ಲಾಕ್‌ಡೌನ್‌ ಉಲ್ಲಂಘಣೆ ಆರೋಪ: ಯುವಕನಿಗೆ ಹಲ್ಲೆ ಮಾಡಿದ ಜಿಲ್ಲಾಧಿಕಾರಿ ವಿರುದ್ಧ ಛತ್ತೀಸ್‌ಗಢ ಸರ್ಕಾರ ಕ್ರಮ

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುವಕನೋರ್ವನಿಗೆ ಸೂರಜ್‌ಪುರ ಕಲೆಕ್ಟರ್ ರಣಬೀರ್ ಶರ್ಮಾ ಅವರು ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಹಲ್ಲೆ ನಡೆಸಿದ ಜಿಲ್ಲಾಧಿಕಾರಿಯನ್ನು ಸ್ಥಾನದಿಂದ ತೆಗೆದುಹಾಕುವಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಆದೇಶಿಸಿದ್ದಾರೆ. ಈ ಕೃತ್ಯವನ್ನು ಖಂಡಿಸಿದ ಬಾಗೆಲ್, ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ ಹಾಗೂ ಐಎಎಸ್ ಅಧಿಕಾರಿಯನ್ನು ಹುದ್ದೆಯಿಂದ ತೆಗೆದುಹಾಕಲು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ನಿರ್ದೇಶನದ ಬೆನ್ನಲ್ಲೇ ರಾಜ್ಯ ಸರ್ಕಾರ ಶರ್ಮಾ ಅವರನ್ನು ನವ ರಾಯಪುರದ ಮಂತ್ರಾಲಯಕ್ಕೆ ಜಂಟಿ ಕಾರ್ಯದರ್ಶಿಯಾಗಿ ವರ್ಗಾಯಿಸಿದೆ. ರಾಯ್‌ಪುರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗೌರವ್ ಕುಮಾರ್ ಸಿಂಗ್ ಅವರನ್ನು ಸೂರಜ್‌ಪುರದ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

“ಸೂರಜ್‌ಪುರ ಕಲೆಕ್ಟರ್ ರಣಬೀರ್ ಶರ್ಮಾ ಅವರು ಅಧಿಕಾರ ದುರುಪಯೋಗಪಡಿಸಿಕೊಂಡ ಪ್ರಕರಣ ಸೋಷಿಯಲ್ ಮೀಡಿಯಾದ ಮೂಲಕ ನನ್ನ ಗಮನಕ್ಕೆ ಬಂದಿದೆ. ಇದು ತುಂಬಾ ದುಃಖಕರ ಮತ್ತು ಖಂಡನೀಯ. ಛತ್ತೀಸ್‌ಗಢದಲ್ಲಿ, ಅಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಕಲೆಕ್ಟರ್ ರಣಬೀರ್ ಶರ್ಮಾ ಅವರನ್ನು ತಕ್ಷಣ ಕರ್ತವ್ಯದಿಂದ ತೆಗೆದುಹಾಕಲು ಸೂಚನೆ ನೀಡಲಾಗಿದೆ ”ಎಂದು ಛತ್ತೀಸ್‌ಗಢ  ಮುಖ್ಯಮಂತ್ರಿ ಭಾನುವಾರ ಟ್ವೀಟ್ ಮಾಡಿದ್ದಾರೆ. “ಯಾವುದೇ ಅಧಿಕಾರಿಯ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಈ ಘಟನೆಯಿಂದ ನಾನು ಅಸಮಾಧಾನಗೊಂಡಿದ್ದೇನೆ. ನಾನು ಯುವಕ ಮತ್ತು ಅವರ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ ”ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಯುವಕನೋರ್ವನಿಗೆ ಥಳಿಸುವ ಹಾಗೂ ಆತನ ಮೊಬೈಲ್‌ ಫೋನ್‌ ನೆಲಕ್ಕೆ ಎಸೆದು ವಿಕೃತಿ ಮೆರೆಯುವ ಜಿಲ್ಲಾಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಜಿಲ್ಲಾಧಿಕಾರಿ ಹೊಡೆದ ಬಳಿಕ ರಕ್ಷಣಾ ಸಿಬ್ಬಂದಿಯೂ ಯುವಕನ ಮೇಲೆ ಹಲ್ಲೆ ನಡೆಸುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಸಾರ್ವಜನಿಕರು ಮಾತ್ರವಲ್ಲದೆ, ಐಎಎಸ್ ಸಂಘವು ಕೂಡಾ ಜಿಲ್ಲಾಧಿಕಾರಿಯ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದೆ, ಇದು ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆಯು ಹೇಳಿದೆ. “ಸೂರಜ್‌ಪುರ ಜಿಲ್ಲಾಧಿಕಾರಿಯ ನಡವಳಿಕೆಯನ್ನು ಐಎಎಸ್ ಅಸೋಸಿಯೇಷನ್ ​​ಬಲವಾಗಿ ಖಂಡಿಸುತ್ತದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಸೇವೆ ಮತ್ತು ನಾಗರಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಸಾರ್ವಜನಿಕ ಸೇವೆಯಲ್ಲಿರುವವರು ಪರಾನುಭೂತಿ ಹೊಂದಿರಬೇಕು ಮತ್ತು ಎಲ್ಲಾ ಸಮಯದಲ್ಲೂ ಸಮಾಜಕ್ಕೆ ಗುಣಪಡಿಸುವ ಸ್ಪರ್ಶವನ್ನು ನೀಡಬೇಕು, ಅದರಲ್ಲೂ ಈ ಕಠಿಣ ಸಂಧರ್ಭದಲ್ಲಿ” ಎಂದು ಐಎಎಸ್ (ಕೇಂದ್ರ) ಸಂಘವು ಟ್ವೀಟ್ ಮಾಡಿದೆ.

ಐಎಎಸ್ ಅಸೋಸಿಯೇಷನ್‌ನ ಹೇಳಿಕೆಯ ನಂತರ, ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದು, ಹಲವರು ಆರೋಪಿಸಿದಂತೆ ತಾನು ಹೊಡೆದ ವ್ಯಕ್ತಿ ಅಪ್ರಾಪ್ತನಲ್ಲ ಹೇಳಿಕೊಂಡಿದ್ದಾರೆ. ಯುವಕ ಅಧಿಕಾರಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಲೆಕ್ಟರ್ ರಣಬೀರ್ ಶರ್ಮಾ, “ಇಂದು ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದರಲ್ಲಿ ಲಾಕ್ ಡೌನ್ ಸಮಯದಲ್ಲಿ ಹೊರಗಿದ್ದ ವ್ಯಕ್ತಿಯನ್ನು ಕಪಾಳಮೋಕ್ಷ ಮಾಡಿರುವುದನ್ನು ತೋರಿಸಲಾಗಿದೆ. ಇಂದಿನ ವರ್ತನೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನಗೆ ಎಂದಿಗೂ ವೀಡಿಯೊದಲ್ಲಿರುವ ವ್ಯಕ್ತಿಗೆ ಅಗೌರವ ತೋರಬೇಕೆಂದು ಇರಲಿಲ್ಲ” ಎಂದು ಹೇಳಿದ್ದಾರೆ.

“ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಜಿಲ್ಲೆಯ ಸೂರಜ್‌ಪುರ ಮತ್ತು ಇಡೀ ಛತ್ತೀಸ್‌ಗಢ ರಾಜ್ಯವು ಸರಿಪಡಿಸಲಾಗದ ಸಂಕಷ್ಟ ಎದುರಿಸುತ್ತಿದೆ. ರಾಜ್ಯ ಸರ್ಕಾರದ ನೌಕರರೆಲ್ಲರೂ ಈ ಸಮಸ್ಯೆಯನ್ನು ನಿಭಾಯಿಸಲು ಶ್ರಮಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಈ ವ್ಯಕ್ತಿ ಅತಿಯಾದ ವೇಗದಲ್ಲಿ ಬೈಕು ಸವಾರಿ ಮಾಡುತ್ತಿದ್ದು, ಅಧಿಕಾರಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ” ಎಂದು ರಣಬೀರ್‌ ಶರ್ಮಾ ಹೇಳಿದ್ದಾರೆ.  

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...