತಮ್ಮದೇ ಆದ ವಿಚಾರಗಳಿಗಾಗಿ ಹೋರಾಟ ನಡೆಸುತ್ತಿವೆ. ಈ ಎಲ್ಲಾ ಜನಪರ ಧ್ವನಿಗಳನ್ನು ಒಂದೇ ವೇದಿಕೆಯಡಿ ತರಲು ಸಮಾನ ಮನಸ್ಕರು ಒಗ್ಗೂಡಿ ರಾಜಕೀಯ ಪಕ್ಷ ಕಟ್ಟುವ ಅಗತ್ಯವಿದೆ ಎಂದು ಚೇತನ್ ಅಭಿಪ್ರಾಯಪಟ್ಟರು.

ಇತರ ಪರ್ಯಾಯ ರಾಜಕೀಯ ಪ್ರಯತ್ನಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಟ ಉಪೇಂದ್ರ ಅವರ ‘ಪ್ರಜಾಕೀಯ’ ಪರಿಕಲ್ಪನೆ ಹಾಗೂ ಸಿದ್ಧಾಂತವಿಲ್ಲದ ಜಾತಿ ಆಧಾರಿತ ರಾಜಕೀಯ ಪಕ್ಷಗಳು ತಮ್ಮ ನಿಲುವಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ರಾಜಕೀಯ ಪಕ್ಷಗಳು ನಾಯಕರ ವೈಯಕ್ತಿಕ ಲಾಭ ಮತ್ತು ಸ್ವಾರ್ಥಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ ಎಂದು ಟೀಕಿಸಿದ ಅವರು, ತಮಿಳುನಾಡಿನ ನಟ ವಿಜಯ್ ಅವರ ‘ಟೀವಿಕೆ’ ಪಕ್ಷದ ಪ್ರಭಾವವೂ ಬಹುತೇಕ ಸ್ಟಾರ್‌ಡಮ್ ಆಧಾರಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಲನಚಿತ್ರ ಕ್ಷೇತ್ರದ ಜನಪ್ರಿಯತೆಯನ್ನು ಆಧರಿಸಿ ರಾಜಕೀಯಕ್ಕೆ ಪ್ರವೇಶಿಸುವ ಪ್ರವೃತ್ತಿಯನ್ನು ಚೇತನ್ ಟೀಕಿಸಿದರು. ನಾಯಕರು ಕೇವಲ ಸಿನಿಮಾ ಪರದೆಯ ಮೇಲಿನ ಜನಪ್ರಿಯತೆಯನ್ನು ಅವಲಂಬಿಸದೆ, ಜನರ ನಡುವೆ ಬೆರೆತು ಅವರ ನೈಜ ಸಮಸ್ಯೆಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಂತಹ ನಾಯಕರು ಜನರ ನಡುವೆ ಕೆಲಸ ಮಾಡಿದಾಗ ಮಾತ್ರ ಬಡವರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಅರಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ಮುಂದಿನ ದಿನಗಳಲ್ಲಿ ಹಲವು ಅಡಚಣೆಗಳು ಎದುರಾದರೂ ಅವುಗಳನ್ನು ಮೆಟ್ಟಿ ನಿಂತು ಜನಪರ ಹೋರಾಟವನ್ನು ಮುಂದುವರಿಸುವುದಾಗಿ ಚೇತನ್ ಅಹಿಂಸಾ ಹೇಳಿದ್ದಾರೆ.





