ನವದೆಹಲಿ: ಪ್ರತಿ ತಿಂಗಳ ಆರಂಭದಂತೆ ನವೆಂಬರ್ 1ರಿಂದಲೂ ಅಡುಗೆ ಅನಿಲ (Lpg) ದರ ಪರಿಷ್ಕರಣೆ ಹಾಗೂ ಸಿಲಿಂಡರ್ ವಿತರಣೆಗೆ ಸಂಬಂಧಿಸಿದಂತೆ ಪ್ರಮುಖ ನಿಯಮಗಳು (New Rules) ಜಾರಿಗೆ ಬರಲಿವೆ. ಇಂಡೇನ್, ಹೆಚ್‌ಪಿ ಹಾಗೂ ಭಾರತ್ ಗ್ಯಾಸ್ ಗ್ರಾಹಕರ ಮೇಲೆ ಈ ನಿಯಮಗಳು ನೇರ ಪರಿಣಾಮ ಬೀರಲಿದ್ದು, ಮನೆ ಹಾಗೂ ವ್ಯಾಪಾರಸ್ಥರ ಮಾಸಿಕ ಬಜೆಟ್‌ನಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ, ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ದೃಢೀಕರಣ (e-KYC) ಕಡ್ಡಾಯ ಸೇರಿದಂತೆ ಪ್ರಮುಖ ಅಂಶಗಳ ವಿವರ ಇಲ್ಲಿದೆ:
ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ದರ ಪರಿಷ್ಕರಣೆ
ವಾಣಿಜ್ಯ ಸಿಲಿಂಡರ್ (19 ಕೆಜಿ): ಜಾಗತಿಕ ಮಾರುಕಟ್ಟೆಯ ಇಂಧನ ಬೆಲೆಗಳಿಗೆ ಅನುಗುಣವಾಗಿ ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿ ತಿಂಗಳ 1ನೇ ತಾರೀಖಿನಂದು ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಪರಿಷ್ಕರಿಸುತ್ತವೆ. ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ ಇದು ಪ್ರಮುಖವಾಗಿದ್ದು, ನವೆಂಬರ್ 1ರಂದು ಹೊಸ ದರ ಪ್ರಕಟವಾಗಲಿದೆ.
ಗೃಹಬಳಕೆ ಸಿಲಿಂಡರ್ (14.2 ಕೆಜಿ): ಗೃಹಬಳಕೆಯ ಸಿಲಿಂಡರ್ ದರಗಳು ಇತ್ತೀಚಿನ ತಿಂಗಳುಗಳಲ್ಲಿ ಸ್ಥಿರವಾಗಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ₹942 ರಷ್ಟಿದೆ. ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ನಗರದಿಂದ ನಗರಕ್ಕೆ ದರ ವ್ಯತ್ಯಾಸವಿರುವುದರಿಂದ, ಬುಕಿಂಗ್ ಮಾಡುವ ಮುನ್ನ ಗ್ರಾಹಕರು ತಮ್ಮ ನಗರದ ಅಧಿಕೃತ ದರವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಸಬ್ಸಿಡಿ ಸಿಲಿಂಡರ್‌ಗೆ ಆಧಾರ್ e-KYC ಕಡ್ಡಾಯ
ಸರ್ಕಾರದ ನಿಯಂತ್ರಿತ ದರದಲ್ಲಿ ಅಥವಾ ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯಲು ಆಧಾರ್ ಬಯೋಮೆಟ್ರಿಕ್ ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಈಗಾಗಲೇ e-KYC ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಮಾಡುವ ಅಗತ್ಯವಿಲ್ಲ.
e-KYC ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ತಡೆಹಿಡಿಯುವ ಸಾಧ್ಯತೆಯಿದೆ.
ಬಯೋಮೆಟ್ರಿಕ್ ದೃಢೀಕರಣ ಮಾಡಿಸಿಕೊಳ್ಳಲು ಇಷ್ಟಪಡದ ಗ್ರಾಹಕರು ಮಾರುಕಟ್ಟೆ ದರದಲ್ಲಿ 5 ಕೆಜಿ ಅಥವಾ 10 ಕೆಜಿ ತೂಕದ ಸಿಲಿಂಡರ್‌ಗಳನ್ನು ಮಾತ್ರ ಖರೀದಿಸಲು ಅವಕಾಶವಿರುತ್ತದೆ.
ಡಿಜಿಟಲ್ ಮೂಲಕ e-KYC ಪೂರ್ಣಗೊಳಿಸುವುದು ಹೇಗೆ?
ಗ್ರಾಹಕರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ಮುಗಿಸಬಹುದು:
ನಿಮ್ಮ ಗ್ಯಾಸ್ ಏಜೆನ್ಸಿಯ ಅಧಿಕೃತ ಆ್ಯಪ್ (Indane – IndianOil One, Bharat Gas – Hello BPCL, HP Gas – HP Pay) ಡೌನ್‌ಲೋಡ್ ಮಾಡಿಕೊಳ್ಳಿ.
ಗೂಗಲ್ ಪ್ಲೇ ಸ್ಟೋರ್‌ನಿಂದ Aadhaar FaceRD ಆ್ಯಪ್ ಇನ್‌ಸ್ಟಾಲ್ ಮಾಡಿ.
ಗ್ಯಾಸ್ ಆ್ಯಪ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ, ಮುಖಪುಟದಲ್ಲಿರುವ “Aadhaar eKYC” ಆಯ್ಕೆಮಾಡಿ.
ಆ್ಯಪ್ ಸೂಚನೆಯಂತೆ ಮುಖದ ಸ್ಕ್ಯಾನ್ (Live Photo) ಪೂರ್ಣಗೊಳಿಸಿ ಸಲ್ಲಿಕೆ ಮಾಡಿ. 24 ರಿಂದ 48 ಗಂಟೆಗಳಲ್ಲಿ ಪರಿಶೀಲನೆ ಪೂರ್ಣಗೊಳ್ಳುತ್ತದೆ.
ಪರ್ಯಾಯ ಮಾರ್ಗಗಳು:
ಅಧಿಕೃತ My LPG ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ವಿತರಕರನ್ನು ಆಯ್ಕೆ ಮಾಡಿಕೊಂಡು OTP ಅಥವಾ ಬಯೋಮೆಟ್ರಿಕ್ ಮೂಲಕ ಪರಿಶೀಲನೆ ಮುಗಿಸಬಹುದು.
ಅಥವಾ ಸಮೀಪದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಇಲ್ಲವೇ ಸಿಲಿಂಡರ್ ಡೆಲಿವರಿ ಪಡೆಯುವ ಸಮಯದಲ್ಲಿಯೂ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ದರ ನಿರ್ಧಾರ
ಎಲ್‌ಪಿಜಿಯಿಂದ ಪೈಪ್ ಮೂಲಕ ಅನಿಲ (PNG) ಸಂಪರ್ಕಕ್ಕೆ ಬದಲಾಗುತ್ತಿರುವ ಗ್ರಾಹಕರು ಗಮನಿಸಬೇಕಾದ ಅಂಶವೆಂದರೆ, ಕಚ್ಚಾ ತೈಲದ ಏರಿಳಿತಗಳು ನೇರವಾಗಿ ಪಿಎನ್‌ಜಿ ದರವನ್ನು ನಿರ್ಧರಿಸುವುದಿಲ್ಲ. ಬದಲಾಗಿ, ನಗರದ ಗ್ಯಾಸ್ ವಿತರಕರು ಬಳಸುವ ದೇಶೀಯ ಅನಿಲ ಮತ್ತು ಆಮದು ಮಾಡಿಕೊಳ್ಳುವ ಎಲ್‌ಎನ್‌ಜಿ (LNG) ಪ್ರಮಾಣ, ಸರ್ಕಾರದ ನೀತಿ ನಿಯಮಗಳು ಹಾಗೂ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಪಿಎನ್‌ಜಿ ಅಂತಿಮ ಬೆಲೆ ನಿಗದಿಯಾಗುತ್ತದೆ.
ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!






