ರಾಜ್ಯದಲ್ಲಿ ಸದ್ಯ ಕಾಲೇಜಿನ ಅಂಗಳಗಳು ಕೋಮು ಸಂಘರ್ಷದ ಅಖಾಡಗಳಾಗಿ ಬದಲಾಗಿವೆ. ದೇಶದ ಅಭಿವೃದ್ಧಿ, ಸಾಮಾಜಿಕ ಸುಧಾರಣೆ, ರಾಜಕೀಯ ಪರಿಜ್ಞಾನ ಬೆಳೆಸಬೇಕಿದ್ದ ಕಾಲೇಜುಗಳು ಹಿಜಾಬ್, ಕೇಸರಿ ಶಾಲು, ನೀಲಿ ಶಾಲುಗಳ ಮೇಲಾಟದ ಮೈದಾನಗಳಾಗಿವೆ.
ಹಾಗಾಗಿ ರಾಜ್ಯದ ಕರಾವಳಿಯಿಂದ ಬೀದರ್ ತುದಿಯವರೆಗೆ ಕಳೆದ ಒಂದು ವಾರದಿಂದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಮತ್ತು ನೀಲಿ ಶಾಲುಗಳ ನಡುವಿನ ಸಂಘರ್ಷ ವಿಕೋಪಕ್ಕೆ ಹೋಗಿದೆ. ವಿದ್ಯಾರ್ಥಿಗಳ ತರಗತಿಗಳಿಂದ ಹೊರಬಂದು ಕಾಲೇಜಿನ ಮುಂದೆ ಧರ್ಮ, ದೇವರ ಹೆಸರಿನಲ್ಲಿ ಘೋಷಣೆ ಕೂಗುತ್ತಾ ಮತಧರ್ಮದ ಅಮಲಿನಲ್ಲಿ ತೇಲುತ್ತಿದ್ದರೆ, ತರಗತಿಯ ಒಳಗೆ ಪಾಠ-ಪ್ರವಚನ ಮಾಡಬೇಕಾಗಿದ್ದ ಉಪಸ್ಯಾಸಕರು, ಪ್ರಾಂಶುಪಾಲರು ಕಾಲೇಜಿನ ಗೇಟಿನ ಬಳಿ ನಿಂತು ರೊಚ್ಚಿಗೆದ್ದಿರುವ ಶಿಷ್ಯಗಣವನ್ನು ಸಮಾಧಾನಪಡಿಸುತ್ತಿದ್ದಾರೆ.
ಯಾವತ್ತೂ ಹಿಂದುತ್ವದ ಪ್ರಯೋಗಶಾಲೆಯಾಗಿರುವ ಕರಾವಳಿಯ ಕುಂದಾಪುರದ ಸರ್ಕಾರಿ ಕಾಲೇಜೊಂದರಲ್ಲಿ ಆರಂಭವಾದ ಈ ಸಂಘರ್ಷ ಇದೀಗ ರಾಜ್ಯವ್ಯಾಪಿ ಪಿಡುಗಾಗಿ ಬದಲಾಗಿದೆ. ಪಾಠಪ್ರವಚನಗಳು ನಡೆಯಬೇಕಿದ್ದ ಕಾಲೇಜುಗಳಲ್ಲಿ ಇಲ್ಲಿ ಪೊಲೀಸರ ಲಾಠಿ ಮತ್ತು ಬೂಟುಗಳು ಸದ್ದು ಮಾಡುತ್ತಿವೆ. ಕಳೆದ ಒಂದು ವಾರದಿಂದ ವಿದ್ಯಾರ್ಥಿ ಗುಂಪುಗಳ ನಡುವಿನ ಪೈಪೋಟಿಯ, ಪರಸ್ಪರರ ವಿರುದ್ಧದ ಘೋಷಣೆಯ ಮಟ್ಟಕ್ಕೆ ಸೀಮಿತವಾಗಿದ್ದ ಈ ಸಂಘರ್ಷ, ಮಂಗಳವಾರ ಶಿವಮೊಗ್ಗ, ಬಾಗಲಕೋಟೆ, ಮಂಡ್ಯ ಸೇರಿದಂತೆ ರಾಜ್ಯದ ಹಲವು ಕಡೆ ಕಲ್ಲು ತೂರಾಟ, ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಕರಾವಳಿಯ ಒಂದು ಕಾಲೇಜಿನಲ್ಲಿ ವಿವಾದ ಆರಂಭವಾದಾಗಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಕಾನೂನು ಮತ್ತು ಕಾಯ್ದೆಗಳ ಅಸ್ತ್ರದ ಮೂಲಕ ತಿಳಿಗೊಳಿಸುವ ಕೆಲಸ ಮಾಡದೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಬೆಂಕಿಗೆ ತುಪ್ಪ ಸುರಿದ ಶಿಕ್ಷಣ ಸಚಿವರೂ ಸೇರಿದಂತೆ ಸರ್ಕಾರದ ಭಾಗವೇ ಆಗಿರುವ ಬಿಜೆಪಿಯ ಹಲವು ಸಚಿವರು, ಇದೀಗ ನಾಡಿನ ಉದ್ದಗಲಕ್ಕೆ ಹಿಂಸಾಚಾರ ಭುಗಿಲೆದ್ದ ಬಳಿಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ತಿಪ್ಪೆ ಸಾರಿಸುವ ಯತ್ನ ಮಾಡಿದ್ದಾರೆ.

ಒಂದು ಕಾಲೇಜಿನಲ್ಲಿ ಹಿಜಾಬ್ ಧರಿಸಿಯೇ ಬರುತ್ತಿದ್ದ ಮುಸ್ಲಿಂ ಯುವತಿಯರು ಮತ್ತು ಅದನ್ನು ವಿರೋಧಿಸಿ ಕೇಸರಿ ಶಾಲು ಹಾಕಿಕೊಂಡು ಬಂದ ಹಿಂದೂ ವಿದ್ಯಾರ್ಥಿಗಳ ನಡುವಿನ ಹುಂಬತನ ಮತ್ತು ಹಠಮಾರಿತನವನ್ನು ಬಗೆ ಹರಿಸುವುದು ಆರಂಭದಲ್ಲಿ ದೊಡ್ಡದಾಗಿರಲಿಲ್ಲ. ಆ ವಿವಾದವನ್ನು ಆ ಮಕ್ಕಳು, ಮಕ್ಕಳ ಪೋಷಕರು ಮತ್ತು ಅಲ್ಲಿನ ಕಾಲೇಜಿನ ಆಡಳಿತಗಳಿಗೇ ಬಿಟ್ಟಿದ್ದರೂ ಅದು ಮಾತುಕತೆ, ಚರ್ಚೆಯ ಮೂಲಕ ಪರಿಹಾರ ಕಾಣುತ್ತಿತ್ತು. ಆದರೆ, ಹಿಜಾಬಿನ ಪರ ಮುಸ್ಲಿಂ ಸಂಘಟನೆಗಳು ಮತ್ತು ಅದನ್ನು ವಿರೋಧಿ ಹಿಂದೂ ಸಂಘಟನೆಗಳು ಕಾಲೇಜಿನ ಅಂಗಳಕ್ಕೆ ಕಾಲಿಟ್ಟಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಮೂಲ.
ಅದರಲ್ಲೂ ಮುಖ್ಯವಾಗಿ ಕುಂದಾಪುರದ ಸರ್ಕಾರಿ ಕಾಲೇಜು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಬಿಟ್ಟು ಅಲ್ಲಿನ ಹಿಂದೂಪರ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳು ವಿವಾದದಿಂದ ದೂರವೇ ಉಳಿದಿದ್ದರೆ ಮತ್ತು ಆಡಳಿತ ಪಕ್ಷ ಬಿಜೆಪಿಯ ಸಚಿವರು ಮತ್ತು ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡುವ ಬದಲು ಸಂವಿಧಾನ ಮತ್ತು ಕಾನೂನು ಪಾಲನೆಯ ಮಾತುಗಳನ್ನಾಡಿದ್ದರೆ ಇದು ವಿವಾದವೇ ಆಗುತ್ತಿರಲಿಲ್ಲ. ಆದರೆ, ಸ್ವತಃ ಕಾನೂನು ಮತ್ತು ಸುವ್ಯವಸ್ಥೆ ಕಾಯಬೇಕಾದ ಗುರುತರ ಹೊಣೆಗಾರಿಕೆ ಹೊತ್ತಿರುವ ಗೃಹ ಸಚಿವರು, ಶಿಕ್ಷಣ ಇಲಾಖೆಯ ಹೊಣೆ ಹೊತ್ತಿರುವ ಶಿಕ್ಷಣ ಸಚಿವರು ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಭಾಗದ ಪ್ರಮುಖ ನಾಯಕರೂ ಆದ ಇಂಧನ ಸಚಿವರು ನೀಡಿದ ಹೇಳಿಕೆಗಳು ಒಂದು ಕಾಲೇಜಿನ ಆವರಣದಿಂದ ಈ ವಿವಾದವನ್ನು ರಾಜ್ಯವ್ಯಾಪಿ ಸಂಘರ್ಷವಾಗಿ ಬದಲಾಯಿಸಿದವು ಎಂಬುದು ಯಾರೂ ತಳ್ಳಿಹಾಕಲಾಗದ ಸತ್ಯ.
ಆದರೆ, ಕರಾವಳಿಯಲ್ಲೇ ಯಾಕೆ ಈ ವಿವಾದದ ಕಿಡಿ ಹೊತ್ತಿಕೊಂಡಿತು ಎಂಬುದಕ್ಕೆ ಸರಳ ವಿಶ್ಲೇಷಣೆ. ಕಳೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕೇರಳ ಸರ್ಕಾರದ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಕೇಂದ್ರದ ಬಿಜೆಪಿ ಸರ್ಕಾರ ತಿರಸ್ಕರಿಸಿದ ವಿಷಯ ನಾರಾಯಣಗುರುಗಳ ಅನುಯಾಯಿಗಳಾದ ಬಿಲ್ಲವ ಸಮುದಾಯವೂ ಸೇರಿದಂತೆ ಕರಾವಳಿಯ ಹಿಂದುಳಿದ ವರ್ಗಗಳ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಮನುವಾದಿ ಬಿಜೆಪಿಯ ಆಡಳಿತ ಹಿಂದೂ ಧರ್ಮದ ಕರ್ಮಠ ಶೋಷಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಸ್ವಾಭಿಮಾನ ಸಮಾಜ ಕಟ್ಟುವ ಕನಸು ಕಂಡಿದ್ದ ನಾರಾಯಣಗುರುಗಳನ್ನು ಸಹಿಸಿಕೊಳ್ಳುವುದಿಲ್ಲ. ಆ ಕಾರಣದಿಂದಾಗಿ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಲಾಗಿದೆ ಎಂಬ ಸಂಗತಿ ಬಿಜೆಪಿಯ ಮತಬ್ಯಾಂಕ್ ಆದ ಬಿಲ್ಲವ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಆಕ್ರೋಶ ಹಾಗೆಯೇ ಮುಂದುವರಿದರೆ ಅದು ಕರಾವಳಿಯಲ್ಲಿ ಬಿಜೆಪಿಗೆ ವ್ಯತಿರಿಕ್ತವಾಗಲಿದೆ ಎಂಬ ಹಿನ್ನೆಲೆಯಲ್ಲಿಯೇ ಸಂಘಪರಿವಾರದ ಮಂದಿ ಹಿಜಾಬ್ ವಿಷಯದಲ್ಲಿ ಕಾಲೇಜು ಸಮಸ್ಯೆಯನ್ನು ಹಿಂದುತ್ವದ ವಿಷಯವಾಗಿ ದೊಡ್ಡದು ಮಾಡಿದರು. ಆ ಮೂಲಕ ನಾರಾಯಣಗುರುಗಳ ಟ್ಯಾಬ್ಲೋ ವಿವಾದದಿಂದ ಕರಾವಳಿ ಜನರ ಗಮನವನ್ನು ಬೇರೆಡೆ ತಿರುಗಿಸುವುದು ಮತ್ತು ಮತೀಯ ಕಿಚ್ಚು ಹೊತ್ತಿಸುವುದು ಸಂಘಪರಿವಾರದ ತಂತ್ರವಾಗಿತ್ತು.

ಬೇರೆಲ್ಲಾ ಬಿಜೆಪಿ ಸಚಿವರು, ನಾಯಕರಿಗಿಂತ ಹಿಜಾಬ್ ವಿಷಯದಲ್ಲಿ ಸಂಘಪರಿವಾರದ ಹಿನ್ನೆಲೆಯ ಪ್ರಮುಖ ಸಚಿವರಾದ ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಮತ್ತು ನಾಗೇಶ್ ಅವರು ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಆ ತಂತ್ರವನ್ನು ಗಮನಿಸಿದರೆ ಎಲ್ಲವೂ ನಿಚ್ಛಳವಾಗಲಿದೆ.
ಇನ್ನು ಈ ವಿವಾದದ ವಿಷಯದಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಚುನಾವಣಾ ರಾಜಕಾರಣ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಓದುವ ಗ್ರಾಮೀಣ ಭಾಗದ ಯುವ ಮತದಾರರು ಬಿಜೆಪಿಯ ನೆಲೆ ವಿಸ್ತರಣೆಯ ದೃಷ್ಟಿಯಿಂದ ನಿರ್ಣಾಯಕ. ಇದೇ ಮೊದಲ ಬಾರಿಗೆ ಮತದಾನ ಮಾಡಲಿರುವ ಅಥವಾ ಎರಡನೇ ಮತ್ತು ಮೂರನೇ ಬಾರಿ ಮತದಾನ ಮಾಡಲಿರುವ ಯುವ ತಲೆಮಾರು ನಿರುದ್ಯೋಗ ಮತ್ತು ಕರೋನಾ ಲಾಕ್ ಡೌನ್ ನಿಂದಾಗಿ ಸಮರ್ಪಕ ಶಿಕ್ಷಣ ಸಿಗದೆ ಭ್ರಮನಿರಸನಗೊಂಡಿದೆ. ಸಾಮಾನ್ಯವಾಗಿ ಆ ಭ್ರಮನಿರಸನ ಆಡಳಿತರೂಢ ಸರ್ಕಾರ ಮತ್ತು ಪಕ್ಷದ ವಿರುದ್ಧ ತಿರುಗುವುದು ಸಹಜ. ಈ ಸೂಕ್ಷ್ಮವನ್ನು ಅರಿತಿರುವ ಬಿಜೆಪಿ ಮತ್ತು ಅದರ ಪರಿವಾರಕ್ಕೆ ಅಂತಹ ಬೀಸುವ ದೊಣ್ಣೆಯಿಂದ ಪಾರಾಗಲು ಹಿಜಾಬ್ ಪ್ರಕರಣ ವರವಾಗಿ ಪರಿಣಮಿಸಿದೆ. ಹಾಗಾಗಿಯೇ ರಾಜ್ಯದ ಯಾವುದೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ, ಮೇಲ್ಜಾತಿ ಮತ್ತು ಮೇಲ್ವರ್ಗದ ಮಕ್ಕಳು ಕಲಿಯುವ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಇಲ್ಲದ ಹಿಜಾಬ್ ವಿವಾದ ಬಡವರು ಮತ್ತು ಮಧ್ಯಮವರ್ಗದ, ಅದರಲ್ಲೂ ಗ್ರಾಮೀಣ ಮಕ್ಕಳು ಕಲಿಯುವ ಶಾಲೆಗಳಲ್ಲೇ ಭುಗಿಲೆದ್ದಿದೆ!
ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ರಾಜಕೀಯ ಲಾಭ ಮಾಡುವ ಉದ್ದೇಶ ಮೇಲ್ನೋಟಕ್ಕೆ ಕಂಡುಬಂದರೂ, ಈ ವಿವಾದದ ಆಳದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮಕ್ಕಳನ್ನು ಶಿಕ್ಷಣದಿಂದ ಮತ್ತು ಆ ಮೂಲಕ ಸ್ವಾವಲಂಬನೆಯ ಹಾದಿಯಿಂದ ಹಳಿತಪ್ಪಿಸುವ ಸಂಘಪರಿವಾರದ ದೂರಗಾಮಿ ಅಜೆಂಡಾ ಕೆಲಸ ಮಾಡುತ್ತಿದೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಸಂಘಪರಿವಾರ ಮತ್ತು ಮೇಲ್ಜಾತಿಯ ಪ್ರತಿಷ್ಠಿತರ ಮಕ್ಕಳು ಕಲಿಯುವ ಯಾವ ಕಾಲೇಜಿನಲ್ಲೂ ಹಿಜಾಬ್ ವಿವಾದವಾಗಲೀ, ಕೇಸರಿ ಶಾಲಿನ ಪ್ರದರ್ಶನವಾಗಲೀ ನಡೆಯದೆ ಕೇವಲ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ದುರ್ಬಲ ವರ್ಗಗಳ ಮಕ್ಕಳು ಕಲಿಯುವ ಸರ್ಕಾರಿ ಶಾಲಾ-ಕಾಲೇಜುಗಳಲ್ಲೇ ಈ ವಿವಾದ ಭುಗಿಲೆದ್ದಿರುವುದನ್ನು ಆ ಹಿನ್ನೆಲೆಯಲ್ಲಿ ನೋಡಿದರೆ ಬೇರೆಯದೇ ಮೆಗಾ ಡಿಸೈನ್ ಅರ್ಥವಾಗಲಿದೆ.
ಆದರೆ, ಇಂತಹ ಹುನ್ನಾರಗಳು ಅರ್ಥವಾಗುವ ವಯಸ್ಸೂ ಅಲ್ಲದ ಮತ್ತು ಧರ್ಮಾಂಧತೆಯ ಹೆಂಡ ಕುಡಿದ ಮಂಗಗಳಂತಾಗಿರುವ ಮನಸ್ಥಿತಿಯ ವಿದ್ಯಾರ್ಥಿಗಳು ಇದೀಗ ಹಿಜಾಬ್ ಮತ್ತು ಕೇಸರಿಯ ಕದನದಲ್ಲಿ ಹುತಾತ್ಮರಾಗುವ ವೀರಾವೇಶದಲ್ಲಿದ್ದಾರೆ. ಹಬ್ಬಕ್ಕೆ ತಂದ ಹರೆಕೆಯ ಕುರಿ ತಳಿರ ಮೇಯಿತ್ತು ಎಂಬ ಬಸವಣ್ಣನ ವಚನದಂತೆ ಸದ್ಯ ಈ ಯುವ ತಲೆಮಾರಿನ ಸ್ಥಿತಿಯಾಗಿದೆ. ಇಂತಹ ಹುಂಬತನ ಮತ್ತು ಮತಿಗೇಡಿತನದ ಮೇಲೆಯೇ ದಶಕಗಳಿಂದ ರಾಜಕೀಯ ಫಸಲು ಕೊಯ್ಲು ಮಾಡುತ್ತಿರುವ ಬಿಜೆಪಿ, ಮುಂದಿನ ಚುನಾವಣೆಯಲ್ಲಿಯೂ ಭರ್ಜರಿ ಕೊಯ್ಲು ಮಾಡಲು ಹಿಜಾಬ್ ವಿವಾದವೇ ಕುಡುಗೋಲಾಗಿ ಒದಗಿಬಂದಿದೆ!
ಈಗಲೂ ಈ ಯುವಕರು ಇಲ್ಲವೇ ಅವರ ಪೋಷಕರು ತಮ್ಮ ವಿವೇಚನೆಯನ್ನು ಬಳಸದೇ ಹೋದರೆ, ಕೈಗೆ ಬಂದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು, ಉದ್ಯೋಗ ಪಡೆದು ಮನೆಮಾರು ಕಾಯುವ ಬದಲು ರಾಜಕೀಯ ಪಕ್ಷಗಳ ಕಾಲಾಳುಗಳಾಗಿ ಬೀದಿಪಾಲಾಗಲಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮುನ್ನಡೆಸಿ ಕನಿಷ್ಟ ಶಿಕ್ಷಣ ಮತ್ತು ಬದುಕಿನ ಭದ್ರತೆಯ ಹಳಿಗೆ ತಂದಿದ್ದ ದುರ್ಬಲ ವರ್ಗಗಳ ಬದುಕು ಧರ್ಮ ಮತ್ತು ಕೋಮಿನ ತಟಸ್ಥ ವ್ಯವಸ್ಥೆಗೆ ಜಾರಲಿದೆ.