ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತಹ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಹವಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ದಿಶಾ ರವಿ ಹವಮಾನ ಕಾರ್ಯಕರ್ತೆ ಜೊತೆಗೆ ʼಫ್ರೈಡೇಸ್ ಫಾರ್ ಫ್ಯೂಚರ್’ (ಎಫ್ಎಫ್ಎಫ್) ಅಭಿಯಾನದ ಸಂಸ್ಥಾಪಕರಲ್ಲಿ ಇವರು ಒಬ್ಬರಾಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯ ಗಡಿಭಾಗಗಳಲ್ಲಿ ಕೃಷಿಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ “ಟೂಲ್ ಕಿಟ್” ಅನ್ನು ಹಂಚಿದ್ದರು. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವವರು ಈ ಟೂಲ್ಕಿಟ್ ಮೂಲಕ ಸಹಾಯ ಮಾಡಬಹುದು ಎಂದಿದ್ದರು.
ಟೂಲ್ಕಿಟ್ ಟ್ವಿಟರ್ ಮೂಲಕ ಪ್ರತಿಭಟನೆ ದಾಖಲಿಸುವುದು, ಭಾರತೀಯ ರಾಯಭಾರ ಕಛೇರಿಗಳ ಹೊರಗಡೆ ಶಾಂತಿಯುತವಾಗಿ ಪ್ರತಿಭಟಿಸುವುದು ಮತ್ತು ಅಂಬಾನಿ, ಅದಾನಿ ಕಾರ್ಪೊರೇಟ್ ಕಂಪೆನಿಗಳ ಹೊರಗೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದರ ಕುರಿತಾಗಿನ ದಾಖಲೆಯಾಗಿತ್ತು. ಈ ಸಂಬಂಧ ಟೂಲ್ಕಿಟ್ ರಚಿಸಿದವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ಕ್ರಿಮಿನಲ್ ಪಿತೂರಿ ಮತ್ತು ರೈತ ಚಳವಳಿಯ ನೆಪದಲ್ಲಿ ದ್ವೇಷ ಹರಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಜನವರಿ 26 ರ ಗಣರಾಜ್ಯೋತ್ಸವದಂದು ದೆಹಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೇ ದೆಹಲಿಯಲ್ಲಿ ಹಿಂಸಾಚಾರದ ನಡೆದಿದ್ದು, ಈ ಘಟನೆ ನಡೆದ ಬಳಿಕ ಗ್ರೇಟಾ ಥನ್ ಬರ್ಗ್ ಅವರ ಟ್ವೀಟ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ದೆಹಲಿ ಹಿಂಸಾಚಾರಕ್ಕೂ ಮುಂಚಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೂಲ್ಕಿಟ್ ಕಂಡುಬಂದಿದೆ. ಹಾಗು ಜನವರಿ 26 ರ ಘಟನೆಗಳ ಹಿಂದಿನ ಪಿತ್ತೂರಿಯನ್ನು ಸೂಚಿಸುತ್ತದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹಾಗು ಇದು ಭಾರತದ ವಿರುದ್ಧ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಪ್ರಾದೇಶಿಕ ಯುದ್ಧ ನಡೆಸುವ ಕರೆಯಂತಿದೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್ ಹೇಳಿದ್ದಾರೆ.
ಫೆಬ್ರವರಿ 4 ರಂದು ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಪರಾಧ ವಿಭಾಗ ದೇಶದ್ರೋಹ, ಕ್ರಿಮಿನಲ್ ಪ್ರಕರಣ ಆಧರಿಸಿಸೆಕ್ಷನ್ 124 ಎ, 120 ಎ, 153 ಎ ಅಡಿಯಲ್ಲಿ “ಟೂಲ್ ಕಿಟ್ ಸೃಷ್ಟಿಕರ್ತರ “ವಿರುದ್ಧ ದ್ವೇಷವನ್ನು ಬೆಳೆಸುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.