ರಫಾ : ಇಸ್ರೇಲ್- ಹಮಾಸ್ ಸಮರದ ಹಿನ್ನೆಲೆಯಲ್ಲಿ ಕಳೆದ 2 ವಾರಗಳಿಂದ ಬಂದ್ ಆಗಿದ್ದ ಗಾಜಾ- ಈಜಿಪ್ಟ್ ಗಡಿಯನ್ನು ಶನಿವಾರದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದಾಗಿ ಇಸ್ರೇಲ್ ಸಮರದ ಬಳಿಕ ಅವಶ್ಯ ವಸ್ತುಗಳನ್ನು ತರಿಸಿಕೊಳ್ಳಲು ಇದ್ದ ಏಕೈಕ ಮಾರ್ಗವೂ ಬಂದ್ ಆಗಿ ಜೀವನಾವಶ್ಯಕ ಸಾಮಗ್ರಿಗಳಿಗಾಗಿ ಪರದಾಡುತ್ತಿದ್ದ ಗಾಜಾದ 23 ಲಕ್ಷ ಜನರು ನಿರಾಳರಾಗುವಂತಾಗಿದೆ.
40 ಕಿ.ಮೀ. ಉದ್ದ ಹಾಗೂ 10 ಕಿ.ಮೀ. ಅಗಲದ ಮತ್ತು ವಿಶ್ವದಲ್ಲೇ ಅತ್ಯಧಿಕ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಗಾಜಾದಲ್ಲಿ ಜನರು ಅನ್ನಾಹಾರ ಹಾಗೂ ಶುದ್ಧ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಔಷಧಗಳು ಖಾಲಿಯಾಗಿವೆ. ಇದೀಗ ಈಜಿಪ್ಟ್ ಗಡಿಯ ಮೂಲಕ 20 ಟ್ರಕ್ಗಳು ಅವಶ್ಯ ವಸ್ತು ಹೊತ್ತು ಗಾಜಾಗೆ ಪ್ರವೇಶಿಸಿವೆ. ಇನ್ನೂ 200 ಟ್ರಕ್ಗಳು ಗಾಜಾ ಪ್ರವೇಶಿಸಲು ಕಾಯುತ್ತಿವೆ.
ಹಮಾಸ್ ಉಗ್ರ ದಾಳಿ ಹಿನ್ನೆಲೆಯಲ್ಲಿ ಉಗ್ರರಿಗೆ ಪಾಠ ಕಲಿಸಲು ನಿರ್ಧರಿಸಿದ್ದ ಇಸ್ರೇಲ್ ಸೇನಾ ಪಡೆ, ಈಜಿಪ್ಟ್ ಕಡೆಯಿಂದ ಗಾಜಾಕ್ಕೆ ಅವಶ್ಯ ವಸ್ತು ಸಾಗಿಸಲಾಗುವ ಮಾರ್ಗವನ್ನೇ ಗುರಿಯಾಗಿಸಿ ದಾಳಿ ನಡೆಸಿ, ಅದನ್ನು ಬಂದ್ ಮಾಡಿತ್ತು. ತನ್ನ 200 ಜನರನ್ನು ಹಮಾಸ್ ಉಗ್ರರು ಅಪಹರಿಸಿದ್ದು, ಅವರನ್ನು ಬಿಡುಗಡೆ ಮಾಡುವವರೆಗೂ ಗಾಜಾಕ್ಕೆ ಅವಶ್ಯ ವಸ್ತುಗಳು ಸಿಗದಂತೆ ಮಾಡುವುದಾಗಿ ಶಪಥ ಮಾಡಿತ್ತು. ಇದೀಗ ಅಮೆರಿಕ, ವಿಶ್ವಸಂಸ್ಥೆಗಳ ಮನವೊಲಿಕೆ ಬೆನ್ನಲ್ಲೇ ಈಜಿಪ್ಟ್- ಗಾಜಾ ಗಡಿ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ.
ಈ ನಡುವೆ, 200 ಟ್ರಕ್ ಅವಶ್ಯ ವಸ್ತುಗಳು ಏತಕ್ಕೂ ಸಾಲದು. ಬಿಕ್ಕಟ್ಟು ಆರಂಭವಾಗುವ ಮುನ್ನ ಪ್ರತಿದಿನ 400 ಟ್ರಕ್ಗಳು ಗಾಜಾಕ್ಕೆ ಬರುತ್ತಿದ್ದವು. ಗಾಜಾದಲ್ಲಿ ಪರಿಸ್ಥಿತಿ ವಿಕೋಪದಲ್ಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಕಾರ್ಯಕ್ರಮದ ಮುಖ್ಯಸ್ಥೆ ಸಿಂಡಿ ಮೆಕ್ಕೇನ್ ತಿಳಿಸಿದ್ದಾರೆ.