ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ಧ ಬಳಸಿದ್ರು ಅನ್ನೋ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಪರಿಷತ್ ಸದಸ್ಯ ಸಿ.ಟಿ ರವಿಗೆ ಹೈಕೋರ್ಟ್ನಿಂದ ರಿಲೀಫ್ ಸಿಕ್ಕಿತ್ತು. ಆ ಬಳಿಕ ಶನಿವಾರ ರಾತ್ರಿ ಮೊದಲ ಬಾರಿಗೆ ಹುಟ್ಟೂರಿಗೆ ಎಂಟ್ರಿ ಕೊಟ್ಟಾಗ ಅದ್ಧೂರಿ ಸ್ವಾಗತ ನೀಡಲಾಗಿದೆ. ಸಿ.ಟಿ ರವಿ ಕಾರಿನಲ್ಲಿ ರೋಡ್ ಶೋ ಮಾಡಿಕೊಂಡು ಸಾಗ್ತಿದ್ರೆ, ಕಾರ್ಯಕರ್ತರು ಪಟಾಟಿ ಸಿಡಿಸಿ ಸಂಭ್ರಮಿಸಿದ್ದಾರೆ. ಮನೆಯಲ್ಲಿ ಆರತಿ ಬೆಳಗಿ ಸಿ.ಟಿ ರವಿಯನ್ನು ಸ್ವಾಗತಿಸಿದ್ದಾರೆ. ಇದ್ರ ನಡುವೆ ಆ್ಯಂಬುಲೆನ್ಸ್ ಬಳಸಿ ಸೈರನ್ ಹಾಕಿಕೊಂಡು ಬಂದಿದ್ದು ವಿಶೇಷವಾಗಿದ್ದು, ಪೊಲೀಸರು FIR ಮಾಡಿದ್ದಾರೆ. ಇದೆಲ್ಲರದರ ನಡುವೆ ಸಿ.ಟಿ ರವಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪ್ರಜಾಪ್ರಭುತ್ವ ಹಾಗು ಸರ್ವಾಧಿಕಾರ ಜೊತೆ ಜೊತೆಯಾಗಿ ಇರಲು ಸಾಧ್ಯವಿಲ್ಲ. ಈ ರೀತಿಯ ಕೇಸ್ಗಳಿಗೆ ನಾವು ಹೆದರಲ್ಲ, ಈ ಹಿಂದೆಯೂ ಹೆದರಿಸುವ ಪ್ರಯತ್ನ ನಡೆದಿತ್ತು. ಕಾಲ ಹೀಗೇ ಇರಲ್ಲ.. ಹಿಂದೆ ಸಹಿಸಿಕೊಂಡ ಮಾತ್ರಕ್ಕೆ ಈಗಲೂ ಸಹಿಸಿಕೊಳ್ತೇವೆ ಅನ್ನೋದು ತಪ್ಪು ಎಂದಿದ್ದಾರೆ. ಇನ್ನು ಪೊಲೀಸ್ ಠಾಣೆಯಲ್ಲಿ ಇದ್ರೆ ಭದ್ರತೆ ಕೊಡೋಕೆ ಆಗಲ್ಲ ಅಂತಾ ಕಬ್ಬಿನ ಗದ್ದೆ, ಜಲ್ಲಿ ಕ್ರಶರ್, ಕಾಡಿನ ಒಳಗೆ ಕರೆದುಕೊಂಡು ಹೋಗಿದ್ರು. ಮಾಧ್ಯಮಗಳು ಬೆನ್ನಟ್ಟಿದ್ರಿಂದ ಅನಿವಾರ್ಯವಾಗಿ ಕೋರ್ಟ್ಗೆ ಹಾಜರು ಮಾಡಿದ್ರು. ಇಲ್ಲದಿದ್ರೆ ನಕಲಿ ಎನ್ಕೌಂಟರ್ ನಡೆಯುವ ಸಾಧ್ಯತೆಯಿತ್ತು ಎಂದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಸಿ.ಟಿ ರವಿ, ಎನ್ಕೌಂಟರ್ ಮಾಡುವ ಷಡ್ಯಂತ್ರ ನಡೆದಿತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನ್ಯಾಯಾಂಗ ತನಿಖೆ ಆದ್ರೆ ಸರ್ಕಾರ ಹುಳುಕು ಹೊರಬರುತ್ತೆ ಅನ್ನೋ ಭಯನಾ..? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಆದರೆ ಕಲಬುರಗಿಯಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಸಿ.ಟಿ.ರವಿ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಬಿಜೆಪಿ ಒತ್ತಾಯ ಮಾಡಿದ್ದು, ಪ್ರಕರಣವನ್ನು ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದು ಕ್ರಿಮಿನಲ್ ಅಫೆನ್ಸ್ ಆಗಿದೆ, ಇದ್ರಲ್ಲಿ ನ್ಯಾಯಾಂಗ ತನಿಖೆಗೆ ಯಾಕೆ..? ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳೋಕಾ..? ಎಂದು ಪ್ರಶ್ನಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್, ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಚರ್ಚೆಗೆ ಪರಿಷತ್ನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆ. ಆದರೆ ಬಿಜೆಪಿಯವ್ರ ಗದ್ದಲ ಮಾಡಿದ್ರು ಎಂದಿರುವ ಹರಿಪ್ರಸಾದ್, ನಕಲಿ ಎನ್ಕೌಂಟರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಮಿತ್ ಷಾ ಇದೇ ಪ್ರಕರಣದಲ್ಲಿ ಗಡಿಪಾರು ಆಗಿದ್ದರು ಎನ್ನುವ ಮೂಲಕ ಗುಜರಾತ್ನಲ್ಲಿ ನಡೆದಿದ್ದ ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಕೇಸ್ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಸಿ.ಟಿ.ರವಿ ಬಂಧನ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿರುವುದಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಬಿಜೆಪಿಯವ್ರು ಸಿಬಿಐನ ಮನೆಯೊಳಗಿನ ಸರಕು ಮಾಡಿಕೊಂಡಿದ್ದಾರೆ. ಮನೆ ಕೆಲಸದವರ ರೀತಿ ಬಳಸಿಕೊಳ್ಳುತ್ತಿದ್ದಾರೆ. ಸಿ.ಟಿ. ರವಿ ನಡೆದುಕೊಂಡ ರೀತಿ ಬಿಜೆಪಿಗೆ ಶೋಭೆ ತರುತ್ತಾ..? ಎಂದಿರುವ ಡಿ.ಕೆ ಸುರೇಶ್, ಪದೇ ಪದೇ ಹೆಣ್ಮಕ್ಕಳ ಬಗ್ಗೆ ಲಘುವಾಗಿ ಮಾತನಾಡ್ತಾರೆ. ಬಿಜೆಪಿಯ ಸಂಸ್ಕೃತಿ ಎಲ್ಲೋಯ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಅಂಬೇಡ್ಕರ್ ಮೇಲಿನ ಹೇಳಿಕೆ ಮುಚ್ಚಿ ಹಾಕಲು ಕುತಂತ್ರ ಮಾಡ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್ರಿಂದ ಜೀವ ಬೆದರಿಕೆ ಅನ್ನೋ ವಿಚಾರವಾಗಿ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲ ಅಂದ್ರೆ ಎಸ್ಪಿಜಿ ಬಳಕೆ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.