• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ವಿವೇಕ ಇಲ್ಲದ ವ್ಯವಸ್ಥೆ, ಆನಂದ ಕಾಣದ ಜನತೆ

ನಾ ದಿವಾಕರ by ನಾ ದಿವಾಕರ
January 12, 2022
in ಅಭಿಮತ
0
ವಿವೇಕ ಇಲ್ಲದ ವ್ಯವಸ್ಥೆ, ಆನಂದ ಕಾಣದ ಜನತೆ
Share on WhatsAppShare on FacebookShare on Telegram

ವಿವೇಕಾನಂದರ ಜನ್ಮದಿನ ಎಂದರೆ ನಮ್ಮ ರಾಜಕಾರಣಿಗಳಿಗೆ, ವಿಶೇಷವಾಗಿ ಹಿಂದುತ್ವವನ್ನು ಹಿಂಬಾಲಿಸುತ್ತಿರುವ ಎಲ್ಲ ರಾಜಕಾರಣಿಗಳಿಗೆ ಮೈ ನವಿರೇಳುತ್ತದೆ. ಸಿಂಹವಾಣಿ, ದಿವ್ಯವಾಣಿ, ದಿಟ್ಟವಾಣಿ ಎಂದೆಲ್ಲಾ ಮುಖಸ್ತುತಿ ಮಾಡುವ ಮೂಲಕ ವಿವೇಕಾನಂದರನ್ನು ಇಂದು ಚಾಲ್ತಿಯಲ್ಲಿರುವ ಹಿಂದುತ್ವ ರಾಜಕಾರಣದ ಕೇಂದ್ರ ಬಿಂದುವಾಗಿ ಪ್ರತಿಷ್ಠಾಪಿಸಲಾಗುತ್ತದೆ. ವಿವೇಕಾನಂದರನ್ನು ಯುವಪೀಳಿಗೆಯ ಸ್ಫೂರ್ತಿ ಮತ್ತು ಮಾರ್ಗದರ್ಶಕ ಎಂದು ಪರಿಭಾವಿಸುತ್ತಲೇ ದೇಶದ ಯುವ ಜನತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಯುವ ಜನತೆ, ವಿಶೇಷವಾಗಿ ಶತಮಾನದ ಪೀಳಿಗೆ ಎಂದೇ ಹೇಳಲಾಗುವ ಹದಿಹರೆಯದ ಜನಸಮೂಹಕ್ಕೆ ಒಂದು ನಿರ್ದಿಷ್ಟ ಋಜುಮಾರ್ಗವನ್ನು ರೂಪಿಸುವ ನಿಟ್ಟಿನಲ್ಲಿ ವಿವೇಕಾನಂದರು ಎಷ್ಟರ ಮಟ್ಟಿಗೆ ನೆರವಾಗುತ್ತಾರೆ ಎಂಬ ಚರ್ಚೆಯ ನಡುವೆಯೇ, ಇದೇ ಯುವ ಪೀಳಿಗೆಯ ಮಿದುಳಿನಲ್ಲಿ ವಿಷಬೀಜ ಬಿತ್ತುವ ಕೈಂಕರ್ಯವೂ ನಡೆಯುತ್ತಿರುವುದನ್ನು ಗಮನಿಸಬೇಕಿದೆ.

ADVERTISEMENT

ವಿವೇಕರು ಯುವ ಜನತೆಗೆ ನೀಡಿದ ಸಂದೇಶವಾದರೂ ಏನು ? ಈ ಸಂದೇಶವನ್ನು ಅವರು ಯಾವ ನೆಲೆಯಲ್ಲಿ ನಿಂತು ನೀಡಿದ್ದರು ? ಯಾರನ್ನು ಉದ್ದೇಶಿಸಿ ನೀಡಿದ್ದರು ? ಈ ವಿವೇಕ ವಾಣಿ ಅದರ ಮೂಲ ಭೂಮಿಕೆಯಿಂದ ಕಳಚಿಕೊಂಡು ಮತ್ತಾವುದೋ ವಿಚ್ಚಿದ್ರಕಾರಕ ಸೈದ್ಧಾಂತಿಕ ನೆಲೆಗಳಲ್ಲಿ ಏಕೆ ಸ್ಥಾಪನೆಯಾಗಿದೆ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಹೋದರೆ ಬಹುಶಃ ನಾವು ವಿವೇಕಾನಂದರನ್ನು ಮತ್ತೆ ಮತ್ತೆ ಸಮಾಧಿ ಸ್ಥಿತಿಗೆ ತಲುಪಿಸುತ್ತಲೇ ಉಳಿದುಹೋಗುತ್ತೇವೆ. ಇಂದಿನ ಯುವ ಪೀಳಿಗೆಗೆ ಏನು ಬೇಕಿದೆ ಎಂಬ ಪ್ರಶ್ನೆಗೆ ಉತ್ತರ ಬಹಳ ಸುಲಭ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಡೀ ಜಗತ್ತನ್ನು ಅಂಗೈಯಲಿ ಹಿಡಿದು ನೋಡುತ್ತಿರುವ ಈ ಪೀಳಿಗೆಯ ಭವಿಷ್ಯ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ನಮ್ಮನ್ನು ತಬ್ಬಿಬ್ಬುಗೊಳಿಸುತ್ತದೆ.

ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ವಿವೇಕ ವಾಣಿ ಇಂದು ಅನೇಕ ಅಪಭ್ರಂಶಗಳೊಡನೆ ಹರಿದಾಡುವುದು ಸಹಜವಾಗಿಯೇ ಕಾಣುತ್ತದೆ. ವಾಟ್ಸಾಪ್ ವಿಶ್ವವಿದ್ಯಾಲಯದ ವಿದ್ವಾಂಸರು ಅವರ ವಿವೇಕದ ಮಾತುಗಳನ್ನು ತಮ್ಮ ಮತೀಯ ರಾಜಕಾರಣಕ್ಕೆ ತಕ್ಕಂತೆ ಪರಿಷ್ಕರಿಸಿಕೊಳ್ಳುತ್ತಾ ಹೊಸ ವ್ಯಾಖ್ಯಾನಗಳನ್ನು ಬರೆಯಲು ತೊಡಗಿರುತ್ತಾರೆ. ವಿವೇಕಾನಂದರ “ ಏಳಿ ಜಾಗೃತರಾಗಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ ” ಎನ್ನುವ ಕರೆ ಅಂದಿನ ಯುವ ಪೀಳಿಗೆ ನೀಡಿದ ಕರೆಯಾಗಿತ್ತು. ಇದು ಮೂಲತಃ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆಯುತ್ತಿದ್ದ ಸಂಘರ್ಷದ ನೆಲೆಯಲ್ಲಿ ನೀಡಿದ ಒಂದು ವಿವೇಕಯುತ ಸಂದೇಶ. ಹಾಗೆಯೇ ತಮ್ಮ ಕಾಲಘಟ್ಟದಲ್ಲೂ ಭಾರತೀಯ ಸಮಾಜದಲ್ಲಿ ತಾಂಡವಾಡುತ್ತಿದ್ದ ಅಸ್ಪøಶ್ಯತೆ ಮತ್ತು ಜಾತಿ ದೌರ್ಜನ್ಯಗಳ ವಿರುದ್ಧ ತಳಸಮುದಾಯಗಳಿಗೆ ನೀಡಿದ ಸಂದೇಶ ಎಂದೂ ಅರ್ಥೈಸಬಹುದು.

19ನೆಯ ಶತಮಾನದಲ್ಲಿ ನಾರಾಯಣಗುರು, ಮುನ್ನಾತ್ತು ಪದ್ಮನಾಭನ್ , ಕೆ ಕೇಳಪ್ಪನ್, ವಿ ಟಿ ಭಟ್ಟಾಧಿರಿಪ್ಪಾದ್ ಮುಂತಾದ ಸಮಾಜ ಸುಧಾರಕರ ಅವಿರತ ಪರಿಶ್ರಮದ ಫಲವಾಗಿ ಕೇರಳದಲ್ಲಿ ಬೇರೂರಿದ್ದ ಜಾತಿ ತಾರತಮ್ಯಗಳು ಕ್ಷೀಣಿಸುತ್ತಿದ್ದರೂ, ವಿವೇಕಾನಂದರಿಗೆ ಅಲ್ಲಿ ಜಾತಿ ವಿಷಬೀಜಗಳು ಇನ್ನೂ ಹಸನಾಗಿರುವುದು ಕಂಡುಬಂದಿದ್ದರಿಂದಲೇ ಅವರು ಕೇರಳವನ್ನು “ ಹುಚ್ಚರ ಅಥವಾ ಅವಿವೇಕಿಗಳ ಆಶ್ರಯತಾಣ ” ಎಂದು ಬಣ್ಣಿಸಿದ್ದರು. ಈ ಅವಿವೇಕವನ್ನು ಹೋಗಲಾಡಿಸುವುದೂ ವಿವೇಕಾನಂದರ ಚಿಂತನಾವಾಹಿನಿಯ ಪ್ರಮುಖ ಅಂಶವಾಗಿತ್ತು ಎನ್ನುವುದನ್ನು ಜಾಣ್ಮೆಯಿಂದ ಮರೆಮಾಚುತ್ತಲೇ ಅವರನ್ನು ಹಿಂದೂ ಪುನರುತ್ಥಾನದ ಸಂತನನ್ನಾಗಿ ಬಿಂಬಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಕೇರಳದಲ್ಲಿ ವಿವೇಕರು ಅಂದು ಕಂಡ ಅವಿವೇಕ ಇಂದು ಭಾರತದ ಪ್ರತಿಯೊಂದು ರಾಜ್ಯದಲ್ಲೂ ತಾಂಡವಾಡುತ್ತಿರುವುದನ್ನು ಮನಗಾಣದಿದ್ದರೆ ಯುವ ಪೀಳಿಗೆಗೆ ಯಾವ ಸಂದೇಶ ನೀಡಲು ಸಾಧ್ಯ ?

“ ಆತ್ಮವಿಶ್ವಾಸವನ್ನು ಹೊಂದಿರಿ ಜಗತ್ತು ನಿಮ್ಮ ಕಾಲಡಿ ಇರುತ್ತದೆ ” ಎಂಬ ವಿವೇಕರ ವಾಣಿಯನ್ನು ಇಂದಿನ ಯುವ ಪೀಳಿಗೆ ಹೇಗೆ ಅರ್ಥೈಸಬೇಕು ? ಯಾವ ಜಗತ್ತನ್ನು ತಮ್ಮ ಕಾಲಡಿಯಲ್ಲಿ ಕಾಣಲು ಯುವ ಜನತೆ ತವಕಿಸಬೇಕು ? ತಂತ್ರಜ್ಞಾನದ ಮೂಲಕ ತಮ್ಮ ಅಂಗೈಯ್ಯಲ್ಲೇ ಇಡೀ ವಿಶ್ವವನ್ನು ಕಾಣುತ್ತಿರುವ ಯುವ ಪೀಳಿಗೆಗೆ ತಮ್ಮ ಭವಿಷ್ಯದ ದಿನಗಳನ್ನು ಕರಾಳ ಕೂಪಕ್ಕೆ ದೂಡುತ್ತಿರುವ ಶಕ್ತಿಗಳು ಯಾವುದು ಎಂದು ಅರ್ಥವಾಗದೆ ಹೋದರೆ ಅವರು ವಿವೇಕರ ಈ ವಾಣಿಯನ್ನು ಹೇಗೆ ಪರಿಭಾವಿಸಲು ಸಾಧ್ಯ ? #ಆತ್ಮನಿರ್ಭರಭಾರತ ಎಂಬ ಒಂದು ಭ್ರಮೆ ಇಡೀ ಯುವ ಪೀಳಿಗೆಯನ್ನು ಆವರಿಸಿದೆ. ಈ ನವ ಭಾರತದಲ್ಲಿ ಮುಂದಿಡಲಾಗುವ ಪ್ರತಿಯೊಂದು ಹೆಜ್ಜೆಯೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಏಕೆಂದರೆ ಆಳುವ ವರ್ಗಗಳು, ಆಡಳಿತ ವ್ಯವಸ್ಥೆ ತನ್ನ ಸಾಮಾಜಿಕ ಕರ್ತವ್ಯಗಳಿಂದ ವಿಮುಖವಾಗಿ, ವ್ಯಾಪಾರಿ ಧೋರಣೆಯನ್ನು ತಾಳುತ್ತಿದೆ. ಯುವ ಪೀಳಿಗೆಯ ಭವಿಷ್ಯದ ಕನಸುಗಳು ಇಂದು ಆಳುವವರ ಕಾಲಡಿಯಲ್ಲಿರುವುದನ್ನು ಮನಗಾಣಬೇಕಲ್ಲವೇ?

ಶಿಕ್ಷಣ ನಮ್ಮ ಹೊಣೆ ಅಲ್ಲ, ಆರೋಗ್ಯ ಕಾಳಜಿ ನಮ್ಮ ಹೊರೆ ಅಲ್ಲ ಎಂದು ಘಂಟಾಘೋಷವಾಗಿ ಹೇಳುವ ಒಂದು ಆಡಳಿತ ವ್ಯವಸ್ಥೆಯನ್ನು ಇದೇ ಯುವ ಪೀಳಿಗೆಯೇ ಅನುಮೋದಿಸುತ್ತಿದೆ. “ ಯುವ ಪೀಳಿಗೆಯೇ ಭವಿಷ್ಯದ ಮಾನವ ಕುಲ, ನಿಮ್ಮ ಕ್ರಿಯೆಯಲ್ಲಿ ಇರಬಹುದಾದ ಆಶಯಗಳಿಗೆ ಗಮನ ನೀಡಿ, ನೀವು ಉತ್ತಮ ಮಾನವರಾಗಿ ರೂಪುಗೊಳ್ಳುವಿರಿ ” ಎಂಬ ವಿವೇಕಾನಂದರ ಸಂದೇಶ ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ. ಆದರೆ ಈ ಸಂದೇಶ ನೀಡಿದ ಶತಮಾನದ ನಂತರವೂ ನಾವು ಮಾನವತೆಯ ನೆಲೆಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ಯುವಮನಸುಗಳಲ್ಲಿ ಜಾತಿ ದ್ವೇಷ, ಕೋಮು ದ್ವೇಷ, ಮತಾಂಧತೆ ಮತ್ತು ಸ್ವಾರ್ಥಪರತೆಯನ್ನು ಬಿತ್ತುತ್ತಲೇ ತಮ್ಮ ಅಧಿಕಾರ ಪೀಠಗಳನ್ನು ಸಂರಕ್ಷಿಸುತ್ತಿರುವ ರಾಜಕೀಯ ನಾಯಕತ್ವ ಯುವ ಪೀಳಿಗೆಯನ್ನು ಅಕ್ಷರಶಃ ಚುನಾವಣಾ ಬಂಡವಾಳದ ಉತ್ಪಾದನೆಗೆ ಕಚ್ಚಾವಸ್ತುಗಳನ್ನಾಗಿ ಮಾಡಿಬಿಟ್ಟಿದೆ.

ಹಿಂದೂ ಧರ್ಮದ ಪುನರುತ್ಥಾನವನ್ನು ವಿವೇಕಾನಂದರ ಸಂದೇಶಗಳಲ್ಲಿ ಕಾಣುವ ಮುನ್ನ ಇತ್ತೀಚೆಗೆ ನಡೆದ ಧರ್ಮ ಸಂಸತ್ತಿನ ವೇದಿಕೆಯಲ್ಲಿ ವಿವೇಕರನ್ನು ಇಟ್ಟು ನೋಡಲು ಸಾಧ್ಯವೇ ಎಂದು ಯೋಚಿಸಬೇಕಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಮುಸಲ್ಮಾನರ ಸಾಮೂಹಿಕ ನರಮೇಧಕ್ಕೆ ಕರೆ ನೀಡಿರುವುದನ್ನು ಯುವಕರಿಗೆ ಹೇಗೆ ತಲುಪಿಸಬೇಕು ? ಬುಲ್ಲಿ ಬಾಯ್ಸ್, ಸುಲ್ಲಿ ಡೀಲ್ಸ್, ಲಿಬರಲ್ ಡೋಗೆ ಮುಂತಾದ ಜಾಲತಾಣಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕುವ ವಿಚ್ಚಿದ್ರಕಾರಕ ಮನಸುಗಳು ಇಂದಿನ ಯುವ ಪೀಳಿಗೆಯೇ ಆಗಿದೆಯಲ್ಲವೇ ? ಬಂಧನಕ್ಕೊಳಗಾದ ನಾಲ್ಕೈದು ಯುವಕರನ್ನು ದೂಷಿಸುತ್ತಾ, ಅವರನ್ನು ಸಮಾಜಘಾತುಕರ ಪಟ್ಟಿಗೆ ಸೇರಿಸುವ ಮುನ್ನ, ಈ ಪೀಳಿಗೆಯಲ್ಲಿ ಇಂತಹ ವಿಧ್ವಂಸಕ ಮನಸ್ಥಿತಿಯನ್ನು ಬಿತ್ತಲು ಕಾರಣರಾದವರತ್ತ ಒಮ್ಮೆ ನೋಡಬೇಕಲ್ಲವೇ ? ಮತೀಯ ದ್ವೇಷ ಮನುಷ್ಯನನ್ನು ಕ್ರೂರ ಮೃಗಗಳಿಗಿಂತಲೂ ಹೀನಾಯವಾದ ಪರಿಸ್ಥಿತಿಗೆ ದೂಡುತ್ತದೆ ಎಂದು ನಿರೂಪಿಸಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ.
ಆದರೆ ಈ ಯುವ ಪೀಳಿಗೆ ಏಕೆ ಹೀಗಾಗಿದೆ ? ರಾಜಕೀಯ ಪರಿಭಾಷೆಯಲ್ಲಿ “ಯುವ ರಾಜಕಾರಣ ”ವನ್ನೇ ಪ್ರತಿನಿಧಿಸುವ ನಾಯಕರು ಇಂದು “ ಗುಂಡಿಟ್ಟು ಕೊಲ್ಲಿ ”ಎನ್ನುವ ಸಂದೇಶವನ್ನು ನಿರ್ಭಿಡೆಯಿಂದ ರವಾನೆ ಮಾಡುತ್ತಲೇ ಇದ್ದಾರೆ. ದೆಹಲಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಅವರಿಂದ ಕರ್ನಾಟಕದ ಯತ್ನಾಳ್, ಸಿ ಟಿ ರವಿ ಅವರವರೆಗೆ ಗುಂಡಿಟ್ಟು ಕೊಲ್ಲುವ ಪರಂಪರೆಗೆ ತಾತ್ವಿಕ ಭೂಮಿಕೆಯನ್ನು ಒದಗಿಸಲಾಗುತ್ತಿದೆ. ಧರ್ಮ ಸಂಸತ್ತಿನಲ್ಲಿ ಸಾಮೂಹಿಕ ನರಮೇಧಕ್ಕೆ ನೀಡುವ ಕರೆಗೆ ಕನಿಷ್ಠ ಪ್ರತಿಕ್ರಯಿಸಬೇಕಾದ ದೇಶದ ಪ್ರಧಾನಿ ದಿವ್ಯ ಮೌನ ವಹಿಸುತ್ತಾರೆ. ಇನ್ನು ಈ ರಾಜಕೀಯ ನಾಯಕರ ಹೇಳಿಕೆಗಳು ಸ್ವಾಭಾವಿಕ ಎನಿಸುವಷ್ಟು ಮಟ್ಟಿಗೆ ಸಾರ್ವತ್ರೀಕರಣಕ್ಕೊಳಗಾಗಿಬಿಟ್ಟಿದೆ. ಉಡುಪಿ, ಮಂಗಳೂರಿನಲ್ಲಿ ಯುವ ಪೀಳಿಗೆಯ ಕೈಗೆ ತ್ರಿಶೂಲ, ಲಾಂಗು, ಮಚ್ಚುಗಳನ್ನು ದೀಕ್ಷೆಯ ರೂಪದಲ್ಲಿ ನೀಡುವುದನ್ನು “ ಕ್ರಿಯೆ ಪ್ರತಿಕ್ರಿಯೆ ” ಪ್ರಮೇಯದೊಂದಿಗೆ ಸಹಿಸಿಕೊಳ್ಳುವ ಒಂದು ಆಡಳಿತ ವ್ಯವಸ್ಥೆ “ಯುವ ಪೀಳಿಗೆಯೇ ಭವಿಷ್ಯದ ಮಾನವ ಕುಲ” ಎಂಬ ವಿವೇಕ ವಾಣಿಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ ?

ಭಾರತದ ಯುವ ಪೀಳಿಗೆ, ಶತಮಾನದ ಪೀಳಿಗೆ ಇಂದು ಯಾವ ಹಾದಿಯಲ್ಲಿ ಸಾಗಬೇಕು ? ಸಮ ಸಮಾಜದ ಕನಸಿನೊಂದಿಗೆ, ಸಮಾನತೆಯ ಆಶಯದೊಂದಿಗೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಭರವಸೆಯ ಕಿರಣಗಳನ್ನು ಹಿಂಬಾಲಿಸಿ ನಡೆಯಬೇಕಾದ ಯುವ ಜನತೆಗೆ ಇಂದು ಅಸಮಾನತೆಯೇ ತಾಂಡವಾಡುತ್ತಿರುವ ಅರ್ಥವ್ಯವಸ್ಥೆ ಎದುರಾಗಿದೆ. ವಿವೇಕರಿಗೆ 19ನೆಯ ಶತಮಾನದಲ್ಲಿ ಕಂಡ “ ಅವಿವೇಕಿಗಳ ಆಶ್ರಯತಾಣ ” ಇಂದು ಕರ್ನಾಟಕದ ಕೊಪ್ಪಳದಲ್ಲಿ ಕಾಣುತ್ತಿದೆ. ಹಲ್ಲೆಗೊಳಗಾಗುತ್ತಿರುವ ಕೊರಗ ಸಮುದಾಯದ ಬವಣೆಯಲ್ಲಿ ಕಾಣುತ್ತಿದೆ. “ಭವಿಷ್ಯದಲ್ಲಿನ ನನ್ನ ಭರವಸೆ ಯುವ ಪೀಳಿಗೆಯ ಬೌದ್ಧಿಕ ಶಕ್ತಿ ಮತ್ತು ಲಕ್ಷಣಗಳಲ್ಲಿ ಅಡಗಿದೆ, ತಮ್ಮ ಅಂತಃಶಕ್ತಿಗೆ ಬದ್ಧರಾಗಿರುವ ಮೂಲಕ ಯುವ ಪೀಳಿಗೆ ದೇಶದ ಒಳಿತಿಗಾಗಿ ಬದ್ಧತೆ ಪ್ರದರ್ಶಿಸಬೇಕಿದೆ ” ಎಂಬ ವಿವೇಕಾನಂದರ ಸಂದೇಶವನ್ನು ಮತಾಂಧತೆಗೆ, ಮತೀಯ ದ್ವೇಷಕ್ಕೆ , ಜಾತಿ ಶ್ರೇಷ್ಠತೆ ಮತ್ತು ಅಸ್ಪೃಶ್ಯತೆಯ ಆಚರಣೆಗೆ ಬದ್ಧರಾಗುತ್ತಿರುವ ಯುವ ಪೀಳಿಗೆಗೆ ಹೇಗೆ ತಲುಪಿಸುವುದು ?

ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಹರೆಯದ ಯುವತಿಯರು, ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗುವ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಗೌರವಹತ್ಯೆಯ ಹೆಸರಿನಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಹತ್ಯೆಗೀಡಾಗುತ್ತಿರುವ ಮಹಿಳೆಯರು, ಮತೀಯ ರಾಜಕಾರಣಕ್ಕೆ ಬಲಿಯಾಗುತ್ತಿರುವ ಕೇರಳದ ವಿದ್ಯಾರ್ಥಿ ಸಮುದಾಯದ ಯುವಕರು ಈ ಬೃಹತ್ ಸಮೂಹಕ್ಕೆ ವಿವೇಕಾನಂದರನ್ನು ಹೇಗೆ ತಲುಪಿಸುವುದು ? “ಎಂದಿಗೂ ದುರ್ಬಲರಾಗಬೇಡಿ, ಬಲಿಷ್ಠರಾಗಿ, ನಿಮ್ಮೊಳಗೆ ಅಪಾರ ಶಕ್ತಿ ಅಡಗಿದೆ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸುತ್ತೀರಿ ” ಎಂದು ವಿವೇಕಾನಂದರು ಹೇಳುತ್ತಾರೆ. ಬಲಿಷ್ಠರಾಗುವುದು, ಆತ್ಮಬಲ ವೃದ್ಧಿಸಿಕೊಳ್ಳುವುದು ಎಂದರೆ ಏನರ್ಥ ? ಅನ್ಯ ಮತ ದ್ವೇಷಕ್ಕೆ ಬಲಿಯಾಗಿ ಲಾಂಗು, ಮಚ್ಚು, ತ್ರಿಶೂಲಗಳನ್ನು ಹಿಡಿದು ಸಾಮೂಹಿಕ ನರಮೇಧಕ್ಕೆ ಸಿದ್ಧರಾಗುವುದೇ ?

ವಿವೇಕಾನಂದರು ಈ “ಬಲ”ವನ್ನು ಕುರಿತು ಹೇಳಿದ್ದರೇ ? ತಮ್ಮದೇ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಯುವತಿ ತಮ್ಮವರಿಂದಲೇ ಅತ್ಯಾಚಾರಕ್ಕೊಳಗಾದಾಗ, ಹತ್ಯೆಗೀಡಾದಾಗ ವಿಚಲಿತವಾಗದ ಯುವ ಮನಸುಗಳು, ಅದೇ ಯುವತಿ ಮತ್ತೊಂದು ಮತಕ್ಕೆ ಸೇರಿದ ಯುವಕನೊಡನೆ ಓಡಾಡಿದರೆ ವ್ಯಗ್ರವಾಗುವುದಾದರೂ ಏಕೆ ? ಇಂತಹ ಯುವತಿಯರ ಮೇಲೆ ನಡುರಸ್ತೆಯಲ್ಲೇ ದಾಳಿ ನಡೆಸಲು, ಹತ್ಯೆ ಮಾಡಲು, ಥಳಿಸಲು ಪ್ರೇರೇಪಣೆ ನೀಡುವ ಚಿಂತನಾ ವಾಹಿನಿಯಾದರೂ ಯಾವುದು ? ಈ ಚಿಂತನಾ ವಾಹಿನಿಗಳನ್ನು ಪೋಷಿಸಿ, ಸಂರಕ್ಷಿಸಿ, ಬೆಳೆಸುವ ವಿಚ್ದಿದ್ರಕಾರಿ ಶಕ್ತಿಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಂಡವಾಳದಂತೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಯುವ ಜನೋತ್ಸವದಲ್ಲಿ ಯಾವ ಸಂದೇಶ ನೀಡಲು ಸಾಧ್ಯ ?

ಬಡತನ, ಹಸಿವು, ಅನಿಶ್ಚಿತ ಭವಿಷ್ಯ, ಸಾಮಾಜಿಕಾರ್ಥಿಕ ಅಭದ್ರತೆ ಇವುಗಳ ನಡುವೆಯೇ ಯುವ ಪೀಳಿಗೆಯನ್ನು ಸಲಹುತ್ತಿರುವ ಒಂದು ಕ್ರೂರ ಆಡಳಿತ ವ್ಯವಸ್ಥೆ, ಈ ಯುವ ಸಮೂಹದ ಭವಿಷ್ಯತ್ತಿಗೆ ಆಶಾದಾಯಕವಾದ ಮಾರ್ಗಗಳನ್ನು ರೂಪಿಸುವ ಸಾಂಸ್ಕೃತಿಕ ನೆಲೆಗಳನ್ನೂ ತನ್ನ ಮತೀಯ ದ್ವೇಷದ ಬೀಜ ಬಿತ್ತನೆ ಮೂಲಕ ಮಲಿನಗೊಳಿಸುತ್ತಿದೆ. ವಿವೇಕಾನಂದರ ಜನ್ಮದಿನಾಚರಣೆಯನ್ನು ಯುವ ಜನೋತ್ಸವ ಎಂದು ಆಚರಿಸುವ ಮುನ್ನ ಈ ಆತ್ಮಾವಲೋಕನ ಅವಶ್ಯ ಎನಿಸುವುದಿಲ್ಲವೇ ? ಯಾವ ಯುವಪೀಳಿಗೆಗಾಗಿ ಈ ಆಚರಣೆ ? ಹರಿದ್ವಾರದ ಧರ್ಮ ಸಂಸತ್ತಿನಲ್ಲಿ ನೆರೆದಿದ್ದ ಯುವಸ್ತೋಮಕ್ಕೋ ಅಥವಾ ತ್ರಿಶೂಲ ದೀಕ್ಷೆ ಪಡೆದ ಯುವ ಪಡೆಗಳಿಗೋ ? ಅಥವಾ ಹಸಿವು, ನಿರುದ್ಯೋಗದ ಅನಿಶ್ಚಿತತತೆಯ ತೂಗುಗತ್ತಿಯ ಕೆಳಗೆ ಜೀವನ ಸವೆಸುತ್ತಿರುವ ಭಾರತದ ಕೋಟ್ಯಂತರ ಯುವ ಜನತೆಗೋ ?
ವಿವೇಕ ಮತ್ತು ವಿವೇಚನೆ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ಈ ಆತ್ಮಾವಲೋಕನ ಸಾಧ್ಯವಾಗದೆ ಹೋದರೆ ವಿವೇಕಾನಂದರನ್ನು ಸ್ಮರಿಸದೆ ಇರುವುದೇ ಒಳಿತು.

Tags: BJPನರೇಂದ್ರ ಮೋದಿಬಿಜೆಪಿಸ್ವಾಮಿ ವಿವೇಕಾನಂದ ಜನ್ಮದಿನ
Previous Post

ಆರ್ಥಿಕ ಸಂಕಷ್ಟ : ಬೇರೆ ಉದ್ಯೋಗಗಳತ್ತ ಮುಖ ಮಾಡಿದ 79% ಅಫ್ಘನ್‌ ಪತ್ರಕರ್ತರು

Next Post

ಅತಿಥಿ ಉಪನ್ಯಾಸಕರಿಗೆ ಶೀಘ್ರದಲ್ಲೇ ಸಿಹಿಸುದ್ದಿ : ಮುಷ್ಕರ ಕೈಬಿಡಲು ಸಚಿವ ಅಶ್ವತ್ಥ ನಾರಾಯಣ ಮನವಿ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ʼಮೇಕೆದಾಟು ಮಹಾಭಾರತʼದಲ್ಲಿ ಏಕಾಂಗಿ ಅಭಿಮನ್ಯುವಾದರೆ ಅಶ್ವಥನಾರಾಯಣ?

ಅತಿಥಿ ಉಪನ್ಯಾಸಕರಿಗೆ ಶೀಘ್ರದಲ್ಲೇ ಸಿಹಿಸುದ್ದಿ : ಮುಷ್ಕರ ಕೈಬಿಡಲು ಸಚಿವ ಅಶ್ವತ್ಥ ನಾರಾಯಣ ಮನವಿ

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada