2017 ರ ಆಗಸ್ಟ್ನಲ್ಲಿ ಇಡೀ ಬಿಹಾರ ವಿನಾಶಕಾರಿ ಪ್ರವಾಹಕ್ಕೆ ತುತ್ತಾಗಿತ್ತು. ಆ ಪ್ರವಾಹಕ್ಕೆ ರಾಜ್ಯದ ಸುಮಾರು 3,000 ಚದರ ಕಿ.ಮೀ ನೀರಿನಲ್ಲಿ ಮುಳುಗಿತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ದುರಂತವು 815 ಜನರನ್ನು ಬಲಿ ಪಡೆದುಕೊಂಡಿದೆ ಮತ್ತು ಸುಮಾರು 9,00,000 ಜನರಿಗೆ ನೆಲೆಯಿಲ್ಲದಂತೆ ಮಾಡಿದೆ. ಅನೇಕರಿಗೆ ರಸ್ತೆಗಳು, ರೈಲು ಹಳಿಗಳು ಮತ್ತು ಮೇಲ್ಛಾವಣಿಗಳ ಮೇಲೆ ವಾಸಿಸುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲದಂತಾಗಿತ್ತು. ದೇಶದ ಪ್ರಧಾನಿಯೂ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಆದರೆ ಯಾವ ಸಮೀಕ್ಷೆಗೂ ಗೋಚರಿಸಿದ್ದರೆಂದರೆ ಅಲ್ಲಿನ ಮಹಿಳೆ ಮತ್ತು ಅವರ ಮೇಲೆ ಹೆಚ್ಚಿರುವ ಹಿಂಸೆ.
ಹದಿನೆಂಟು ತುಂಬದ ಹೆಣ್ಣು ಮಕ್ಕಳನ್ನು ಮದುವೆಗೆ ಒತ್ತಾಯಿಸುವುದು, ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸುವುದು, ಕೆಲಸದ ಸ್ಥಳಗಳಲ್ಲಿನ ದೌರ್ಜನ್ಯ ಹೀಗೆ ಬಿಹಾರದ ನೆರೆ ಅಲ್ಲಿ ಹೆಣ್ಣುಮಕ್ಕಳ ಬದುಕಿನ ಮೇಲೆ ಬೀರಿರುವ ಪರಿಣಾಮ ಅಪಾರ.
ಅರಾರಿಯಾ ಜಿಲ್ಲೆಯ ಹೇಮಾ ದೇವಿ ಹೀಗೆ ಬೆದರಿಕೆಗೆ ಬಲಿಯಾದವರಲ್ಲಿ ಒಬ್ಬರು. 2017ರಲ್ಲಿ ಬಂದ ಪ್ರವಾಹವು ಅವರ ಇಡೀ ಗ್ರಾಮವನ್ನು ಮುಳುಗಿಸಿತು. ಅವರು ಮತ್ತು ಅವಳ ತಾಯಿ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ತಾತ್ಕಾಲಿಕ ಟೆಂಟ್ನಲ್ಲಿ ವಾಸಿಸುವಂಥ ಪರಿಸ್ಥಿತಿ ಬಂತು. ಫೆಬ್ರವರಿ 2018 ರಲ್ಲಿ ಅಂದರೆ ಪ್ರವಾಹದ ಕೆಲವೇ ತಿಂಗಳುಗಳ ನಂತರ, ಒಬ್ಬ ವ್ಯಕ್ತಿ ಹೇಮಾಳ ತಾಯಿಯನ್ನು ಸಂಪರ್ಕಿಸಿ ಮಗಳನ್ನು ಮದುವೆಯಾಗಲು ಒಪ್ಪಿಗೆ ಕೇಳಿ 5,000 ರೂ.ವನ್ನೂ ಕೊಟ್ಟರು.
11 ವರ್ಷದವಳಾಗಿದ್ದಾಗಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ನೋಡಿಕೊಳ್ಳಲು ಮತ್ತು ಸಂಸಾರಕ್ಕಾಗಿ ದುಡಿಯಬೇಕಾಗಿದ್ದ ಹೇಮಾಳ ಬದುಕು ಮದುವೆಯ ನಂತರ ಬದಲಾಗಬಹುದು ಎಂದು ಭಾವಿಸಿದ ತಾಯಿ ಅವರ ಮದುವೆಗೆ ಒಪ್ಪಿಗೆ ಇತ್ತರು.
ಆದರೆ ಅವರ ನಿರ್ಧಾರ ತಪ್ಪು ಎಂದು ಅರಿವಾಗಲು ಹೆಚ್ಚಿನ ಸಮಯ ತಗುಲಲಿಲ್ಲ. ಮದುವೆಯಾದ ಒಂದೇ ತಿಂಗಳಲ್ಲಿ ಹೇಮಾರ ಪತಿ ಹೇಮಾರನ್ನು ಕರೆದುಕೊಂಡು ಪಂಜಾಬ್ನ ಚಂಡೀಗಢಕ್ಕೆ ಹೋದರು. ಅಲ್ಲಿ ಅವರು ನಿತ್ಯ ದೈಹಿಕ ಹಿಂಸೆಗೆ ಒಳಗಾಗುತ್ತಿದ್ದರು. ಆರು ತಿಂಗಳುಗಳ ಕಾಲ ದೌರ್ಜನ್ಯ ಸಹಿಸಿದ ಹೇಮಾ ನಂತರ ರೈಲು ಹತ್ತಿ ಅಲ್ಲಿಂದ ತಪ್ಪಿಸಿ ತವರು ಮನೆಗೆ ವಾಪಾಸಾದರು.ಅವರ ತಾಯಿ ಅವರನ್ನು ಮನೆಯೊಳಗೆ ಸೇರಿಸಿಕೊಳ್ಳಲು ಮೊದಲು ಒಪ್ಪಲಿಲ್ಲ. ಆದರೆ ಈಗ ಅವರ ತಾಯಿ ಅವರನ್ನು ಒಪ್ಪಿಕೊಂಡಿದ್ದಾರೆ. ಹೇಮಾ ಅಂಗಡಿಯೊಂದನ್ನು ನಡೆಸುತ್ತಿದ್ದು ಮುಂದೆಂದೂ ಮದುವೆಯಾಗಲಾರೆ ಎಂದು ನಿರ್ಧರಿಸಿದ್ದಾರೆ.
ಇದು ಹೇಮಾರವರೊಬ್ಬರ ಬದುಕಿನ ಕಥೆಯಲ್ಲ. ಪ್ರಾಕೃತಿಕ ವಿಕೋಪದ ನಂತರ ಬದುಕು ಕಳೆದುಕೊಂಡಿರುವ ನೂರಾರು ಹೆಣ್ಣುಮಕ್ಕಳ ಬವಣೆಗೆ ಹೇಮಾ ಒಂದು ಉದಾಹರಣೆ ಅಷ್ಟೇ. ಪದೇ ಒದೇ ಬದಲಾಗುತ್ತಿರುವ ಹವಾಮಾನ, ನೆರೆ, ಪ್ರವಾಹ, ಅತಿ ವೃಷ್ಠಿ, ಅನಾವೃಷ್ಠಿ ಪ್ರಪಂಚದಾದ್ಯಂತ ಹೆಣ್ಣು ಮಕ್ಕಳ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
ಹುಡುಗರಿಗೆ ಸಿಗುತ್ತಿರುವ ಹೆಚ್ಚಿನ ಆದ್ಯತೆ
ಭಾರತದಲ್ಲಿ, ಹವಾಮಾನ ವೈಪರೀತ್ಯಗಳು ಹೆಚ್ಚಿನ ವಲಸೆಗೆ ಕಾರಣವಾಗುತ್ತವೆ, ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ. ಪುರುಷರು ಹೆಚ್ಚಾಗಿ ದೇಶದ ಇತರ ಭಾಗಗಳಿಗೆ ಕೆಲಸ ಮಾಡಲು ವಲಸೆ ಹೋಗುತ್ತಾರೆ ಮತ್ತು ಮಹಿಳೆಯರು ಕೆಲವು ಆದಾಯದ ಅವಕಾಶಗಳೊಂದಿಗೆ ಮನೆಯಲ್ಲಿಯೇ ಉಳಿಯುತ್ತಾರೆ. ಹೀಗಾಗಿ, ಗಂಡು ಮಕ್ಕಳನ್ನು ಆದಾಯದ ಮೂಲಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಹೆಣ್ಣು ಮಕ್ಕಳನ್ನು ಒಂದು ಹೊರೆಯಂತೆ ನೋಡಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ಪಾವತಿಸಬೇಕಾಗಿರುವ ವರದಕ್ಷಿಣೆಯೂ ಇದಕ್ಕೊಂದು ಪ್ರಮುಖ ಕಾರಣ. ಇದು ಗಂಡು ಮಕ್ಕಳನ್ನೇ ಹೆರಬೇಕು ಎನ್ನುವ ಒತ್ತಡವನ್ನೂ ಸೃಷ್ಟಿಸುತ್ತದೆ.
ಕತಿಹಾರ್ ಜಿಲ್ಲೆಯ ದೇವಿಪುರ ಗ್ರಾಮದ ಮೂರು ಗಂಡುಮಕ್ಕಳ ತಾಯಿಯಾದ ಬೀನಾ ದೇವಿ ಗಂಡು ಮಗು ಆಗದೇ ಇದ್ದರೆ ನಾನು ಸಾಯಬೇಕಿತ್ತು ಅನ್ನುತ್ತಾರೆ . ಐದು ವರ್ಷಗಳ ಹಿಂದೆ ಅವರ ಪತಿ ನಿಧನರಾದಾಗ ಅವರ ಹಿರಿಯ ಮಗ ಕೇವಲ 10 ವರ್ಷ ವಯಸ್ಸಿನವನಾಗಿದ್ದ. ಅನಿವಾರ್ಯವಾಗಿ ಆತ ಕೆಲಸಕ್ಕೆ ಹೋಗಿ ಸಂಸಾರದ ಹೊರೆ ಹೊರಬೇಕಾಯಿತು. ಈಗ ಅವನಿಗೆ 15 ವರ್ಷ, ಈಗಲೂ ಆತ ತಾಯಿ, ಒಬ್ಬ ತಂಗಿ ಮತ್ತು ಇಬ್ಬರು ತಮ್ಮಂದಿರ ಹೊಟ್ಟೆ ಹೊರೆಯಲು ದುಡಿಯಲೇಬೇಕಾಗಿದೆ.
ಬಿಹಾರದ ಪ್ರವಾಹಕ್ಕೆ ಸಂಬಂಧಿಸಿದಂತೆ ಅಧ್ಯಯನ ಕೈಗೊಂಡ ತಂಡವೊಂದು ಅಲ್ಲಿ ಹೆಚ್ಚು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಗಳು ಹೆಚ್ಚು ದುರ್ಬಲವಾಗಿವೆ ಎಂದು ಹೇಳಿದೆ. ಪ್ರವಾಹದಿಂದಾಗಿ ಹಳ್ಳಿಗಳು ಮುಳುಗಡೆಯಾದಾಗ ಅಲ್ಲಿನ ಜನರು ತಮ್ಮಮನೆ ಮತ್ತು ಆಸ್ತಿಯನ್ನು ಕಾಪಾಡಲು ಮಚ್ಚನ್ ಎಂದು ಕರೆಯಲ್ಪಡುವ ಟ್ರೈಪಾಡ್ ತರಹದ ರಚನೆಗಳನ್ನು ಮಾಡುತ್ತಾರೆ. ಇದನ್ನು ಪುರುಷರ ಕೆಲಸವೆಂದು ಪರಿಗಣಿಸಿ ಮಹಿಳೆಯರು ದೈಹಿಕವಾಗಿ ಸಮರ್ಥರಾಗಿದ್ದರೂ ಸಹ ಭಾಗವಹಿಸಲು ಅನುಮತಿಸಲಾಗುವುದಿಲ್ಲ.
ಮನೆಗಳನ್ನ ಮರುನಿರ್ಮಾಣ ಮಾಡುವುದು ಸಹ ಪುರುಷರ ಕೆಲಸವಾಗಿದೆ . ಮನೆಯಲ್ಲಿ ಪುರುಷರು ಇಲ್ಲದೇ ಇರುವವರು ದಿನವೊಂದಕ್ಕೆ 350 ರೂ ಕೊಟ್ಟು ಬೇರೆ ಪುರುಷರಿಂದ ಮಾಡಿಸಬೇಕು. ದಿನವೊಂದಕ್ಕೆ ಕೇವಲ 90 ರೂ ತಲಾ ಆದಾಯವಿರುವ ಬಿಹಾರದಲ್ಲಿ ಇದು ಅತ್ಯಂತ ದುಬಾರಿ.
ವರದಕ್ಷಿಣೆ ಕಿರುಕುಳ
ಹೆಣ್ಣಿನ ಕಡೆಯಿಂದ ಮದುವೆ ಮೊದಲು ಅಥವಾ ನಂತರ ಹಣ, ಚಿನ್ನ ಅಥವಾ ಆಸ್ತಿಯನ್ನು ಬಯಸುವ ಗಂಡು ಮತ್ತು ಗಂಡಿನ ಮನೆಯವರು ವರದಕ್ಷಿಣೆ ತರಲು ವಿಫಲರಾದಾಗ ಹಿಂಸೆ ಮತ್ತು ಕ್ರೌರ್ಯಕ್ಕಿಳಿಯುತ್ತಾರೆ.ಇದು ಹೆಣ್ಣಿನ ಮತ್ತು ಅವರ ಮನೆಯವರ ಮೇಲೆ ಆರ್ಥಿಕ ಹಾಗೂ ಸಾಮಾಜಿಕ ಒತ್ತಡ ಹೇರುತ್ತದೆ.
ಹಲವು ಕಡೆಗಳಲ್ಲಿ ವರದಕ್ಷಿಣೆಗೆ ಹೆದರಿ ಮಗಳ ಶಿಕ್ಷಣ ಮೊಟಕುಗೊಳಿಸಿ ಮದುವೆ ಮಾಡಿಸಿ ಕೊಟ್ಟವರೂ ಇದ್ದಾರೆ. ಕತಿಹಾರ್ ಜಿಲ್ಲೆಯ ಹದಿನೆಂಟು ವರ್ಷದ ಚಾಂದಿನಿ ಅವರ ತಂದೆಯನ್ನು ಮೂವರು ಸಂಪರ್ಕಿಸಿದ್ದು ಮದುವೆ ಮಾಡಲು ಒತ್ತಾಯ ಮಾಡಿದ್ದಾರೆ. ಆದರೆ ತನ್ನ ಶಿಕ್ಷಣ ಮುಂದುವರೆಸವಂತೆ ಕುಟುಂಬವನ್ನು ಮನವೊಲಿಸಲು ಶಕ್ತರಾದ ಅವರು “ಅವರು ಯಾವಾಗಲೂ ನನ್ನ ತಂದೆಯನ್ನು ಸಂಪರ್ಕಿಸುತ್ತಾರೆ ಮತ್ತು ‘ನಿಮಗೆ ಮೂವರು ಹೆಣ್ಣುಮಕ್ಕಳಿದ್ದಾರೆ’ ಎಂದು ಹೇಳುವ ಮೂಲಕ ಬೇಗನೇ ಮದುವೆ ಮಾಡುವಂತೆ ಮನವರಿಕೆ ಮಾಡಲು
ಯತ್ನಿಸುತ್ತಾರೆ” ಎನ್ನುತ್ತಾರೆ.
(ಮುಂದುವರೆಯುವುದು….)