ಬೆಂಗಳೂರು : ಶರನ್ನವರಾತ್ರಿ ಮುಗಿದ್ರೂ ಬೆಂಗಳೂರು ನಗರದಲ್ಲಿ ಇಂದಿಗೂ ಹಬ್ಬದ ವಾತಾವರಣ ಕಳೆಗುಂದಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಡೆದ ದಸರಾ ಉತ್ಸವ. ಹೌದು ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದಲ್ಲಿರೋ ಎನ್ಟಿಐ ಗ್ರೌಂಡ್ನಲ್ಲಿ ಕೇಸರಿ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ನೇತೃತ್ವದಲ್ಲಿ ದಸರಾ ಉತ್ಸವ ಆಯೋಜಿಸಿದ್ರು. ಉತ್ಸವದಲ್ಲಿ ಸುಮಾರು ಸಾವಿರಾರು ಮಹಿಳೆಯರು ತಾಯಿ ದುರ್ಗಾಪರಮೇಶ್ವರಿಗೆ ಪೂಜೆ ಸಲ್ಲಿಸಿದ್ರು. 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಈ ಗ್ರೌಂಡ್ನಲ್ಲಿ ಒಂದರಪಕ್ಕದಲ್ಲೊಂದು ನಿಂತಿದ್ರೆ ನೋಡಲು 2 ಕಣ್ಣುಗಳ ಸಾಲದಾಗಿತ್ತು. ಜೊತೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಪಲ್ಲಕ್ಕಿ ಜೊತೆ ಕ್ಷೇತ್ರದಲ್ಲಿ 7 ಕಿ.ಮೀ ಹೆಜ್ಜೆ ಹಾಕಿದ್ರು.

ಸತತವಾಗಿ ಒಂದಿಲ್ಲ ಒಂದು ರೀತಿಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ತಮ್ಮೇಶ್ ಗೌಡ, ನಗರದ ಬ್ಯಾಟರಾಯನಪುರದಲ್ಲಿ ಸತತ 5ನೇ ವರ್ಷವೂ ಅತ್ಯಂತ ಸಡಗರ ಸಂಭ್ರಮದಿಂದ ಆಯೋಜಿಸುತ್ತಾ ಬರುತ್ತಿದ್ದಾರೆ. ಈ ವರ್ಷವೂ ಕಳೆದ ವರ್ಷಕ್ಕಿಂತ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿರುವ ದಸರಾ ಉತ್ಸವ ಆಚರಿಸುತ್ತಿದ್ದಾರೆ. ಮೈಸೂರು ದಸರಾ ಮಾದರಿಯಲ್ಲಿ ನಡೆದ ಈ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ, ಸನ್ಮಾನ ಮತ್ತು ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಜನರಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮೊದಲ ದಿನದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎರಡನೇ ದಿನ ಮಾಜಿ ಸಚಿವ ಬಿ.ಶ್ರೀರಾಮುಲು, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಮೂರನೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು.

ಯುವ, ಮಹಿಳಾ ದಸರಾ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಜೊತೆಗೆಯೇ ಹಿರಿಯ ಸಾಧಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಭಜನಾ ಸ್ಪರ್ಧೆ ಹಾಗೂ ಸಾವಿರಾರು ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಯುವ ನಾಯಕ ತಮ್ಮೇಶ್ ಗೌಡ ಸ್ತ್ರೀಶಕ್ತಿಗೆ ಬಲ ತುಂಬಿದರು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆಗಳಲ್ಲಿ ನೆರೆದಿದ್ದ ಜನರು ಭಾವ ಪರವಶವಾಗಿರುವ ಸನ್ನಿವೇಶ ಕಂಡುಬಂತು. ಮುಂದಿನ ವರ್ಷ ಇನ್ನೂ ದೊಡ್ಡ ಮಟ್ಟದಲ್ಲಿ ಉತ್ಸವ ಆಯೋಜನೆ ಮಾಡುತ್ತೇನೆ. ಇದು ಯಾವುದೇ ಭಾಷೆಗೆ ಸೀಮಿತವಾಗಿಲ್ಲ, ಬ್ಯಾಟರಾಯನಪುರದ ಅಸ್ಮಿತೆಯ ಉಳಿವಿಗಾಗಿ ಈ ಉತ್ಸವ ಮಾಡುತ್ತಿದ್ದೇವೆ, ಇದರಲ್ಲಿ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ ಎಂದು ತಮ್ಮೇಶ್ ಗೌಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ, ವಿವಿಧ ದೇವರ ಮೂರ್ತಿಗಳಿಗೆ ಮಹಾ ಆರತಿ ನೆರವೇರಿಸುವ ಮೂಲಕ ಬೃಹತ್ ಶೋಭಾ ಯಾತ್ರೆಯೂ ನಡೆಯಿತು. ಪ್ರಮುಖವಾಗಿ ನಂಜಪ್ಪ ವೃತ್ತ, ತಿಂಡ್ಲು, ಕೊಡಿಗೇಹಳ್ಳಿ ಹಾಗೂ ಸಹಕಾರನಗರದ ಮೂಲಕ ಬ್ಯಾಟರಾಯನಪುರದ ಕೋದಂಡಸ್ವಾಮಿ ದೇವಾಲಯದವರೆಗೆ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ವೀರಗಾಸೆ, ಕೀಲು ಕುದುರೆ, ಚಂಡೆವಾದ್ಯ, ತಮಟೆವಾದ್ಯ, ಜನಪದ ಕಲಾ ತಂಡಗಳ ಪ್ರದರ್ಶನಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದವು.

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳ ನೂರಕ್ಕು ಹೆಚ್ಚು ದೇವರ ಮೂರ್ತಿಗಳನ್ನು ಕೂರಿಸಿದ್ದ ಪಲ್ಲಕ್ಕಿಗಳನ್ನು ಮೈದಾನಕ್ಕೆ ಕರೆತರಲಾಯಿತು. ನೂರಾರು ಮಹಿಳೆಯರು ಲಲಿತ ಸಹಸ್ರನಾಮ ಪಾರಾಯಣ ಓದುವ ಮೂಲಕ ಉತ್ಸವವನ್ನು ಇನ್ನಷ್ಟು ಧಾರ್ಮಿಕತೆಗೆ ಕೊಂಡೊಯ್ದರು.

ಇನ್ನೂ ಅಕ್ಟೋಬರ್ 22ರಿಂದ 25ರವರೆಗೆ ನಾಲ್ಕು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾಜಕೀಯ ನಾಯಕರನ್ನು ಹೊರತುಪಡಿಸಿ ಸಿನಿಮಾ ತಾರೆಯರು ಉತ್ಸವದಲ್ಲಿ ಭಾಗವಹಿಸಿದ್ದರು. ಖ್ಯಾತ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಜೆ ಹಾಗೂ ಖ್ಯಾತ ಭೋಜಪುರಿ ಗಾಯಕಿ ಶಿಲ್ಪಿ ರಾಜ್ ಅವರ ಗೀತೆಗಳ ಸದ್ದಿನಿಂದ ಉತ್ಸವದಲ್ಲಿ ಸಂಭ್ರಮ ಮನೆಮಾಡಿತ್ತು. ಒಟ್ಟಾರೆಯಾಗಿ ಬ್ಯಾಟರಾಯನಪುರ ದಸರಾ ಉತ್ಸವ ಸ್ಥಳೀಯ ಜನರಿಗೆ ಹೆಮ್ಮೆಯ ವಿಷಯವಾಗಿದ್ದಲ್ಲದೆ ಬೆಂಗಳೂರಿನಲ್ಲಿ ದಸರಾ ಸಂಭ್ರಮವನ್ನು ಹಂಚುವ ವಿಭಿನ್ನ ಕಾರ್ಯವಾಗಿದೆ ಎಂದರೆ ತಪ್ಪಾಗಲಾರದು.






