ಹಿಜಾಬ್ ತೀರ್ಪು ಹೊರಬಿದ್ದಿದೆ. ಹಿಜಾಬ್ ವಿಷಯದಲ್ಲಿ ಈ ಹಿಂದೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿರುವ ರಾಜ್ಯ ಹೈಕೋರ್ಟ್, ಹಿಜಾಬ್ ಮುಸ್ಲಿಂ ಮಹಿಳೆಯರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳಿದೆ.
ಭಾರೀ ವಿವಾದ ಮತ್ತು ಹಿಂಸಾಚಾರಕ್ಕೆ ಎಡೆ ಮಾಡಿದ್ದ ಹಿಜಾಬ್ ವಿವಾದದ ಕುರಿತು ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾ. ಕೃಷ್ಣ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಆದರೆ, ಹೈಕೋರ್ಟಿನ ಈ ತೀರ್ಪಿನ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ನಿಬಾ ನಾಜ್ ಎಂಬ ವಿದ್ಯಾರ್ಥಿನಿ ಈಗಾಗಲೇ ಸುಪ್ರೀಂಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಮೂಲಭೂತ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್ ಪೀಠ ಹೇಳಿತ್ತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕುರಿತ ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಫೆ. 5ರಂದು ಸರ್ಕಾರ ನೀಡಿದ ಆ ಆದೇಶವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಕೋರ್ಟ್, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಗತ್ಯ ಎಂಬ ಅರ್ಜಿದಾರರಾದ ಮುಸ್ಲಿಂ ವಿದ್ಯಾರ್ಥಿನಿಯರ ವಾದವನ್ನು ತಳ್ಳಿಹಾಕಿದೆ.
ಹಾಗೇ, ಸಮವಸ್ತ್ರ ಕಡ್ಡಾಯಗೊಳಿಸುವ ಸರ್ಕಾರದ ಆದೇಶದಿಂದ ವ್ಯಕ್ತಿಯ ಮೂಲಭೂತ ಹಕ್ಕುಗಳ ಸಾಂವಿಧಾನಿಕ ಉಲ್ಲಂಘನೆ ಆಗಿಲ್ಲ ಎಂದಿರುವ ಹೈಕೋರ್ಟ್, ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವೆಂದು ಖುರಾನ್ ನಲ್ಲಿ ಉಲ್ಲೇಖಿಸಿಲ್ಲ ಎಂದು, ಆ ಸಂಬಂಧ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನೂ ವಜಾಗೊಳಿಸಿದೆ.
ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕೇವಲ ಎಂಟೇ ನಿಮಿಷದಲ್ಲಿ ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಲಾಯಿತು ಎಂಬುದು ವಿಶೇಷ. ಆ ಮಹತ್ವದ ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು, ಪ್ರಕರಣವನ್ನು ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅವುಗಳಿಗೆ ಸೂಕ್ತ ಉತ್ತರಗಳನ್ನೂ ಕಂಡುಕೊಳ್ಳಲಾಗಿದೆ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಮೂಲಭೂತ ಅತ್ಯಗತ್ಯ ಧಾರ್ಮಿಕ ಆಚರಣೆಯೇ? ಎಂಬ ಮೊದಲ ಪ್ರಶ್ನೆಯನ್ನು ನ್ಯಾಯಪೀಠ ಕೇಳಿಕೊಂಡಿದ್ದು, ಅದಕ್ಕೆ ಹಿಜಾಬ್ ಧರಿಸುವುದು ಇಸ್ಲಾಂನ ಮೂಲಭೂತ ಅತ್ಯಗತ್ಯ ಆಚರಣೆಯ ಭಾಗವಲ್ಲ ಎಂಬ ಉತ್ತರಕಂಡುಕೊಂಡಿದೆ. ಶಾಲಾ ಸಮವಸ್ತ್ರ ಕಡ್ಡಾಯಗೊಳಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ? ಎಂಬುದು ಎರಡನೇ ಪ್ರಶ್ನೆಯಾಗಿದ್ದು, ಅದಕ್ಕೆ ಸಮವಸ್ತ್ರ ನಿಗದಿ ಸರಿಯಾದ ಕ್ರಮ. ಇದರಿಂದ ಮೂಲಭೂತ ಹಕ್ಕುಗಳಿಗೆ ಯಾವುದೇ ಧಕ್ಕೆಯಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಫೆ. 5ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಕಾನೂನುಬಾಹಿರವೇ ಮತ್ತು ಅದು ಸಂವಿಧಾನದ 14 ಹಾಗೂ 15ನೇ ವಿಧಿಯನ್ನು ಕಡೆಗಣಿಸುತ್ತದೆಯೇ? ಎಂಬುದು ಮೂರನೇ ಪ್ರಶ್ನೆ. ಅದಕ್ಕೆ ಸರ್ಕಾರದ ಆದೇಶ ಯಾವುದೇ ಉಲ್ಲಂಘನೆಯಾಗಿಲ್ಲ, ಕಾನೂನುಬದ್ಧವಾಗಿದೆ ಎಂದು ತೀರ್ಮಾನಿಸಲಾಗಿದೆ. ಕೊನೆಯದಾಗಿ, ಹಿಜಾಬ್ ವಿಷಯದಲ್ಲಿ ಉಡುಪಿ ಕಾಲೇಜಿನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೇ? ಎಂಬ ಪ್ರಶ್ನೆಯೂ ನ್ಯಾಯಪೀಠದ ಮುಂದಿತ್ತು. ಪೀಠ, ಸಮವಸ್ತ್ರ ನಿಗದಿಪಡಿಸುವ ಹಕ್ಕು ಶಾಲೆ, ಕಾಲೇಜುಗಳಿಗೆ ಇದೆ. ಹಾಗಾಗಿ ಸಮವಸ್ತ್ರ ಕಡ್ಡಾಯಗೊಳಿಸಿದ ಉಡುಪಿ ಕಾಲೇಜಿನ ವಿರುದ್ಧ ಕ್ರಮ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ತೀರ್ಪಿನ ಪರ ವಿರುದ್ಧ ಹಲವು ವಲಯಗಳಿಂದ ಅಭಿಪ್ರಾಯ, ಆತಂಕಗಳು ವ್ಯಕ್ತವಾಗುತ್ತಲೇ ಇದ್ದು, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಲಯಗಳಿಂದ ಭಿನ್ನ ವಿಭಿನ್ನ ದನಿಗಳು ಕೇಳಿಬಂದಿವೆ.
ಹಿಜಾಬ್ ನಿಷೇಧದ ವಿರುದ್ಧ ಕೋರ್ಟ ಮೆಟ್ಟಿಲೇರಿದ್ದ ಉಡುಪಿಯ ವಿದ್ಯಾರ್ಥಿನಿಯರು, ಕುರಾನ್‌ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ ಎಂದು ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಆಗ ವಕೀಲರ ವಾದವನ್ನು ಒಪ್ಪಿದ್ದಾರೆ. ಆದ್ರೆ ಈಗ ತೀರ್ಪು ಹೀಗೆ ಬಂದಿದೆ. ಏಕೆಂದು ನಮಗೆ ಗೊತ್ತಿಲ್ಲ. ನಮ್ಮ ಹಕ್ಕು ಪಡೆಯುವವರೆಗೂ ಹೋರಾಟ ಮಾಡುತ್ತೇವೆ. ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗುವುದಿಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ಬರೆಯುತ್ತೇವೆ. ಇಲ್ಲವೆಂದರೆ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ನಡುವೆ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಎಲ್ಲಾ ವಿದ್ಯಾರ್ಥಿಗಳು ತೀರ್ಪನ್ನು ಪಾಲಿಸಿ. ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ. ಹೀಗಾಗಿ ತೀರ್ಪು ಪಾಲಿಸಿ. ಪರೀಕ್ಷೆಗಳಿಗೆ ಗೈರಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಐತಿಹಾಸಿಕ ತೀರ್ಮಾನವನ್ನು ಹೈಕೋರ್ಟ್ ನೀಡಿದೆ. ಸರ್ಕಾರ ರೂಪಿಸಿದ ನಿಯಮದ ಪರವಾಗಿ ತೀರ್ಪು ಬಂದಿದೆ. ಹೆಣ್ಣುಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪು ನಮಗೆ ಸಂತೋಷ ಕೊಟ್ಟಿದೆ. ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಧರ್ಮದ ಮತಾಂಧತೆ ಬೆಳೆಸಿಕೊಳ್ಳದೇ ಶಾಲೆಗಳಲ್ಲಿ ನಾವು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಹಾಗೂ ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂದು ಸಂಸ್ಕಾರದಿಂದಿರಬೇಕು ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು. ಇದರಲ್ಲಿ ಯಾವುದೇ ಒಂದು ಪಕ್ಷ ಅಥವಾ ಗುಂಪಿನ ಗೆಲುವು ಇಲ್ಲ. ಆದೇಶವನ್ನು ಆದೇಶದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು, ಅನುಸರಿಸಬೇಕು ಎಂದು ಹೇಳಿದ್ದಾರೆ.
ಹಾಗೇ, ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲಿಸಬೇಕು. ಯಾವುದೇ ಧರ್ಮದವರಾಗಿರಲಿ ಎಲ್ಲರೂ ಪಾಲಿಸಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ, ಸಂವಿಧಾನ ಧರ್ಮಕ್ಕಿಂತ ದೊಡ್ಡದು ಅನ್ನೋದನ್ನ ಹೈಕೋರ್ಟ್ ಸಾಬೀತುಪಡಿಸಿದೆ. ಹೈಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಅನಗತ್ಯವಾಗಿ ವಿವಾದ ಮಾಡದೇ ಎಲ್ಲರೂ ತೀರ್ಪನ್ನು ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ. ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿ, ‘ಹೈಕೋರ್ಟ್ ಆದೇಶ ಏನಿದೆ ಅದನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಪಕ್ಷದ ನಿಲುವು ಹೈಕೋರ್ಟ್ ಆದೇಶದ ಪರವಾಗಿದೆ. ರಾಜಕೀಯ ಲಾಭ-ನಷ್ಟದ ಬಗ್ಗೆ ನಾವು ಯೋಚನೆ ಮಾಡಲ್ಲ. ರಾಜ್ಯದಲ್ಲಿ ಶಾಂತಿ ಇರಬೇಕು, ಕಲಿಕೆಗೆ ತೊಂದರೆಯಾಗಬಾರದು. ಹಿಜಾಬ್ ವಿಚಾರದಲ್ಲಿ ಸರ್ಕಾರ ವಿಫಲವಾಯ್ತು ಅನಿಸುತ್ತದೆ. ಈ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಬಿಡಬಾರದಿತ್ತು ಎಂದು ಹೇಳಿದ್ದಾರೆ.
ಈ ನಡುವೆ, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮಹಮ್ಮದ್ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹಿಜಾಬ್ ಕುರಿತ ತೀರ್ಪು ಸಂವಿಧಾನ ನಮಗೆ ಕೊಟ್ಟ ಹಕ್ಕನ್ನು ಮೊಟಕುಗೊಳಿಸಿದೆ. ವಿದ್ಯಾರ್ಥಿನಿಯರ ಹಿತ ಕಡೆಗಣಿಸಿ ಸರ್ಕಾರ ಸಂಘಪರಿವಾರದ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈ ತೀರ್ಪು ನಮ್ಮ ಸಂವಿಧಾನದ ಹಕ್ಕನ್ನು ಕಸಿದುಕೊಂಡಿದೆ. ಸಂಘಪರಿವಾರ ಮಹಿಳಾ ಮತ್ತು ಪ್ರತಿಗಾಮಿ ಕೂಟವಾಗಿದೆ. ನಮ್ಮ ಸಾಕ್ಷರತೆ ಪ್ರಮಾಣ ಇಳಿಸಲು ಸಂಘಪರಿವಾರ ಹಿಜಾಜ್ ವಿವಾದ ಎಬ್ಬಿಸಿದೆ. ಈ ತೀರ್ಪು ಮುಸ್ಲಿಂ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದ್ದು, ಸಂಘ ಪರಿವಾರಕ್ಕೆ ಮಾತ್ರ ಖುಷಿ ಕೊಟ್ಟಿದೆ. ಈ ತೀರ್ಪಿಗಾಗಿ ಕಾದಿದ್ದ ಹೆಣ್ಮಕ್ಕಳಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಆ ಹೆಣ್ಮಕ್ಕಳ ಪರವಾಗಿ ನಮ್ಮ ಸಂಘಟನೆ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಪ್ರಮುಖರಾದ ಸಿ ಎಂ ಇಬ್ರಾಹಿಂ, ಮುಸ್ಲಿಂ ಒಕ್ಕೂಟದ ಮುಖಂಡ ಹುಸೇನ್ ಕೋಡಿ ಬೆಂಗ್ರೆ, ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಮುಂತಾದವರು ಕೂಡ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟಿನಲ್ಲಿ ತೀರ್ಪನ್ನು ಪ್ರಶ್ನಿಸುವ ಮಾತನಾಡಿದ್ದಾರೆ. ಹಾಗಾಗಿ ಸದ್ಯಕ್ಕೆ ತೀರ್ಪು ಹೊರಬಿದ್ದಿದ್ದರೂ ವಿವಾದ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ!