ಮುಂಬಯಿ: ಬಾಲಿವುಡ್ ಖ್ಯಾತ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಪ್ರಯಾಣಿಸುತ್ತಿದ್ದ ಕಾರು ಇಟಲಿಯಲ್ಲಿ ಅಪಘಾತವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದಿಗಳ ಪ್ರಕಾರ ಈ ರಸ್ತೆ ಅಪಘಾತದಲ್ಲಿ ಮತ್ತೊಂದು ಕಾರ್ ನಲ್ಲಿದ್ದ ವೃದ್ದ ದಂಪತಿ ಸಾವನ್ನಪ್ಪಿದ್ದಾರೆ .
ತನ್ನ ಪತಿ ವಿಕಾಸ್ ಒಬೆರಾಯ್ ಜೊತೆ ಲಂಬೋರ್ಗಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಫೆರಾರಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಮೃತ ದಂಪತಿಗಳನ್ನು ಸ್ವಿಟ್ಜರ್ಲೆಂಡ್ನ ಜುರಿಚ್ ಬಳಿಯ ವಾಲಿಸೆಲ್ಲೆನ್ ಪಟ್ಟಣದ 67 ವರ್ಷದ ಮಾರ್ಕಸ್ ಕ್ರೌಟ್ಲಿ ಮತ್ತು ಅವರ ಪತ್ನಿ ಮೆಲಿಸ್ಸಾ ಕ್ರೌಟ್ಲಿ (63) ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿಗಳ ಪ್ರಕಾರ, ಇಟಲಿಯ ಸಾರ್ಡಿನಿಯಾದಲ್ಲಿ ಈ ಅಪಘಾತ ಸಂಭವಿಸಿದೆ. ಲಂಬೋರ್ಗಿನಿ ಕಾರಿನಲ್ಲಿ ಮಿನಿ ಟ್ರಕ್ ಒಂದನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದು, ಹಿಂಬದಿಯಿಂದ ಬಂದ ಫೆರಾರಿಗೆ ಡಿಕ್ಕಿ ಹೊಡೆದಿದೆ. ನಂತರ ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಟ್ರಕ್ ಪಲ್ಟಿಯಾಗಿದೆ, ಅಲ್ಲದೆ ಫೆರಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.