ಚೆನ್ನೈ ಸೆಪ್ಟೆಂಬರ್ 25: ಎಡಪ್ಪಾಡಿ ಕೆ ಪಳನಿಸ್ವಾಮಿ (Edappadi K Palaniswami) ನೇತೃತ್ವದ ಎಐಎಡಿಎಂಕೆ (AIADMK) ಸೋಮವಾರ ಬಿಜೆಪಿ(BJP) ಜೊತೆಗಿನ ಮೈತ್ರಿಯಿಂದ ಹೊರಬರುವ ನಿರ್ಧಾರ ಪ್ರಕಟಿಸಿದೆ. ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನ ಕಚೇರಿಯ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯದರ್ಶಿಗಳು ಈ ಕುರಿತು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಮಾಜಿ ಸಚಿವರು ಮತ್ತು ಹಿರಿಯ ಮುಖಂಡರಾದ ಕೆ ಪಿ ಮುನುಸಾಮಿ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಹಲವಾರು ಮಾಜಿ ಸಚಿವರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಗುಂಪುಗಳ ನಡುವೆ ನಿರ್ಣಯವನ್ನು ಓದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಬಿಜೆಪಿ ರಾಜ್ಯ ನಾಯಕತ್ವವು ಎಐಎಡಿಎಂಕೆ, ನಮ್ಮ ನಾಯಕರು, ಅಣ್ಣಾ ಮತ್ತು ಅಮ್ಮ (ದಿವಂಗತ ಮುಖ್ಯಮಂತ್ರಿಗಳಾದ ಸಿ ಎನ್ ಅಣ್ಣಾದೊರೈ ಮತ್ತು ಜೆ ಜಯಲಲಿತಾ) ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಇದು ಉದ್ದೇಶಪೂರ್ವಕವಾಗಿ ಮತ್ತು ಎಐಎಡಿಎಂಕೆ ತತ್ವಗಳನ್ನು ಟೀಕಿಸುತ್ತಿದೆ ಎಂದು ಹೇಳಿದ್ದು, ಮೈತ್ರಿಯಿಂದ ಹೊರಬರುವ ನಿರ್ಣಯ ತೆಗೆದುಕೊಂಡಿದೆ.
ಸೆಪ್ಟೆಂಬರ್ 20ರಂದು ಮಧುರೈನಲ್ಲಿ ನಡೆದ ಎಐಎಡಿಎಂಕೆಯ ಐತಿಹಾಸಿಕ ಸಮಾವೇಶವನ್ನು ಬಿಜೆಪಿ ನಾಯಕತ್ವವು ಕೀಳಾಗಿ ಪರಿಗಣಿಸಿದೆ. ಎರಡು ಕೋಟಿ ಕಾರ್ಯಕರ್ತರ ಪಕ್ಷವನ್ನು ಪಳನಿಸ್ವಾಮಿ ಮುನ್ನಡೆಸುತ್ತಿದ್ದಾರೆ ಎಂದು ನಿಂದಿಸಿದ್ದಾರೆ. ಇದು ಕಾರ್ಯಕರ್ತರು ಮತ್ತು ಪದಾಧಿಕಾರಿಗಳಲ್ಲಿ ಬೇಸರ ಉಂಟುಮಾಡಿದೆ. ಸದಸ್ಯರ ಭಾವನೆಗಳನ್ನು ಗೌರವಿಸುವ ಮೂಲಕ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವ ತನ್ನ ನಿರ್ಧಾರವನ್ನು ಎಐಎಡಿಎಂಕೆ ಸಮರ್ಥಿಸಿಕೊಂಡಿದೆ.
ಸುದ್ದಿ ತಿಳಿದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಶನಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸುವ ಕೊನೆಯ ಪ್ರಯತ್ನ ನಡೆದಿತ್ತು. ಏತನ್ಮಧ್ಯೆ ಎಐಎಡಿಎಂಕೆ ತನ್ನ ಬೇಡಿಕೆಯಲ್ಲಿ ದೃಢವಾಗಿ ನಿಂತಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ಮೇಲಿನ ಟೀಕೆಗಳಿಗೆ ಕ್ಷಮೆಯಾಚಿಸಲಿ ಅಥವಾ ಅವರನ್ನು ಬದಲಾಯಿಸಬೇಕು ಎಂದು ಎಐಎಡಿಎಂಕೆ ಪಟ್ಟು ಹಿಡಿದಿತ್ತು.
ಆ ಸಭೆಯಲ್ಲಿ ಎಐಎಡಿಎಂಕೆಯ ಹಿರಿಯ ನಾಯಕರೊಬ್ಬರು ಚರ್ಚೆಗಳು”ಸೌಹಾರ್ದಯುತ” ಆಗಿತ್ತು ಎಂದು ಹೇಳಿದ್ದು, ಬಿಜೆಪಿಯ ಎಂ ಚಕ್ರವರ್ತಿಯವರ ಟೀಕೆಗಳು ವಿಭಿನ್ನ ಚಿತ್ರಣವನ್ನು ನೀಡಿವೆ ಎಂದಿದ್ದಾರೆ. ಪಕ್ಷವನ್ನು (ತಮಿಳುನಾಡಿನಲ್ಲಿ) ಪುನರುಜ್ಜೀವನಗೊಳಿಸಿರುವ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡುವ ಕಲ್ಪನೆಯನ್ನು ನಾಯಕತ್ವವು ಇಷ್ಟಪಡುವುದಿಲ್ಲ .ಅವರು ಸನಾತನ ಧರ್ಮದ ವಿವಾದದ ಸಮಯದಲ್ಲಿ ಅಣ್ಣಾದೊರೈ ಅವರನ್ನು ಉಲ್ಲೇಖಿಸುವ ಹೇಳಿಕೆಯನ್ನು ಮಾತ್ರ ಮಾಡಿದರು. ಅಣ್ಣಾಮಲೈ ಪಕ್ಷವನ್ನು ಟೀಕಿಸದ ಕಾರಣ ಎಐಎಡಿಎಂಕೆ ಅಸಮಾಧಾನಗೊಳ್ಳಬಾರದು ಎಂದು ಅವರು ಹೇಳಿದರು ಎಂದಿದ್ದಾರೆ.
ಕಳೆದ ವಾರ ಎಐಎಡಿಎಂಕೆ-ಬಿಜೆಪಿ ಮೈತ್ರಿ ಮುರಿದುಕೊಳ್ಳುವ ಹಂತಕ್ಕೆ ಬಂದಿದ್ದು, ಎಐಎಡಿಎಂಕೆ ಪಕ್ಷದ ಡಿ ಜಯಕುಮಾರ್ ಅವರು “ಚುನಾವಣೆಯ ಮೊದಲು ಮೈತ್ರಿ ಬಗ್ಗೆ ನಾವು ನಿರ್ಧರಿಸುತ್ತೇವೆ. ಅಣ್ಣಾಮಲೈ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನರ್ಹರು, ಅವರು ತಮ್ಮನ್ನು ಬಿಂಬಿಸಿಕೊಳ್ಳಲು ದಿವಂಗತ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಹೇಳಿದ್ದರು.
ಬಿಜೆಪಿ ನಾಯಕ ಅಣ್ಣಾಮಲೈ ಈ ಹಿಂದೆ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಟೀಕಿಸಿದ್ದರು. ಬಿಜೆಪಿ ಕಾರ್ಯಕರ್ತರು ಬಯಸಿದ್ದರೂ ಅಣ್ಣಾಮಲೈ ಅವರು ಎಐಎಡಿಎಂಕೆ ಜೊತೆ ಮೈತ್ರಿ ಬಯಸುವುದಿಲ್ಲ. ನಮ್ಮ ನಾಯಕರ ಟೀಕೆಗಳನ್ನು ನಾವು ಸಹಿಸಬೇಕೇ? ನಾವು ನಿಮ್ಮನ್ನು ಏಕೆ ಹೊತ್ತುಕೊಳ್ಳಬೇಕು? ಬಿಜೆಪಿ ಇಲ್ಲಿ ಕಾಲಿಡಲು ಸಾಧ್ಯವಿಲ್ಲ ಎಂದು ಜಯಕುಮಾರ್ ಹೇಳಿದ್ದಾರೆ.
ಬಿಜೆಪಿಯು ಎಐಎಡಿಎಂಕೆಯೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದರೂ ಅದನ್ನು ಒಂದು ತೋಳು ಅಂತರದಲ್ಲಿ ಇರಿಸಲಾಗಿದೆ. ಜಯಲಲಿತಾ ಅವರು ಅಧಿಕಾರದಲ್ಲಿದ್ದಾಗ ಅವರೊಂದಿಗೆ ಔಪಚಾರಿಕ ಮೈತ್ರಿಯನ್ನು ಎಂದಿಗೂ ರಚಿಸಲಿಲ್ಲ ಏಕೆಂದರೆ ಅದು ದ್ರಾವಿಡ ಸಿದ್ಧಾಂತಗಳಿಂದ ಪ್ರಾಬಲ್ಯ ಹೊಂದಿರುವ ರಾಜ್ಯದ ರಾಜಕೀಯ ಭೂದೃಶ್ಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅವರು ನಂಬಿದ್ದರು.
2019 ರ ಲೋಕಸಭೆ ಮತ್ತು 2021 ರ ಅಸೆಂಬ್ಲಿ ಚುನಾವಣೆಗಳು ಸೇರಿದಂತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಎಲ್ಲಾ ಚುನಾವಣೆಗಳಲ್ಲಿ ಎಐಎಡಿಎಂಕೆ ಸೋತಿದೆ. 2024 ರ ಚುನಾವಣೆಯ ಮೊದಲು ಬಿಜೆಪಿಯನ್ನು ಹೊಣೆಗಾರಿಕೆಯಾಗಿ ನೋಡುವಂತೆ ಇದು ಪ್ರೇರೇಪಿಸಿದೆ. 2021 ರಲ್ಲಿ ಎಐಎಡಿಎಂಕೆ ಕೇವಲ 75 ಸ್ಥಾನಗಳನ್ನು ಗೆದ್ದಿತು. ಐದು ವರ್ಷಗಳ ಹಿಂದೆ ಅದು136 ಸ್ಥಾನಗಳನ್ನು ಗಳಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಇದೇ ರೀತಿ ಪರಾಭವಗೊಂಡಿತು. 37 ಸ್ಥಾನಗಳಿಂದ ಕೇವಲ ಒಂದಕ್ಕೆ ಇದು ಇಳಿದಿದ್ದು,ಡಿಎಂಕೆ 0 ರಿಂದ 39 ಕ್ಕೆ ಏರಿತ್ತು.