ಅಫ್ಘಾನಿಸ್ಥಾನದ ಆಡಳಿತ ಚುಕ್ಕಾಣಿಯನ್ನು ತಾಲಿಬಾನ್ ಹಿಡಿದ ನಂತರ ಸುಮಾರು 80% ಅಫ್ಘನ್ ಪತ್ರಕರ್ತರು ತಮ್ಮ ಉದ್ಯೋಗವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಜರ್ನಲಿಸ್ಟ್ ಫೌಂಡೇಶನ್ ಆಫ್ ಅಫ್ಘಾನಿಸ್ಥಾನ ಹೇಳಿದೆ.
ತಾಲಿಬಾನ್ ಆಡಳಿತದಡಿಯಲ್ಲಿ ಅಫ್ಘನ್ ಆರ್ಥಿಕತೆ ಇನ್ನಷ್ಟು ಅಧೋಗತಿಗೆ ತಲುಪಿದ್ದು, ಆರ್ಥಿಕತೆಯ ಬಿಸಿ ಪತ್ರಕರ್ತರನ್ನೂ ತಟ್ಟಿದೆ. ಕರಾಳ ಆರ್ಥಿಕತೆಯಿಂದಾಗಿ 79% ಪತ್ರಕರ್ತರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದು, ಹೊಟ್ಟೆಪಾಡಿಗಾಗಿ ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ ಎಂದು ದಿ ಖಾಮಾ ಪ್ರೆಸ್ ವರದಿ ಮಾಡಿದೆ.
ಅಧ್ಯಯನದ ಪ್ರಕಾರ ತಾಲಿಬಾನ್ ಅಧಿಕಾರದ ಈ ಚಿಕ್ಕ ಅವಧಿಯಲ್ಲಿ 75% ದಷ್ಟು ಅಫ್ಘನ್‌ನ ಮಾಧ್ಯಮ ಸಂಸ್ಥೆಗಳು ಆರ್ಥಿಕ ದಿವಾಳಿತನದಿಂದ ಕಾರ್ಯಾಚಾರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ಅಫ್ಘನ್ ಆರ್ಥಿಕತೆ ದಾರುಣತೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ನಡುವೆ ಮಹಿಳೆಯರ ಸ್ವಾತಂತ್ರ್ಯವನ್ನು ನಿಯಂತ್ರಿಸುವ ತಾಲಿಬಾನ್ ನಿರ್ಧಾರಗಳೂ ಮಾಧ್ಯಮ ಕ್ಷೇತ್ರಕ್ಕೆ ಹಿನ್ನೆಡೆಯಾಗಿದೆ.
ಹಳೆ ಸರ್ಕಾರದ ಪತನದ ನಂತರ ಆರು ರೇಡಿಯೋ ಸ್ಟೇಷನ್‌ಗಳು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಅದರಲ್ಲಿ ಐದು ಸ್ಟೇಷನ್‌ಗಳು ಆರ್ಥಿಕ ಕಾರಣಗಳಿಗಾಗಿ ಸೇವೆ ಸ್ಥಗಿತಗೊಳಿಸಿದರೆ, ಇನ್ನೊಂದು ತನ್ನ ಉದ್ಯೋಗಿಗಳ ಕಾರಣಕ್ಕಾಗಿ ಸೇವೆ ಸ್ಥಗಿತಗೊಳಿಸಬೇಕಾಯಿತು. ಆ ಸ್ಟೇಷನ್‌ನಲ್ಲಿ ಬಹುತೇಕ ಮಹಿಳಾ ಉದ್ಯೋಗಿಗಳೇ ಇದ್ದರು ಎಂದು ಅಫ್ಘನ್ ಜರ್ನಲಿಸ್ಟ್ ಸೇಫ್ಟಿ ಸಮಿತಿಯ ಮುಖ್ಯಸ್ಥ ಯೂಸುಫ್ ಝರಿಫಿ ಹೇಳಿರುವುದಾಗಿ ಟೋಲೋ ನ್ಯೂಸ್ ವರದಿ ಮಾಡಿದೆ.
ಅಧ್ಯಯನದ ಪ್ರಕಾರ ಅಫ್ಘನ್‌ನ 91% ಪತ್ರಕರ್ತರು ಮಾಧ್ಯಮರಂಗದಲ್ಲಿ ತಮ್ಮ ಉದ್ಯೋಗವನ್ನು ಆಯ್ಕೆ ಮಾಡಿಕೊಂಡುದಕ್ಕೆ ಸಂತುಷ್ಟರಾಗಿದ್ದರು ಎಂದು ಖಾಮಾ ಪ್ರೆಸ್ ವರದಿಯಲ್ಲಿ ಹೇಳಿದೆ. 462 ಪತ್ರಕರ್ತರ ಈ ಅಧ್ಯಯನದಲ್ಲಿ 390 ಪುರುಷ ಹಾಗೂ 72 ಮಹಿಳಾ ಪತ್ರಕರ್ತರು ಭಾಗಿಯಾಗಿದ್ದರು.
ಕೆಲವು ಪತ್ರಕರ್ತರು ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಅನೇಕ ಮಾಧ್ಯಮಗಳು ಇತ್ತೀಚೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಅವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಾಗಿನಿಂದ ಅಫ್ಘಾನ್ ಪತ್ರಕರ್ತರ ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗಿದ್ದು, ದುರ್ಬಲ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರು ಅತ್ಯಂತ ಕೆಟ್ಟ ಜೀವನವನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (Reporters Without Borders -RSF) ಹಾಗೂ ಅಫ್ಘನ್ ಸ್ವತಂತ್ರ ಪತ್ರಕರ್ತರ ಸಂಘವು (Afghan Independent Journalists Association -AIJA) ಇತ್ತೀಚೆಗೆ ನಡೆಸಿದ್ದ ಅಧ್ಯಯನವು ಅಫ್ಘನ್‌ನಲ್ಲಿ ಕುಸಿಯುತ್ತಿರುವ ಪತ್ರಿಕೋಧ್ಯಮದ ಬಗ್ಗೆ ಬೆಳಕು ಚೆಲ್ಲಿತ್ತು. ಆ ವೇಳೆಗಾಗಲೇ, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸುಮಾರು 80 ಪ್ರತಿಶತ ಮಹಿಳಾ ಪತ್ರಕರ್ತರು ತಮ್ಮ ಉದ್ಯೋಗ ಕ್ಷೇತ್ರಗಳಿಂದ ವಿಮುಖರಾಗಿದ್ದರು.
6,400 ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿರುವುದಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ವರದಿಯಾಗಿತ್ತು. ಸುಮಾರು 231 ಮೀಡಿಯಾ ಔಟ್‌ಲೆಟ್‌ಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ವರದಿ ಹೇಳಿತ್ತು.
ಕಳೆದ ನವೆಂಬರ್ ಅಂತ್ಯಕ್ಕಾಗುವಾಗ 543 ಮೀಡಿಯಾ ಔಟ್‌ಲೆಟ್‌ಗಳಲ್ಲಿ ಕೇವಲ 312 ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಈ ವರ್ಷಾಕ್ಕಾಗುವಾಗ ಆ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.