ಹಿಜಾಬ್ Vs ಕೇಸರಿ ಶಾಲು ವಿವಾದ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಶಿವಮೊಗ್ಗ ನಗರದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎನ್ನಲಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳು ಕೇಸರಿ ಶಾಲು ಮತ್ತು ಹಿಜಾಬ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರೆ ನೋಡ ನೋಡುತ್ತಿದ್ದಂತೆ ಧ್ವಜಸ್ಥಂಭ ಏರಿದ ವಿದ್ಯಾರ್ಥಿಯೊಬ್ಬ ಕೇಸರಿ ಧ್ವಜವನ್ನು ಹಾರಿಸಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗೆ ತಕ್ಷಣವೇ ಧ್ವಜ ಕೆಳಗಿಳಿಸುವಂತೆ ಸೂಚಿಸಿದ್ದಾರೆ. ಅದರಂತೆ ವಿದ್ಯಾರ್ಥಿ ಧ್ವಜವನ್ನು ಕೆಳಗಿಳಿಸಿ ಕೆಳಗಿಳಿದಿದ್ದಾನೆ.
ಆದರೆ, ಸದ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಮಾಹಿತಿ ಪ್ರಕಾರ ಧ್ವಜಾರೋಹಣಕ್ಕೆ ಮೀಸಲಿದ್ದ ಧ್ವಜಸ್ಥಂಭದಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಕಾಲೇಜಿನ ಸಿಬ್ಬಂದಿ ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಪ್ರಕಟಿಸಲಾಗಿದೆ. ಪ್ರತಿದಿನ ಇಲ್ಲಿ ಧ್ವಜಾರೋಹಣ ಮಾಡಲಾಗುವುದಿಲ್ಲ. ಕೇಸರಿ ಧ್ವಜ ಹಾರಿಸಿದ ಸಮಯದಲ್ಲಿ ಅಲ್ಲಿ ಯಾವುದೇ ಧ್ವಜ ಹಾರಾಡುತ್ತಿರಲಿಲ್ಲ ಎಂದು ಹೇಳಿದೆ.