ಕಳೆದ ಎರಡು ತಿಂಗಳುಗಳಿಂದ ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿರುವ ಹಿಜಾಬ್ ಮೇಲಿನ ನಿಷೇಧದ ಪ್ರಕರಣದಲ್ಲಿ ಕೊನೆಗೂ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಸರ್ಕಾರದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರ ತ್ರಿಸದಸ್ಯ ಪೀಠವು ನೀಡಿರುವ ತೀರ್ಪಿನ ಐದು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಹಿಜಾಬ್ ಇಸ್ಲಾಂಗೆ ಅನಿವಾರ್ಯವಲ್ಲ
ಅರ್ಜಿದಾರರು ಮತ್ತು ರಾಜ್ಯ ಸರ್ಕಾರವು ವಿಚಾರಣೆಯ ಸಮಯದಲ್ಲಿ ನಡೆಸಿದ ವಾದಗಳನ್ನು ತಮ್ಮ ತೀರ್ಪು ಆಧರಿಸಿದೆ ಎಂದು ಮಂಗಳವಾರ ನ್ಯಾಯಾಧೀಶರು ಹೇಳಿದ್ದಾರೆ.
ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಅರ್ಜಿದಾರ ಪರ ವಕೀಲರು ವಾದಿಸಿದ್ದರು. ಶಿಕ್ಷಣ ಸಂಸ್ಥೆಗಳಲ್ಲಿ ಸ್ಕಾರ್ಫ್‌ಗೆ ಅವಕಾಶ ನೀಡದಿರುವುದು ಸಂವಿಧಾನದ 25 ನೇ ವಿಧಿಯಡಿಯಲ್ಲಿ ನೀಡಿರುವ ʼಧರ್ಮವನ್ನು ಆಚರಿಸುವ ಮತ್ತು ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆʼ ಎಂದು ಅವರು ವಾದ ಮಾಡಿದ್ದರು.
ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರಿಗೆ ಅನಿವಾರ್ಯವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಕೇರಳ ಹೈಕೋರ್ಟ್ 2018 ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಾಧೀಶರು, ಧರ್ಮವನ್ನು ಆಚರಿಸುವ ಮೂಲಭೂತ ಹಕ್ಕುಗಳ ರಕ್ಷಣೆಯು ʼಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕುʼ ಎಂದು ಹೇಳಿದ್ದಾರೆ.
ಕುರಾನ್ ಮತ್ತು ಇತರ ಇಸ್ಲಾಮಿಕ್ ಪಠ್ಯದ ಹಲವಾರು ಭಾಗಗಳನ್ನು ಉಲ್ಲೇಖಿಸಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಕಡ್ಡಾಯವಲ್ಲ ಎಂದು ನ್ಯಾಯಪೀಠವು ನೀಡಿರುವ ತೀರ್ಮಾನಿಸಿದೆ.
“ಹಿಜಾಬ್ ಧರಿಸದವವರು ಪಾಪಿಗಳಾಗುತ್ತಾರೆ, ಅಥವಾ ಇಸ್ಲಾಂ ತನ್ನ ಧರ್ಮದ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂದು (ಕುರಾನಿನಲ್ಲಿ) ಇಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
Also Read : ಹಿಜಾಬ್ ವಿವಾದ: ಹೈಕೋರ್ಟ್ ತೀರ್ಪು ಹೊರಬಿದ್ದ ಕ್ಷಣಗಳಲ್ಲೇ ರಿಟ್ ಅರ್ಜಿ!
ಹಿಜಾಬ್ ಧರಿಸದ ಮಹಿಳೆಗೆ ಕುರಾನ್‌ನಲ್ಲಿ ಯಾವುದೇ ಶಿಕ್ಷೆಯನ್ನು ಸೂಚಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಧಾರ್ಮಿಕ ಗ್ರಂಥದ ಶ್ಲೋಕಗಳ ಭಾಷಾ ರಚನೆಯು ಮಹಿಳೆಯರಿಗೆ ಶಿರವಸ್ತ್ರಗಳು ಕಡ್ಡಾಯವಲ್ಲ ಎಂಬ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ಸಾಮಾಜಿಕ ಭದ್ರತೆಯ ಮಾನದಂಡವಾಗಿ ಹಿಜಾಬ್ ಧರಿಸುವುದನ್ನು ಶಿಫಾರಸು ಮಾಡಲಾಗಿತ್ತು “ಈ ಉಡುಪನ್ನು ಧರಿಸುವ ಅಭ್ಯಾಸವು ಸಂಸ್ಕೃತಿಯ ಭಾಗವಾಗಿರಬಹುದು, ಆದರೆ ಖಂಡಿತವಾಗಿಯೂ ಧರ್ಮದ ಭಾಗವಲ್ಲ” ಎಂದು ನ್ಯಾಯಪೀಠ ಹೇಳಿದೆ.
ಶಾಲಾ ಸಮವಸ್ತ್ರದ ಶಿಫಾರಸು ನಾಗರಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ
ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆಯನ್ನು ಸೂಚಿಸುವುದು ‘ಸಾರ್ವತ್ರಿಕವಾಗಿ ಅನ್ವಯಿಸುವಾಗ’ ಸಂವಿಧಾಣ ರಕ್ಷಿಸುವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಅವಕಾಶ ನೀಡದಿರುವುದು ಸಂವಿಧಾನದಲ್ಲಿ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ವಕೀಲರು ವಾದಿಸಿದ್ದರು.
ಆದರೆ, ಯುನಿಫಾರ್ಮ್ ವಿದ್ಯಾರ್ಥಿಗಳ ಅಭಿವ್ಯಕ್ತಿಯ ಮೂಲಭೂತ ಹಕ್ಕಿಗೆ ಧಕ್ಕೆ ತರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಶಾಲೆಗಳು ಶಿಕ್ಷಣವನ್ನು ನೀಡಲು ʼಅರ್ಹ ಸಾರ್ವಜನಿಕ ಸ್ಥಳಗಳುʼ ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ಅಂತಹ ‘ಅರ್ಹತೆಯ ಸ್ಥಳಗಳು’ ಸಾಮಾನ್ಯ ಶಿಸ್ತು ಮತ್ತು ಶಿಷ್ಟಾಚಾರಕ್ಕೆ ಹಾನಿಯಾಗುವಂತ ವೈಯಕ್ತಿಕ ಹಕ್ಕುಗಳ ಪ್ರತಿಪಾದನೆಯನ್ನು ಹಿಮ್ಮೆಟ್ಟಿಸುತ್ತದೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರರು ಸಮವಸ್ತ್ರಕ್ಕೆ ಸರಿಹೊಂದುವ ಬಣ್ಣದಲ್ಲಿ ಹಿಜಾಬ್ ಧರಿಸಲು ಆದರೂ ಅನುಮತಿ ನೀಡಬೇಕು ಎಂದು ಕೇಳಿದ್ದರು. ಆದರೆ ನ್ಯಾಯಾಲಯವು ಹಿಜಾಬ್‌ಗೆ ಯಾವುದೇ ʼಸಮಂಜಸವಾದ ಅನುಕೂಲತೆʼ ನೀಡಲಾಗುವುದಿಲ್ಲ. ಹಿಜಾಬ್ ಗೆ ಅನುಮತಿಸುವುದು ʼಸಾಮಾಜಿಕ-ಬೇರ್ಪಡಿಸುವಿಕೆʼ ಗೆ ಕಾರಣವಾಗಬಹುದು ಹಾಗೂ ಏಕರೂಪತೆಯ ಭಾವನೆಯನ್ನು ಕೆರಳಿಸಬಹುದು ಎಂದು ಹೇಳಿದೆ.
Also Read : Hijab Row | ಹೈಕೋರ್ಟ್ ತೀರ್ಪಿನ ಕುರಿತು ಮೇಲ್ಮನವಿ : ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ!
“ಅಂತಹ ಪ್ರಸ್ತಾಪವನ್ನು ಅಂಗೀಕರಿಸಿದರೆ, ಶಾಲಾ ಸಮವಸ್ತ್ರವು ಏಕರೂಪವಾಗಿರುವುದನ್ನು ತಡೆಯುತ್ತದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮತ್ತು ಧರಿಸದ ವಿದ್ಯಾರ್ಥಿನಿಯರು ಎಂಬ ಎರಡು ವರ್ಗವನ್ನು ಅದು ಸೃಷ್ಟಿಸುತ್ತದೆ. ಇದು ʼಸಾಮಾಜಿಕ ಪ್ರತ್ಯೇಕತೆʼಗೆ ಕಾರಣವಾಗಬಹುದು. ಧರ್ಮ ಮತ್ತು ನಂಬಿಕೆಯನ್ನು ಲೆಕ್ಕಿಸದೆ ಎಲ್ಲಾ ವಿದ್ಯಾರ್ಥಿಗಳಲ್ಲಿ ತರಲು ವಿನ್ಯಾಸಗೊಳಿಸಲಾದ ಏಕರೂಪತೆಯ ಭಾವನೆಯನ್ನು ಇದು ಹಾಳುಗೆಡವಬಹುದು ಎಂದು ಹೈಕೋರ್ಟ್ ತೀರ್ಪು ಹೇಳಿದೆ.
“ಹಿಜಾಬ್ ಅಥವಾ ಭಗ್ವಾವನ್ನು ಧರಿಸುವಂತಹ ಯಾವುದೇ ಪ್ರತಿಪಾದನೆಗಳನ್ನು ಧಾರ್ಮಿಕವಾಗಿ ಪವಿತ್ರವೆಂದು ಪರಿಗಣಿಸುವವರೆಗೆ ನಮ್ಮ ಸಂವಿಧಾನವು 51A (h) ವಿಧಿಯ ಮೂಲಕ ಮೂಲಭೂತ ಕರ್ತವ್ಯವಾಗಿ ಸೂಚಿಸುವ ವೈಜ್ಞಾನಿಕ ಮನೋಧರ್ಮವನ್ನು ಯುವ ಮನಸ್ಸಿನಲ್ಲಿ ತುಂಬುವುದು ಅಸಾಧ್ಯವಾಗಬಹುದು” ಎಂದು ಆದೇಶದಲ್ಲಿ ಹೇಳಲಾಗಿದೆ.
ಹಿಜಾಬ್ ನಿಷೇಧದ ಕುರಿತು ಸರ್ಕಾರದ ಆದೇಶದ ರದ್ಧತಿ ಇಲ್ಲ
ಫೆಬ್ರವರಿ 5 ರಂದು, ಕರ್ನಾಟಕ ಸರ್ಕಾರ “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ” ಬಟ್ಟೆಗಳನ್ನು ನಿಷೇಧಿಸುವ ಆದೇಶವನ್ನು ಜಾರಿಗೊಳಿಸಿತ್ತು. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ಇಂತಹ ಆದೇಶ ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ, ಸೆಕ್ಷನ್ 133(2) ಕಾಯ್ದೆಯು ನಿಬಂಧನೆಗಳನ್ನು ಜಾರಿಗೊಳಿಸಲು ಯಾವುದೇ ನಿರ್ದೇಶನಗಳನ್ನು ನೀಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ತನ್ನ ಆದೇಶವು ಈಗಾಗಲೇ ಹೇಳಿರುವುದರಿಂದ, “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ” ಬಟ್ಟೆಗಳನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ರದ್ಧುಗೊಳಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಅದೇ ವೇಳೆ, ಎಷ್ಟು ಸಮಯದಿಂದ ಹಿಜಾಬ್ ಧರಿಸುತ್ತಿದ್ದಾರೆ ಎಂಬುದನ್ನು ಅರ್ಜಿದಾರರು ನಿರ್ದಿಷ್ಟವಾಗಿ ಹೇಳಿಲ್ಲ. ಅರ್ಜಿದಾರರು ಆರಂಭದಿಂದಲೂ ಹಿಜಾಬ್‌ಗಳನ್ನು ಧರಿಸಿದ್ದರು ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂದು ತೀರ್ಪು ಹೇಳಿದೆ.
ಕಾಲೇಜು ಅಭಿವೃದ್ಧಿ ಸಮಿತಿಗಳು
ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸಮವಸ್ತ್ರವನ್ನು ಸೂಚಿಸಲು ಅವಕಾಶ ನೀಡುತ್ತದೆ. ಈ ಸಮಿತಿಗಳು ಶಾಸನಬದ್ಧವಲ್ಲದ ಸಂಸ್ಥೆಗಳಾಗಿದ್ದು, ಈ ಅಧಿಕಾರವನ್ನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಉಡುಪಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸ್ಥಳೀಯ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದರು ಎಂದು ಅರ್ಜಿದಾರರು ಉಲ್ಲೇಖಿಸಿದ್ದರು.
“ಈ ಸಮಿತಿಗಳು ಸ್ಥಳೀಯ ಶಾಸಕಾಂಗ ಸಭೆಯ ಸದಸ್ಯರ ನೇತೃತ್ವದಲ್ಲಿರುವುದರಿಂದ, ಅವುಗಳ ರಚನೆಯು ತಪ್ಪು ಎಂಬ ತೀರ್ಮಾನಕ್ಕೆ ನಾವು ಅವಸರದಿಂದ ಬರಲಾಗುವುದಿಲ್ಲ” ಎಂದು ಕೋರ್ಟ್ ಹೇಳಿದೆ.
Also read : ಶಿಕ್ಷಣದ ಹಕ್ಕು ಮತ್ತು ಹೆಣ್ತನದ ಘನತೆಗಾಗಿ ಅರಿವಿನ ಪಯಣ
ಸಮಿತಿಗಳ ರಚನೆಗೆ ಸೂಚಿಸಿರುವ 2014 ರ ಸರ್ಕಾರದ ಸುತ್ತೋಲೆಯನ್ನು ಯಾವುದೇ ಅರ್ಜಿಗಳು ಪ್ರಶ್ನಿಸದ ಕಾರಣ ಈ ಸಮಿತಿಗಳ ಕಾರ್ಯನಿರ್ವಹಣೆಯ ಕುರಿತು “ಗಹನವಾದ ಚರ್ಚೆಯನ್ನು ಕೈಗೊಳ್ಳಲು ಒಲವು ತೋರುತ್ತಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಜಾತ್ಯತೀತತೆಯ ಕುರಿತು
ಶಾಲಾ ನಿಯಮಗಳು ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಏಕರೂಪದ ವರ್ಗವಾಗಿ ಸಮವಸ್ತ್ರ ಸೂಚಿಸುತ್ತವೆ, ಸಾಂವಿಧಾನಿಕ ಜಾತ್ಯತೀತತೆಯನ್ನು ಪೂರೈಸುತ್ತವೆ ಎಂದು ನ್ಯಾಯಾಲಯವು ಗಮನಿಸಿದೆ.
ಭಾರತೀಯ ಸಂವಿಧಾನವು ಪ್ರತಿಪಾದಿಸಿದ ಸಕಾರಾತ್ಮಕ ಜಾತ್ಯತೀತತೆ ಧಾರ್ಮಿಕ ಶ್ರದ್ಧೆಯ ವಿರೋಧಿಯಲ್ಲ. ಬದಲಾಗಿ ಧಾರ್ಮಿಕ ಸಹಿಷ್ಣುತೆಯನ್ನು ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.
Also Read : ಮಂದಿರ ಮಸೀದಿಯ ಗೋಡೆಗಳಿಂದ ಶಾಲೆಯ ಕರಿಹಲಗೆಯವರೆಗೆ ಮತಾಂಧತೆಯ ನಡಿಗೆ!
“ಧಾರ್ಮಿಕ, ಭಾಷಿಕ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯತೆಗಳನ್ನು ಮೀರಿ ಭಾರತದ ಎಲ್ಲ ಜನರ ನಡುವೆ ಸಾಮರಸ್ಯ ಮತ್ತು ಸಾಮಾನ್ಯ ಸಹೋದರತ್ವದ ಮನೋಭಾವವನ್ನು ಉತ್ತೇಜಿಸುವುದು ನಾಗರಿಕರ ಮೂಲಭೂತ ಕರ್ತವ್ಯವಾಗಿದೆ; ಮಹಿಳೆಯರ ಘನತೆಗೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕು”ಎಂದು ಆರ್ಟಿಕಲ್ 51A(e) ಹೇಳುತ್ತದೆ. ಈ ಆರ್ಟಿಕಲ್ ಅಡಿಯಲ್ಲಿ ಸೂಚಿಸಲಾದ ಮೂಲಭೂತ ಕರ್ತವ್ಯದ ಅರ್ಥವನ್ನು ಕಲಿಸುವ ಪಠ್ಯಕ್ರಮವನ್ನು ರೂಪಿಸುವಂತೆ ನ್ಯಾಯಾಲಯವು ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಮೂಲ: ಸ್ಕ್ರಾಲ್.ಇನ್