2070 ರ ಹೊತ್ತಿಗೆ ‘ನೆಟ್ ಝಿರೋ’ ಇಂಗಾಲದ ಹೊರಸೂಸುವಿಕೆಯನ್ನು ಭಾರತವು ಸಾಧಿಸಲಿದೆ ಎಂದು ವಾಗ್ದಾನ ಮಾಡಿದೆ. ಕಾರ್ಬನ್ ಸೀಕ್ರೆಸ್ಟ್ರೇಷನ್, ಕಡಿಮೆ ಪಳೆಯುಳಿಕೆ ಇಂಧನಗಳ ಬಳಕೆ ಮತ್ತು ಇನ್ನಿತರ ಹವಾಮಾನ ಕ್ರಿಯೆಯ ಮೂಲಕ ಇದನ್ನು ಸಾಧಿಸಬಹುದು. ಇದರ ಒಂದು ನಿರ್ಣಾಯಕ ಭಾಗವಾಗಿ 2030 ರ ಹೊತ್ತಿಗೆ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು 500 gigawatts (GW)ಗೆ ಹೆಚ್ಚಿಸುವುದಾಗಿ ಕಳೆದ ವರ್ಷ COP26 ಸಮಾವೇಶದಲ್ಲಿ ಭಾರತ ಹೇಳಿದೆ.
ಈ ನಿರ್ದಿಷ್ಟ ಹವಾಮಾನ ಗುರಿಯನ್ನು ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ಬೆಂಬಲಿಸದ ಹೊರತು ತಲುಪಲಾಗದು. ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ, ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸರಕಾರಿ ಸಬ್ಸಿಡಿಗಳು 2017 ರಿಂದ ಸುಮಾರು 60% ರಷ್ಟು ಕಡಿಮೆಯಾಗಿದೆ ಮತ್ತು ಇನ್ನೂ ಪಳೆಯುಳಿಕೆ ಇಂಧನಗಳನ್ನು ಹೆಚ್ಚು ಬಳಸಲಾಗುತ್ತಿದೆ. ಈ ಹವಾಮಾನ ಗುರಿಯನ್ನು ಸಾಧಿಸಲು ಭಾರತವು ಬಯಸಿದ್ದಲ್ಲಿ ಸಾರ್ವಜನಿಕ ಹಣಕಾಸುಗಳನ್ನು ನವೀಕರಿಸಬಹುದಾದ ಶಕ್ತಿಯ ಮೇಲೆ ಹೂಡವಂತೆ ಮತ್ತು ಈವಲಯದಲ್ಲಿ ಹೂಡಿಕೆ ಮಾಡುವ ಸಾರ್ವಜನಿಕ-ಕ್ಷೇತ್ರದ ಉದ್ಯಮಗಳನ್ನು ಉತ್ತೇಜಿಸುವ ಕ್ರಮ ಕೈಗೊಳ್ಳುವಂತೆ ಈಗಾಗಲೇ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನವೀಕರಿಸಬಹುದಾದ ಶಕ್ತಿಯಲ್ಲಿನ ಪ್ರಸ್ತುತ ಕೊರತೆಯು ದೇಶದ ಕಲ್ಲಿದ್ದಲು ಉತ್ಪಾದನೆಯಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗುವಂತೆ ಮಾಡುತ್ತದೆ.
ನವೀಕರಿಸಬಹುದಾದ ಶಕ್ತಿ ಮತ್ತು ಪಳೆಯುಳಿಕೆ ಇಂಧನಗಳು
ಭಾರತದ ಹವಾಮಾನ ಗುರಿಗಳನ್ನು ಸಾಧಿಸುವಲ್ಲಿ ಸರ್ಕಾರದ ಪ್ರಯತ್ನಗಳು ಮತ್ತಷ್ಟು ಮುಖ್ಯವಾಗಿವೆ. ಈ ಹಿನ್ನಲೆಯಲ್ಲಿ ಸರ್ಕಾರವು ಸಬ್ಸಿಡಿಗಳ ಮೂಲಕ ಹಣಕಾಸಿನ ಸಹಾಯ ಒದಗಿಸುವುದು ಮುಖ್ಯವಾಗುತ್ತದೆ. International Institute for Sustainable Development (IISD)ನ ಸಂಶೋಧಕರು ಮತ್ತು Council on Energy, Environment and Water (CEEW) ಪಳೆಯುಳಿಕೆ ಇಂಧನಗಳ ಕಡಿಮೆ ಬಳಕೆ, ನವೀಕರಣ ಮತ್ತು ವಿದ್ಯುತ್ ವಾಹನಗಳನ್ನು ಬೆಂಬಲಿಸುವ ಸಾರ್ವಜನಿಕ ಸಂಸ್ಥೆಗಳನ್ನು ಮೌಲ್ಯ ಮಾಪನ ಮಾಡಿ ವರದಿ ಬಿಡುಗಡೆ ಮಾಡಿದ್ದು ನವೀಕರಿಸಬಹುದಾದ ಇಂಧನಕ್ಕಾಗಿ ನೀಡುವ ಸರಕಾರಿ ಸಬ್ಸಿಡಿಗಳು 2017 ರಿಂದ 59% ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ಇದೇ ವರದಿಯ ಪ್ರಕಾರ ಪಳೆಯುಳಿಕೆ ಇಂಧನಗಳಿಗೆ ನೀಡುತ್ತಿರುವ ಸಬ್ಸಿಡಿ ಸರಾಸರಿಯೂ ಕಡಿಮೆಯಾಗಿದೆ. ಆದರೂ ಕಲ್ಲಿದ್ದಲು, ತೈಲ ಮತ್ತು ಅನಿಲಗಳಿಗೆ 2021ರಲ್ಲಿ ನೀಡಿದ ಸಬ್ಸಿಡಿಗಳು ನವೀಕರಿಸಬಹುದಾದ ಶಕ್ತಿಗಳ ಉತ್ತೇಜನಕ್ಕೆ ನೀಡಿದ ಸಬ್ಸಿಡಿಗಿಂತ ಒಂಬತ್ತು ಪಟ್ಟು ಹೆಚ್ಚು. ಮತ್ತೊಂದೆಡೆ ಎಲೆಕ್ಟ್ರಿಕ್ ವಾಹನಗಳಿಗೆ ನೀಡುವ ಸಬ್ಸಿಡಿಗಳು 2017 ರಿಂದ 205% ರಷ್ಟು ಹೆಚ್ಚಾಗಿದೆ.
2030 ರ ಹೊತ್ತಿಗೆ ಭಾರತ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯವನ್ನು 500 ಜಿಗಾವ್ಯಾಟ್ಗೆ ಹೆಚ್ಚಿಸಬೇಕೆಂದರೆ ತಮ್ಮ ಗಮನವನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಶಕ್ತಿಯ ಕಡೆ ನೀಡಬೇಕೆಂದೂ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಸಾರ್ವಜನಿಕ ವಲಯದ ಉದ್ಯಮಗಳನ್ನು ಮತ್ತು ಪಬ್ಲಿಕ್ ಫೈನಾನ್ಸನ್ನೂ ಸಹ ಪಳೆಯುಳಿಕೆ ಶಕ್ತಿಗಳಿಗಿಂತ ಹೆಚ್ಚಾಗಿ ನವೀಕರಿಸಲಾಗುವ ಶಕ್ತಿಯ ಮೂಲಗಳಲ್ಲಿ ತೊಡಗಿಸಬೇಕು ಎಂದೂ ಶಿಫಾರಸು ಮಾಡಿದ್ದಾರೆ. ಆದರೆ ವಿಷಾದನೀಯ ಸಂಗತಿ ಎಂದರೆ ಆಗಸ್ಟ್ 2021ರವರೆಗೆ ನವೀಕರಿಸಬಹುದಾದ ಶಕ್ತಿಯನ್ನು ಕೇವಲ 100 ಜಿಡಬ್ಲ್ಯೂಗೆ ಮಾತ್ರ ಹೆಚ್ಚಿಸಲಾಗಿದೆ.
ಅಲ್ಲದೆ ಇದುವರೆಗೆ ನವೀಕರಿಸಬಹುದಾದ ಶಕ್ತಿಯ ಮೇಲೆ ಹೆಚ್ಚಾಗಿ ಖಾಸಗಿ ವಲಯದ ಉದ್ದಿಮೆಗಳೇ ಹೆಚ್ಚು ಹೂಡಿಕೆ ಮಾಡಿವೆ. ಭಾರತೀಯ ಬ್ಯಾಂಕುಗಳು ಮತ್ತು ಪಿಎಸ್ಯುಗಳು (Public sectors undertakings) ತಮ್ಮ ಬಂಡವಾಳವನ್ನು ಮತ್ತು ಶುದ್ಧ ಶಕ್ತಿ ಮೂಲಗಳಲ್ಲಿ ಹೂಡಿಕೆ ಮಾಡಬೇಕಾಗಿದೆ ಎನ್ನುತ್ತಾರೆ ‘ಲೀಡ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ’ಯ ಅರ್ಥಶಾಸ್ತ್ರ ಮತ್ತು ಆರ್ಥಿಕ ವಿಶ್ಲೇಷಣೆಗಾರರಾದ ವಿಬುತಿ ಗಾರ್ಗ್.
“ನವೀಕರಿಸಬಹುದಾದ ಶಕ್ತಿಯ ಮೇಲೆ ಹೆಚ್ಚು ಬಂಡವಾಳ ಹೂಡಿರುವ ಕಂಪನಿಗಳ ಶೇರುಗಳು ಈಗೀಗ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ. ಅದೇ ಪಿಎಸ್ಯುಗಳು ತಮ್ಮ ಬಜೆಟನ್ನು ನವೀಕರಿಸಬಹುದಾದ ಇಂಧನಗಳ ಕಡೆ ಹರಿಸದೇ ಇದ್ದರೆ ಬೆಲೆ ನಿರಂತರವಾಗಿ ಕಡಿಮೆಯಾಗಬಹುದು” ಎನ್ನುತ್ತಾರೆ ಅವರು. ನವೀಕರಿಸಬಹುದಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತೀಯ ಸರ್ಕಾರವು ‘ಹಣಕಾಸು ಮತ್ತು ಬೆಂಬಲ ನೀತಿಯನ್ನು ವಿಸ್ತರಿಸಬೇಕಾಗಿದೆ’ ಎಂದೂ ಗಾರ್ಗ್ ಹೇಳಿದ್ದಾರೆ. ಈ ನೀತಿಯಲ್ಲಿ ಬ್ಯಾಟರಿ ಸಂಗ್ರಹಣೆ, ಟ್ರಾನ್ಸ್ಮಿಷನ್ ಮತ್ತು ವಿತರಣಾ ಜಾಲಗಳನ್ನು ವಿಸ್ತರಿಸುವುದು, ಗ್ರಿಡ್ ಅನ್ನು ಆಧುನೀಕರಿಸುವುದು ಮತ್ತು ಮಾಡ್ಯೂಲ್ಗಳು, ಬ್ಯಾಟರಿಗಳು, ವೇಫರ್ಸ್, ಎಲೆಕ್ಟ್ರೋಲೈಸರ್ಸ್ ಮುಂತಾದವುಗಳ ಉತ್ಪಾದನೆಯೂ ಸೇರಿದೆ.
ಕಲ್ಲಿದ್ದಲು ಆಮದಿನಲ್ಲಿನ ವಿಪರೀತ ಹೆಚ್ವಳ
ಈ ಬೇಸಗೆಯಲ್ಲಿ ಏರಿದ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ನವೀಕರಿಸಬಹುದಾದ ಇಂಧನದ ಮೊರೆ ಹೋಗಬೇಕಾಗಿದ್ದ ಸರ್ಕಾರವು ಕಲ್ಲಿದ್ದಲು ಆಮದಿನತ್ತವೇ ಹೆಚ್ಚಿನ ಗಮನ ಕೇಂದ್ರೀಕರಿಸಿತು. ಕೇಂದ್ರ ಸರ್ಕಾರದ ಕಳಪೆ ಕಲ್ಲಿದ್ದಲು ನಿರ್ವಹಣೆಯು ಗೃಹ ಬಳಕೆಯ ವಿದ್ಯುತ್ ಮೇಲೆ ಅಪಾರ ಒತ್ತಡವನ್ನು ಸೃಷ್ಟಿಸಿತು. ಮೇ ತಿಂಗಳ ಆರಂಭದಲ್ಲಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಿದ್ಯುತ್ ಕಂಪೆನಿಗಳನ್ನು ಜೂನ್ ಅಂತ್ಯದ ವೇಳೆಗೆ 19 ಮಿಲಿಯನ್ ಟನ್ಗಳಷ್ಟು ವರೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿತು. ಈ ವರ್ಷವೊಂದರಲ್ಲೇ ಸರ್ಕಾರವು 22 ದಶಲಕ್ಷ ಟನ್ಗಳಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸರ್ಕಾರಗಳಿಗೆ ಮತ್ತು 15.94 ಟನ್ಗಳಷ್ಟು ಆಮದು ಮಾಡಿಕೊಳ್ಳಲು ಖಾಸಗಿ ವಲಯಕ್ಕೆ ಅನುಮತಿ ನೀಡಿದೆ.
ಸೆಂಟ್ರಲ್ ವಿದ್ಯುತ್ ಪ್ರಾಧಿಕಾರ (ಸಿಇಎ) ನೀಡಿದ ಮಾಹಿತಿಯ ಪ್ರಕಾರ, ಸಿಇಎ ನ ಅಡಿಯಲ್ಲಿ ಬರುವ 173 ವಿದ್ಯುತ್ ಸ್ಥಾವರಗಳಲ್ಲಿ ಒಟ್ಟು ಅಗತ್ಯವಿರುವ ಕಲ್ಲಿದ್ದಲು ದಾಸ್ತಾನುಗಳ ಕೇವಲ 35% ಮಾತ್ರ ಉಳಿದಿವೆ. ಒಟ್ಟು 173 ಯುನಿಟ್ಗಳಿದ್ದು ಅದರಲ್ಲಿ 84 ಯುನಿಟ್ಗಳಲ್ಲಿ 25% ಕ್ಕಿಂತ ಕಡಿಮೆ ಮತ್ತು ಒಂಬತ್ತು ಕಲ್ಲಿದ್ದಲು ಸ್ಥಾವರಗಳಲ್ಲಿ ಮತ್ತೂ ಕಡಿಮೆ ದಾಸ್ತಾನುಗಳಿವೆ. ದೇಶೀಯ ಕಲ್ಲಿದ್ದಲು ಉತ್ಪಾದನೆಯು ಪಾತಾಳಕ್ಕಿಳಿದಿರುವುದರಿಂದ ಕೇಂದ್ರ ಸರ್ಕಾರವು ರಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾಗಳೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಇದು ಬೆಲೆ ಏರಿಕೆಗೆ ಕಾರಣವಾಗಲಿದೆ. ಅಲ್ಲದೆ ಕಲ್ಲಿದ್ದಲ ಮೇಲೆ ಹೆಚ್ಚು ಹೆಚ್ಚು ಅವಲಂಬಿಸಿದರೆ ನವೀಕರಿಸಬಹುದಾದ ಇಂಧನ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ವಾಗ್ದಾನವನ್ನು ಪೂರೈಸುವುದು ಸಾಧ್ಯವೇ ಇಲ್ಲ.