ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಒತ್ತಡದ ನಿವೃತ್ತಿ ಕೊಡಲಾಗಿದೆ. ಮುಖ್ಯಮಂತ್ರಿ ಆಗಿದ್ದವರನ್ನು ಒತ್ತಡದ ಮೂಲಕ ರಾಜೀನಾಮೆ ಕೊಡಿಸಿ ಪಕ್ಷದಲ್ಲೇ ಉಳಿಯುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವು ಬರಬೇಕಿದ್ದರೆ ಯಡಿಯೂರಪ್ಪ ಇರಬೇಕು ಅನ್ನೋದು ಬಿಜೆಪಿ ಹೈಕಮಾಂಡ್ ನಾಯಕರಿಗೂ ಅರಿವಾಗಿದೆ. ಆದರೆ ಯಡಿಯೂರಪ್ಪ ಅವರಿಗೆ ಮತ್ತೆ ನಾಯಕತ್ವ ಕೊಡುವ ಯಾವುದೇ ಉದ್ದೇಶವಿಲ್ಲ. ಯಡಿಯೂರಪ್ಪ ಇರಬೇಕು, ಈ ಬಾರಿ ಹೇಗಾದರೂ ಮಾಡಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಮುಂದಿನ 5 ವರ್ಷಗಳಲ್ಲಿ ಯಡಿಯೂರಪ್ಪ ಅವರಂತೆ ಜನಾಕರ್ಷಣೆ ಮಾಡಬಲ್ಲ ನಾಯಕತ್ವವನ್ನು ಸೃಷ್ಟಿಸುವ ಚಿಂತನೆಯಲ್ಲಿ ಭಾರತೀಯ ಜನತಾ ಪಾರ್ಟಿ ಇದೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಈ ಬಾರಿ ಚುನಾವಣೆಯಲ್ಲಿ ಭಾರೀ ಗೌರವಪೂರ್ವಕವಾಗಿ ನಡೆಸಿಕೊಳ್ಳಲಾಗ್ತಿದೆ. ಚುನಾವಣೆ ಮುಗಿದ ಬಳಿಕ ಅಡ್ವಾಣಿ ಸ್ಥಿತಿಗೆ ಯಡಿಯೂರಪ್ಪ ಬಾರದಿದ್ದರೆ ಸಾಕು ಎನ್ನುವುದು ಯಡಿಯೂರಪ್ಪ ಅಭಿಮಾನಿಗಳಲ್ಲಿ ಇರುವ ಆಶಯ.
ನಾಯಕನಿಗಾಗಿ ರಾಜ್ಯಾದ್ಯಂತ ಹುಡುಕಾಟ.. ಖಾವಿ ಕಡೆಗೆ ಚಿತ್ತ..!
ರಾಜ್ಯದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕನಿಗಾಗಿ ರಾಜ್ಯ ಬಿಜೆಪಿ ಹಾಗು ಕೇಂದ್ರ ಬಿಜೆಪಿ ಹುಡುಕಾಟ ನಡೆಸಿದೆ. ಕರ್ನಾಟಕದಲ್ಲಿ ಬ್ರಾಹ್ಮಣರಿಗೆ ಪಟ್ಟ ಕಟ್ಟಿದ್ದೇ ಆದರೆ ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯದ ಜೊತೆಗೆ ಎಸ್ಸಿ ಎಸ್ಟಿ ಜನರು ಭಾರತೀಯ ಜನತಾ ಪಾರ್ಟಿಯನ್ನು ಸಾರಸಗಟಾಗಿ ತಿರಸ್ಕಾರ ಮಾಡುವ ಭೀತಿಯಲ್ಲಿ ಭಾರತೀಯ ಜನತಾ ಪಾರ್ಟಿ ನಾಯಕರಿದ್ದಾರೆ. ಆದರೆ ಓರ್ವ ಕಾವಿಧಾರಿಯನ್ನು ಬಿಜೆಪಿ ನಾಯಕನನ್ನಾಗಿ ಮಾಡಿದಾಗ ಹಿಂದುತ್ವದ ಅಜೆಂಡಾದಲ್ಲಿ ಕರ್ನಾಟಕವನ್ನು ಮುನ್ನಡೆಸುವುದು ಬಿಜೆಪಿ ನಡೆಯುತ್ತಿರುವ ಬೆಳವಣಿಗೆ. ಈಗಾಗಲೇ ಈ ಬಗ್ಗೆ ಬಿಜೆಪಿಯಲ್ಲಿ ಚರ್ಚೆಗಳು ಶುರುವಾಗಿದ್ದು, ರಾಜ್ಯ ಬಿಜೆಪಿ ನಾಯಕರೂ ಕೂಡ ಓರ್ವ ಸ್ವಾಮೀಜಿ ಬಿಜೆಪಿ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಈಗಾಗಲೇ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕರೆತಂದ ಹಾಗೆ ಕರ್ನಾಟಕದಲ್ಲೂ ಕೇಸರಿ ಪಕ್ಷವನ್ನು ಕಾವಿಗೆ ವಹಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ದೆಹಲಿಯಲ್ಲಿ ನಡೀತು ಕಾವಿ ಜೊತೆಗೆ ಸಮಾಲೋಚನೆ..!
ಭಾರತೀಯ ಜನತಾ ಪಾರ್ಟಿಯ ಹೊಣೆಗಾರಿಕೆಯನ್ನು ರಾಜ್ಯದ ಮಠಾಧೀಶರಿಗೆ ವಹಿಸುತ್ತಾರೆ ಎನ್ನುವ ಮಾತಿನ ಬೆನ್ನಲ್ಲೇ ಕರ್ನಾಟಕದ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಕರ್ನಾಟಕ ಸಂಘದ 75ನೇ ಅಮೃತ ಮಹೋತ್ಸವ ಕಾರ್ಯಕ್ರಮ ನಿಮಿತ್ತ ನಿನ್ನೆ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ತಲಕ್‌ಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ ಸಂಪೂರ್ಣ ಬಿಜೆಪಿ ಪಕ್ಷದ ಕಾರ್ಯಕ್ರಮ ಎನ್ನುವಂತೆ ಭಾಸವಾಗ್ತಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಕಡೆದ ಸಿಎಂ ಆದಿಯಾಗಿ ರಾಜಕಾರಣಿಗಳು ಕುಳಿತಿದ್ದರೆ, ಪ್ರಧಾನಿ ಬಲಭಾಗದಲ್ಲಿ ನಿರ್ಮಲಾನಂದ ಶ್ರೀಗಳು ಸೇರಿದಂತೆ ನಂಜಾವಧೂತ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥರು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಜರಿದ್ದರು. ಎಲ್ಲಾ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಲುವಾಗಿಯೇ ಕನ್ನಡ ಡಿಂಡಿಮ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎನ್ನುವಂತೆ ಭಾಸವಾಯ್ತು.

ಬಿಜೆಪಿ ಆಫರ್ ಒಪ್ಪಿಕೊಳ್ತಾರಾ ನಿರ್ಮಲಾನಂದ ಶ್ರೀ..!?
ಮಾದಾರ ಚನ್ನಯ್ಯ ಸ್ವಾಮೀಜಿಗಳನ್ನು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೇ ಅಖಾಡಕ್ಕೆ ಇಳಿಸುವ ಸಿದ್ಧತೆಗಳು ನಡೆದಿದ್ದವು. ಹಿಂದುಳಿದ ಸಮುದಾಯದ ಸ್ವಾಮೀಜಿಯನ್ನು ಕರೆತಂದು ಇಡೀ ರಾಜ್ಯದಲ್ಲಿ ಹಿಂದುತ್ವದ ಮೂಲಕ ಹಿಡಿದುಕೊಳ್ಳಬಹುದು ಅನ್ನೋ ಉದ್ದೇಶ ಹೊಂದಲಾಗಿತ್ತು. ಆದರೆ ಆ ಬಳಿಕ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳನ್ನು ರಾಜ್ಯ ರಾಜಕಾರಣಕ್ಕೆ ತರುವ ಪ್ರಯತ್ನಗಳೂ ನಡೆದಿದ್ದವು. ಇದೀಗ ಪ್ರಧಾನಿ ದೆಹಲಿಯಲ್ಲಿ ಸ್ವಾಮೀಜಿಗಳ ಜೊತೆಗೆ ಚರ್ಚೆ ಮಾಡಿರುವುದು ನೋಡಿದಾಗ ನಿರ್ಮಲಾನಂದ ಶ್ರೀಗಳಿಗಳನ್ನು ಅಧಿಕೃತವಾಗಿ ಬಿಜೆಪಿಗೆ ಸೇರಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ. ಎಡಭಾಗದಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಬಲಭಾಗದಲ್ಲಿ ನಿರ್ಮಲಾನಂದ ಶ್ರೀಗಳನ್ನು ಕೂರಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ದೀರ್ಘಾವಧಿಗೆ ಬಿಜೆಪಿಯನ್ನು ಮುನ್ನಡೆಸುವ ಸ್ವಾಮೀಜಿ ಕಡೆಗೆ ಚಿತ್ತ ಹರಿಸಿದ್ದಾರೆ ಎನ್ನಲಾಗ್ತಿದೆ. ನಿರ್ಮಲಾನಂದ ಶ್ರೀಗಳು ವಿದ್ಯಾವಂತರೂ ಹಾಗು ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಿರುವ ಕಾರಣಕ್ಕೆ ನಿರ್ಮಲಾನಂದ ಶ್ರೀಗಳನ್ನು ಓಲೈಸುವ ಕೆಲಸಗಳು ನಡೆದಿವೆ ಎನ್ನಲಾಗ್ತಿದೆ. ಕೇಸರಿ ಪಾಳಯದಲ್ಲಿ ಕಾವಿಗೆ ಪಟ್ಟಕಟ್ಟವುದು ನಿಶ್ಚಿತ ಎನ್ನಲಾಗ್ತಿದೆ.







