ಒಂದು ತಿಂಗಳ ಹಿಂದೆ, ಬೆಂಗಳೂರು ಪೊಲೀಸರು ಬಂಧಿಸಿದ್ದ 19 ವರ್ಷದ ಪಾಕಿಸ್ತಾನಿ ಮಹಿಳೆಯನ್ನು ಫೆಬ್ರವರಿ 20ರಂದು ವಾಪಾಸ್ ಪಾಕಿಸ್ತಾನಕ್ಕೆ ಕಳಿಸಲಾಗಿದೆ. ಹಲವು ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ ಪ್ರವೇಶಿಸಿ ತಿಂಗಳುಗಳ ಕಾಲ ಅವರು ಬೆಂಗಳೂರಿನಲ್ಲಿ ವಾಸಿಸಿದ್ದರು. ಈಗ ಆ ಮಹಿಳೆ ಪಾಕಿಸ್ತಾನದಲ್ಲಿರುವ ಅವರ ಹೆತ್ತವರನ್ನು ಸೇರಿಕೊಂಡಿದ್ದಾರೆ.
ಇಕ್ರಾ ಜೆವಾನಿ ಎಂಬುವುದು 19 ವರ್ಷದ ಮಹಿಳೆಯ ಹೆಸರಾಗಿದ್ದು ಭಾರತವನ್ನು ತಲುಪಲು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳವನ್ನು ಬಳಸಿಕೊಂಡಿದ್ದರು. ‘ಲುಡೋ’ ಹೆಸರಿನ ಗೇಮಿಂಗ್ ವೆಬ್ಸೈಟ್ನ ಓಪನ್ ಗೇಮ್ ರೂಮ್ನಲ್ಲಿ ಆನ್ಲೈನ್ನಲ್ಲಿ ಭೇಟಿಯಾದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಇಕ್ರಾ, ಅವರನ್ನು ಭೇಟಿಯಾಗಲೆಂದೇ ಭಾರತಕ್ಕೆ ಬಂದಿದ್ದರು.
ಸಿನಿಮೀಯವಾಗಿರುವ ಈ ಪಕ್ರಕರಣ ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆ ಹೆಚ್ಚು ಪ್ರಚಾರವಾಗದಿರಲು ಕಾರಣ ಎರಡೂ ಕಡೆಯ ಅಧಿಕಾರಿಗಳು ಇದರಲ್ಲಿ ಮಾಧ್ಯಮಗಳನ್ನು ಶಾಮೀಲುಗೊಳಿಸದೇ ಇರುವುದೇ ಆಗಿದೆ. ಇಕ್ರಾ ಅವರನ್ನು ಒಂದು ತಿಂಗಳ ಕಾಲ ಬೆಂಗಳೂರು ನಗರದ ಮಹಿಳಾ ಆಶ್ರಯಧಾಮದಲ್ಲಿ ಇರಿಸಲಾಗಿತ್ತು ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಅಲ್ಲಿ, ಅವರಿಗೆ ಇಲ್ಲಿ ಉಳಿದುಕೊಳ್ಳುವ ಮತ್ತು ಹೆತ್ತವರ ಜೊತೆ ಹಿಂದಿರುಗುವ ಎರಡೂ ಆಯ್ಕೆಗಳನ್ನು ನೀಡಲಾಗಿತ್ತು, ಅವರು ಪಾಕಿಸ್ತಾನಕ್ಕೆ ಹಿಂದಿರುಗುವ ನಿರ್ಧಾರ ಮಾಡಿದರು ಎನ್ನುತ್ತಾರೆ ಪೊಲೀಸರು.
ಪಾಕಿಸ್ತಾನದ ಹೈದರಾಬಾದ್ನ 12 ನೇ ತರಗತಿ ವಿದ್ಯಾರ್ಥಿನಿ ಇಕ್ರಾ ಕಳೆದ ವರ್ಷ ಆನ್ಲೈನ್ ಗೇಮಿಂಗ್ ಪೋರ್ಟಲ್ನಲ್ಲಿ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾಗಿದ್ದಳು. ಆಕೆಯ ತಂದೆ ಮುಹಮ್ಮದ್ ಸೊಹೈಲ್ ಜೆವಾನಿ ಅವರು ತನ್ನದೇ ಆದ ಫೋನ್ ಹೊಂದಿಲ್ಲದ ಇಕ್ರಾ ತನ್ನ ತಾಯಿಯ ಫೋನಲ್ಲಿ ಆಡುತ್ತಿದ್ದಳು ಎಂದು ಹೇಳುತ್ತಾರೆ. ಜೇವಾನಿ ಕುಟುಂಬಕ್ಕೆ ಒಬ್ಬಳೇ ಮಗಳು, ಮೂರು ಗಂಡು ಮಕ್ಕಳ ನಂತರ ಜನಿಸಿದಳು ಎಂದು ಅವಳ ತಂದೆ ಹೇಳುತ್ತಾರೆ.
ಕಳೆದ ವರ್ಷ ಸೆಪ್ಟೆಂಬರ್ 19 ರಂದು, ಇಕ್ರಾ ಮನೆಯಿಂದ ನಾಪತ್ತೆಯಾಗುತ್ತಿದ್ದಂತೆ, ಆಕೆಯ ಪೋಷಕರು ತಕ್ಷಣ ಪೊಲೀಸರಿಗೆ ನಾಪತ್ತೆಯಾದ ಕುರಿತು ದೂರು ದಾಖಲಿಸಿದ್ದರು.
ಬೆಳಗ್ಗೆ 8 ಗಂಟೆ ಸುಮಾರಿಗೆ ಇಕ್ರಾ ಎಂದಿನಂತೆ ಎಫ್.ಜಿ. ಕಾಲೇಜು, ಕಂಟೋನ್ಮೆಂಟ್ (ಹೈದರಾಬಾದ್, ಸಿಂಧ್ ) ಗೆ ತೆರಳಿದ್ದರು. ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಮರಳುವ ಇಕ್ರಾ ಅವತ್ತು ಸಂಜೆಯಾದರೂ ಮನೆಗೆ ಬರದೇ ಇದ್ದಾಗ ಕಾಲೇಜಿಗೆ ಭೇಟಿ ನೀಡುತ್ತಾರೆ ತಂದೆ ಮೊಹಮ್ಮದ್ ಸುಹೈಲ್. ಅಲ್ಲಿ ಅವರು ಆವತ್ತು ಕಾಲೇಜಿಗೆ ಬಂದೇ ಇಲ್ಲ ಎನ್ನುವ ಮಾಹಿತಿ ದೊರಕುತ್ತದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರೂ ದಾಖಲಾಗುತ್ತದೆ.

ಈ ದೂರನ್ನು ಶೀಘ್ರದಲ್ಲೇ ಪಾಕಿಸ್ತಾನಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಹಸ್ತಾಂತರಿಸಲಾಯಿತು, ಅದು ಅವರು ಭಾರತದಲ್ಲಿರುವುದನ್ನು ಪತ್ತೆಹಚ್ಚಿತು. ಇಕ್ರಾ ನಾಪತ್ತೆಯಾದಾಗಿನಿಂದ, ಆಕೆಯ ಕುಟುಂಬ ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳಿಗೆ ಮನವಿ ಸಲ್ಲಿಸಿ ಆಕೆಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೋರಿಕೊಂಡಿತು.
ಇಕ್ರಾ ಮೊದಲು ಕರಾಚಿಗೆ ಮತ್ತು ಅಲ್ಲಿಂದ ದುಬೈಗೆ ಮತ್ತು ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದರು. ನೇಪಾಳದಿಂದ, ಅವರು ಭಾರತವನ್ನು ಪ್ರವೇಶಿಸಿದರು ಎನ್ನಲಾಗಿದೆ. ಮತ್ತು ಅಂತಿಮವಾಗಿ ತಮ್ಮನ್ನು ತಾವು ಸಮೀರ್ ಅನ್ಸಾರಿ ಎಂದು ಪರಿಚಯಿಸಿಕೊಂಡ ಮುಲಾಯಂ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಇಕ್ರಾ ಬೆಂಗಳೂರಿಗೆ ಬಂದ ಕೆಲವು ದಿನಗಳ ನಂತರ, ತನ್ನ ತಾಯಿಯನ್ನು ಸಂಪರ್ಕಿಸಿ, ತಾನು ಸಮೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಮತ್ತು ಭಾರತದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದರು.
“ಏನಾಗುತ್ತಿದೆ ಎಂದೇ ನಮಗೆ ಅರ್ಥವಾಗಲಿಲ್ಲ. ಆಕೆ ಪಾಕಿಸ್ತಾನಕ್ಕೆ ಹಿಂತಿರುಗಬೇಕು ಮತ್ತು ಕಾನೂನಾತ್ಮಕವಾಗಿ ಮದುವೆ ಮಾಡಿಸಲು ನಾವು ಮಾರ್ಗ ಕಂಡುಕೊಳ್ಳೋಣ ಎಂದು ನಾವು ಅವಳ ಮನವೊಲಿಸಲು ಪ್ರಯತ್ನಿಸುತ್ತಿದ್ದೆವು. ಅಷ್ಟರಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿದರು” ಎಂದು ಇಕ್ರಾ ಅವರ ತಂದೆ ತಿಳಿಸಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
ಪಾಕಿಸ್ತಾನದಲ್ಲಿರುವ ತನ್ನ ತಾಯಿಗೆ ಇಕ್ರಾ ಪದೇ ಪದೇ ವಾಟ್ಸಾಪ್ ಕರೆ ಮಾಡಿದ್ದು, ಆಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಮೊದಲ ಮಾಹಿತಿ ನೀಡಿತು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ. ಆದರೆ, ಆಕೆಯ ವಾಟ್ಸಾಪ್ ಕರೆಗಳನ್ನು ಹೇಗೆ ಮತ್ತು ಏಕೆ ತಡೆಹಿಡಿಯಲಾಯಿತು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ. ಪೊಲೀಸರ ಪ್ರಕಾರ, ಗುಪ್ತಚರ ಸಂಸ್ಥೆಗಳೂ ಸಹ ಈ ಪ್ರತಿಬಂಧಕ ಪ್ರಕ್ರಿಯೆಯಲ್ಲಿ ತೊಡಗಿ ಕೊಂಡಿದ್ದವು.
ಜನವರಿ 19 ರಂದು ಬೆಳ್ಳಂದೂರು ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಮುಲಾಯಂ ಮತ್ತು ಸೆಪ್ಟೆಂಬರ್ನಿಂದ ದಂಪತಿ ವಾಸಿಸುತ್ತಿದ್ದ ಮನೆಯ ಮಾಲೀಕ ಗೋವಿಂದ ರೆಡ್ಡಿ ಅವರನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ. ಎಫ್ಐಆರ್ನಲ್ಲಿ ಇಕ್ರಾ ಅವರನ್ನು ಬಲಿಪಶು ಎಂದು ಉಲ್ಲೇಖಿಸಲಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮುಲಾಯಂ ಬಂಧನ ಮುಂದುವರಿದಿದ್ದು, ಸದ್ಯ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಇಲಾಖೆಯಿಂದ ಇಕ್ರಾ ಅವರನ್ನು ಹಲವು ಬಾರಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. “ಒಂದು ಹಂತದಲ್ಲಿ, ಇಕ್ರಾ ಅವರು ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೆ ನಂತರ, ಅವರು ತನ್ನ ಮನಸ್ಸನ್ನು ಬದಲಾಯಿಸಿದರು”ಎಂದು ಹಿರಿಯ ಅಧಿಕಾರಿಯೊಬ್ಬರು ‘ದಿ ವೈರ್’ಗೆ ತಿಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಫೆಬ್ರವರಿ 20 ರಂದು, ಇಕ್ರಾರನ್ನು ಭಾರತೀಯ ಪೊಲೀಸರು ವಾಘಾ ಗಡಿಯನ್ನು ದಾಟಿಸಿ ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅವರು ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು. ಫೆಬ್ರವರಿ 21ರಂದು ಇಕ್ರಾ ಮತ್ತು ಅವರ ಕುಟುಂಬ ಹೈದರಾಬಾದ್ಗೆ ಮರಳಿದೆ ಎಂದು ಮೂಲಗಳು ತಿಳಿಸಿವೆ.






