ಭಾರತ ಸಾಗುತ್ತಿರುವ ದಾರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ನಿರ್ಣಾಯಕ ಅಂಶಗಳಿಗೆ ಮುಖಾಮುಖಿಯಾಗುತ್ತೇವೆ. ಮೊದಲನೆಯದು ದೇಶದ ಪ್ರಜಾಪ್ರಭುತ್ವದ ಬುನಾದಿ ಮತ್ತು ಸಂವಿಧಾನದ ಸ್ತಂಭಗಳು ಹಂತಹಂತವಾಗಿ ಶಿಥಿಲವಾಗುತ್ತಾ ಕುಸಿಯುತ್ತಿವೆ. ಎರಡನೆಯದು ಈ ಎರಡನ್ನೂ ಸಾಂಸ್ಥಿಕವಾಗಿ ನಿರ್ವಹಿಸುವ/ನಿಯಂತ್ರಿಸುವ ಅಧಿಕಾರ ರಾಜಕಾರಣ ಕ್ರಮೇಣ ಜನಸ್ಪಂದನೆಯನ್ನು ಕಳೆದುಕೊಳ್ಳುತ್ತಿದೆ. ಈ ಸಿಕ್ಕುಗಳ ನಡುವೆ ಸೌಜನ್ಯ, ಸಂವೇದನೆ, ಸಂಯಮ , ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆ ಎಂಬ ಔದಾತ್ಯಗಳೆಲ್ಲವೂ ಮಾಯವಾಗುತ್ತಿವೆ. ವಿಷಾದಕರ ಬೆಳವಣಿಗೆ ಎಂದರೆ ಈ ಮೌಲ್ಯಪತನ ವ್ಯಕ್ತಿಗತ ನೆಲೆಯಲ್ಲಿ (Individual level) ಆಗುತ್ತಿರುವಷ್ಟೇ ವೇಗವಾಗಿ ಸಾಂಸ್ಥಿಕ ನೆಲೆಯಲ್ಲೂ (Institutional level) ಆಗುತ್ತಿದೆ. ತತ್ಪರಿಣಾಮವಾಗಿ ದೇಶದ ಆಡಳಿತವನ್ನು ಪ್ರತಿನಿಧಿಸುವ ವ್ಯಕ್ತಿಯ ಮನೋಭಾವ ಮತ್ತು ಪ್ರಭುತ್ವ/ಸರ್ಕಾರದ ಮನಸ್ಥಿತಿ ಒಂದೇ ಆದಂತೆ ಕಾಣುತ್ತಿದೆ.

ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗದ ಯಾವುದೇ ದೇಶದಲ್ಲಿ ಈ ಬೆಳವಣಿಗೆ ಅಪಾಯಕಾರಿಯಾಗಿ ಕಾಣುತ್ತದೆ. ಜುಲೈ 20ರಂದು ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿ ಯುವ ಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ನಮ್ಮ ʼ ಜನಪ್ರತಿನಿಧಿಗಳ ʼ ಮನೋಭಾವವನ್ನು ಸಾರ್ವಜನಿಕವಾಗಿ ತೆರೆದಿಟ್ಟುಬಿಟ್ಟಿದೆ. ಪ್ರತಿಭಟನಾಕಾರರ ಮೇಲೆ ಲಾಠಿ-ಪೆಲೆಟ್ ಗನ್ ಇತ್ಯಾದಿ ಅಸ್ತ್ರಗಳ ಬಳಕೆಯನ್ನು ಸಮರ್ಥಿಸಿಕೊಳ್ಳುವ ಒಂದು ವರ್ಗವನ್ನು ನಮ್ಮ ರಾಜಕಾರಣ ಸೃಷ್ಟಿಸಿದೆ. ಈ ಸಮರ್ಥನೆಗೆ 1975ರ ತುರ್ತುಪರಿಸ್ಥಿತಿಯನ್ನು ಅಳತೆಗೋಲಿನ ಹಾಗೆ ಬಳಸಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಾವೂ ಸಹ ಎಮರ್ಜೆನ್ಸಿಯಲ್ಲಿ ಪೊಲೀಸ್ ದೌರ್ಜನ್ಯ-ಸೆರೆವಾಸಕ್ಕೆ ಒಳಗಾಗಿದ್ದನ್ನು ಉಲ್ಲೇಖಿಸುವ ಮೂಲಕ, ಮೂಲಭೂತ ಹಕ್ಕುಗಳೇ ಇಲ್ಲದಿದ್ದ ಸನ್ನಿವೇಶವನ್ನು ವರ್ತಮಾನದ ಪರಿಸ್ಥಿತಿಗೆ ಸಮೀಕರಿಸಿದ್ದಾರೆ.
ಅಂದರೆ ವಿದ್ಯಾರ್ಥಿ ಯುವಸಮೂಹ, ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತರು, ಕಾರ್ಮಿಕರು ಹಾಗೂ ತಳಸಮುದಾಯದ ಶೋಷಿತ-ದೋಚಿತರು (Exploited and Looted) , ಚುನಾಯಿತ ಸರ್ಕಾರದ ಸಾಂಸ್ಥಿಕ ಕ್ರೌರ್ಯವನ್ನು ತುರ್ತುಪರಿಸ್ಥಿತಿಯನ್ನು ಅಳತೆಗೋಲು (Yard stick) ಎಂದು ಪರಿಗಣಿಸಿ ವ್ಯಾಖ್ಯಾನಿಸಬೇಕಿದೆ. ಅರ್ಥಾತ್ ಯಾವುದೇ ಪ್ರತಿಭಟನಕಾರರ ವಿರುದ್ಧ ಸರ್ಕಾರಗಳು ಪೊಲೀಸ್, ಮೀಸಲು ಸೇನಾಪಡೆ, ಕ್ಷಿಪ್ರ ಕಾರ್ಯಾಚರಣಾ ಪಡೆಗಳ ಮೂಲಕ ನಡೆಸುವ ಹಿಂಸಾತ್ಮಕ ದಾಳಿಯನ್ನು ತುಲನಾತ್ಮಕವಾಗಿ ನೋಡುವ ಮೂಲಕ ʼ ಅಂದಿಗಿಂತಲೂ ಇಂದು ಮೇಲು ʼ ಎಂದೋ ʼ ಅವರಿಗಿಂತಲೂ ಇವರು ಪರವಾಗಿಲ್ಲ ʼ ಎಂದೋ ಭಾವಿಸಿ, ಜನಸಾಮಾನ್ಯರು ತಮ್ಮ ಮೇಲಿನ ದಬ್ಬಾಳಿಕೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಂದು ಹಂತದಲ್ಲಿ ಇಂತಹ ದಬ್ಬಾಳಿಕೆಗಳೇ ಪ್ರಶ್ನಾತೀತವಾಗುವ ಸಂಭವವನ್ನೂ ಅಲ್ಲಗಳೆಯಲಾಗುವುದಿಲ್ಲ.

ವಿದ್ಯಾರ್ಥಿ-ಯುವ ಜನರ ಹಾದಿ
ಈ ಸಂಭಾವ್ಯ ಸನ್ನಿವೇಶವನ್ನು ಹೊರಗಿಟ್ಟು, ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಯುವಜನರ ಹೋರಾಟ ಮತ್ತು ಭಾಗಶಃ ಗೆಲುವನ್ನು ನಾವು ಹೇಗೆ ವ್ಯಾಖ್ಯಾನಿಸಬೇಕು ? ಈ ಪ್ರಶ್ನೆ ನಮ್ಮ ಸಾರ್ವಜನಿಕ ಸಂಕಥನಗಳಲ್ಲಿ ಧ್ವನಿಸುತ್ತಲೇ ಇರಬೇಕು/ಇರುತ್ತದೆ. ಸಂಸದೀಯ ಎಡಪಕ್ಷಗಳು ಈ ಗೆಲುವಿನ ಹಿನ್ನೆಲೆಯಲ್ಲಿ ನೀಡಿರುವ ಜಂಟಿ ಹೇಳಿಕೆ ತುಸು ಆಶಾದಾಯಕವಾಗಿದೆ. ಆದರೆ ಹೋರಾಟ ಆರಂಭವಾದಾಗಲೇ ಭರವಸೆಯ ಮಾತುಗಳ ರೀತಿಯಲ್ಲಿ ಜಂಟಿ ಹೇಳಿಕೆ ನೀಡಿದ್ದಲ್ಲಿ, ಹೋರಾಟಗಾರರ ಸ್ಫೂರ್ತಿ ಇಮ್ಮಡಿಯಾಗುತ್ತಿತ್ತು. ಪ್ರಸ್ತುತ ಹೇಳಿಕೆಯಲ್ಲೂ ಭವಿಷ್ಯದ ಹೋರಾಟಗಳಲ್ಲಿ ನಿಮ್ಮೊಡನೆ ನಾವು ಗಟ್ಟಿಯಾಗಿ ನಿಲ್ಲುತ್ತೇವೆ ಎಂಬ ಭರವಸೆಯ ಮಾತುಗಳು ಕಾಣುವುದಿಲ್ಲ. ಕೇಂದ್ರ ಸರ್ಕಾರದ ಧೋರಣೆಯ ಹಿನ್ನೆಲೆಯಲ್ಲಿ ಇದು ಅತ್ಯವಶ್ಯವಾಗಿತ್ತು. 36 ದಿನಗಳಲ್ಲಿ ಢಾಳಾಗಿ ಕಾಣುವ ಮತ್ತೊಂದು ಕೊರತೆ ಎಂದರೆ ಸ್ಥಾಪಿತ ಕಾರ್ಮಿಕ ಸಂಘಗಳ (Established Trade Unions) ಮೌನ. ಭೌತಿಕವಾಗಿ ಅಲ್ಲದಿದ್ದರೂ ಯುವ ಜನರಿಗೆ ಭರವಸೆ ನೀಡುವ ಒಂದು ಜಂಟಿ ಪತ್ರಿಕಾ ಹೇಳಿಕೆಯನ್ನು ಕನಿಷ್ಠ ಎಡಪಂಥೀಯ ಸಂಘಗಳಾದರೂ ನೀಡಬೇಕಿತ್ತು.

ಈ ಕೊರತೆಗಳಿಗೆ ಪರಿತಪಿಸಿ ಉಪಯೋಗವಿಲ್ಲ. ಏಕೆಂದರೆ ಭಾರತ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ನಡೆದು ಬಂದ ಹಾದಿಯಲ್ಲಿ ಕಲಿತ ಪಾಠಗಳು ಮರುಕಳಿಸದಂತೆ ಎಚ್ಚರವಹಿಸಿ, ಭವಿಷ್ಯದ ದಿನಗಳಲ್ಲಿ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾತ್ರ ಯೋಚಿಸುವುದು ಅನಿವಾರ್ಯ ಎನಿಸುತ್ತದೆ. ಯಾವುದೇ ಹೋರಾಟ-ಆಂದೋಲನಗಳ ಪುನರಾವಲೋಕನ ಅಥವಾ ಮರಣೋತ್ತರ ಪರೀಕ್ಷೆ (post-mortem) ಮಾಡುವ ಪರಂಪರೆಯನ್ನು ನಾವು ರೂಢಿಸಿಕೊಂಡಿದ್ದರೂ, ವರ್ತಮಾನದ ಸನ್ನಿವೇಶದಲ್ಲಿ ಕೊಂಚ ದಿಕ್ಕು ಬದಲಿಸಬೇಕಿದೆ. ಈ ಹೋರಾಟದಲ್ಲಿ ಸಂಭವಿಸಿರಬಹುದಾದ ತಪ್ಪು-ಒಪ್ಪುಗಳನ್ನು ಒರೆಹಚ್ಚಿ ನೋಡುವುದಕ್ಕಿಂತಲೂ, ಕಾಕ್ರೋಚ್ ಪಕ್ಷ ಮತ್ತು ವಿದ್ಯಾರ್ಥಿ ಯುವಜನರು ಧ್ವನಿಸಿದ ಜಟಿಲ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂದು ಯೋಚಿಸಬೇಕಿದೆ.

ಹಾಗೆಯೇ ಹಲವು ವರ್ಷಗಳಿಂದ ದೇಶವನ್ನು ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಧಿಡೀರನೆ ಉಗಮಿಸಿದ ಡಿಜಿಟಲ್ ಯುವದನಿ ಹೇಗೆ ಬಲ ನೀಡಿತು ಎಂದೂ ಯೋಚಿಸಬೇಕಿದೆ. ಅಂದರೆ, ಇದಕ್ಕೂ ಮುನ್ನ ದೇಶಾದ್ಯಂತ ತಮ್ಮದೇ ಆದ ಪ್ರಭಾವಿ ವಲಯಗಳನ್ನು ಹೊಂದಿರುವ, ನೂರಾರು ಹೋರಾಟಗಳನ್ನು ಮುನ್ನಡೆಸಿರುವ ಸಂಘಟನಾತ್ಮಕ ಶಕ್ತಿಯ ಹೊರತಾಗಿಯೂ ಕಾಕ್ರೋಚ್ ಜನತಾ ಪಕ್ಷಕ್ಕೆ ನಿರ್ವಾತ (Vacuum) ಕಂಡಿದ್ದಾದರೂ ಎಲ್ಲಿ ? ಯುವ ಜನರು ಆಯ್ಕೆ ಮಾಡಿದ ಹೋರಾಟದ ಮಾರ್ಗ ಏನೇ ಇರಲಿ ಈ ನಿರ್ವಾತವನ್ನು ತುಂಬಿ ಆಡಳಿತಾರೂಢ ಪಕ್ಷವನ್ನು ಪ್ರಶ್ನಿಸುವ ಮತ್ತು ಅದರಿಂದ ಉತ್ತರ ಪಡೆಯುವ ಸಾಧನೆಯನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಈ ಯುವ ದನಿಗೆ ದನಿಗೂಡಿಸಿದ ನೂರಾರು ಲಕ್ಷಾಂತರ ದನಿಗಳನ್ನು ಕಾಪಿಟ್ಟುಕೊಳ್ಳುವುದು ಹೇಗೆ ಎಂದು ಯೋಚಿಸಬೇಕಿದೆ.
ಭಿನ್ನ ಆಲೋಚನೆಗಳ ದಿಕ್ಕಿನಲ್ಲಿ
ಇದು ಸಾಧ್ಯವಾಗಬೇಕಾದರೆ ನಮ್ಮ, ಅಂದರೆ ಹಿರಿಯ ಪೀಳಿಗೆಯ ಪಕ್ಷ/ಸಂಘಟನೆ/ಹೋರಾಟಗಳ, ಆಲೋಚನಾ ಕ್ರಮವನ್ನು ಭಿನ್ನ ದಿಕ್ಕಿನಲ್ಲಿ ಕೊಂಡೊಯ್ಯಬೇಕು. ಕಳೆದ ಎಂಟು ದಶಕಗಳ ಆಲೋಚನಾ ವಿಧಾನವನ್ನು ಗಮನಿಸಿದಾಗ, ನಾವಿಟ್ಟ ಹೆಜ್ಜೆಯೇ ಶ್ರೇಷ್ಠ, ನಾವಿಟ್ಟ ಗುರಿಯೇ ಅಂತಿಮ, ನಾವು ನಿರ್ವಚಿಸಿದ ಹಾದಿಯೇ ಪರಿಶುದ್ಧ, ನಾವು ಅನುಸರಿಸುವ ಸಿದ್ದಾಂತವೇ ಅಂತಿಮ ಇತ್ಯಾದಿ ಅಹಮಿಕೆಯ ಲಕ್ಷಣಗಳು ಢಾಳಾಗಿ ಕಾಣುತ್ತವೆ. ಒಂದು ಹಂತದ ನಂತರ ಈ ಚಿಂತನಾ ಕ್ರಮವೇ ʼ ನಾವೇ ಶ್ರೇಷ್ಠ ʼ ಎಂಬ ಮನೋಭಾವಕ್ಕೆ ಕಾರಣವಾಗುತ್ತದೆ. ನಮ್ಮ ಆಲೋಚನೆಗಳಿಗೆ ಹೊರತಾದವರನ್ನು ʼ ಅನ್ಯೀಕರಿಸುವ ʼ (Othering) ಮನಸ್ಥಿತಿ ಬೇರೂರುತ್ತದೆ. ಮಾರ್ಕ್ಸ್, ಮಾವೋ, ಲೆನಿನ್, ಲೋಹಿಯಾ, ಅಂಬೇಡ್ಕರ್ ಮೊದಲಾದವರ ಸೈದ್ಧಾಂತಿಕ ದರ್ಶನಗಳನ್ನೂ ನಮ್ಮದೇ ಆದ ʼಆಲೋಚನಾ ಮಾರ್ಗʼ ಗಳಿಗೆ (Line of thinking) ಅನ್ವಯಿಸಿಕೊಳ್ಳುವುದು ಸಾಂಘಿಕ ಪ್ರತ್ಯೇಕತೆಗೆ (Organisational Seperation) ಕಾರಣವಾಗುತ್ತದೆ. ಎಡಪಕ್ಷಗಳಲ್ಲೂ ಸಹ ಐಕ್ಯತೆಗೆ ತಡೆಗೋಡೆಯಾಗಿರುವುದು ಈ ಆಲೋಚನಾ ವಿಧಾನವೇ.

ಜಂತರ್ ಮಂತರ್ನಲ್ಲಿ ಕೇಳಿಬಂದ ಯುವ ದನಿ ಈ ರೀತಿಯ ಹಳೆಯ ಚಿಂತನಾ ವಿಧಾನಗಳಿಗೆ ಒಂದು ಮಹತ್ತರ ತಿರುವು ನೀಡಿದೆ. ಐಕ್ಯತೆ, ಐಕಮತ್ಯ ಮತ್ತು ಪಾಲ್ಗೊಳ್ಳುವಿಕೆಯ ಹೊಸ ವಿಧಾನಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಡಿಜಿಟಲ್ ಸಂಪರ್ಕ ಮತ್ತು ಸಾಮಾಜಿಕ ಮಾಧ್ಯಮಗಳ (Social Media) ಬಳಕೆಯ ಹೊರತಾಗಿಯೂ ತಾತ್ವಿಕವಾಗಿ ಇಲ್ಲಿ ಕಾಣುವುದು ಬಾಧಿತರ (Affected) ಆತಂಕ ಮತ್ತು ಹತಾಶೆಗೆ ಕ್ಷಿಪ್ರಗತಿಯಲ್ಲಿ, ಪರಿಣಾಮಕಾರಿಯಾಗಿ ಸ್ಪಂದಿಸುವ ಒಂದು ಪ್ರಕ್ರಿಯೆ. ಬಹುಶಃ ಈ ಸ್ಪಂದನೆ ಮತ್ತು ಪ್ರತಿಕ್ರಿಯೆಯ ಹಾದಿಯಲ್ಲಿ ಸ್ಥಾಪಿತ ಹೋರಾಟಗಳ ನಿಧಾನ ನಡೆ, ವೈಫಲ್ಯ ಅಥವಾ ಹಿನ್ನಡೆಯೇ, ಕಾಕ್ರೋಚ್ ಪಕ್ಷ ಆಕ್ರಮಿಸಿದ ನಿರ್ವಾತಕ್ಕೆ (Vacuum) ಕಾರಣವಾಗಿರಬಹುದು. ತಮ್ಮ ಸಂಕಟಗಳ ನಿವಾರಣೆಗೆ ವಿದ್ಯಾರ್ಥಿ ಯುವ ಜನರು ನಿರೀಕ್ಷಿಸುವುದು ಪರಿಹಾರಗಳನ್ನೇ ಹೊರತು, ನಿರ್ದಿಷ್ಟ ತಾತ್ವಿಕ ಅಸ್ಮಿತೆಗಳನ್ನಲ್ಲ.

ಈ ಸೂಕ್ಷ್ಮವನ್ನು ಸರಿಯಾಗಿ ಅರ್ಥೈಸುವಲ್ಲಿ ಹಿರಿಯ ತಲೆಮಾರು ಸೋತಿದೆ ಎಂದೇ ಹೇಳಬಹುದು. ಈ ವೈಫಲ್ಯವೇ ಎಲ್ಲ ಹೋರಾಟಗಳ ವಿಘಟನೆಗೂ ಕಾರಣವಾಗಿದೆ. ದಶಕಗಳ ಹಿಂದೆ ಅಥವಾ ಶತಮಾನದ ಹಿಂದೆ ಅಂದಿನ ಸಾಮಾಜಿಕ ಸನ್ನಿವೇಶ, ವಾತಾವರಣಕ್ಕೆ ಅನುಗುಣವಾಗಿ ರೂಪಿಸಲ್ಪಟ್ಟ ಆಲೋಚನಾ ವಿಧಾನಗಳನ್ನು ಮರುವಿಮರ್ಶಿಸದೆ, ವರ್ತಮಾನಕ್ಕೆ ಹೊಂದುವ ರೀತಿಯಲ್ಲಿ ಮರುನಿರ್ವಚನೆ ಮಾಡದೆ, ಸೈದ್ಧಾಂತಿಕ-ತಾತ್ವಿಕ ನಿಷ್ಠೆಗೆ ಅಂಟಿಕೊಳ್ಳುವುದು ನಮ್ಮ ಚಿಂತನೆಯ ಮಾರ್ಗಗಳನ್ನು ಜಡಗಟ್ಟಿಸುತ್ತದೆ. ದಿನನಿತ್ಯದ ಹೋರಾಟಗಳು ಎಷ್ಟೇ ವ್ಯಾಪಕವಾಗಿ ಬೆಳೆದರೂ, ಆಳವಾಗಿ ಬೇರೂರಿದರೂ, ಅದು ತಾತ್ವಿಕವಾಗಿ ತಲುಪಬೇಕಾದ ವರ್ಗಗಳನ್ನು ತಲುಪುವುದಿಲ್ಲ. ಈ ಪರಿಸ್ಥಿತಿಯನ್ನೇ ಆರೆಸ್ಸೆಸ್-ಹಿಂದುತ್ವ ರಾಜಕಾರಣ ಸಮರ್ಪಕವಾಗಿ ಬಳಸಿಕೊಂಡಿದೆ.
ಹೋರಾಟದ ಮಾರ್ಗದ ಅವಿಷ್ಕಾರ
ಬಿಡದಿ ಟೌನ್ಷಿಪ್ ವಿರುದ್ಧ ನಡೆಯುತ್ತಿರುವ ರೈತರ ಹೋರಾಟದಲ್ಲಿ , ಕಾಕ್ರೋಚ್ ಜನತಾ ಪಕ್ಷ ಮತ್ತು ಯುವ ಜನರು ರೈತ ಹೋರಾಟಕ್ಕೆ ಬೆಂಬಲಿಸಬೇಕು ಎಂಬ ಧ್ವನಿ ಕೇಳಿಬರುತ್ತಿದೆ. ಕಾಕ್ರೋಚ್ ಪಕ್ಷವನ್ನು ವಿಮರ್ಶಾತ್ಮಕವಾಗಿ ನೋಡುವ ಕೆಲವು ಅಭಿಪ್ರಾಯಗಳಲ್ಲೂ ಸಹ, ಈ ಗುಂಪು ವಿಭಿನ್ನ ಸಮಸ್ಯೆಗಳನ್ನು ಧ್ವನಿಸಬಹುದಿತ್ತು, ಧ್ವನಿಸಬೇಕಿತ್ತು ಎಂಬ ಭಾವನೆ ಕೇಳಿಬರುತ್ತಿದೆ. ದೆಹಲಿ ಹೋರಾಟಕ್ಕೂ ಮುನ್ನ ನಮ್ಮಲ್ಲಿ ಯುವ ದನಿ ಇರಲಿಲ್ಲವೇ ? ನಿರಂತರವಾಗಿ ತಮ್ಮ ಭೂಮಿಯನ್ನು ಕಾಪಾಡಿಕೊಳ್ಳಲು ಹೋರಾಡುತ್ತಿರುವ ರೈತ ಸಮುದಾಯಗಳಲ್ಲಿ ಯುವ ದನಿಯ ಕೊರತೆ ಇದೆಯೇ ? ದೇಶದ ಸಂಘಟಿತ ಕಾರ್ಮಿಕ ಚಳುವಳಿಗಳಲ್ಲಿ ಶಾಶ್ವತ ನಾಯಕತ್ವವನ್ನು ಹಿರಿಯ ಪೀಳಿಗೆಯೇ ವಹಿಸಿಕೊಂಡಿದ್ದರೂ, ಅಲ್ಲಿ ಯುವ ದನಿ ಇಲ್ಲವೇ ? ಎಲ್ಲ ವಲಯಗಳಲ್ಲೂ ಯುವಜನರು ಇದ್ದಾರೆ, ಅವರ ಆತಂಕ-ಹತಾಶೆ-ನೋವು ಢಾಳಾಗಿ ಕಾಣುವಂತಿದೆ. ಒಂದು ರೀತಿಯಲ್ಲಿ ಇಡೀ ಯುವ ಸಮಾಜ ನಿರ್ಲಕ್ಷಿತ ವರ್ಗವಾಗಿ ಕಾಣುತ್ತಿದೆ. ಹಾಗಾದರೆ ಅದನ್ನು ಗುರುತಿಸಲಾಗುತ್ತಿಲ್ಲವೇ?

ಹೀಗಿರುವಾಗ, ಈ ಯುವ ಸಮಾಜಗಳ ಒಳಬೇಗುದಿಗಳಿಗೆ ಸ್ಪಂದಿಸಲು ನಮ್ಮಿಂದ ಏಕೆ ಸಾಧ್ಯವಾಗಿಲ್ಲ. ಸಂಸದೀಯ ಕಮ್ಯುನಿಸ್ಟ್ ಪಕ್ಷಗಳನ್ನೂ ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಯುವಜನರ, ರೈತರ, ಆದಿವಾಸಿಗಳ, ಮಹಿಳೆಯರ, ಕಾರ್ಮಿಕರ, ಅಸಂಘಟಿತರ ಸಾಂಘಿಕ ಉಪವರ್ಗೀಕರಣವನ್ನು ಕಾಣುತ್ತಿದ್ದೇವೆ. ಎಲ್ಲ ವರ್ಗಗಳನ್ನೂ ಪ್ರತಿನಿಧಿಸುವ, ಆ ವರ್ಗ ಹಿತಾಸಕ್ತಿಗಾಗಿ ಹೋರಾಡುವ ಸಂಘಟನೆಗಳೂ ಇವೆ. ಈ ಎಲ್ಲ ಸಂಘಟನೆಗಳ ಸಂಚಿತ ಶಕ್ತಿಯನ್ನು (Accumulate Power) ನಾವು ಯಾವ ರೀತಿಯಲ್ಲಿ ಬಳಸಿಕೊಂಡಿದ್ದೇವೆ ? ಮೇಲ್ಮಟ್ಟದಲ್ಲಿರುವಂತಹ ಭಿನ್ನಮತದ ಗೋಡೆಗಳ ಸೋರಿಕೆಯ ಹನಿಗಳೇ ತಳಮಟ್ಟದವರೆಗೂ ತೊಟ್ಟಿಕ್ಕುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಐಕಮತ್ಯದ ಧ್ವನಿ (Voice of Solidarity) ಕೇಳಿಬರುವುದೇ ಹೊರತು ಐಕ್ಯತೆಯ (Unity) ಕೂಗು ಅಪರೂಪಕ್ಕೂ ಕೇಳಿಬರುವುದಿಲ್ಲ.

ವಿಕಾಸದ ಹಾದಿಯ ಸವಾಲುಗಳು
ಈ ದುರ್ಗಮ ಸನ್ನಿವೇಶದಿಂದ ನಾವು ಹೊರಬರಬೇಕಿದೆ. ನವ ಭಾರತ ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ವೇಗವನ್ನು ಗಮನಿಸಿದರೆ ಇದರ ಅಗತ್ಯತೆ ಅರ್ಥವಾಗುತ್ತದೆ. ನೂರಾರು ಅಂಬೇಡ್ಕರ್ ಗುಂಪುಗಳು, ಹತ್ತಾರು ಕಮ್ಯುನಿಸ್ಟ್ ಗುಂಪುಗಳು, ರೈತ ಸಂಘಗಳು, ಕಾರ್ಮಿಕ ಸಂಘಗಳು ಇದನ್ನು ಅರ್ಥಮಾಢಿಕೊಳ್ಳಬೇಕಿದೆ. ದೆಹಲಿಯ ಜಂತರ್ ಮಂತರ್ ಹೋರಾಟಗಳಲ್ಲಿ ಹತ್ತಾರು ಸಂಘಟನೆಗಳು ಪಾಲ್ಗೊಂಡಿದ್ದರೂ ಅದು ʼ ನಿರ್ದಿಷ್ಟ ಬ್ಯಾನರ್ ಇಲ್ಲದ ʼ (Specific Bannerless) ಹೋರಾಟವಾಗಿತ್ತು. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳೂ ಸಹ ಇದರ ಪ್ರಮುಖ ಭಾಗವಾಗಿದ್ದವು. ಇದು ಭವಿಷ್ಯದ ದುರ್ಗಮ ಹಾದಿಯಲ್ಲಿ ನಮಗೆ ಬೇಕಾಗಿರುವ ʼ ಆಲೋಚನಾ ಕ್ರಮ ʼ (Line of thinking) . ಇದನ್ನು ಅನುಸರಿಸಲು ನಮಗೆ ಗ್ರಾಂಥಿಕ ಶೋಧ ಅಗತ್ಯವಿಲ್ಲ ಅಥವಾ ಹಿಂದಿನ ಕಾಲಘಟ್ಟದ ಬೋಧಕಗಳು ಬೇಕಿಲ್ಲ.
ಬುದ್ಧನಿಂದ ಅಂಬೇಡ್ಕರ್ವರೆಗೆ, ಮಾರ್ಕ್ಸ್ನನ್ನೂ ಒಳಗೊಂಡಂತೆ ಯಾವ ಸಿದ್ಧಾಂತವೂ ನಿಂತನೀರಲ್ಲ. ಜಡಗಟ್ಟಿದ ಕೂಪವೂ ಅಲ್ಲ.. ಎಲ್ಲವೂ ಸಹ ಕಾಲಕಾಲಕ್ಕೆ ಪುನರ್ವಿಮರ್ಶೆಗೊಳಗಾಗುತ್ತಾ, ಮರು ನಿರ್ವಚನೆಗೊಳಗಾಗುತ್ತಾ ಪ್ರಚಲಿತ ಸನ್ನಿವೇಶಗಳ ಅನುಸಾರ ಬದಲಾಗಬೇಕಾಗುತ್ತದೆ. ಮೂಲ ಸೈದ್ದಾಂತಿಕ ನೆಲೆಗಳನ್ನು ಭಂಗಗೊಳಿಸದೆಯೇ ವರ್ತಮಾನದ ಅನುಕರಣಾ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ವ್ಯವಧಾನ ನಮ್ಮಲ್ಲಿರಬೇಕು. ಹಾಗೆಯೇ ಭಾರತದಂತಹ ವೈವಿಧ್ಯಮಯ ಸಂಸ್ಕೃತಿಗಳ ದೇಶದಲ್ಲಿ ಪ್ರತಿಯೊಂದು ರಾಜ್ಯವೂ ಭಿನ್ನ ಮಾದರಿಯ ಹೋರಾಟಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಈ ಹೋರಾಟಗಳಿಗೆ ಅನುಗುಣವಾಗಿ ನಮ್ಮ ʼಆಲೋಚನಾ ಕ್ರಮಗಳನ್ನೂʼ ಮರು ರೂಪಿಸಿಕೊಳ್ಳಬೇಕಾಗುತ್ತದೆ. ಕಾರ್ಮಿಕರ ಶೋಷಣೆ ಮತ್ತು ಮಹಿಳಾ ದೌರ್ಜನ್ಯಗಳಲ್ಲಿ ಏಕರೂಪತೆ ಕಾಣಬಹುದಾದರೂ, ಉಳಿದಂತೆ ಸಾಮಾಜಿಕ-ಆರ್ಥಿಕ ಸಮಸ್ಯೆಗಳಲ್ಲಿ ಈ ಭಿನ್ನತೆಯನ್ನು ಗಂಭೀರವಾಗಿ ಸಂಶೋಧನೆಗೊಳಪಡಿಸಬೇಕಿದೆ.

ಹಿಂದೂ ರಾಷ್ಟ್ರದ ಸಂಭಾವ್ಯ ಅಪಾಯ
ಆರೆಸ್ಸೆಸ್ ಪ್ರಣೀತ ಹಿಂದುತ್ವ ರಾಜಕಾರಣ ಭಾರತದ ಭವಿಷ್ಯವನ್ನು ಹಿಂದೂ ರಾಷ್ಟ್ರದಲ್ಲಿ ಕಾಣುತ್ತಿದೆ. ಇದಕ್ಕೆ ಬೇಕಾದ ಬೌದ್ಧಿಕ ಪರಿಕರಗಳನ್ನು, ಭೌತಿಕ ನೆಲೆಗಳನ್ನು, ಸಾಂಸ್ಥಿಕ ಅಡಿಪಾಯವನ್ನು 1998ರಿಂದಲೇ ನಿರ್ಮಿಸಿಕೊಳ್ಳುತ್ತಾ ಬಂದಿದೆ. ಈ ಭಾರತೀಯ ಫ್ಯಾಸಿಸಂ ವಿರುದ್ಧ ಹೋರಾಡುವ ಪ್ರಜಾಪ್ರಭುತ್ವದ ದನಿಗಳಿಗೆ ಸಂವಿಧಾನ ಎಂಬ ರಕ್ಷಾಕವಚ ಇರುವುದಾದರೂ, ಸಂಸದೀಯ ಪ್ರಜಾತಂತ್ರದಲ್ಲಿ ಚುನಾಯಿತ ಬಹುಮತದ ಸರ್ಕಾರ (Elected Majority Government) ಅದನ್ನು ಸುಲಭವಾಗಿ ದುರ್ಬಲಗೊಳಿಸಬಹುದು. ಬಿಜೆಪಿ ಅನುಸರಿಸುತ್ತಿರುವ ಬಹುಸಂಖ್ಯಾವಾದಿ ರಾಜಕೀಯ (Majoritarian Politics) ಇದನ್ನು ಸಾಧ್ಯವಾಗಿಸುತ್ತದೆ. ಈ ಅಪಾಯದ ವಿರುದ್ಧ ಸಂವಿಧಾನ ನಿಷ್ಠ ಅಂಬೇಡ್ಕರ್ ಅನುಯಾಯಿಗಳು, ಎಡಪಂಥೀಯ ಪಕ್ಷ-ಸಂಘಟನೆಗಳು, ಪಿತೃಪ್ರಧಾನತೆಯನ್ನು ವಿರೋಧಿಸುವ ಮಹಿಳಾ ಗುಂಪುಗಳು, ಆದಿವಾಸಿಗಳು, ಮತೀಯತೆಯನ್ನು ತೊರೆದ ಅಲ್ಪಸಂಖ್ಯಾತರು ಒಂದಾಗಬೇಕಿದೆ.
ಈ ಒಂದಾಗುವಿಕೆಯ ಮೊದಲ ಹೆಜ್ಜೆಯನ್ನು ಸಂಸದೀಯ ಎಡಪಕ್ಷಗಳು ಮುಂದಿಡಬೇಕಿದೆ. ಎಡಪಕ್ಷಗಳ ಐಕ್ಯತೆ ಕೇವಲ ಆಲಂಕಾರಿಕ ಘೋಷಣೆಯಾಗಿ ಕಳೆದ ಎರಡು ಮೂರು ದಶಕಗಳಿಂದ ಕೇಳಿಬರುತ್ತಿದೆ. ಆದರೆ ತಳಮಟ್ಟದಲ್ಲೂ ಸಹ ಈ ಆಲೋಚನೆ ಹರಳುಗಟ್ಟಿಲ್ಲ. ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಎಡಪಕ್ಷಗಳು ಮತ್ತು ದಲಿತ ಚಳುವಳಿಗಳು, ಈ ಯುವ ದನಿಗೆ ಅಗತ್ಯವಾದ ಬೌದ್ಧಿಕ-ಭೌತಿಕ ಅವಕಾಶಗಳನ್ನು ಕಲ್ಪಿಸುವ ಮೂಲಕ ಐಕ್ಯತೆಯ ಹಾದಿಯಲ್ಲಿ ಸಾಗಬೇಕಿದೆ. ಈ ಐಕ್ಯತೆಗೆ ತಾತ್ವಿಕವಾಗಿ ಅಡ್ಡಿಯಾಗಿರುವ ಕಾರ್ಮಿಕ ಸಂಘಗಳಲ್ಲಿ ಇನ್ನಾದರೂ ವಿವೇಕ ಮೂಡಬೇಕಿದೆ. ಎಡಪಕ್ಷಗಳು ತಮ್ಮ ಮಡಿವಂತಿಕೆ, ಪ್ರತ್ಯೇಕತಾಭಾವ ಮತ್ತು ಸೈದ್ಧಾಂತಿಕ ಪರಿಶುದ್ಧತೆಯ (Ideological Purity) ಕಲ್ಪನೆಗಳಿಂದ ಹೊರಬಂದು, ವರ್ತಮಾನ ಮತ್ತು ಭವಿಷ್ಯಕ್ಕೆ ಅಗತ್ಯವಾದ ಹೊಸ ʼ ಆಲೋಚನಾ ಕ್ರಮ ʼವನ್ನು (Line of Thinking) ಕಟ್ಟಬೇಕಿದೆ.
ಈ ಕಟ್ಟುವ ಕ್ರಮ ಮತ್ತು ಹಾದಿ ಸರಳರೇಖೆಯಲ್ಲೇ ಇರಬೇಕಿಲ್ಲ. ಕವಲುಗಳೊಡೆಯಬಹುದು, ಅಡ್ಡಗೋಡೆಗಳು ಕಾಣಬಹುದು, ಆದರೆ ಇವೆಲ್ಲವನ್ನೂ ಮೀರಿ ಮುನ್ನಡೆಯುವ ಸಾಮರ್ಥ್ಯ ಭಾರತೀಯ ಸಮಾಜಕ್ಕಿದೆ. ಇದೇ ಮಾತುಗಳು ಅಂಬೇಡ್ಕರ್ವಾದಿ ದಲಿತ ಚಳುವಳಿಗೂ ಅನ್ವಯಿಸುತ್ತವೆ. ಕರಾಳ ಭವಿಷ್ಯ ಎದುರಿಸುತ್ತಿರುವ ಭಾರತದ ಪ್ರಜಾಪ್ರಭುತ್ವ ಮತ್ತು ದುರ್ಗಮ ಹಾದಿಯಲ್ಲಿ ಕ್ರಮಿಸುತ್ತಿರುವ ಸಂವಿಧಾನ ಈ ಮಹತ್ತರ, ನಿರ್ಣಾಯಕ ತಿರುವಿಗಾಗಿ ಕಾಯುತ್ತಲೇ ಬಂದಿದೆ. ಅಡ್ಡಿಯಾಗುತ್ತಿರುವುದು ನಮ್ಮೊಳಗೇ ಇರುವ ಸ್ವ-ಹಿತಾಸಕ್ತಿ, ಮೇಲರಿಮೆ ಮತ್ತು ರಾಜಕೀಯ ಅಹಮಿಕೆಗಳು. ಈ ಎರಡೂ ನೆಲೆಗಳಲ್ಲಿ ಶಾಶ್ವತ ನಾಯಕತ್ವದ ಕಲ್ಪನೆಯನ್ನು ಬದಿಗೊತ್ತಿ ದೇಶದ ಯುವಜನಾಂಗಕ್ಕೆ ನಾಯಕತ್ವದ ಧ್ವನಿ, ಪ್ರಾತಿನಿಧಿತ್ವದ ಅವಕಾಶ ಹಾಗೂ ನಿರ್ಧಾರದ ಸ್ವಾತಂತ್ರ್ಯವನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಎಲ್ಲರನ್ನೂ ಒಳಗೊಳ್ಳಬೇಕಾದ ಈ ಪ್ರಕ್ರಿಯೆಯಲ್ಲಿ ನಮ್ಮೊಳಗಿನ ಪುರುಷಾಧಿಪತ್ಯದ ಸಂಕೋಲೆಗಳನ್ನು ಕಳಚಿ ಮಹಿಳೆಯರನ್ನೂ ಒಳಗೊಳ್ಳಬೇಕಿದೆ.

ಸಾಧ್ಯತೆಗಳ ಕನಸುಗಳೊಂದಿಗೆ
ಪ್ರಸ್ತುತ ಪರಿಸ್ಥಿತಿಗಳಲ್ಲಿ ಸ್ಥಾಪಿತ ಹಿತಾಸಕ್ತಿಗಳನ್ನು ಮೀರಿ ಇದನ್ನು ಸಾಧಿಸುವುದು ಸುಲಭಸಾಧ್ಯವಲ್ಲ ಆದರೆ ಅಸಾಧ್ಯವಂತೂ ಖಂಡಿತ ಅಲ್ಲ. ನಮ್ಮ ವ್ಯಕ್ತಿಗತ ಯೋಚನಾ ಲಹರಿ ಬದಲಾದರೆ ಸಾಂಘಿಕ ಆಲೋಚನಾ ಕ್ರಮವೂ ಬದಲಾಗುತ್ತದೆ. ಯುವಜನ-ಮಹಿಳಾ ಸಮೂಹದ ದನಿ ಪ್ರಜಾಪ್ರಭುತ್ವದ ಆಶಯಗಳಿಗೆ ಮತ್ತಷ್ಟು ಬಲ ನೀಡುವುದು ನಿಸ್ಸಂಶಯ. ಮಾರ್ಕ್ಸ್ನ ಮಾತುಗಳಲ್ಲೇ ಹೇಳುವುದಾದರೆ, ಸ್ಥಾಪಿತ ಹಿತಾಸಕ್ತಿಗಳು, ಅಂದರೆ ಒಟ್ಟಾರೆ ನಾವು, ಅಸ್ಮಿತೆಗಳನ್ನು ಹೊರತುಪಡಿಸಿ ಕಳೆದುಕೊಳ್ಳುವುದೇನೂ ಇಲ್ಲ. ಕ್ಷಿಪ್ರ ಬದಲಾವಣೆಯಾಗುತ್ತಿರುವ ಈ ಹಂತದಲ್ಲಿ ನಮ್ಮ ನಡಿಗೆ ನಿಧಾನವಾದಷ್ಟೂ ತಲುಪಬೇಕಾದ ಅಂತಿಮ ಗುರಿ (Goal post) ದೂರವಾಗುತ್ತಾ ಹೋಗುತ್ತದೆ. ಈ ದೃಷ್ಟಿಯಿಂದ ಸ್ವ ವಿಮರ್ಶೆಗೆ ತೆರೆದುಕೊಳ್ಳುವುದು ವರ್ತಮಾನದ ತುರ್ತು.
ಇಲ್ಲವಾದರೆ ನಾವು ಗುರಿ ತಲುಪಿದಾಗ ವಿಶಾಲ ಬಯಲಲ್ಲಿ ನಿಂತಿರುತ್ತೇವೆ. ಪ್ರಜಾಪ್ರಭುತ್ವೀಯ ಮೌಲ್ಯಗಳು ಮತ್ತು ಸಾಂವಿಧಾನಿಕ ಆಶಯಗಳು ಇಳೆಯೊಡಲು ಸೇರಿರುತ್ತವೆ. ನಾವು ಎದೆಗಪ್ಪಿಕೊಳ್ಳುವ ನಮ್ಮ ಅಸ್ಮಿತೆಯ ಕುರುಹುಗಳನ್ನು ನೆಡುವುದಕ್ಕೂ ಅಲ್ಲಿ ಅವಕಾಶ ಇರಲಾರದು. ಅಸ್ತಿತ್ವವೇ ಇಲ್ಲದ ಅಸ್ಮಿತೆಗಳು ಮಾಯಾಪರದೆಗಳಾಗುತ್ತವೆ. ರಾಜಕೀಯ ಪರಿಭಾಷೆಯಲ್ಲಿ ಇದನ್ನು ಫ್ಯಾಸಿಸ್ಟ್ ಎಂದು ಹೇಳಲಾಗುತ್ತದೆ. ಸುಲಭ ಮಾತುಗಳಲ್ಲಿ ಹೇಳುವುದಾದರೆ ಅದು ನಾವು ಕಂಡ ಹಾಗೂ ಕಟ್ಟಿದ ಕನಸುಗಳ ಭಗ್ನಾವಶೇಷಗಳ ವಿಶಾಲ ಬಯಲಾಗಿರುತ್ತದೆ. ಈಗಿರುವ ಹಸಿರು ಹಾದಿಯನ್ನು ಮತ್ತಷ್ಟು ಹಸಿರಾಗಿಸಿ ಮುಂಗಾಣ್ಕೆಯೊಂದಿಗೆ ನಡೆದರೆ, ಬಹುಶಃ ಅಂಬೇಡ್ಕರ್, ಗಾಂಧಿ ಇನ್ನಿತರ ದಾರ್ಶನಿಕರು ಕಂಡ ಕನಸನ್ನು ಸಾಕಾರಗೊಳಿಸಬಹುದು.
ಯೋಚಿಸಿ !!!





