ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪಂಚಮಸಾಲಿ ಸಮುದಾಯದ ಅಗ್ರಗಣ್ಯ ನಾಯಕರು ಪಾದಯಾತ್ರೆ ಮಾಡಿದ್ದರು. ಯಡಿಯೂರಪ್ಪ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯದ ಹೋರಾಟ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆದರೆ ದಿನ ಕಳೆದಂತೆ ಇದೀಗ ಹೋರಾಟ ಮಾಡಿದ ಸ್ವಾಮೀಜಿಗಳಲ್ಲಿ ಹಾಗೂ ಅಲ್ಲಿ ಭಾಗವಹಿದ ರಾಜಕೀಯ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
ಹೋರಾಟದ ಆರಂಭದಲ್ಲಿ ಕೆಲವು ಭಿನ್ನಾಭಿಪ್ರಾಯ ಕಂಡು ಬಂದಿದ್ದವು. ಆದರೆ ಹೋರಾಟಕ್ಕೆ ಹೆಚ್ಚಿನ ಜನ ಬೆಂಬಲ ವ್ಯಕ್ತವಾದ ಕಾರಣ ರಾಜಕೀಯ ನಾಯಕರು ಹಾಗೂ ಸ್ವಾಮೀಜಿಗಳು ನಾವೇಲ್ಲ ಒಂದೇ ಎನ್ನುತ್ತಾ ಹೋದರೆ. ದಿನ ಕಳೆದಂತೆ ಒದೊಂದೆ ಭಿನ್ನಾಭಿಪ್ರಾಯ ಸ್ಫೋಟಗೊಳ್ಳುತ್ತಿದ್ದು, ರಾಜಕೀಯ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಸ್ವಾಮೀಜಿಗಳು ಸಹ ಹೋರಾಟದಿಂದ ದೂರ ಸರಿದು ತಮ್ಮದೆಯಾದ ದಾರಿ ಹಿಡಿದ್ದಿದ್ದಾರೆ. ಆಂದೋಲನ ರೀತಿಯಲ್ಲಿ ನಡೆದ ಹೋರಾಟ ಇದೀಗ ಪಂಚಮಸಾಲಿ ಸಮುದಾಯವನ್ನು ಒಡೆಯುವ ಹಂತಕ್ಕೆ ತಂದು ನಿಲ್ಲಿಸಿದೆ. ಪರಿಣಾಮ ಮೂರನೆಯ ಪೀಠದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಫೆಬ್ರವರಿ 14ರಂದು ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠದ ಉದ್ಘಾಟನೆಯಾಗಲಿದ್ದು, ಅಂದೇ ನೂತನ ಜಗದ್ಗುರುಗಳ ಪಟ್ಟಾಧಿಕಾರ ನಡೆಯಲಿದೆ. 3ನೇ ಪೀಠದ ನೂತನ ಪೀಠಾಧಿಕಾರಿಯಾಗಿ ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿ ನೇಮಕ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ್ ಬಳಿ ಲ್ಲಿ ಕಟ್ಟಡ ನಿರ್ಮಾಣ ಮಾಡಲಿದ್ದು, ಫೆಬ್ರವರಿ 14ರಂದು ವಿವಿಧ ಕಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಯಾವಾಗ ಮೂರನೇ ಪೀಠ ಸ್ಥಾಪನೆ ಬಗ್ಗೆ ಅಧಿಕೃತವಾಗಿ ಮನಗೂಳಿ ಮಠದ ಶ್ರೀಗಳು ಘೋಷಣೆ ಮಾಡಿದರೋ ಅಂದಿನಿಂದ ಪಂಚಮಸಾಲಿ ಸಮುದಾಯದ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ತಾರಕ್ಕೇರಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಮುರುಗೇಶ ನಿರಾಣಿ ನೇರಾನೇರ ಆರೋಪಕ್ಕೆ ಇಳಿದಿದ್ದಾರೆ. ಮೂರನೆಯ ಪೀಠ ಸ್ಥಾಪನೆಯ ಹಿಂದೆ ನಿರಾಣಿ ಅವರ ಕೈವಾಡವಿದ್ದು, ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪಂಚಮಸಾಲಿ ಸಮಾಜದ ಹೆಸರು ಬಳಸಿಕೊಂಡು ಸಿಎಂ ಕುರ್ಚಿಯ ಕನಸು ಕಾಣುತ್ತಿದ್ದು, ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಬಸನಗೌಡ ಪಾಟೀಲ್ ಯತ್ನಾಳ ಮಾತ್ರವಲ್ಲ, ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಕೂಡಾ ಸಚಿವ ನಿರಾಣಿ ವಿರುದ್ಧ ಗರಂ ಆಗಿದ್ದಾರೆ. ನಿರಾಣಿ ಅವರು ಸಿಎಂ ಹುದ್ದೆಗಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು ಮೂರನೆ ಪೀಠ ಸ್ಥಾಪನೆ ಹಿಂದೆ ನಿರಾಣಿ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೂರನೇ ಪೀಠ ಸ್ಥಾಪನೆ ರಾಜಕೀಯ ನಾಯಕರು ಹಾಗೂ ಸ್ವಾಮೀಜಿಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ಇಷ್ಟು ದಿನ ಆತಂಕವಾಗಿ ನಡೆಯುತ್ತಿದ್ದ ಗುದ್ದಾಟ ಇದೀಗ ಸಾರ್ವಜನಿಕವಾಗಿ ನಡೆಯುತ್ತಿದೆ.
ಇದೆಲ್ಲದರ ನಡುವೆ 3ನೇ ಪೀಠ ಸ್ಥಾಪನೆ ಬಗ್ಗೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಮಾತನಾಡಿದ ಸಚಿವ ಮುರುಗೇಶ ನಿರಾಣಿ, ಒಂದೇ ಪೀಠದಿಂದ ಸ್ವಾಮೀಜಿಗಳಿಗೆ ಬೇರೆ ಬೇರೆ ಕಡೆ ಹೋಗಲು ಸಾಧ್ಯವಿಲ್ಲ. ಹೀಗಾಗಿ 3ನೇ ಪೀಠ ಆಗ್ತಿರೋದು ತಪ್ಪಲ್ಲ ಎಂದಿದ್ದಾರೆ. ಅಲ್ಲದೆ ಸಿಎಂ ಆಗಬೇಕೆನ್ನುವ ವಿಚಾರಕ್ಕೆ 3ನೇ ಪೀಠ ಮಾಡ್ತಿದ್ದಾರೆನ್ನುವ ಎಂಬ ಆರೋಪದ ಬಗ್ಗೆ ಉತ್ತರ ನೀಡಿದ್ದು, ನಾನೆಂದು ಸಿಎಂ ಕನಸು ಕಂಡವನಲ್ಲ. ನಾನು ಯಾರೇ ಸ್ವಾಮೀಜಿ ಕರೆದ್ರೂ ಹೋಗುತ್ತೇನೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಹಳ ದೊಡ್ಡ ಸ್ವಾಮೀಜಿ. ಅವರು ನನ್ನನ್ನ ಕರೆದು ಮಾತನಾಡಬೇಕಿತ್ತು. ಸ್ವಾಮೀಜಿ ನನ್ನ ಬಗ್ಗೆ ತಪ್ಪು ತಿಳಿದಕೊಂಡಿರಬಹುದು, ನಾನು ಮಾತನಾಡಲು ಸಿದ್ದನಾಗಿದ್ದೇನೆ ಎಂದಿದ್ದಾರೆ. ಜೊತೆಗೆ 3ನೇ ಪೀಠಕ್ಕೂ ನನಗೂ ಯಾವುದೇ ಸಂಭಂದ ಇಲ್ಲ ಎಂದಿದ್ದಾರೆ. 3ನೇ ಪೀಠದ ಬಗ್ಗೆ ನನಗೆ ಗೊತ್ತಿದ್ದಿಲ್ಲ. ಪೇಪರ್ ನಲ್ಲಿ ನೋಡಿ ತಿಳಿದಿದ್ದೇನೆ, ಅವರು 3ನೇ ಪೀಠ ಮಾಡಿದ್ರೆ ತಪ್ಪೇನು ಇಲ್ಲ. ಅವರಿಗೆ ಬೆಂಬಲ ನೀಡೋದು ನಮ್ಮ ಕರ್ತವ್ಯ ಎಂದಿದ್ದಾರೆ. ಸಮಾಜದ ಅನುಕೂಲಕ್ಕಾಗಿ ಮಾತ್ರ ಈ ಪೀಠ ಮಾಡಲಾಗಿದೆ. ಸ್ವಾಮೀಜಿ ನನ್ನನ್ನೇ ಕರೆದು ಕೇಳಿದ್ರೆ ನಾನೇ ಉತ್ತರ ಕೊಡ್ತಿದ್ದೇ ಎಂದು ಶ್ರೀಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ ಒಂದು ಬಣವಾದರೆ, ಮುರುಗೇಶ ನಿರಾಣಿ ಹಾಗೂ ಇತರರು ಮತ್ತೊಂದು ಬಣವಾಗಿದ್ದಾರೆ. ಇದು ಸಮಾಜದ ಸ್ವಾಮೀಜಿ ಹಾಗೂ ರಾಜಕೀಯರು ಇಬ್ಬಾಗವಾಗಿರುವುದು ಸ್ಪಷ್ಟವಾದಂತಾಗಿದೆ.
ಸಚಿವ ನಿರಾಣಿ ಮೇಲೆ ಏಕೆ ಆರೋಪ ?
ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿರುವ ಮುರುಗೇಶ ನಿರಾಣಿ ಅವರು ಪಂಚಮಸಾಲಿ ಸಮುದಾಯದ ಪ್ರಬಲ ನಾಯಕ ಹಾಗೂ ಉದ್ಯಮಿಗಾಗಿದ್ದಾರೆ. ಹರಿಹರ ಪೀಠದ ಶ್ರೀಗಳು ನಿರಾಣಿ ಅವರಿಗೆ ಆಪ್ತರು ಹಾಗೂ ಮೂರನೇ ಪೀಠದಲ್ಲಿ ಗುರುತಿಸಿಕೊಂಡಿರುವ ಬಹುತೇಕ ಸ್ವಾಮೀಜಿಗಳು ನಿರಾಣಿ ಪರವಾಗಿ ಲಾಭಿ ಮಾಡಿದವರು. ಜೊತೆಗೆ ಮೂರನೇ ಪೀಠದ ಸ್ವಾಮೀಜಿಗಳು ಹರಿಹರ ಪೀಠದ ಶ್ರೀಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ನಿರಾಣಿ ಅವರಿಗೆ ಮೂರನೇ ಪೀಠದ ಸ್ಥಾಪನೆ ತಳುಕುಹಾಕಿಕೊಂಡಿದೆ. ಜೊತೆಗೆ ನಿರಾಣಿ ಸಹೋದರ ಸಂಗಮೇಶ ನಿರಾಣಿ ಅವರು ಜಮಖಂಡಿ ತಾಲೂಕಿನಲ್ಲಿ ಪ್ರಬಲವಾಗಿದ್ದು, ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇದೀಗ ಮೂರನೇ ಪೀಠ ಸ್ಥಾಪನೆಯಾಗುತ್ತಿರುವುದು ಕೂಡಾ ಜಮಖಂಡಿ ತಾಲೂಕಿನಲ್ಲಿ ಆಗಿರುವ ಕಾರಣ ನಿರಾಣಿ ಅವರ ವಿರುದ್ದ ಪೀಠ ಸ್ಥಾಪನೆ ಹಿಂದೆ ನಿಂತಿದ್ದಾರೆ ಎಂದು ದೂರಲಾಗಿದೆ. ಇದಕ್ಕಿಂತ ಮುಖ್ಯವಾಗಿ ನಿರಾಣಿ ಪರವಾಗಿರುವ ಹರಿಹರ ಪೀಠ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಭಾವಿಯಾಗಿದ್ದು, ಉತ್ತರ ಕರ್ನಾಟಕದಲ್ಲಿರುವ ಕೂಡಲಸಂಗಮ ಪೀಠವಿದ್ದು, ಶಾಸಕ ಯತ್ನಾಳ ಪರವಾಗಿದೆ. ಈ ಕಾರಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ನನ್ನ ಬೆಂಬಲಕ್ಕೆ ಮತ್ತೊಂದು ಪೀಠ ಇರಲಿ ಅನ್ನೋ ಕಾರಣಕ್ಕೆ ಪೀಠದ ಹಿಂದೆ ನಿರಾಣಿ ನಿಂತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಸದ್ಯ ಆರೋಪ ಪ್ರತ್ಯಾರೋಪಗಳ ನಡುವೆ ಮೂರನೇ ಪೀಠ ಸ್ಥಾಪನೆ ಜೋರಾಗಿದ್ದು, ಫೆಬ್ರವರಿ 14 ರಂದು ಎಲ್ಲದಕ್ಕೂ ಅಂತಿಮ ಉತ್ತರ ಸಿಗಲಿದೆ.