• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ತುಲನಾತ್ಮಕ ಭ್ರಷ್ಟಾಚಾರದ ನಡುವೆ ಮರೆಯಾದ ನಾಗರಿಕ

ನಾ ದಿವಾಕರ by ನಾ ದಿವಾಕರ
March 7, 2023
in ಅಂಕಣ
0
ತುಲನಾತ್ಮಕ ಭ್ರಷ್ಟಾಚಾರದ ನಡುವೆ ಮರೆಯಾದ ನಾಗರಿಕ
Share on WhatsAppShare on FacebookShare on Telegram

ಭ್ರಷ್ಟಾಚಾರದ ಮೂಲ ಬಂಡವಾಳಶಾಹಿ ಅರ್ಥವ್ಯವಸ್ಥೆ – ಅಧಿಕಾರ ರಾಜಕಾರಣ ನಿಮಿತ್ತ ಮಾತ್ರ

ADVERTISEMENT

“ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಶಾಸಕ/ಸಂಸದ/ಸಚಿವ ” ಬಹುಶಃ ಭಾರತದ ಮುದ್ರಣ ಮಾಧ್ಯಮದ ಪತ್ರಿಕೆಗಳಲ್ಲಿ ಈ ತಲೆಬರಹ ಕಂಡು ಎರಡು ದಶಕಗಳಂತೂ ಕಳೆದುಹೋಗಿದೆ. ಹೀಗೆ ಯೋಚಿಸುವ ಜನಪ್ರತಿನಿಧಿಗಳ ಸಂಖ್ಯೆ ಕ್ಷೀಣಿಸಿದೆ ಎನ್ನುವುದಕ್ಕಿಂತಲೂ, ಜನರಿಂದಲೇ ಚುನಾಯಿತರಾದ ಜನಪ್ರತಿನಿಧಿಗಳು ತಮ್ಮನ್ನು ತಾವೇ ನಿರ್ಬಂಧಿಸಿಕೊಳ್ಳುವ ಒಂದು ಆತ್ಮಪ್ರತ್ಯಯದ ನೆಲೆಯಿಂದ ದೂರ ಸರಿದಿದ್ದಾರೆ ಎನ್ನಬಹುದು. ಅದಾನಿಯಿಂದ ಮಾಡಾಳ್‌ ವರೆಗೆ ವ್ಯಾಪಿಸುವ ಭ್ರಷ್ಟಾಚಾರ ಎಂಬ ಕಳಂಕಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ “ ನಾವು ತಿನ್ನುವುದೂ ಇಲ್ಲ ತಿನ್ನಲು ಬಿಡುವುದೂ ಇಲ್ಲ ” ಎಂಬ ಘೋಷಣೆ ಅಲಂಕಾರಿಕವಾಗಿ ಮಾತ್ರವೇ ಕಾಣಲು ಸಾಧ್ಯ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಮತ್ತು ಬಡತನದ ಸೂಚ್ಯಂಕದಲ್ಲಿ ಭಾರತದ ಸ್ಥಾನವನ್ನು ನೋಡಿದರೆ ಈ ಘೋಷಣೆ ಹಣಕ್ಕಿಂತಲೂ ಅನ್ನಕ್ಕೆ ಹೆಚ್ಚು ಅನ್ವಯವಾಗುತ್ತದೆ. ಭಾರತವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸುವ ಸದಾಶಯವನ್ನು ಸ್ವಾಗತಿಸುತ್ತಲೇ, ಕರ್ನಾಟಕದಲ್ಲಿ ಅನಾವರಣಗೊಂಡಿರುವ ಭ್ರಷ್ಟಾಚಾರದ ಬ್ರಹ್ಮಾಂಡದತ್ತಲೂ ನೋಡಿದಾಗ, ನಮ್ಮ ಗ್ರಹಿಕೆಯೇ ದಿಕ್ಕು ತಪ್ಪುತ್ತಿದೆ ಎನಿಸುವುದು ಸಹಜ.

“ ನಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ” ಎಂದು ಎದೆತಟ್ಟಿ ಹೇಳುವ ಆತ್ಮಪ್ರತ್ಯಯವನ್ನು ಅಧಿಕಾರ ರಾಜಕಾರಣ ಕಳೆದುಕೊಂಡಿರುವುದರಿಂದಲೇ ಪ್ರತಿಯೊಂದು ಹಗರಣದ ಸಂದರ್ಭದಲ್ಲೂ ಆಡಳಿತಾರೂಢ ಸರ್ಕಾರಗಳು ಕಣ್ಣೆದುರಿನ ಬ್ರಹ್ಮಾಂಡವನ್ನೂ ಬದಿಗೊತ್ತಿ ಕಳೆದುಹೋದ ಕರ್ಮಕಾಂಡಗಳನ್ನು ಜನರ ಮುಂದಿಡಲು ಬಯಸುತ್ತವೆ. “ಜೈಲಿಗೆ ಹೋಗಿ ಬಂದವರಿಂದ ನೈತಿಕ ಪಾಠ ಕಲಿಯಬೇಕಿಲ್ಲ” ಎಂಬ ಸವಕಲು ಹೇಳಿಕೆಗಳೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಧ್ವನಿಸುತ್ತಿವೆ. ಈ ನಿಯಮವನ್ನೇ ಪ್ರಾಮಾಣಿಕವಾಗಿ ಅನುಸರಿಸಿದರೆ ಭಾರತದ ಬಹುತೇಕ ರಾಜಕೀಯ ನಾಯಕರು ನಿರುದ್ಯೋಗಿಗಳಾಗಿ ಪಿಂಚಣಿದಾರರಾಗಬೇಕಾಗುತ್ತದೆ. ಭ್ರಷ್ಟಾಚಾರದ ಆರೋಪ ರಾಜಕೀಯ ನೈತಿಕತೆಯ ಮಾನದಂಡವಾಗಿ ಉಳಿದಿಲ್ಲ ಎನ್ನುವ ಸುಡು ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ಭ್ರಷ್ಟಾಚಾರದ ಆರೋಪ ಹೊತ್ತ ಅಭ್ಯರ್ಥಿಗಳಿಗೆ ನಾವು ಮತ ನೀಡುವುದಿಲ್ಲ ಎಂದು ಪ್ರಜೆಗಳು ನಿರ್ಧರಿಸಿದರೆ, ಮತದಾನದ ಪ್ರಮಾಣ ಕುಸಿದುಹೋಗುತ್ತದೆ. ಆದರೆ ಮತದಾರರಲ್ಲಿ ಆ ಪ್ರಜ್ಞಾವಂತಿಕೆ ಕಾಣಲಾಗುತ್ತಿಲ್ಲ.

ಏಕೆಂದರೆ ಭ್ರಷ್ಟಾಚಾರ ಎನ್ನುವುದು ಕಳೆದ ಮೂರು ದಶಕಗಳಲ್ಲಿ ಶ್ರೇಣೀಕರಣಕ್ಕೊಳಗಾಗಿದೆ. ಒಂದು ಹಂತದವರೆಗೆ ಭ್ರಷ್ಟಾಚಾರ, ಲಂಚಗುಳಿತನ, ಸ್ವಜನಪಕ್ಷಪಾತ (ಈಗ ಇದನ್ನು ಸ್ವಜಾತಿ ಪಕ್ಷಪಾತ ಎಂತಲೂ ಹೇಳಬಹುದು) ಮತ್ತು ವ್ಯಾವಹಾರಿಕ ಪ್ರಾಮಾಣಿಕತೆ ಇವೆಲ್ಲವೂ ಸಹನೀಯವಾಗಿಬಿಟ್ಟಿವೆ. ಭ್ರಷ್ಟ, ಅತಿಭ್ರಷ್ಟ, ಕಡುಭ್ರಷ್ಟ ಈ ಪ್ರವರ್ಗಗಳ ನಡುವೆಯೇ ʼಪ್ರಾಮಾಣಿಕ ಭ್ರಷ್ಟʼ ರೂ ನಮ್ಮ ನಡುವೆ ಓಡಾಡಿಕೊಂಡಿದ್ದಾರೆ. ಈ ಪ್ರಾಮಾಣಿಕ ಭ್ರಷ್ಟರೇ ನಮ್ಮ ಸಮಾಜವನ್ನು ಅಡಿಯಿಂದ ಮುಡಿಯವರೆಗೆ ವ್ಯಾಪಿಸಿರುವ ಭ್ರಷ್ಟಾಚಾರದ ಬಿಳಲುಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುತ್ತಾ, “ನಾವು ಅವರಷ್ಟು ಭ್ರಷ್ಟರಲ್ಲ” ಎಂಬ ಆತ್ಮರತದ ಲೋಕದಲ್ಲಿ  ವಿಹರಿಸುತ್ತಿರುತ್ತಾರೆ. ಅಂದರೆ ವರ್ತಮಾನದ ಸಮಾಜ, ಸುಶಿಕ್ಷಿತ ವಲಯ, ಪ್ರಜ್ಞಾವಂತ ಮತದಾರರು ಮತ್ತು ಬೌದ್ಧಿಕ ಜಗತ್ತು ಯಾವ ಪ್ರಮಾಣದ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬಲ್ಲದು ಎಂಬ ಸ್ಪಷ್ಟ ಅರಿವು ಅಧಿಕಾರ ರಾಜಕಾರಣದ ವಾರಸುದಾರರಲ್ಲಿ ಮೂಡಿದೆ. ಜನಸಾಮಾನ್ಯರ ನಡುವೆಯೂ ಸಹ ಈ                         ʼಸಹಿಸಿಕೊಳ್ಳುವʼ ವ್ಯವಧಾನ ಹೆಚ್ಚಾಗಲು ಜಾತಿ, ಧರ್ಮ, ಸಮುದಾಯ ಮತ್ತು ಇತರ ಅಸ್ಮಿತೆಗಳು ನೆರವಾಗುತ್ತವೆ. ʼನಮ್ಮವರಲ್ಲವೇ ತಿನ್ನಲಿ ಬಿಡಿ ʼ ಎನ್ನುವ ಒಂದು ವ್ಯಾವಹಾರಿಕ ಮಾತು ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಸದಾ ಧ್ವನಿಸುತ್ತಲೇ ಇರುತ್ತದೆ.

ಇಷ್ಟರ ನಡುವೆಯೇ ಮೈಸೂರು ಸ್ಯಾಂಡಲ್‌ ಸೋಪಿನ ಕಂಪು ಮರೆಯಾಗಿ ಹೇಸಿಗೆ ಮೂಡುವ ರೀತಿಯಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡ ಅನಾವರಣಗೊಂಡಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಒಂದು ಟ್ವೀಟ್‌ ವರ್ತಮಾನದ ದುಸ್ಥಿತಿಯನ್ನು ಪ್ರಖರವಾಗಿ ಧ್ವನಿಸುತ್ತದೆ. “ ಮಾಡಾಳರು ಮಾಡಿರುವ ಭ್ರಷ್ಟತೆ ಹಾಗೂ ಕಲಬೆರಕೆಯ ಕಾರಣದಿಂದಾಗಿ, ಸರ್ಕಾರಿ ಸ್ವಾಮ್ಯದ ಉದ್ಯಮ ಮತ್ತು ಉತ್ಪನ್ನಗಳಲ್ಲಿ ನಂಬಿಕೆ ಮತ್ತು ಗೌರವ ಇರಿಸಿದ ನನ್ನಂಥವರು ಬಹುಕಾಲದಿಂದ ಬಳಸುತ್ತಿದ್ದ ಮೈಸೂರು ಸ್ಯಾಂಡಲ್‌ ಸೋಪ್ ಬಳಸಲೂ ಹಿಂಜರಿಯುವಂತಾಗಿದೆ ” ಎಂದು ವಿಷಾದದಿಂದ ಹೇಳಿದ್ದಾರೆ. (ಪ್ರ.ವಾ 06-03-2023)  ಹಗಲಿರುಳು ದುಡಿಯುವ ಶ್ರಮಿಕರ ಬೆವರು ಹೊತ್ತುಕೊಂಡೇ ಘಮಘಮಿಸುವ ಸ್ಯಾಂಡಲ್‌ ಸೋಪು ಮತ್ತು ಈ ಶ್ರಮಜೀವಿಗಳ ಪರಿಶ್ರಮದಿಂದಲೇ ಇಷ್ಟು ವರ್ಷಗಳ ಕಾಲ ಬದುಕುಳಿದಿರುವ ಕೆಎಸ್‌ಡಿಎಲ್‌ ಎಂಬ ಕಾರ್ಖಾನೆಯ ಅಸ್ತಿತ್ವವನ್ನು ಉಳಿಸಲಾದರೂ ನಾವು ಈ ಸೋಪನ್ನು ಬಳಸಲೇ ಬೇಕು. ಇಲ್ಲವಾದರೆ ಕ್ಷಣಮಾತ್ರದಲ್ಲಿ ಇದನ್ನು ನುಂಗಿಹಾಕುವ ತಿಮಿಂಗಿಲಗಳು ಮಾರುಕಟ್ಟೆಯಲ್ಲಿ ಸಾಲುಗಟ್ಟಿ ನಿಂತಿರುತ್ತವೆ.

ಮಾಡಾಳ್‌ ಅವರ ಮನೆಯಲ್ಲಿ ದೊರೆತ ಕೋಟ್ಯಂತರ ರೂಗಳ ಮೂಲ ಯಾವುದು ಎಂದು ಶೋಧಿಸುತ್ತಾ ಹೋದರೆ ಗೂಗಲ್‌ ಮ್ಯಾಪ್‌ ನಮ್ಮನ್ನು ಯಾವುದೋ ಒಂದು ಔದ್ಯಮಿಕ ಆವರಣದಲ್ಲಿ ತಂದು ನಿಲ್ಲಿಸುವುದು ವಾಸ್ತವ.  ಇದೇ ಮಾದರಿಯನ್ನೇ ನಾವು ಸ್ಯಾಂಟ್ರೋರವಿ ಹಗರಣ, 40% ಕಮಿಷನ್‌ ಹಗರಣ, ಬಿಟ್‌ ಕಾಯಿನ್‌ ಹಗರಣ,  ಪಿಎಸ್‌ಐ ನೇಮಕಾತಿ ಹಗರಣ ಹೀಗೆ ಎಲ್ಲ ಭ್ರಷ್ಟಾಚಾರದ ಹಗರಣಗಳಲ್ಲೂ ಗುರುತಿಸಬಹುದಲ್ಲವೇ ? ಹಿಂಡನ್‌ಬರ್ಗ್‌ ವರದಿಯಾಗಲೀ, ಲೋಕಾಯುಕ್ತ ದಾಳಿಯಾಗಲೀ ಹೊರಗೆಡಹುವ ದುರಂತ ವಾಸ್ತವಗಳು ನಮ್ಮೆದುರು ಢಾಳಾಗಿ ಕಾಣುತ್ತಿದ್ದರೂ ನಾವೇಕೆ ಮೌನವಾಗಿದ್ದೇವೆ ಎಂಬ ಪ್ರಶ್ನೆ ಇಂದು ಸಾರ್ವಜನಿಕ ಸಂಕಥನದ ಕೇಂದ್ರ ವಿಷಯವಾಗಬೇಕಿತ್ತು. ಆದರೆ ಏಕೆ ಚರ್ಚೆಯಾಗುತ್ತಿಲ್ಲ. ಕಾರಣ ಸ್ಪಷ್ಟ ಚರ್ಚೆಗೆ ವೇದಿಕೆಗಳೇ ಇಲ್ಲ.

ಇರುವ ಏಕೈಕ ವೇದಿಕೆ ಎಂದರೆ ವಿದ್ಯುನ್ಮಾನ ಮಾಧ್ಯಮದ ಬೋರ್ಡ್‌ ರೂಂಗಳು ಮತ್ತು ಮುಖ್ಯವಾಹಿನಿ ಪತ್ರಿಕೆಯ ಮುಖಪುಟಗಳು, ಸಂಪಾದಕೀಯಗಳು ಮತ್ತು ಬರಹಗಳು. ಸಮಸ್ಯೆ ಇರುವುದು ಇಲ್ಲಿಯೇ. ಈ ಎಲ್ಲ ಮಾಧ್ಯಮಗಳನ್ನೂ ಆಕ್ರಮಿಸಿರುವ ಔದ್ಯಮಿಕ ಹಿತಾಸಕ್ತಿಗಳಿಗೂ, ಭ್ರಷ್ಟಾಚಾರದ ಮೂಲದಲ್ಲಿ ಕಾಣಬಹುದಾದ ರಾಜಕೀಯ, ಸಾಮಾಜಿಕ ನೆಲೆಗಳಿಗೂ ಅವಿನಾಭಾವ ಸಂಬಂಧ ಇರುತ್ತದೆ. ಟಿವಿ ಮಾಧ್ಯಮಗಳಲ್ಲಿ ಹಿಂಡನ್‌ಬರ್ಗ್‌ ಚರ್ಚೆಯಾಗುವಾಗ ಬೋಫೋರ್ಸ್‌, ಅದಾನಿಗೆ ಮುಖಾಮುಖಿಯಾಗಿ ಚಿದಂಬರಂ, ಮಾಡಾಳ್‌ ಮುಂದೆ ಸಿದ್ಧರಾಮಯ್ಯ  ಹೀಗೆ ಭ್ರಷ್ಟಾಚಾರದ ಹಗರಣಗಳು ಸ್ವತಂತ್ರ ಭಾರತದ ನ್ಯಾಯ ತಕ್ಕಡಿಯಲ್ಲಿ ತೂಗುತ್ತಲೇ ಕೊನೆಗೆ ಸಮತೂಕದೊಂದಿಗೆ ಪರಿಸಮಾಪ್ತಿಯಾಗುತ್ತದೆ. ಆದರೆ ನಮ್ಮ ಟಿವಿ ಮಾಧ್ಯಮಗಳ ಅಸೂಕ್ಷ್ಮತೆ ಎಷ್ಟು ಅಗಾಧವಾಗಿದೆ ಎಂದರೆ, 40 ಹಿಂದಿನ ಒಂದು ಹಗರಣ ವರ್ತಮಾನದ ಸಮಾಜವನ್ನು ಬಾಧಿಸುವುದಿಲ್ಲ ಎಂಬ ಪರಿವೆಯೂ ಅವರಲ್ಲಿ ಮೂಡುವುದಿಲ್ಲ. ಇದಕ್ಕೆ ಕಾರಣ ಇಡೀ ಮಾಧ್ಯಮ ಸಮೂಹ ಮಾರುಕಟ್ಟೆ ವಶದಲ್ಲಿದೆ ಅಥವಾ ನಿರ್ದಿಷ್ಟವಾಗಿ ಹೇಳುವುದಾದರೆ ಬಂಡವಾಳ ಮಾರುಕಟ್ಟೆಯ ಅಧೀನದಲ್ಲಿದೆ.

ಆದರೆ ಈ ದೇಶದ ನಾಗರಿಕರು ಯಾರ ಅಧೀನದಲ್ಲಿದ್ದಾರೆ ? ಮೇಲೆ ಉಲ್ಲೇಖಿಸಿದ ನಾಗತಿಹಳ್ಳಿ  ಚಂದ್ರಶೇಖರ್‌ ಅವರ ವಿಷಾದದ ನುಡಿಗಳಿಗೆ ತಾತ್ವಿಕವಾಗಿ ನಾವು ಎಂದೋ ಸ್ಪಂದಿಸಬೇಕಿತ್ತಲ್ಲವೇ ? ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳೂ ಸೇರಿದಂತೆ, ನಷ್ಟದಲ್ಲಿವೆ ಅಥವಾ ದೀವಾಳಿಯಾಗುತ್ತಿವೆ ಅಥವಾ ಅವುಗಳ ಅಡಿಪಾಯ ಶಿಥಿಲವಾಗುತ್ತಿವೆ ಎಂದರೆ ಅದಕ್ಕೆ ಕಾರಣವೇ ಈ ರಾಜಕೀಯ ಭ್ರಷ್ಟತೆ, ಅಧಿಕಾರಶಾಹಿಯ ಭ್ರಷ್ಟತೆ ಮತ್ತು ಇವೆರೆಡನ್ನೂ ಸಮತೋಲನದೊಂದಿಗೆ ಕಾಪಾಡಿಕೊಂಡುಬರುವ ಅಧಿಕಾರ ರಾಜಕಾರಣ. ಕಳೆದ ಮೂರು ದಶಕಗಳ ಸಾಂಸ್ಕೃತಿಕ/ಮತೀಯ/ಕೋಮುವಾದಿ ಮತ್ತು ಮಾರುಕಟ್ಟೆ ರಾಜಕಾರಣ ನಾಗರಿಕ ಪ್ರಜ್ಞೆಯನ್ನು ಎಷ್ಟು ಮಸುಕಾಗಿಸಿದೆ ಎಂದರೆ ನಾವು ಎಂತಹ ಭ್ರಷ್ಟಾಚಾರವನ್ನಾದರೂ ಸಹಿಸಿಕೊಳ್ಳಲು ಸಿದ್ಧರಾಗಿಬಿಟ್ಟಿದ್ದೇವೆ. ಜನಸಾಮಾನ್ಯರ ನಿತ್ಯ ಬದುಕಿನ ನೆಲೆಯಲ್ಲಿ ನಿಂತು ನೋಡಿದಾಗ ಭ್ರಷ್ಟಾಚಾರಕ್ಕೂ, ವಿಧ್ವಂಸಕ ಸಮಾಜಘಾತುಕತೆಗೂ ತಾತ್ವಿಕ ವ್ಯತ್ಯಾಸವೇನೂ ಕಾಣುವುದಿಲ್ಲ. ಭ್ರಷ್ಟಾಚಾರ ಸಮಾಜವನ್ನು ಹಂತಹಂತವಾಗಿ, ಕ್ಯಾನ್ಸರ್‌ ಜೀವಕೋಶಗಳಂತೆ ಒಳಗಿನಿಂದಲೇ ತಿನ್ನುತ್ತಾ ಬರುತ್ತವೆ. ಸಮಾಜಘಾತುಕ ಕೃತ್ಯಗಳು ಒಮ್ಮೆಲೆ ಮುಗಿಸಿಬಿಡುತ್ತವೆ.

ಭ್ರಷ್ಟಾಚಾರ ಎಂಬ ಈ ಕ್ಯಾನ್ಸರ್‌ ಪೀಡಿತ ಜೀವಕೋಶಗಳು ನಮ್ಮನ್ನು ತಿನ್ನಲು ಬಿಡದಂತೆ ಜಾಗ್ರತೆ ವಹಿಸುವುದು ನಮ್ಮ ಆದ್ಯತೆಯಾಗಬೇಕಿದೆ. ತಮ್ಮ ಮಾರ್ಚ್‌ 6ರ ಪ್ರಜಾವಾಣಿಯ ಲೇಖನದಲ್ಲಿ (ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ) ಎ. ನಾರಾಯಣ ಅವರು  ರಾಜ್ಯದಲ್ಲಿ ಕಾಣುತ್ತಿರುವ ಅಭೂತಪೂರ್ವ ಭ್ರಷ್ಟಾಚಾರ ಪರ್ವದಲ್ಲಿ ಅಣ್ಣಾ ಹಜಾರೆಯಂತಹ ಒಬ್ಬ ವ್ಯಕ್ತಿ ಅಗತ್ಯವಾಗಿತ್ತು ಎಂದು ಹೇಳುವುದು ಸಹಜವಾಗಿ ತೋರುತ್ತದೆ. ಆದರೆ  2012ರ ಅಣ್ಣಾ ಹಜಾರೆ 1990ರ ದಶಕದಲ್ಲೂ ಮೌನವಾಗಿಯೇ ಇದ್ದರು, 2022ರಲ್ಲೂ ಮೌನವಾಗಿಯೇ ಇದ್ದಾರೆ ಎಂದರೆ ಏನರ್ಥ ? ಅವರು ಭ್ರಷ್ಟಾಚಾರವನ್ನೂ ಸಹ ಸಾಪೇಕ್ಷವಾಗಿಯೇ ನೋಡುತ್ತಾರೆ ಎಂದಲ್ಲವೇ ? ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ವಲಯಗಳ ಮೇಲೂ ಹಿಡಿತ ಸಾಧಿಸಿರುವ ಬಂಡವಾಳ-ಮಾರುಕಟ್ಟೆ ಮತ್ತು ಔದ್ಯಮಿಕ ಜಗತ್ತು ಪ್ರತಿರೋಧ-ಪ್ರತಿಭಟನೆ-ಸತ್ಯಾಗ್ರಹಗಳನ್ನೂ ಸಹ ನಿಯಂತ್ರಿಸುತ್ತಿರುವ ಸಾಧ್ಯತೆಗಳಿವೆ. ಪ್ರಧಾನಿ ಮೋದಿ ಅವರ ಭ್ರಷ್ಟಮುಕ್ತ ಭಾರತದ ಆಶಯವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಈ ಸದಾಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಅಧಿಕಾರ ರಾಜಕಾರಣದ ವಾರಸುದಾರರು ಏನು ಮಾಡುತ್ತಿದ್ದಾರೆ ? ಈ ಪ್ರಶ್ನೆಗೆ ಉತ್ತರವನ್ನು ಕರ್ನಾಟಕದ ಪ್ರಸ್ತುತ ಪರಿಸ್ಥಿತಿ ನೀಡುತ್ತಿದೆ.

ನಮಗೆ ಅಣ್ಣಾ ಹಜಾರೆಯೇ ಏಕೆ ಬೇಕು ? ನಮ್ಮೊಳಗೊಬ್ಬ 2012ರ ಅಣ್ಣಾ ಇರಲೇಬೇಕಲ್ಲವೇ ? ದೇಶಕ್ಕಾಗಿ ಪ್ರಾಣ ತೆರಲೂ ಸಿದ್ಧವಾಗಿರುವ ಬೃಹತ್‌ ಯುವ ಸಮುದಾಯ ನಮ್ಮ ನಡುವೆ ಇದೆ. ಈ ಯುವ ಸಮುದಾಯ ದೇಶದ ಅಖಂಡತೆ, ಐಕ್ಯತೆ ಮತ್ತು ಭವ್ಯಪರಂಪರೆಯನ್ನು ಕಾಪಾಡಲು ತನುಮನಧನ ಅರ್ಪಿಸಲು ಸದಾ ಸಿದ್ಧವಾಗಿದೆ. ಈ ಅಲಂಕಾರಿಕ ಪದಗಳ ಹೊರತಾಗಿಯೂ ಹಿತವಲಯದ ಸಮಾಜದಲ್ಲಿರುವ ವರ್ಗಗಳೂ ತನ್ಮಯತೆಯಿಂದ ಈ ಹಾದಿಯಲ್ಲಿ ತಮ್ಮ ಕೊಡುಗೆ ಸಲ್ಲಿಸಲು ಸನ್ನದ್ಧವಾಗಿದೆ. ಭ್ರಷ್ಟಾಚಾರ ಎಂಬ ಕ್ಯಾನ್ಸರ್‌ ಪೀಡಿತ ಜೀವಕೋಶಗಳು ನಮ್ಮ ಇಡೀ ವ್ಯವಸ್ಥೆಯನ್ನು ತಿಂದು ಹಾಕುತ್ತಿದ್ದರೂ ಈ ಸುಶಿಕ್ಷಿತ/ಮುಂದುವರೆದ/ಸುಸಂಸ್ಕೃತ/ಪ್ರಜ್ಞಾವಂತ ಸಮೂಹ ಏಕೆ ತೆಪ್ಪಗಿದೆ ? ಇವರೊಳಗಿನ ಅಣ್ಣಾ ಮತ್ತದೇ ಸಾಪೇಕ್ಷ ನೆಲೆಯಲ್ಲಿದ್ದಾರೆ. “ ನಿನ್ನೆಗಿಂತಲೂ ಇಂದು ಚೆನ್ನ ” ಎನ್ನುವ ಭ್ರಮಾಧೀನ ಮನಸ್ಥಿತಿಯಲ್ಲಿ, ನಾಳೆ ಎದುರಾಗಬಹುದಾದ ಅಪಾಯಗಳಿಂದ ಈ ಸಮಾಜ ವಿಮುಖವಾಗುತ್ತಿದೆ. ಈ ವಿಮುಖತೆಗೆ ನಮ್ಮ ಟಿವಿ ಮಾಧ್ಯಮಗಳು ಅತ್ಯುತ್ತಮ ಪಾಠಶಾಲೆಗಳಾಗಿವೆ.

ಬಂಡವಾಳಶಾಹಿ ಅರ್ಥವ್ಯವಸ್ಥೆಯ ಅಭಿವೃದ್ಧಿ ಮಾರ್ಗದಲ್ಲಿ ಎದುರಾಗಬಹುದಾದ ಎಲ್ಲ ತೊಡಕುಗಳನ್ನೂ ನವ ಭಾರತ ಎದುರಿಸುತ್ತಿದೆ. ಇಷ್ಟರ ನಡುವೆಯೂ ಭ್ರಷ್ಟಾಚಾರದ ವಿರುದ್ಧ ನಮ್ಮ ಸಮರ ಮುಂದುವರೆದಿದೆ. ರಾಜಕೀಯ ಪಕ್ಷಗಳು “ಅವರಿಗಿಂತಲೂ ನಾವು ಮೇಲು” ಎಂಬ ಆತ್ಮರತಿಯೊಂದಿಗೆ ತಮ್ಮ ಸಾಮ್ರಾಜ್ಯವನ್ನು  ಭದ್ರಪಡಿಸಿಕೊಳ್ಳುತ್ತವೆ. ಈ ʼ ಅವರುʼ  ಮತ್ತು ʼ ನಾವು ʼ  ಎರಡರ ನಡುವೆ ಸಾಮಾನ್ಯ ನಾಗರಿಕರಾದ ʼನಾವೂʼ ಇದ್ದೇವೆ, ಸಂವಿಧಾನವನ್ನು ನಮಗೇ ಅರ್ಪಿಸಿಕೊಂಡು ಇದ್ದೇವೆ, ಅಲ್ಲವೇ ? ನಮ್ಮೊಳಗಿನ ಸಾರ್ವಜನಿಕ ಪ್ರಜ್ಞೆ ವಿಭಿನ್ನ ಕಾರಣಗಳಿಂದ ನಶಿಸುತ್ತಿದೆ. ವ್ಯಕ್ತಿಗತವಾಗಿ, ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಹಾಗೂ ಸಾಮುದಾಯಿಕವಾಗಿ ನಮ್ಮೊಳಗೆ ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಕೊಂಚ ಮಟ್ಟಿಗಾದರೂ ಕಾಳಜಿ ವ್ಯಕ್ತವಾಗಬೇಕಿತ್ತು. ಸರ್ಕಾರಗಳು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿವೆ. ಭ್ರಷ್ಟ ವ್ಯವಸ್ಥೆಯ ಫಲಾನುಭವಿಗಳು ಆಡಳಿತ ವ್ಯವಸ್ಥೆಯ ಭಾಗವಾಗಿದ್ದಾರೆ. ಆದರೆ ಭ್ರಷ್ಟಾಚಾರದ ಹೊಡೆತ ತಿನ್ನುತ್ತಿರುವ ಸಾಮಾನ್ಯ ಜನತೆ ನಿರ್ಲಿಪ್ತವಾಗಿದ್ದಂತೆ ತೋರುತ್ತಿದೆ. ಈ ನಿರ್ಲಿಪ್ತತೆ ನಿಷ್ಕ್ರಿಯತೆಯಾಗಿ ಮಾರ್ಪಾಡಾಗುವ ಮುನ್ನ ಎಚ್ಚೆತ್ತುಕೊಂಡರೆ, ಮೈಸೂರು ಸ್ಯಾಂಡಲ್‌ ಸೋಪಿನ ಸುಗಂಧ ಪರಿಮಳವನ್ನು ಕಾಪಾಡಬಹುದು,

Tags: CorruptionMadal Virupakshappa
Previous Post

‘ರಾಮನ ಭಕ್ತರ’ ಹೆಸರಲ್ಲಿ ಏನನ್ನೂ ಮಾಡಿದರೂ ದೇಶ ಒಪ್ಪುತ್ತಾ..? 

Next Post

ಏಪ್ರಿಲ್ 14 ರಂದು “ಶಿವಾಜಿ ಸುರತ್ಕಲ್ ೨” – ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ತೆರೆಗೆ

Related Posts

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ
ಅಂಕಣ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

by ಪ್ರತಿಧ್ವನಿ
April 29, 2026
0

ನಾ ದಿವಾಕರ ಸಾಮಾನ್ಯವಾಗಿ ಸಾಂಸ್ಕೃತಿಕ ಲೋಕವನ್ನು ನಿರ್ವಚಿಸುವಾಗ ಸಮಾಜದಲ್ಲಿ ಪ್ರಚಲಿತವಾಗಿರುವ ದೃಶ್ಯ-ಶ್ರವ್ಯ ಸಾಧನಗಳನ್ನು ಒಳಗೊಳ್ಳಲಾಗುತ್ತದೆ. ದೃಶ್ಯ ಸಾಧನದಲ್ಲಿ ನೃತ್ಯ, ಚಿತ್ರಕಲೆ, ರಂಗಭೂಮಿ ಮತ್ತು ಭಾರತದ ಸಂದರ್ಭದಲ್ಲಿ ಚಲನಚಿತ್ರ...

Read moreDetails
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
Next Post
ಏಪ್ರಿಲ್ 14 ರಂದು “ಶಿವಾಜಿ ಸುರತ್ಕಲ್ ೨” – ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ತೆರೆಗೆ

ಏಪ್ರಿಲ್ 14 ರಂದು “ಶಿವಾಜಿ ಸುರತ್ಕಲ್ ೨” - ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ತೆರೆಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada