ಆಫ್ಘಾನಿಸ್ತಾನದ ನೆಲವನ್ನು ತನ್ನ ವಿರುದ್ಧದ ಭಯೋತ್ಪಾದನಾ ಚಟುವಟಿಕೆಗಳ ನೆಲೆಯಾಗಿ ಬಳಸಿಕೊಳ್ಳಬಹುದು ಎಂಬ ಭಾರತದ ಆತಂಕದ ನಡುವೆಯೇ, ತಾಲಿಬಾನ್ ವಕ್ತಾರರಿಂದ ಆಘಾತಕಾರಿ ಹೇಳಿಕೆ ಹೊರಬಿದ್ದಿದೆ.
ಕಾಶ್ಮೀರವೂ ಸೇರಿದಂತೆ ಜಗತ್ತಿನ ಯಾವುದೇ ಮೂಲೆಯ ಮುಸ್ಲಿಮರ ಪರ ದನಿ ಎತ್ತುವ ಹಕ್ಕು ತನಗಿದೆ ಎಂದು ಆಫ್ಘಾನಿಸ್ತಾನದ ಅಧಿಕಾರ ಹಿಡಿದಿರುವ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ವಕ್ತಾರ ಸುಹೇಲ್ ಶಹೀನ್ ಶುಕ್ರವಾರ ಹೇಳಿದ್ದಾರೆ. ಬಿಬಿಸಿ ಉರ್ದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಇದೀಗ ಭಾರತ ತಾಲಿಬಾನ್ ವಿಷಯದಲ್ಲಿ ಈವರೆಗೆ ಹೊಂದಿದ್ದ ಅನುಮಾನ ನಿಜವಾಗುವ ಸೂಚನೆ ಸಿಕ್ಕಂತಾಗಿದೆ.
ಮುಸ್ಲಿಮರಾಗಿ ನಾವು ಅದು ಭಾರತವಿರಬಹುದು, ಕಾಶ್ಮೀರವಿರಬಹುದು ಅಥವಾ ಜಗತ್ತಿನ ಯಾವುದೇ ಮೂಲೆಯ ಮುಸ್ಲಿಮರ ಪರ ದನಿ ಎತ್ತುವ ಹಕ್ಕು ನಮಗಿದೆ. ಹಾಗಂತ ನಾವು ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವುದಿಲ್ಲ. ಮುಸ್ಲಿಮರು ನಿಮ್ಮ ದೇಶದ ನಾಗರಿಕರು. ನಿಮ್ಮದೇ ಕಾನೂನು-ಕಾಯ್ದೆಗಳ ಪ್ರಕಾರ ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ. ಅವರ ಹಕ್ಕುಗಳನ್ನು ಗೌರವಿಸುವುದು ನಿಮ್ಮ ಹೊಣೆ ಎಂಬುದನ್ನು ನಾವು ಆಯಾ ರಾಷ್ಟ್ರಗಳಿಗೆ ಹೇಳುತ್ತೇವೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.
ಮಂಗಳವಾರ ತಾನೆ, ಒಂದು ಕಡೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ತಿಂಗಳ ಮುಖ್ಯಸ್ಥನಾಗಿ ಭಾರತ, ತಾಲಿಬಾನ್ ಸಂಘಟನೆಯ ಮೇಲಿದ್ದ ‘ಘೋಷಿತ ಭಯೋತ್ಪಾದಕ ಸಂಘಟನೆ’ ಎಂಬ ಹಣೆಪಟ್ಟಿ ತೆಗೆಯಲು ಮುಂದಾಳತ್ವ ವಹಿಸಿತ್ತು. ಭಾರತದ ನೇತೃತ್ವದಲ್ಲಿಯೇ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳ ಪೈಕಿ ರಷ್ಯಾ ಮತ್ತು ಚೀನಾದ ಹೊರತಾಗಿಯೂ, ಬ್ರಿಟನ್, ಫ್ರಾನ್ಸ್, ಅಮೆರಿಕ ಮತ್ತಿತರ 13 ರಾಷ್ಟ್ರಗಳ ಬೆಂಬಲದೊಂದಿಗೆ ತಾಲಿಬಾನ್ ವಿರುದ್ಧದ ಹಣೆಪಟ್ಟಿ ತೆಗೆದು, ಆಫ್ಘಾನಿಸ್ತಾನದ ಅಧಿಕೃತ ಪ್ರಭುತ್ವದ ಮಾನ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತೊಂದು ಕಡೆ ಅದೇ ದಿನ ದೋಹಾದಲ್ಲಿ ಕತಾರ್ ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ರಾಜಕೀಯ ಕಚೇರಿಯಲ್ಲಿ ಅದರ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ತೇನ್ಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ವಿಶ್ವಸಂಸ್ಥೆಯ ನಿರ್ಣಯ ಮತ್ತು ದೋಹಾ ಮಾತುಕತೆಗಳೆರಡಲ್ಲೂ, ಮುಖ್ಯವಾಗಿ ಆಫ್ಘನ್ ನೆಲದಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಗಳಿಗೆ ನೆಲೆ ಒದಗಿಸಬಾರದು ಮತ್ತು ಭಾರತವೂ ಸೇರಿದಂತೆ ಯಾವುದೇ ರಾಷ್ಟ್ರದ ಆಂತರಿಕ ವಿಷಯಗಳಲ್ಲಿ ತಲೆಹಾಕುತ್ತಿರುವ ಯಾವುದೇ ಸಂಘಟನೆಗಳಿಗೆ ತಾಲಿಬಾನ್ ಬೆಂಬಲ ನೀಡಬಾರದು ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗಿತ್ತು.
ಆದರೆ, ಅತ್ತ ವಿಶ್ವಸಂಸ್ಥೆಯ ಅಧಿಕೃತ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಳಚಿದ ಮೂರೇ ದಿನದಲ್ಲಿ ತಾಲಿಬಾನ್ ರಾಗ ಬದಲಾಗಿದೆ. ಅದರಲ್ಲೂ ಆಗಸ್ಟ್ 15ರಂದು ಆಫ್ಘನ್ ಪ್ರಜಾತಂತ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿ ಅದನ್ನು ಉರುಳಿಸಿದ ಬಳಿಕ ಕೆಲವೇ ದಿನಗಳಲ್ಲಿ ತಾಲಿಬಾನ್ ಅತ್ಯುನ್ನತ ನಾಯಕರು, ಕಾಶ್ಮೀರ ಸಮಸ್ಯೆ ಭಾರತದ ಆಂತರಿಕ ವಿಚಾರ. ಅದನ್ನು ಪಾಕಿಸ್ತಾನ ಮತ್ತು ಭಾರತ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ತಾವು ಆ ವಿಚಾರದಲ್ಲಿ ತಲೆಹಾಕುವುದಿಲ್ಲ ಎಂದು ಹೇಳಿದ ಬಳಿಕವೂ, ಇದೀಗ ತಾಲಿಬಾನ್ ಕಾಶ್ಮೀರದ ವಿಷಯದಲ್ಲಿ ಯೂಟರ್ನ್ ಹೊಡೆದಿದೆ.
ಕಟ್ಟಾ ಭಯೋತ್ಪಾದಕ ಸಂಘಟನೆಯೊಂದು ಒಂದು ದೇಶದ ಸಂಪೂರ್ಣ ಅಧಿಕಾರ ಹಿಡಿದಿರುವುದು ಸಹಜವಾಗೇ ದಕ್ಷಿಣ ಏಷ್ಯಾದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈಗಾಗಲೇ ಆಫ್ಘನ್ ನೆಲದಲ್ಲಿ ಬೇರುಬಿಟ್ಟಿರುವ ಐಎಸ್ ಐಎಸ್, ಅಲ್ ಖೈದಾ ಸಂಘಟನೆಗಳೊಂದಿಗೆ, ಸ್ವತಃ ತಾಲಿಬಾನಿಗಳೊಂದಿಗೆ ಪಾಲುದಾರನಾಗಿರುವ ಹಕ್ಕನಿ ಗುಂಪಿನ ಕಾರಣಕ್ಕೂ ಈ ಆತಂಕ ಸಹಜವಾಗಿತ್ತು. ಹಾಗೇ ಸುನ್ನಿ ಮತ್ತು ವಹಾಬಿ ಗುಂಪುಗಳು ಕೂಡ ತಾಲಿಬಾನ್ ನಂಟಿನ ಮೂಲಕ ಆಘ್ಫಾನಿಸ್ತಾನವನ್ನು ತಮ್ಮ ಭಯೋತ್ಪಾದನಾ ಚಟುವಟಿಕೆಗಳ ಕಾರಸ್ಥಾನವಾಗಿಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಜೊತೆ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಪಾಕಿಸ್ತಾನದ ಐಎಸ್ ಐ ಬೆಂಬಲಿತ ಜೈಷ್ ಎ ಮೊಹಮ್ಮದ್, ಲಷ್ಕರ್ ಮುಂತಾದ ಭಯೋತ್ಪಾದನಾ ಗುಂಪುಗಳು ಕೂಡ ಆಫ್ಘನ್ ನೆಲದಲ್ಲಿ ತಳವೂರಿ, ಭಾರತದ ಮೇಲಿನ ದಾಳಿ ತೀವ್ರಗೊಳಿಸಬಹುದು ಎಂಬುದು ಭಾರತದ ಮುಖ್ಯ ಆತಂಕವಾಗಿತ್ತು.
ಇಂತಹ ಹಿನ್ನೆಲೆಯಲ್ಲಿಯೇ ತಾಲಿಬಾನ್ ವಿಷಯದಲ್ಲಿ ತತಕ್ಷಣಕ್ಕೇ ಯಾವುದೇ ನಿಲುವಿಗೆ ಬರುವುದು ಭಾರತದ ಪಾಲಿಗೆ ನುಂಗಲಾರದ ತುಪ್ಪದಂತಾಗಿತ್ತು. ಅಧಿಕೃತವಾಗಿ ತಾಲಿಬಾನನನ್ನು ಆಫ್ಘನ್ ಪ್ರಭುತ್ವ ಎಂದು ಒಪ್ಪಿಕೊಂಡು ಅದರೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದುವುದೇ ಅಥವಾ ಅದನ್ನು ಸಂಪೂರ್ಣ ಹೊರಗಿಟ್ಟು ಆ ದೇಶದಲ್ಲಿ ತಾನು ಮಾಡಿರುವ ಸಾವಿರಾರು ಕೋಟಿ ಹೂಡಿಕೆಯನ್ನು ನೀರಿನಲ್ಲಿ ಹೋಮ ಎಂದು ಕೈಬಿಡುವುದೇ ಎಂಬ ಗೊಂದಲದಲ್ಲಿತ್ತು. ಅಂತಹ ಬಿಕ್ಕಟ್ಟಿನ ಕಾರಣಕ್ಕೇ ಈ ವಿಷಯ ಮೋದಿ ಅವಧಿಯ ಏಳು ವರ್ಷಗಳಲ್ಲೇ ಅತಿ ಕಠಿಣ ರಾಜತಾಂತ್ರಿಕ ಸಮಸ್ಯೆಯಾಗಿ ಕಾಡಿತ್ತು. ಆರೇಳು ತಿಂಗಳುಗಳಿಂದಲೇ ತಾಲಿಬಾನ್ ಜೊತೆ ತೆರೆಮರೆಯ ಅನಧಿಕೃತ ಮಾತುಕತೆಗಳನ್ನು ಮೋದಿ ಸರ್ಕಾರ ನಡೆಸಿತ್ತು ಎಂಬ ವರದಿಗಳಿದ್ದರೂ, ಅಧಿಕೃತ ಮಾತುಕತೆಗಳು ನಡೆದಿರಲಿಲ್ಲ. ಕೊನೆಗೂ ಅಳೆದು ಸುರಿದು ಮಂಗಳವಾರ ಮೊದಲ ಬಾರಿಗೆ ದೋಹಾದಲ್ಲಿ ಅಧಿಕೃತ ಮಾತುಕತೆ ನಡೆಸಲಾಗಿತ್ತು.
ಆದರೆ, ಆ ಮಾತುಕತೆಗಳ ಬೆನ್ನಲ್ಲೇ ಇದೀಗ ತಾಲಿಬಾನ್ ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತುವುದಾಗಿ ಹೇಳಿದ್ದು, ಆ ಹೇಳಿಕೆಯ ವ್ಯಾಪ್ತಿ ಮತ್ತು ವಿಸ್ತಾರ ಎಷ್ಟು? ಅದು ಕಾಶ್ಮೀರದ ಮುಸ್ಲಿಮರ ಮಾನವ ಹಕ್ಕುಗಳ ವಿಷಯಕ್ಕೆ ಮಾತ್ರ ಸೀಮಿತವೇ ? ಅಥವಾ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮಟ್ಟಿಗೆ, ಅಥವಾ ಪಾಕಿಸ್ತಾನದ ವಾದಗಳಿಗೆ ಬೆಂಬಲ ನೀಡುವ ಮಟ್ಟಿಗೆ ವಿಸ್ತರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕಂತೂ ಅದು ಭಾರತದ ಆಂತರಿಕ ವಿಷಯ ಎಂಬ ಹೇಳಿಕೆಯ ಕೆಲವೇ ದಿನಗಳಲ್ಲೇ, ಕಾಶ್ಮೀರದ ವಿಷಯದಲ್ಲಿ ದನಿ ಎತ್ತುವುದಾಗಿ ಹೇಳಿಕೆ ಹೊರಬಿದ್ದಿದೆ.
ತಾಲಿಬಾನ್ ಭಾರತದ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಆತಂಕವಿತ್ತೋ, ಅದೇ ದಿಕ್ಕಿನಲ್ಲಿ ತಾಲಿಬಾನ್ ಸಾಗುತ್ತಿರುವ ಸೂಚನೆಯಂತೂ ಈ ಹೇಳಿಕೆಯಿಂದಾಗಿ ಸಿಕ್ಕಂತಾಗಿದೆ. ಹಾಗಾಗಿ ಇದೀಗ ಭಾರತ, ತಾಲಿಬಾನ್ ನ ಈ ಹೊಸ ವರಸೆಗೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.